ಮೌಲಿಕ ಪಂಚಾಂಗದ ಮೇಲೆ ಭೈರಪ್ಪ ಸೌಧ
Team Udayavani, Jul 31, 2021, 6:40 AM IST
ವ್ಯಕ್ತಿಗಳ ಮನಸ್ಸಿನಲ್ಲಿ ಹುಟ್ಟುವ ಸದಾಶಯಗಳೆಂಬ ಬೀಜ ಎಷ್ಟು ಎತ್ತರದ ಮರವಾಗಬಹುದು?, ಮರಕಟುಕರಿದ್ದರೂ. ಅಂತಹ ದೋಣಿ ಎಷ್ಟು ದೂರ ಮುಳುಗದೆ ಪ್ರವಹಿಸಬಹುದು?, ಸಣ್ಣಪುಟ್ಟ ತೆರೆಗಳ ನಡುವೆಯೂ. 1931ರ ಆಗಸ್ಟ್ 20 (ವ್ಯಾಸಪೂರ್ಣಿಮೆ)ರಂದು ಜನಿಸಿದ ಸಾಹಿತ್ಯ ಕ್ಷೇತ್ರದ ದಿಗ್ಗಜ, ಸ್ವಾತಂತ್ರ್ಯ ಪೂರ್ವೋತ್ತರಗಳ ಸಾಕ್ಷಿ ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ ಅವರು 1981ರಲ್ಲಿ ಹಾಕಿದ ಸದಾಶಯವೆಂಬ ಬೀಜದ ಸುದೀರ್ಘ ಪಯಣದ ಕಥೆಯನ್ನು ಅವರು 91ನೆಯ ವರ್ಷಕ್ಕೆ ಕಾಲಿಡುವ ಸಂದರ್ಭ ಸ್ಮರಿಸಿದಾಗ ಇಂತಹ ಸದಾಶ ಯಗಳು ಅನಂತವಾಗಲೆಂದು ಸದಿಚ್ಛೆ ಮೂಡಬಹುದು.
1950ರ ದಶಕದಲ್ಲಿ ವಿದ್ಯಾರ್ಥಿ ಗಳಾಗಿರುವಾಗಲೇ ಶಿಕ್ಷಣ ಕ್ಷೇತ್ರದ ಸಂತ ಎಂದು ಹೆಸರಾದ ಬೆಳಗೆರೆ ಕೃಷ್ಣ ಶಾಸ್ತ್ರಿ ಮತ್ತು ಡಾ| ಎಸ್. ಎಲ್. ಭೈರಪ್ಪ ಪರಿಚಿತರು.
1981ರಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿದ್ದ ಶಾಸ್ತ್ರಿಗಳ ಮನೆಯಲ್ಲಿ ಭೈರಪ್ಪ ಹತ್ತು ದಿನವಿದ್ದರು. ಆಗ ಹಿರಿಯೂರಿನಿಂದ ಭೈರಪ್ಪನವರನ್ನು ತುಂಬಿದ ಬಸ್‌ನಲ್ಲಿ ಕರೆತಂದರು. ಶಾಸ್ತ್ರಿಗಳ ಮನೆ ಹೊಲದ ಮಧ್ಯೆ ಹಳೆಯ ಕುಟೀರ, ದನದ ಕೊಟ್ಟಿಗೆ, ಅಲ್ಲಲ್ಲೇ ಸಾಮಾನು ಇಟ್ಟುಕೊಳ್ಳುವುದಾಗಿತ್ತು. ಭೈರಪ್ಪನ ವರಿಗೆ ಪ್ರತ್ಯೇಕ ಗುಡಿಸಲೊಂದನ್ನು ಮಾಡಲಾಗಿತ್ತು. ಮರುದಿನ ಭೈರಪ್ಪ ಸೀದಾ ಶಾಸ್ತ್ರಿಗಳ ಕುಟೀರಕ್ಕೆ ಬಂದರು. “ಇಲ್ಲಿಗೇಕೆ ಬಂದಿರಿ’ ಎಂದು ಕೇಳುವಷ್ಟರಲ್ಲಿ ಹರಕು ಚಾಪೆ ಹಾಸಿ ಭೈರಪ್ಪ ಕುಳಿತೇಬಿಟ್ಟರು. “ಜಮೀನು ಕೆಲಸ, ಅಲ್ಲೇ ವಾಸ, ಇಂಥದ್ರಲ್ಲಿ ಗುಡಿಸಲಲ್ಲದೆ ತಾಜ್‌ಮಹಲ್ ಕಟ್ಕೊಂಡಿರಕಾಗುತ್ಯಾ?’ ಎಂದರು ಭೈರಪ್ಪ. ಅವರೆಷ್ಟು ಸರಳವೆಂದರೆ ಸೊಪ್ಪುಗಳನ್ನು ಕಿತ್ತು ತಂದು ಅಡುಗೆ ಮಾಡಲು ಹೇಳುತ್ತಿದ್ದರು. ಈ ಅವಧಿ ಬಾಲ್ಯದಲ್ಲಿ ಕಂಡ ಅನಿರೀಕ್ಷಿತ ಸಾವುನೋವು, ಕಿತ್ತು ತಿನ್ನುವ ಬಡತನದಿಂದ ಹಿಡಿದು ವಿದೇಶ ಪ್ರಯಾಣದ ವರೆಗೆ ಮಾತನಾಡಿದ್ದೇ ಆಡಿದ್ದು.
