ದಣಿವರಿಯದ ನಾಯಕನ ದಣಿವಿಲ್ಲದ ಸೇವೆ ; ಜನರ ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ಬಿ. ರಮಾನಾಥ ರೈ

ಲಾಕ್‌ಡೌನ್‌ ಅವಧಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ಬಿ.ರಮಾನಾಥ ರೈ

Team Udayavani, May 6, 2020, 9:58 AM IST

ದಣಿವರಿಯದ ನಾಯಕನ ದಣಿವಿಲ್ಲದ ಸೇವೆ ; ಜನರ ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ಬಿ. ರಮಾನಾಥ ರೈ

ಅಧಿಕಾರವಿರಲಿ, ಇಲ್ಲದೇ ಇರಲಿ ಸದಾ ಜನಸೇವೆಯಲ್ಲಿ ತೊಡಗಿರುವ ಅಪರೂಪದ ರಾಜಕಾರಣಿಗಳಲ್ಲಿ ಬಿ.ರಮಾನಾಥ ರೈ ಅವರು ಕೂಡ ಒಬ್ಬರು. ಕೋವಿಡ್ ಸೋಂಕು ನಿಯಂತ್ರಣ ಸಂದರ್ಭದಲ್ಲಿಯೂ ಸಂಕಷ್ಟದಲ್ಲಿದ್ದವರಿಗೆ ನೆರವಾಗುತ್ತಾ, ಸರಕಾರ ಹಾಗೂ ದ.ಕ. ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಸೇವಾ ಕಾರ್ಯ ಯಾವ ರೀತಿ ನಡೆದಿದೆ ಎನ್ನುವ ಮಾಹಿತಿ ಇಲ್ಲಿದೆ…

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕೋವಿಡ್ ಸೋಂಕು ಇಡೀ ಜಗತ್ತನ್ನು ಕಾಡಿದ್ದು, ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಎಲ್ಲರಿಗೂ ಇದು ಹೊಸ ವಿಚಾರವಾದ ಕಾರಣ ಅದನ್ನು ಎದುರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಾನು ಕೂಡ ಜನತೆಯ ಪರ ನಿಂತು ಕೆಲಸ ಮಾಡಬೇಕು ಎಂದು ಪಣತೊಟ್ಟು ನಿಂತವರು ಮಾಜಿ ಸಚಿವರು, ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕರಾಗಿರುವ ಬಿ.ರಮಾನಾಥ ರೈ ಅವರು. ಬಂಟ್ವಾಳ ಕ್ಷೇತ್ರದ ಜನತೆಯ ಹಸಿವನ್ನು ಕಂಡು ಮೊದಲು ಅವರಿಗೆ ಆಹಾರ ಸಾಮಗ್ರಿಗಳನ್ನು ಕೊಡುವುದಕ್ಕೆ ತೀರ್ಮಾನಿಸಿದರು.

ಬಂಟ್ವಾಳ ಕ್ಷೇತ್ರದ ಹಳ್ಳಿ ಹಳ್ಳಿಯನ್ನು ಸುತ್ತಿ ತನ್ನ ಸಂಗಡಿಗರ ಜತೆಗೂಡಿ ಸಂಕಷ್ಟದಲ್ಲಿರುವವರ ನೆರವಿಗೆ ನಿಂತರು. ಹಾಲಿ ಅವರ ಕಿಟ್‌ಗಳು ಕ್ಷೇತ್ರದ ಮೂವತ್ತು ಸಾವಿರ ಕುಟುಂಬಗಳನ್ನು ತಲುಪಿದ್ದು, ಲಕ್ಷಾಂತರ ಮಂದಿಗೆ ನೆರವಾಗಿವೆ.

ಈಗ ರಮಾನಾಥ ರೈ ಅವರು ಅಧಿಕಾರದಲ್ಲಿಲ್ಲ. ಹೀಗಾಗಿ ಅವರಿಗೆ ಸುಮ್ಮನೆ ಕೂರಬಹುದಿತ್ತು ಅಥವಾ ತನ್ನ ಪಕ್ಷದವರಿಗೆ ಮಾತ್ರ ಕಿಟ್‌ಗಳನ್ನು ಕೊಡಬಹುದಿತ್ತು. ಆದರೆ ತನಗೆ ಅಧಿಕಾರ ಕೊಟ್ಟ ಇಡೀ ಕ್ಷೇತ್ರದ ಜನತೆಯ ಹಿತ ಅವರಿಗೆ ಮುಖ್ಯವಾಗಿತ್ತು. ಹೀಗಾಗಿ ರಾಜಕೀಯ, ಜಾತಿ, ಧರ್ಮದ ಭೇದವಿಲ್ಲದೆ ಈ ಕಾರ್ಯ ನಡೆಯಬೇಕು ಎಂಬ ಅವರ ಸೇವಾ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ.

ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ

ಕೋವಿಡ್ ಸೋಂಕು ನಿಯಂತ್ರಣಕ್ಕೆ ಆಡಳಿತ ವ್ಯವಸ್ಥೆ ಎಷ್ಟೇ ದುಡಿದರೂ ಅದಕ್ಕೆ ಪೂರಕವಾಗಿ ಸರಕಾರ ಅವರಿಗೆ ವೇತನವನ್ನೂ ನೀಡುತ್ತದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಕೇವಲ ಗೌರವ ಧನ ಸಿಗುತ್ತದೆ. ಆದರೆ ಕೋವಿಡ್ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಯಾರೂ ಮೀರಿಸುವಂತಿಲ್ಲ.

