ಕೃಷಿ, ಗ್ರಾಮಾಭಿವೃದ್ಧಿಯೂ ವಿವೇಕಾನಂದರ ವಿಚಾರಧಾರೆಯೂ
Team Udayavani, Apr 16, 2021, 6:00 AM IST
“ನೀನು ಭಾರತವನ್ನು ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಓದು’ ಇದು ನೊಬೆಲ್ ಪುರಸ್ಕೃತ ರವೀಂದ್ರನಾಥರು ಒಮ್ಮೆ ವಿವೇಕಾನಂದರ ಬಗ್ಗೆ ಹೇಳಿದ ಮಾತು. ವಿವೇಕಾನಂದರೇ ಒಂದು ಕಡೆ ಹೇಳಿಕೊಂಡಂತೆ ಧರ್ಮ ಮತ್ತು ದೇಶಗಳು ನನ್ನ ಉಸಿರು. ಒಂದು ಉಚ್ಛಾಸ, ಇನ್ನೊಂದು ನಿಶ್ವಾಸ. ಭಾರತ ಹಾಗೂ ಹಿಂದೂ ಧರ್ಮದಲ್ಲಾಗಬೇಕಾದ ಸುಧಾರಣೆಗಳತ್ತ ವಿವೇಕಾನಂದರು ಸತತ ಚಿಂತಿಸಿದರು. ಅದರ ಪರಿಣಾಮವಾಗಿ ರೂಪುಗೊಂಡ ನೂರಾರು ಚಿಂತನೆಗಳಲ್ಲಿ ಭಾರತದ ಕೃಷಿ ಹಾಗೂ ಗ್ರಾಮೀಣ ಬದುಕಿನ ಕುರಿತು ಸ್ವಾಮೀಜಿಯವರ ಚಿಂತನೆಗಳು ಇಂದಿಗೂ ಪ್ರಸ್ತುತ.
ಕೃಷಿ ಹಾಗೂ ಗ್ರಾಮಾಭಿವೃದ್ಧಿಗಳ ಕುರಿತ ತಮ್ಮ ವಿಚಾರಧಾರೆಗಳನ್ನು ವಿವರವಾಗಿ ನೀಡಿದ್ದು ಅಲ್ವರಿನ ಪ್ರವಾಸದಲ್ಲಿ. ಸ್ವಾಮೀಜಿಯವರ ಶಿಷ್ಯನೊಬ್ಬನು ವಿವೇಕಾನಂದರನ್ನು ತಮ್ಮ ಮನೆಗೆ ಆಹ್ವಾನಿಸುತ್ತಾನೆ. ಶಿಷ್ಯನ ಮನೆಯಲ್ಲಿರುವಾಗ ಔಪಚಾರಿಕವಾದ ಮಾತುಕತೆಗಳಾಗುತ್ತವೆ. ಶಿಷ್ಯನು ಕೆಲವು ಪ್ರಮುಖ ಪ್ರಶ್ನೆಯನ್ನು ಸ್ವಾಮೀಜಿಯವರ ಮುಂದಿಡುತ್ತಾನೆ. ಸ್ವಾಮೀಜಿಯವರು ಆಗಲೇ ನಿಷ್ಕಾಮ ಕರ್ಮ, ಸತ್ಯ, ನ್ಯಾಯ, ಪ್ರಾಮಾಣಿಕತೆಗಳ ಕುರಿತು ಸುದೀರ್ಘ ಉಪನ್ಯಾಸ ನೀಡಿದ್ದರು. ನಾವೆಲ್ಲ ದುಡಿಯುವುದು ಹಣಕ್ಕಾಗಿ. ಬದುಕಿಗೆ ಅದು ಅತ್ಯಗತ್ಯ. ಹಾಗಾದರೆ ನಿಷ್ಕಾಮ ಕರ್ಮವನ್ನು ಎಷ್ಟರ ಮಟ್ಟಿಗೆ ನಾವು ಅಳವಡಿಸಿಕೊಳ್ಳಬಹುದು? ಇನ್ನೊಂದು ಪ್ರಶ್ನೆ ವ್ಯಾಪಾರ, ವ್ಯವಹಾರಗಳಲ್ಲಿ ನೈತಿಕತೆಯನ್ನು ಎಲ್ಲರೂ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ ಹಣ ಸಂಪಾದನೆಯ ಹಂಬಲದ ನಡುವೆ ಈ ನೈತಿಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯವೇ?.
