ಸಾಸ್ತಾನ-ಐರೋಡಿಯಲ್ಲೂ ಇದೆ ಅಪಾಯಕಾರಿ ಕೆರೆ
ದುರಂತಕ್ಕೆ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ
Team Udayavani, Jun 23, 2020, 5:55 AM IST
ಕೋಟ: ಜಿಲ್ಲಾ ಮುಖ್ಯ ರಸ್ತೆಗೆ ತಾಗಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದ್ದ ಬಾಕೂìರು ಚೌಳಿಕೆರೆಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಉದ್ಯಮಿ ಮೃತಪಟ್ಟು, ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಸಂಭವಿಸಿತ್ತು. ಅಲ್ಲಿ ದುರಂತಕ್ಕೆ ಕಾರಣವಾಗಿದ್ದ ಮಾದರಿಯ ಅಪಾಯಕಾರಿ ಅನೇಕ ಕೆರೆಗಳು ಜಿಲ್ಲೆಯಲ್ಲಿದ್ದು ಈ ಬಗ್ಗೆ ತುರ್ತು ಗಮನ ಹರಿಸಬೇಕಾಗಿದೆ.
ಈ ಪೈಕಿ ಸಾಸ್ತಾನ – ಕೋಡಿಕನ್ಯಾಣ ಸಂಪರ್ಕ ರಸ್ತೆಯ ಐರೋಡಿಯಲ್ಲಿರುವ ಕೆರೆ ಕೂಡ ಒಂದು. ಇಲ್ಲೂ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮುನ್ನ ಆಡಳಿತ ವ್ಯವಸ್ಥೆ ಎಚ್ಚೆತ್ತು ಕೊಂಡು ತಡೆಬೇಲಿ ನಿರ್ಮಿಸಬೇಕು ಎನ್ನುವ ಮನವಿ ಸ್ಥಳೀಯರಿಂದ ಕೇಳಿಬಂದಿದೆ.
ಜನನಿಬಿಡ ರಸ್ತೆ
ಈ ಕೆರೆಯು ಸಾಸ್ತಾನ-ಕೋಡಿಕನ್ಯಾಣ ಸಂಪರ್ಕಿಸುವ ಮೀನುಗಾರಿಕೆ ಮುಖ್ಯ ರಸ್ತೆಗೆ ತಾಗಿಕೊಂಡಿದೆ. ಹೀಗಾಗಿ ಕೋಡಿಕನ್ಯಾಣ, ಕೋಡಿತಲೆ, ಯಕ್ಷಿಮಠ, ಪಡುಕರೆ ಮುಂತಾದ ಕಡೆ ಸಂಚರಿಸುವ ನೂರಾರು ವಾಹನಗಳು ರಾತ್ರಿ – ಹಗಲೆನ್ನದೆ ಇಲ್ಲಿ ಸಂಚರಿಸುತ್ತವೆ ಮತ್ತು ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ಅಪಾಯ ಖಚಿತ. ಈ ಮಾರ್ಗವಾಗಿ ಸುಮಾರು ಎಂಟರಿಂದ ಹತ್ತು ಶಾಲಾ ಬಸ್‌ಗಳು ಸಂಚರಿಸುತ್ತವೆ.
ಕಾರು-ಬೈಕ್ ಮುಂತಾದ ವಾಹನಗಳು ಈ ಹಿಂದೆ ಕೆರೆಗೆ ಬಿದ್ದಿದ್ದವು. ಆದರೆ ನೀರು ಕಡಿಮೆ ಇದ್ದ ಕಾರಣಕ್ಕೆ ಮತ್ತು ಸಮಯ ಪ್ರಜ್ಞೆಯಿಂದಾಗಿ ಜೀವ ಹಾನಿ ಸಂಭವಿಸಿರಲಿಲ್ಲ. ಮಳೆಗಾಲದಲ್ಲಿ ನೀರು ತುಂಬಿರುವಾಗ ಅಪಘಾತ ಸಂಭವಿಸಿದರೆ ಅಪಾಯ ಖಚಿತ.
ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಮನವಿ ಮಾಡಿದ್ದರು ಹಾಗೂ ಉದಯವಾಣಿಯಲ್ಲೂ ಈ ಬಗ್ಗೆ ಎಚ್ಚರಿಕೆಯ ವರದಿ ಪ್ರಕಟವಾಗಿತ್ತು. ಆದರೆ ಸಂಬಂಧ ಪಟ್ಟವರು ಕಣ್ತೆರೆಯಲಿಲ್ಲ.
ಮತ್ತೊಮ್ಮೆ ಮನವಿ ಮಾಡಲಾಗುವುದು
ಗ್ರಾ.ಪಂ. ಅನುದಾನದಲ್ಲಿ ತಡೆಬೇಲಿ ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾಡಳಿತ ಹಾಗೂ ಉನ್ನತ ಜನಪ್ರತಿನಿಧಿಗಳಿಗೆ ಪತ್ರ ಬರೆದು ತಡೆಗೋಡೆ ನಿರ್ಮಿಸುವಂತೆ ಈ ಹಿಂದೆ ಕೇಳಿಕೊಳ್ಳಲಾಗಿತ್ತು. ಈಗ ಮತ್ತೊಮ್ಮೆ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಮನವಿ ಮಾಡಲಾಗುವುದು.
-ಮೊಸೆಸ್ ರೋಡ್ರಿಗಸ್,ಅಧ್ಯಕ್ಷರು,ಐರೋಡಿ ಗ್ರಾ.ಪಂ.
ತಡೆಬೇಲಿ ಅಗತ್ಯ
ಸಾಸ್ತಾನ-ಕೋಡಿಕನ್ಯಾಣ ಮೀನುಗಾರಿಕೆ ರಸ್ತೆಯಲ್ಲಿರುವ ಕೆರೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದು, ವಾಹನ ಸವಾರರು ಕೊಂಚ ಎಡವಿದರೂ ದೊಡ್ಡ ಅಪಾಯ ಖಂಡಿತ. ಆದ್ದರಿಂದ ಶೀಘ್ರದಲ್ಲಿ ಇದಕ್ಕೆ ತಡೆಬೇಲಿ ನಿರ್ಮಿಸಬೇಕು.
-ಪ್ರವೀಣ್ ಯಕ್ಷಿಮಠ, ಸ್ಥಳೀಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.