ಮನೆಯಲ್ಲಿ ಶ್ರೀನಿವಾಸ್ – ಶಾರದಾ ದಂಪತಿ ವ್ಯವಸಾಯ ನೋಡಿಕೊಂಡು ಅಡುಗೆ ಮಾಡುತ್ತಿದ್ದರು. ಹೊರಡುವ ದಿನ ಭೈರಪ್ಪ- ಕೃಷ್ಣ ಶಾಸ್ತ್ರಿಗಳ ನಡುವೆ ಮಾತುಕತೆ ನಡೆಯಿತು:
ಭೈರಪ್ಪ: ದಂಪತಿ ಎಲ್ಲಿಗೂ ನೌಕರಿಗೂ ಹೋಗದೆ ನಿಮ್ಮ ಜತೆ ಇರುವುದು ತ್ಯಾಗ. ನೀವು ಯೋಚಿಸಬೇಕಾದ ಇನ್ನೊಂದು ಭಾಗವಿದೆ.
ಶಾಸ್ತ್ರಿ : ನಿಮ್ಮ ಮನಸ್ಸಿನಲ್ಲಿದ್ದದ್ದನ್ನು ಹೇಳಿ.
ಭೈರಪ್ಪ: ನೀವು ನೂರ್ಕಾಲ ಬಾಳಿ. ಆದರೆ ಜೀವಮಾನ ಶಾಶ್ವತವಲ್ಲ. ಆಗ ಇವರಿಬ್ಬರೂ ಏನಾಗಬೇಕು? ಅವರಿಗೆ ಮಗುವಿದೆ. ಅವರೆಲ್ಲ ಬೀದಿಪಾಲಾಗಬೇಕಾಗುತ್ತದೆ. ಯೋಚಿಸಿದ್ದೀರಾ?
ಶಾಸ್ತ್ರಿ : ಯೋಚಿಸಿದ್ದೇನೆ. ಜಮೀನು ಅನುಭವಿಸಿಕೊಂಡು ಹೋಗಬಹುದು ಎಂದು ಹೇಳಿದ್ದೆ.
ಭೈರಪ್ಪ: ಹಾಗಿದ್ಮೇಲೆ, ಯೋಚನೆ ಏಕೆ? ಅವರ ಹೆಸರಿಗೆ ಮಾಡ್ಸಿ.