ಸ್ವಾಮೀಜಿಯವರ ವಿಚಾರಧಾರೆ
ಈ ಪ್ರಶ್ನೆಗಳು ಸ್ವಾಮೀಜಿಯವರಿಗೆ ತುಂಬಾ ಖುಷಿ ನೀಡಿದವು. ಈ ಬಗ್ಗೆ ಯೋಚಿಸುವವರು ಇಂದು ತೀರಾ ವಿರಳ ಎಂದ ಸ್ವಾಮೀಜಿಯವರು ನಿನ್ನಂಥ ಒಂದಿಬ್ಬರು ಈ ಬಗ್ಗೆ ಪ್ರಶ್ನಿಸಿಕೊಂಡರೆ ಸಮಾಜದಲ್ಲಿ ನೈತಿಕತೆ ತನ್ನಿಂದ ತಾನೇ ಸುಧಾರಿಸುತ್ತದೆ ಎಂದರು. ಸ್ವಾಮೀಜಿಯವರ ಪ್ರಕಾರ ಈ ಸ್ಥಿತಿಗೆ ಒಂದು ಪ್ರಮುಖ ಕಾರಣ ನಮ್ಮ ಶಿಕ್ಷಣ ಪದ್ದತಿಯಲ್ಲಿನ ದೋಷ. ಶಿಕ್ಷಣ ಎಂದರೆ ನಾವು ತಿಳಿದುಕೊಂಡಂತೆ ಕೇವಲ ಮಾಹಿತಿಗಳ ಸಂಗ್ರಹವಲ್ಲ. ಏನನ್ನು ನಾವು ಓದುತ್ತೇವೆಯೋ ಅವುಗಳು ಬದುಕಿನಲ್ಲಿಯೂ ಅಳವಡಿಸಲ್ಪಡಬೇಕು. ಇದು ಕಾರ್ಯಗತವಾಗದ ಹೊರತು ವ್ಯಕ್ತಿತ್ವ ವಿಕಸನವಾಗುವುದಿಲ್ಲ. ಸ್ವಾಮೀಜಿ ಯವರು ತಿಳಿಸುವಂತೆ ನಮ್ಮ ದೇಶದ ಪ್ರಾಚೀನ ಇತಿಹಾಸ, ಸಂಸ್ಕೃತಿಗಳ ಸಾರವನ್ನು ನಮ್ಮ ಯುವಕರಿಗೆ ತಲುಪಿಸುವುದರೊಂದಿಗೆ ಸಂಸ್ಕೃತ ಭಾಷೆಯನ್ನು ಅವರಿಗೆ ಪರಿಚಯಿಸಬೇಕು. ನಮ್ಮ ಪ್ರಾಚೀನ ಜ್ಞಾನ ದೊಂದಿಗೆ ಪಾಶ್ಚಾತ್ಯರ ವಿಜ್ಞಾನ ಹಾಗೂ ತಂತ್ರಜ್ಞಾನ ಗಳನ್ನು ನಮ್ಮ ದೇಶದ ಯುವಕರು ಕಲಿಯು ವಂತಾಗ ಬೇಕು. “ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ’ ಎಂಬ ಡಿ.ವಿ.ಜಿ. ಅವರ ಕಗ್ಗದ ಮಾತು ಇದಕ್ಕೆ ಪುಷ್ಟಿ ನೀಡುತ್ತಿದೆ. ಕೃಷಿಗೆ ಪೂರಕವಾದ ಶಿಕ್ಷಣ ಹೇಗಿರಬೇಕು? ಎಂಬುದು ಸ್ವಾಮೀಜಿಯವರ ಮುಂದಿನ ಚಿಂತನೆ. ಕೃಷಿ ಕ್ಷೇತ್ರದ ಕುರಿತ ತಾತ್ಸಾರದ ಮನೋಭಾವ ಮೊದಲು ತೊಲಗಬೇಕು ಎನ್ನುತ್ತಾ ರಾಮಾಯಣದ ದೊರೆ ಜನಕ ಮಹಾರಾಜನ ನಿದರ್ಶನವನ್ನು ನೀಡುತ್ತಾರೆ. ಜನಕ ಮಹಾ ರಾಜನು ರಾಜನಾದರೂ ಒಂದು ಕೈಯಲ್ಲಿ ನೇಗಿಲನ್ನು ಹಿಡಿಯುವುದರ ಮೂಲಕ ಕೃಷಿಯನ್ನು ಉತ್ತೇಜಿಸಿದನು. ನಮ್ಮ ಪ್ರಾಚೀನರನೇಕರು ಕೃಷಿಯಲ್ಲಿಯೇ ಖುಷಿ ಕಂಡರು. ಹಾಗಾದರೆ ಬದ ಲಾದ ಕಾಲಘಟ್ಟದಲ್ಲಿ ಕೃಷಿಯ ಕುರಿತ ಚಿಂತನೆ ಹೇಗಿರಬೇಕು?.
