Karnataka: ಅಕಾಡೆಮಿಗಳ ಆಯ್ಕೆಗೆ ಶೋಧನಾ ಸಮಿತಿ- ಮೊದಲ ಬಾರಿಗೆ ಇಂಥ ಕ್ರಮ
ಪ್ರೊ.ಬರಗೂರು ನೇತೃತ್ವದಲ್ಲಿ ವಿಶೇಷ ಕಮಿಟಿ
Team Udayavani, Aug 14, 2023, 7:21 AM IST
ಬೆಂಗಳೂರು: ಒಂಬತ್ತು ತಿಂಗಳಿಂದ ತೆರವಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕಾಗಿಯೇ ತಜ್ಞರ ಸಮಿತಿಯನ್ನು ರಚಿಸಲಿದೆ.
ಅಕಾಡೆಮಿಗಳಿಗೆ ಸಮರ್ಥರನ್ನೇ ಆಯ್ಕೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶ. ಹೀಗಾಗಿ, ಕುಲಪತಿಗಳ ನೇಮಕಕ್ಕೆ ಶೋಧನಾ ಸಮಿತಿ ಇರುವಂತೆ ಮೊದಲ ಬಾರಿಗೆ ರಾಜ್ಯದ ಸಾಂಸ್ಕೃತಿಕ ಲೋಕದ ಸಮಿತಿಗಳ ಪ್ರತಿನಿಧಿಗಳ ನೇಮಕಕ್ಕೆ ಶೋಧನಾ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಮಾಜಿ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್, ಕರ್ನಾಟಕ ಚಿತ್ರಕಲಾ ಅಕಾಡೆಮಿ ಅಧ್ಯಕ್ಷ ಬಿ.ಎಲ್.ಶಂಕರ್ ಇರುವ ಸಮಿತಿ ರಚಿಸುವ ಸಾಧ್ಯತೆಗಳಿವೆ. ಅದು ವಿವಿಧ ಪ್ರಾಧಿಕಾರ, ಅಕಾಡೆಮಿ ಮತ್ತು ರಂಗಾಯಣಗಳ ಅಧ್ಯಕ್ಷರ ನೇಮಕ ಮಾಡ ಲಿದೆ ಎಂದು ಮೂಲ ಗಳು ಹೇಳಿವೆ. ಈ ಸಮಿತಿಯ ಶಿಫಾರಸು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಡಗಡಗಿ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.
ತೆರವಾಗಿವೆ ಅಕಾಡೆಮಿಗಳು:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಮತ್ತು ಕರ್ನಾಟಕ ಪುಸ್ತಕ ಪ್ರಾಧಿಕಾರ ಸೇರಿದಂತೆ ಹಲವು ಪ್ರಾಧಿಕಾರ ಮತ್ತು ಅಕಾಡೆಮಿಗಳ ಅಧ್ಯಕ್ಷರ ಸ್ಥಾನ ತೆರವಾಗಿವೆ. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ರಾಷ್ಟ್ರೀಯ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಮೈಸೂರು ಮೂಲದ ಸಿ.ಬಸವಲಿಂಗಯ್ಯ, ಪಠ್ಯಗಳ ವಿಚಾರದಲ್ಲಿ ಹೋರಾಟ ರೂಪಿಸಿದ್ದ ಪ್ರೊ.ಎಲ್.ಮುಕುಂದರಾಜ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳ ಹೆಸರು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ.
ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್, ಹಿರಿಯ ರಂಗಕರ್ಮಿ ಗುಂಡಣ್ಣ, ಶಶಿಧರ್ ಬಾರಿಘಾಟ್, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾರ್ಯ ನಿರ್ವಹಿಸಿದ್ದ ಕಾ.ತ.ಚಿಕ್ಕಣ ಅವರ ಹೆಸರು ಕೂಡ ವಿವಿಧ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದೆ. ಹಾಗೆಯೇ ಸಂಗೀತ ಮತ್ತು ನೃತ್ಯ ಕಲಾ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೆಸರು ಕೇಳಿ ಬಂದಿದೆ.
ಸಾಧಕರ ಪ್ರಶಸ್ತಿ ಆಯ್ಕೆಗೆ ಅಧ್ಯಕ್ಷರಿಲೇಬೇಕು
ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲೆ ಅಧ್ಯಕ್ಷ ಮತ್ತು ಸದಸ್ಯರುಗಳ ನೇಮಕವಾಗಬೇಕಿತ್ತು. ಆದರೆ ಹಿಂದಿನ ಸರ್ಕಾರ ನೇಮಕ್ಕೆ ಮುಂದಾಗಿರಲಿಲ್ಲ. ಅಕಾಡೆಮಿ ಮತ್ತು ಪ್ರಾಧಿಕಾರದ ವಿವಿಧ ಪ್ರಶಸ್ತಿಗಳಿಗೆ ಸಾಧಕರನ್ನು ಘೋಷಣೆ ಮಾಡಬೇಕಾದರೆ ಸರ್ಕಾರ ನೇಮಕ ಮಾಡಿದ ಅಧ್ಯಕ್ಷರು ಮತ್ತು ಸದಸ್ಯರು ಇರಲೇಬೇಕು. ಆದರೆ ಹಲವು ತಿಂಗಳಿಂದ ಅಧ್ಯಕ್ಷರುಗಳು ಇಲ್ಲದೆ ಕಲಾಚಟುವಟಿಕೆಗಳು ಕುಂಠಿತವಾಗಿವೆ. ಬಜೆಟ್ ಬಳಿಕ ಅಧ್ಯಕ್ಷರನ್ನು ನೇಮಕ ಮಾಡುವ ವಾಗ್ಧಾನವನ್ನು ಈ ಸರ್ಕಾರ ಮಾಡಿತ್ತು. 3 ತಿಂಗಳು ಕಳೆದರೂ ಇನ್ನೂ ಆ ಕೆಲಸ ನಡೆದಿಲ್ಲ ಎಂದು ಹೆಸರು ಹೇಳಲು ಇಚ್ಛಿಸಿದ ಹಿರಿಯ ರಂಗ ಕಲಾವಿದರೊಬ್ಬರು ದೂರುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂಬ ವಿಶ್ವಾಸವಿದೆ.
-ಶ್ರೀನಿವಾಸ್ ಜಿ.ಕಪ್ಪಣ್ಣ, ಹಿರಿಯ ರಂಗಕರ್ಮಿ
ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.