1985ರಲ್ಲಿ ಶಾಸ್ತ್ರಿಗಳಿಗೆ ಹೃದ್ರೋಗ ಬಾಧಿಸಿತು. ಭೈರಪ್ಪನವರ ಮಾತು ನೆನಪಿಗೆ ಬಂತು. ಶಾರದಮ್ಮನ ಹೆಸರಿಗೆ 11 ಎಕ್ರೆ ಭೂಮಿಯನ್ನು ಅಧಿಕೃತವಾಗಿ ಕೊಟ್ಟರು. 1995ರಲ್ಲಿ ಶ್ರೀನಿವಾಸ್ ಕಾಲವಾದರು. ಮಗ ಅರವಿಂದ ಬೆಳಗೆರೆ ಮೈಸೂರಿನಲ್ಲಿ ಎಂಎ (ಇಂಗ್ಲಿಷ್) ಓದಿ ಶಾಸ್ತ್ರಿಗಳು ಆರಂಭಿ ಸಿದ ಪ್ರೌಢಶಾಲೆ, ಕಾಲೇಜುಗಳಲ್ಲಿ ತಂದೆ, ತಾತ ಮಾಡುತ್ತಿದ್ದ ಕೆಲಸದ ಜತೆ ಉಪನ್ಯಾಸಕ ವೃತ್ತಿಯನ್ನೂ ಮಾಡಿದರು. 2016ರಲ್ಲಿ ಸರಕಾರಿ ಶಾಲೆಗೆ ಸೇರಿ ಧಾರವಾಡ ಸಮೀಪದ ಕೋಟೂರು ಸ.ಹಿ.ಪ್ರಾ.ಶಾಲೆಯ ಪದವೀಧರ ಶಿಕ್ಷಕರಾದರು. ಶಾರದಮ್ಮ ಮಗನ ಜತೆಯಲ್ಲಿದ್ದಾರೆ. ಶಾರದಮ್ಮನ ಪುತ್ರಿ ಅರುಣಾರಿಗೆ ಮದುವೆಯಾಗಿದೆ. ಪತಿ ಜಗದೀಶ್ ಚಳ್ಳಕೆರೆ ಸ.ಪ.ಪೂ. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರು.
ಕೃಷ್ಣ ಶಾಸ್ತ್ರಿಗಳು 1960ರ ದಶಕದಲ್ಲಿ ಹೆಗ್ಗರೆ ಯಲ್ಲಿ ಶಾಲಾ ಶಿಕ್ಷಕರಿದ್ದಾಗ ಕೆಲವು ಮಕ್ಕಳನ್ನು ಮನೆಯಲ್ಲಿರಿಸಿಕೊಂಡು, ಕೆಲವರಿಗೆ ಶುಲ್ಕ, ಕೆಲವರಿಗೆ ಬಟ್ಟೆ, ಕೆಲವರಿಗೆ ಪುಸ್ತಕಗಳನ್ನು ಕೊಟ್ಟು ಓದಲು ಪ್ರೋತ್ಸಾಹಿಸುತ್ತಿದ್ದರು. ಶಾರದಾರಿಗೆ ಒಂಬತ್ತು ವಯಸ್ಸು, ಐದನೆಯ ತರಗತಿಯಲ್ಲಿರುವಾಗ ಶಾಸ್ತ್ರಿಗಳ ಮನೆಗೆ ಸೇರಿದರು. ಬಿಎಸ್ಸಿ, ಬಿಎಡ್ ವರೆಗೆ ಶಾಸ್ತ್ರಿಗಳು ಓದಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಶ್ರೀನಿವಾಸರ ಜತೆ ಮದುವೆ ಮಾಡಿಸಿದರು. ಇವರು ಶಾಸ್ತ್ರಿಗಳಿಗೆ ಸಂಬಂಧಿಕರಲ್ಲ. ಶಾಸ್ತ್ರಿಗಳ ಭೂಮಿಯಿಂದ ಬಂದ ಕೃಷಿ, ತೋಟಗಾರಿಕೆ ಆದಾಯದಿಂದ ಹಾಸ್ಟೆಲ್, ಶಾಲೆಗಳನ್ನು ನಡೆಸುತ್ತಿದ್ದರು. ಎಲ್ಲ ಕಡೆಯಂತೆ ಬೆಳಗೆರೆ ಭೂಮಿಯಲ್ಲಿಯೂ ಅಂತರ್ಜಲ ಕುಸಿಯಿತು. 2013ರಲ್ಲಿ ಶಾಸ್ತ್ರಿಗಳೂ ನಿಧನ ಹೊಂದಿದರು. ಈಗ ಬೇರೊಬ್ಬರನ್ನು ಭೂಮಿ ನೋಡಿಕೊಳ್ಳಲು ನೇಮಿಸಲಾಗಿದೆ.