ಸ್ವಾಮೀಜಿಯವರು ಈ ಕುರಿತೂ ಉತ್ತರಿಸುತ್ತಾರೆ. ಕೃಷಿಕರು ಸುಶಿಕ್ಷಿತರಾಗಬೇಕು ಎಂಬುದು ಸ್ವಾಮೀಜಿಯವರ ಮೊದಲ ಅಭಿಪ್ರಾಯ. ಹಾಗಾದರೆ ಅವರಿಗೆ ದೊರಕಬೇಕಾದ ಶಿಕ್ಷಣ ಯಾವ ರೂಪದಲ್ಲಿರಬೇಕು?. ಅದಕ್ಕೆ ಸ್ವಾಮೀಜಿಯವರ ಉತ್ತರ ಕೃಷಿಕರಿಗೆ ನೀಡುವ ಶಿಕ್ಷಣದಲ್ಲಿ ಕೃಷಿ ವಿಜ್ಞಾನದ ಅಳವಡಿಕೆ. ವೈಜ್ಞಾನಿಕ ಹಾಗೂ ತಂತ್ರಜ್ಞಾನ ಸಂಬಂಧ ಶಿಕ್ಷಣ. ಆದರೆ ಇದು ಕಲಿಕೆ, ಅಂಕ ಗಳಿಕೆ ಅಥವಾ ಪ್ರಮಾಣಪತ್ರಕ್ಕಷ್ಟೇ ಸೀಮಿತವಾಗಬಾರದು. ಕೃಷಿ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಈ ಮೂಲಕ ಕೃಷಿಕರ ಆದಾಯವನ್ನು ಹೆಚ್ಚಿಸುವಲ್ಲಿ ಈ ಶಿಕ್ಷಣ ಪ್ರಧಾನ ಪಾತ್ರ ವಹಿಸಬೇಕು. ಕೃಷಿಯಿಂದ ವಿಮುಖರಾಗುತ್ತಿರುವ ಯುವಕರ ಬಗ್ಗೆ ಸ್ವಾಮೀಜಿ ಪ್ರಸ್ತಾವಿಸುತ್ತಾರೆ. ನಮ್ಮ ಯುವಕರು ಸ್ವಲ್ಪ ಓದಿದರೆ ಸಾಕು, ನಗರತ್ತ ವಲಸೆ ಹೋಗುತ್ತಾರೆ.
ಹಳ್ಳಿಯಲ್ಲಿ ಸಾಕಷ್ಟು ಜಮೀನಿರುತ್ತದೆ. ವ್ಯವಸಾಯ ಮಾಡಿಕೊಂಡ ಬದುಕಲು ಬೇಕಾದಷ್ಟು ಅವಕಾಶಗಳಿವೆ. ಆದರೆ ನಗರದತ್ತ ಸಾಗುವ ಹುರುಪಿನ ನಡುವೆ ವ್ಯವಸಾಯ ಹಾಗೂ ಹಳ್ಳಿಯ ಜೀವನ ಬರಡಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗ್ರಾಮೀಣ ಬದುಕು ನಾಶವಾಗುವುದರೊಂದಿಗೆ ಕೃಷಿಯೂ ಕ್ರಮೇಣ ಅವಸಾನದ ಅಂಚಿಗೆ ತಲುಪುತ್ತದೆ. ಗ್ರಾಮೀಣ ಬದುಕಿನ ಮಹಣ್ತೀವನ್ನು ಎಳೆ ಎಳೆಯಾಗಿ ಬಿಡಿಸಿದ ಸ್ವಾಮೀಜಿಯವರು ನಿಮ್ಮ ಆರೋಗ್ಯ ಉತ್ತಮವಾಗಿ ರಬೇಕೇ ಗ್ರಾಮೀಣ ಪರಿಸರದತ್ತ ಮುಖ ಮಾಡಿ. ಕೃಷಿ ಕಾಯಕದ ಮೂಲಕ ಪ್ರಕೃತಿಯೊಂದಿಗೆ ಬದುಕಿರಿ. ಪ್ರಕೃತಿಯೊಂದಿಗೆ ನಮ್ಮ ಬದುಕನ್ನು ನಾವು ಎಷ್ಟರ ಮಟ್ಟಿಗೆ ತೆರೆದುಕೊಳ್ಳುತ್ತೇವೆಯೋ ಅಷ್ಟರ ಮಟ್ಟಿಗೆ ನಮ್ಮ ಆರೋಗ್ಯವೂ ಸುಧಾರಣೆಯಾಗುತ್ತದೆ.
