ಸೇನಾಪುರ “ಗೂಡ್ಸ್’ ರೈಲು ನಿಲ್ದಾಣ ಪ್ರಸ್ತಾವ ನನೆಗುದಿಗೆ
"ಸರಕು ಸಾಗಾಟ' ನಿಲ್ದಾಣವಿಲ್ಲದೆ ಸ್ಥಳೀಯ ಆರ್ಥಿಕತೆಗೆ ಹಿನ್ನಡೆ ; ಮೀನುಗಾರಿಕೆ, ಗೇರು ಉದ್ಯಮಕ್ಕೂ ಸಮಸ್ಯೆ
Team Udayavani, Oct 6, 2021, 6:06 AM IST
ಕುಂದಾಪುರ: ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಹಳಷ್ಟು ವರ್ಷಗಳ ಹಿಂದೆ ಸೇನಾಪುರ ರೈಲು ನಿಲ್ದಾಣವನ್ನು ಸರಕು ಸಾಗಾಟ (ಗೂಡ್ಸ್ ಟ್ರೈನ್ ಸ್ಟೇಶನ್) ರೈಲು ನಿಲ್ದಾಣವನ್ನಾಗಿ ಮಾರ್ಪಡಿಸಬೇಕು ಎನ್ನುವ ಪ್ರಸ್ತಾವ ಇತ್ತು. ಆದರೆ ಸಾಂಘಿಕ ಪ್ರಯತ್ನದ ಕೊರತೆಯಿಂದ ಆ ಪ್ರಸ್ತಾವ ನನೆಗುದಿಗೆ ಬಿದ್ದಿದೆ.
ಕುಂದಾಪುರ, ಬೈಂದೂರು ಎರಡೂ ತಾಲೂಕು ವ್ಯಾಪ್ತಿಯಲ್ಲಿ ಕುಂದಾಪುರದ ಮೂಡ್ಲಕಟ್ಟೆ, ಸೇನಾಪುರ, ಬಿಜೂರು, ಬೈಂದೂರು ಹಾಗೂ ಶಿರೂರು ಸೇರಿ ಒಟ್ಟು 5 ನಿಲ್ದಾಣಗಳಿವೆ. ಇವುಗಳಲ್ಲಿ ಮೂಡ್ಲಕಟ್ಟೆ, ಬೈಂದೂರು ನಿಲ್ದಾಣಗಳಲ್ಲಿ ಬಹುತೇಕ ರೈಲುಗಳಿಗೆ ನಿಲುಗಡೆಯಿದೆ. ಆದರೆ ಬಾಕಿ ಉಳಿದ ನಿಲ್ದಾಣಗಳಲ್ಲಿ ಒಂದೆರಡು ರೈಲುಗಳಿಗೆ ಮಾತ್ರ ನಿಲುಗಡೆ ನೀಡಲಾಗುತ್ತಿದೆ. ಈ ಬಾಕಿ ಉಳಿದ 3 ನಿಲ್ದಾಣಗಳ ಪೈಕಿ ಒಂದನ್ನು ಗೂಡ್ಸ್ ನಿಲ್ದಾಣವಾಗಿ ಮಾಡಿದರೆ ಈ ಭಾಗದ ಮೀನುಗಾರಿಕೆ, ಗೇರು ಉದ್ಯಮಕ್ಕೆ ಉತ್ತೇಜನ ಸಿಗಲಿದೆ.
ಏನೆಲ್ಲ ಅಗತ್ಯ?
ಈಗಿರುವ ರೈಲು ನಿಲ್ದಾಣವನ್ನು ಗೂಡ್ಸ್ ನಿಲ್ದಾಣವಾಗಿ ಮಾರ್ಪಡಿಸಲು ನಿಲ್ದಾಣದಲ್ಲಿ ಕನಿಷ್ಠ 5-6 ಹಳಿಗಳನ್ನು ಹೆಚ್ಚಿಸಬೇಕು. ಗೂಡ್ಸ್ ಯಾರ್ಡ್ ನಿರ್ಮಿಸಬೇಕು. ಲೋಡಿಂಗ್ – ಅನ್ ಲೋಡಿಂಗ್ ಏರಿಯಾ ಮಾಡಬೇಕು. ಅದಕ್ಕೆ ವಾಹನಗಳು ಬರುವಂತೆ ಮಾರ್ಗ ಮಾಡಿಕೊಡಬೇಕು. ಮೆಕ್ಯಾನಿಕ್ ಶೆಡ್ ಮಾಡಿಕೊಡಬೇಕು.
ಕಾರ್ಯಸಾಧುವೇ?
ಸೇನಾಪುರ ರೈಲು ನಿಲ್ದಾಣವನ್ನು ಗೂಡ್ಸ್ ರೈಲು ನಿಲ್ದಾಣವಾಗಿ ಅಭಿವೃದ್ಧಿಪಡಿಸಿದರೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗುವ ಜತೆಗೆ, ಈ ಭಾಗಕ್ಕೆ ಅಗತ್ಯವಿರುವ ಸರಕು ಸಾಗಾಟವು ಅಗ್ಗವಾಗಲಿದೆ. ಈ ದಿಸೆಯಲ್ಲಿ ಈ ಭಾಗದ ಸಂಸದರು, ಶಾಸಕರು, ರೈಲ್ವೇ ಸಚಿವಾಲಯ, ಮುಖ್ಯವಾಗಿ ಕೊಂಕಣ್ ರೈಲ್ವೇ ಕಾರ್ಯ ಪ್ರವೃತ್ತರಾಗಬೇಕಿದೆ.