ಭೈರಪ್ಪನವರು ಕಾದಂಬರಿ ಬರೆಯುವಾಗ ವರ್ಷ ಗಟ್ಟಲೆ ಕ್ಷೇತ್ರ ಕಾರ್ಯ ಮಾಡಿ ಜ್ಞಾನ ಸಂಪಾದಿಸುತ್ತಾರೆ. ಲಾಡ್ಜ್ಗಳಲ್ಲಿ ಉಳಿದುಕೊಳ್ಳುವುದಕ್ಕಿಂತ ಮನೆಗೆ ಪ್ರಾಶಸ್ತ್ಯ ನೀಡುತ್ತಾರೆ. ಬದುಕಿನ ವಿವಿಧ ಮುಖಗಳು ಅರ್ಥವಾಗುವುದು ಮನೆ ವಾತಾವರಣದಲ್ಲಿಯೇ. ಇದುವೇ ರಿಯಾಲಿಟಿ, ಇಲ್ಲವಾದರೆ ವಾಸ್ತವ ತೋರದೆ ಕಲರ್‌ಫುಲ್ ಲೋಕ ಕಾಣುತ್ತ¤ದೆ. ಇದು ಒಂಥರ ಮದುವೆ ಸಂಭ್ರಮದಲ್ಲಿ “ನಗುವಿನ ಕಡಲು’ ಇದ್ದಂತೆ. ಇದು ನೈಜವಲ್ಲ, ಕೃತಕ. “ಭೈರಪ್ಪನವರ ಕಾಳಜಿ ಎಂಥಾದ್ದು? ಅದು ಎಷ್ಟು ಮೌಲಿಕವಾದದ್ದು?’ ಎಂದು ಶಾಸ್ತ್ರಿಗಳು “ಮರೆಯಲಾದೀತೆ?’ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. 1995ರ ವೇಳೆ ಶ್ರೀನಿವಾಸರು ಕಾಲವಾದಾಗ ಬಹು ಎತ್ತರದಲ್ಲಿದ್ದ ಭೈರಪ್ಪನವರು ಪತ್ರ ಬರೆದು ಸಾಂತ್ವನ ಹೇಳಿದ್ದರು.
ವ್ಯಕ್ತಿಯೊಬ್ಬರ ಅಸಾಧಾರಣ ಸಾಧನೆಯ ಚಿತ್ರಣ ಮೇಲ್ನೋಟಕ್ಕೆ ಗೋಚರವಾಗುತ್ತದೆ. ಆದರೆ ಕಣ್ಣಿಗೆ ಕಾಣುವ ಸಾಧನೆಯ ಹಿಂದಿನ ಮೌಲಿಕವಾದ ಪಂಚಾಂಗ (ಸದಾಶಯದ ಬೀಜ, ಸದಭಿರುಚಿ, ನಿಷ್ಕಲ್ಮಷ ಭಾವ) ಕಾಣುವುದಿಲ್ಲ. ಸಾಧನೆಗೆ ರಹದಾರಿ ಈ ಪಂಚಾಂಗವೇ ಎಂಬ ಜಿಜ್ಞಾಸೆ ಮೂಡುತ್ತದೆ. ಪಂಚಾಂಗ ಗಟ್ಟಿಯಾದಷ್ಟೂ ಸೌಧ ಭದ್ರವಾಗಿರುತ್ತದೆ. ಪಂಚಾಂಗ ಗಟ್ಟಿ ಇಲ್ಲದೆ ದೊಡ್ಡ ಸೌಧ ಕಟ್ಟಿದರೇನು ಪ್ರಯೋಜನ? ಪಂಚಾಂಗದ ಗಟ್ಟಿತನ ಅರಿಯಬೇಕಾದರೆ ಸದಾಶಯ ಮುಂದೆ ಏನಾಯಿತು ಎನ್ನುವುದನ್ನು ಅರಿಯಬೇಕು. ಶಾರದಾ ಈಗ ನಾಲ್ವರು ಮೊಮ್ಮಕ್ಕಳ ಅಜ್ಜಿ, ಮಗನ ಜತೆ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಸದಾಶಯ ನಿಸ್ವಾರ್ಥವಿದ್ದಾಗ ದೋಣಿ ಸಣ್ಣಪುಟ್ಟ ತೆರೆ ಬಂದರೂ ತೇಲುತ್ತಲೇ ಮುಂದೆ ಮುಂದೆ ಹೋಗುತ್ತದೆ. ಎಲ್ಲರಲ್ಲಿ ಇಂತಹ ಭಾವನೆ ಹೊಂದಿದರೆ ಎಂತಹ ಸುಖೀ ಸಮಾಜ ನಿರ್ಮಾಣವಾಗಬಹುದು?
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.