ಇನ್ನು ಎರಡು ವಾರಗಳಲ್ಲಿ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ : ಸೈನಾ ನೆಹ್ವಾಲ್
Team Udayavani, Aug 10, 2020, 2:11 PM IST
ಹೈದರಾಬಾದ್: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಹೈದರಾಬಾದ್‌ನಲ್ಲಿ ಪ್ರತ್ಯೇಕವಾಗಿ ಬ್ಯಾಡ್ಮಿಂಟನ್ ಅಭ್ಯಾಸ ಆರಂಭಿಸಿದ್ದಾರೆ. ಎರಡು ವಾರಗಳಲ್ಲಿ ಸಾಯ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ತೆಲಂಗಾಣ ಸರಕಾರದ ಒಪ್ಪಿಗೆಯ ಬಳಿಕ ಇಲ್ಲಿನ ಗೋಪಿಚಂದ್ ಅಕಾಡೆಮಿಯಲ್ಲಿ ಆ. 7ರಿಂದ ಬ್ಯಾಡ್ಮಿಂಟನ್ ಅಭ್ಯಾಸ ಆರಂಭಗೊಂಡಿದೆ. ಪಿ.ವಿ. ಸಿಂಧು, ಸಾಯಿ ಪ್ರಣೀತ್ ಮೊದಲಾದವರೆಲ್ಲ ಇಲ್ಲಿ ಶುಕ್ರವಾರದಿಂದಲೇ ಅಭ್ಯಾಸ ನಡೆಸುತ್ತಿದ್ದಾರೆ. ಸೈನಾ ನೆಹ್ವಾಲ್ ಶನಿವಾರ ಆಗಮಿಸುವ ನಿರೀಕ್ಷೆ ಇತ್ತು. ಆದರೀಗ ಅವರು ಪತಿ ಪಿ. ಕಶ್ಯಪ್ ಜತೆಗೂಡಿ ಗೋಪಿಚಂದ್ ಅಕಾಡೆಮಿಯ ಸಮೀಪದಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ.
ಮೊದಲು ಫಿಟ್‌ನೆಸ್ ಅಗತ್ಯ
“ನಾನು ಕಳೆದೊಂದು ವಾರದಿಂದ ಗೋಪಿಚಂದ್ ಅಕಾಡೆಮಿಯ ಸನಿಹದ ಬ್ಯಾಡ್ಮಿಂಟನ್ ಕೇಂದ್ರವೊಂದರಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಇಲ್ಲಿ ಸಾಮಾನ್ಯ ಮಟ್ಟದ ಸೌಲಭ್ಯಗಳಷ್ಟೇ ಇವೆ. ಆದರೆ ಸುದೀರ್ಘ ವಿರಾಮದ ಬಳಿಕ ಅಭ್ಯಾಸ ನಡೆಸುತ್ತಿರುವುದರಿಂದ ಸದ್ಯಕ್ಕೆ ಇಷ್ಟು ಸಾಕು. ಸೈನಾ ಈಗಷ್ಟೇ ಸೇರಿಕೊಂಡಿದ್ದಾರೆ. ಬಹುಶಃ ಅವರು ಒಂದೆರಡು ವಾರಗಳಲ್ಲಿ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ಮುಂದುವರಿಸಬಹುದು’ ಎಂದು ಪಿ. ಕಶ್ಯಪ್ ಹೇಳಿದರು.
“ಸೈನಾ ಮೊದಲು ಫಿಟ್‌ನೆಸ್ ಮರಳಿ ಪಡೆಯಬೇಕಿದೆ. ಈಗಾಗಲೇ ಗೋಪಿ ಸರ್ ಅವರ ಅನುಮತಿ ಪಡೆದಿದ್ದಾರೆ. ನೂತನ ಕೋಚ್, ಇಂಡೋನೇಶ್ಯದ ಅಗುಸ್ ಸ್ಯಾಂಟೋಸ್ ಜತೆಯೂ ಚರ್ಚಿಸಿದ್ದಾರೆ’ ಎಂದು ಕಶ್ಯಪ್ ತಿಳಿಸಿದರು.
ಗೋಪಿಚಂದ್ ಅಕಾಡೆಮಿಯಲ್ಲಿ 9 ಅಂಕಣಗಳಿದ್ದರೂ ಅಭ್ಯಾಸ ನಡೆಸುತ್ತಿರುವ ಆಟಗಾರರ ಸಂಖ್ಯೆ ಬಹಳ ಕಡಿಮೆ. ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಅಶ್ವಿನಿ ಪೊನ್ನಪ್ಪ ಇನ್ನೂ ಆಗಮಿಸಿಲ್ಲ. ಅಶ್ವಿನಿ ಸದ್ಯ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಮಾಜಿ ನಂ.1 ಆಟಗಾರ ಕೆ. ಶ್ರೀಕಾಂತ್ ಗುಂಟೂರಿನಲ್ಲಿದ್ದು, ಈ ವಾರ ಆಗಮಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.