ಇದನ್ನೂ ಓದಿ:ರಸ್ತೆ ಬದಿ ನಿಲ್ಲಿಸಿಟ್ಟಿದ್ದ ಟ್ರಕ್ ಗಳ ಗಾಳಿ ತೆಗೆದು ಎಚ್ಚರಿಕೆ ನೀಡಿದ ಪೊಲೀಸರು
ಪ್ರಯೋಜನ ಹೇಗೆ?
ಈ ಪೈಕಿ ಸೇನಾಪುರ ರೈಲು ನಿಲ್ದಾಣವನ್ನು ಗೂಡ್ಸ್ ನಿಲ್ದಾಣವನ್ನಾಗಿ ಮಾಡಬೇಕು ಎನ್ನುವ ಪ್ರಸ್ತಾವ ಬಹಳಷ್ಟು ವರ್ಷಗಳ ಹಿಂದೆಯೇ ಇತ್ತು. ಸೇನಾಪುರವನ್ನು ಗೂಡ್ಸ್ ನಿಲ್ದಾಣವಾಗಿ ಮಾಡಿದರೆ ಇಲ್ಲಿಂದ 10-12 ಕಿ.ಮೀ. ದೂರದಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿದೆ. ಮರವಂತೆ ಬಂದರು ಸಹ ಹತ್ತಿರದಲ್ಲಿದೆ. ಅಲ್ಲಿಂದ ಬೇರೆ ಬೇರೆ ರಾಜ್ಯಗಳಿಗೆ ಮೀನು ಸಾಗಾಟಕ್ಕೆ ಅನುಕೂಲವಾಗಬಹುದು. ಇದಲ್ಲದೆ ಕುಂದಾಪುರ, ಬೈಂದೂರು ಭಾಗದಲ್ಲಿ ಸಾಕಷ್ಟು ಗೇರು ಬೀಜ ಕಾರ್ಖಾನೆಗಳಿವೆ. ಅವುಗಳಿಗೆ ಕಚ್ಛಾ ಗೇರು ಬೀಜವನ್ನು ಉತ್ತರ ಭಾರತದಿಂದ ಆಮದು ಮಾಡಿಕೊಳ್ಳಲು ಸಹ ಸಹಕಾರಿಯಾಗಬಹುದು. ಇದಲ್ಲದೆ ಉತ್ತರ ಕರ್ನಾಟಕ ಭಾಗದಿಂದ ಕುಂದಾಪುರ, ಬೈಂದೂರು ಭಾಗಗಳಿಗೆ ಅಕ್ಕಿ, ಸಕ್ಕರೆ ಸೇರಿದಂತೆ ಆ ಕಡೆಯಿಂದ ಬರುವಂತಹ ಅಗತ್ಯ ವಸ್ತುಗಳ ಸಾಗಾಟಕ್ಕೂ ಅನುಕೂಲವಾಗಬಹುದು. ಈ ಭಾಗಕ್ಕೆ ಅಗತ್ಯವಿರುವ ರಸಗೊಬ್ಬರ ಆಮದಿಗೂ ಪ್ರಯೋಜನವಾಗಬಹುದು. ಇದಲ್ಲದೆ ನಾಡ ಭಾಗದಲ್ಲಿ ಕೈಗಾರಿಕೆ ಆರಂಭವಾಗುವ ನಿರೀಕ್ಷೆಯೂ ಇರುವುದರಿಂದ ಬಹಳಷ್ಟು ಅನುಕೂಲವಾಗಬಹುದು.
ಎಲ್ಲ ರೀತಿಯ ಸಹಕಾರ
ಸೇನಾಪುರ ರೈಲು ನಿಲ್ದಾಣವನ್ನು ಗೂಡ್ಸ್ ರೈಲು ನಿಲ್ದಾಣವನ್ನಾಗಿ ಮಾಡಿದರೆ ಬೈಂದೂರು ಕ್ಷೇತ್ರದ ಮೀನುಗಾರಿಕೆ, ಕೈಗಾರಿಕೆ, ಗೇರು ಉದ್ಯಮಕ್ಕೆ ಬಹಳಷ್ಟು ಅನುಕೂಲವಾಗಬಹುದು. ಇದೊಂದು ಉತ್ತಮವಾದ ಬೇಡಿಕೆಯಾಗಿದೆ. ಈ ಬೇಡಿಕೆಗೆ ನನ್ನ ಬೆಂಬಲ ಹಾಗೂ ಎಲ್ಲ ರೀತಿಯಿಂದಲೂ ಸಹಕಾರವಿದೆ. ಸಂಬಂಧಪಟ್ಟವರ ಬಳಿ ಮಾತನಾಡಿ, ಗಮನಕ್ಕೆ ತರಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
ಪ್ರಸ್ತಾವನೆ ನಮ್ಮ ಮುಂದಿಲ್ಲ
ಸೇನಾಪುರ ರೈಲು ನಿಲ್ದಾಣವನ್ನು ಗೂಡ್ಸ್ ರೈಲು ನಿಲ್ದಾಣವನ್ನಾಗಿ ಮಾಡುವ ಯಾವುದೇ ಪ್ರಸ್ತಾವ ನಮ್ಮ ಕೊಂಕಣ್ ರೈಲ್ವೇ ಮುಂದಿಲ್ಲ. ಯಾರಾದರೂ ಈ ಬಗ್ಗೆ ಬೇಡಿಕೆ ಅಥವಾ ಮನವಿ ಸಲ್ಲಿಸಿದರೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಗಮನಹರಿಸಲಾಗುವುದು.
– ಸುಧಾ ಕೃಷ್ಣಮೂರ್ತಿ, ಕೊಂಕಣ್ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.