ಸ್ವಾಮೀಜಿಯವರ ಚಿಂತನೆಯ ಪ್ರಸ್ತುತತೆ
ಸ್ವಾಮಿ ವಿವೇಕಾನಂದರು ಈ ಸತ್ಯವನ್ನು ಹೇಳಿ ಕೆಲವು ವರ್ಷಗಳೇ ಸಂದವು. ಆದರೂ ಇಂದಿಗೂ ಈ ಸಮಸ್ಯೆಗಳು ಕೃಷಿ ಹಾಗೂ ಗ್ರಾಮೀಣ ಬದುಕನ್ನು ಕಾಡುತ್ತಿವೆ. ಕೃಷಿ ಕ್ಷೇತ್ರವನ್ನು ಆಯ್ದುಕೊಳ್ಳುವ ವಿದ್ಯಾ ವಂತ ಯುವಕರ ಸಂಖ್ಯೆಯಲ್ಲಿಯೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೊರೊನಾ ಕಾಲಘಟ್ಟದಲ್ಲಿ ಹಲ ವರು ಗ್ರಾಮೀಣ ಭಾಗದತ್ತ ಮುಖ ಮಾಡಿದರೂ ನಗರದತ್ತ ವಲಸೆ ಮುಂದುವರಿಯುತ್ತಿದೆ. ಶಿಕ್ಷಣದಲ್ಲಿ ಕೃಷಿ ಕುರಿತ ಸ್ವಾಮೀಜಿಯವರ ಅಭಿಪ್ರಾಯಗಳತ್ತ ಗಂಭೀರವಾಗಿ ಚಿಂತಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ನಶಿಸುತ್ತಿರುವ ಹಲವು ಗುಡಿ ಕೈಗಾರಿಕೆಗಳ ಪುನರುಜ್ಜೀವನ ಇಂದು ಅಗತ್ಯವಾಗಿದೆ. ನಮ್ಮ ದೇಶದ ಗ್ರಾಮೀಣ ಭಾಗದ ಇತರ ವಸ್ತುಗಳೂ ಚೆನ್ನಪಟ್ಟಣದ ಬೊಂಬೆಗಳಿಗೆ ದೊರೆತ ಮಾನ್ಯತೆಯ ಎತ್ತರಕ್ಕೆ ಏರುವ ವಾತಾವರಣ ನಿರ್ಮಾಣ ವಾಗಬೇಕು. ಕೃಷಿ ಕಾಯಕದೊಡನೆ ವಿಜ್ಞಾನ ಕಲೆ ಹಾಗೂ ವಿವೇಕವಾಣಿ ಮೇಳವಿಸಿದರೆ ಕೃಷಿಗೆ ಮತ್ತಷ್ಟು ಶಕ್ತಿ ಬಂದೀತಲ್ಲವೇ? ಆತ್ಮನಿರ್ಭರ ಭಾರತದ ಕನಸು ನನಸಾದೀತು.
ವಿದ್ಯಾವಂತರ ನಡಿಗೆ ಹಳ್ಳಿಯ ಕಡೆಗೆ
ವಿದ್ಯಾವಂತರು ಗ್ರಾಮೀಣ ಮಂದಿಯೊಂದಿಗೆ ಮುಕ್ತವಾಗಿ ಬೆರೆಯಬೇಕು. ಅವರಿಗೆ ಭಾರತದ ಪ್ರಾಚೀನ ಸಂಸ್ಕೃತಿಯನ್ನು ತಲುಪಿಸಬೇಕು. ಆದರೆ ಗ್ರಾಮೀಣ ಮಂದಿ ಅದಕ್ಕೆ ಸ್ಪಂದಿಸಿಯಾರೇ? ನಮ್ಮ ಹಳ್ಳಿಯ ಮಂದಿಗೆ ಇಂದಿಗೂ ವಿದ್ಯಾವಂತರ ಬಗ್ಗೆ ಗೌರವವಿದೆ. ಅವರೂ ಜ್ಞಾನದಾಹಿಗಳು. ಖಂಡಿತವಾಗಿ ವಿದ್ಯಾವಂತರು ಈ ಕೆಲಸಕ್ಕೆ ಇಳಿದರೆ ಗ್ರಾಮೀಣ ಮಂದಿ ಅವರ ಸುತ್ತ ಸೇರಿ ಅವರ ಜ್ಞಾನ ಪಡೆಯಲು ಸಿದ್ಧರಾಗುತ್ತಾರೆ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.
– ಶ್ರೀಕಾಂತ್, ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.