ಹೀಗಾಗಿ ಅವರ ಸೇವೆಗೆ ಗೌರವ ಸಲ್ಲಬೇಕು ಎಂದು ರೈ ಅವರು ಗೌರವಾರ್ಪಣೆಗೆ ಚಿಂತಿಸುತ್ತಾರೆ. ಅವರಲ್ಲಿ ಧೈರ್ಯ ತುಂಬಿ ಆಹಾರದ ಸಾಮಗ್ರಿಗಳ ಕಿಟ್ಟನ್ನೂ ನೀಡುತ್ತಾರೆ. ಬಂಟ್ವಾಳ ಕ್ಷೇತ್ರದ ಪ್ರತಿ ಆರೋಗ್ಯ ಕೇಂದ್ರದ ವ್ಯಾಪ್ತಿಗೂ ತೆರಳಿ ಅವರ ಸೇವೆಗೆ ಗೌರವ ಸಂದಾಯ ಮಾಡಿದ್ದಾರೆ.

ಇವರಂತೆಯೇ ಸೇವಾ ಕಾರ್ಯ ಮಾಡುವ ಮತ್ತೂಂದು ಕ್ಷೇತ್ರವೆಂದರೆ ಗೃಹರಕ್ಷಕ ದಳದ ಸಿಬಂದಿ. ಇವರಿಗೂ ದುಡಿಮೆಗಾಗಿ ಗೌರವ ಧನ ಮಾತ್ರ ಸಿಗುತ್ತದೆ. ಹೀಗಾಗಿ ಹೋಂಗಾರ್ಡ್‌ಗಳನ್ನೂ ಗಮನದಲ್ಲಿಟ್ಟುಕೊಂಡು ಅವರಿಗೆ ಕಿಟ್‌ ವಿತರಿಸುವ ಕಾರ್ಯ ಮಾಡಿದ್ದಾರೆ.


ನೊಂದವರಿಗೆ ನೆರವಿನ ಕಾರ್ಯ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್‌ನಲ್ಲಿ ಲಾಕ್‌ಡೌನ್‌ನಿಂದ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿರುವ ದ.ಕ.ಮೂಲದ ಸುಮಾರು 19 ಯುವಕರು ಸಂಕಷ್ಟದಲ್ಲಿರುವ ಕುರಿತು ಮಾಜಿ ಸಚಿವರಿಗೆ ಮಾಹಿತಿ ಬರುತ್ತದೆ. ತತ್‌ಕ್ಷಣ ರೈ ಅವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ರೋನ್ಸ್‌ ಬಂಟ್ವಾಳ್‌ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದರು.

ರೈ ಅವರ ಕೋರಿಕೆಯ ಮೇರೆಗೆ ರೋನ್ಸ್‌ ತತ್‌ಕ್ಷಣವೇ ಸಿಕ್ಕಿಹಾಕಿಕೊಂಡ ಯುವಕರನ್ನು ಸಂಪರ್ಕಿಸಿ ಪೂರ್ಣ ಮಾಹಿತಿ ಪಡೆದು ಸಾಂಗ್ಲಿಯ ಕೈಗಾರಿಕೋದ್ಯಮಿ, ಬಿಲ್ಲವ ಸಂಘ ಸಾಂಗ್ಲಿ ಇದರ ಉಪಾಧ್ಯಕ್ಷ ಸುಧಾಕರ ಪೂಜಾರಿ ಹೊಸ್ಮಾರು ಅವರಲ್ಲಿ ವಿಚಾರವನ್ನು ತಿಳಿಸಿದರು.

ಬಳಿಕ ಯುವಕರನ್ನು ಖುದ್ದಾಗಿ ಭೇಟಿಯಾದ ಸುಧಾಕರ ಮತ್ತು ರಘುರಾಮ ಪೂಜಾರಿ ಬಾಳೆಹೊನ್ನೂರು ಅವರು ಯುವಕರ ವಾಸ್ತವ್ಯ, ಅಲ್ಲಿನ ಪರಿಸ್ಥಿತಿ ತಿಳಿದು ಸಾಂಗ್ಲಿಯ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರ ಗಮನಕ್ಕೆ ತಂದರು. ಜತೆಗೆ ಅಲ್ಲಿನ ಯುವ ಉದ್ಯಮಿ ಪ್ರವೀಣ್‌ ಶೆಟ್ಟಿ ಕೊಡಗು ಅವರ ನೆರವಿನೊಂದಿಗೆ ಪೊಲೀಸ್‌ ಮುಖ್ಯಸ್ಥರೇ ಆಗಮಿಸಿ, ಎಲ್ಲ ಯುವಕರ ಮಾಹಿತಿ ಕಲೆ ಹಾಕಿದರು.
ಮುಂದೆ ಶಾಸಕರ, ಜಿಲ್ಲಾಧಿಕಾರಿಗಳ ಸಹಕಾರ ಪಡೆದು ಸಾಂಗ್ಲಿಗೆ ಕಳುಹಿಸಿ ಅಲ್ಲಿನ ಮುನ್ಸಿಪಾಲಿಟಿ ಕನ್ನಡ ಶಾಲೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಕನ್ನಡಿಗ ಮುಖ್ಯ ಶಿಕ್ಷಕ ವಿಟ್ಠಲ್‌ ಕೋಲಿ ಕೂಡ ಸಹಕಾರ ನೀಡಿದ್ದಾರೆ. ರೈ ಅವರು ಖುದ್ದು ಈ ಎಲ್ಲ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಒಮ್ಮೆ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬಂಟ್ವಾಳ ಬೈಪಾಸ್‌ ರಸ್ತೆಯಲ್ಲಿ ತನ್ನ ಕಾರಿನಲ್ಲಿ ತೆರಳುತ್ತಿರುವ ವೇಳೆಗೆ ಯಾರೋ ಒಬ್ಬ ವ್ಯಕ್ತಿ ಮಾನಸಿಕ ಅಸ್ವಸ್ಥನ ರೀತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ತತ್‌ಕ್ಷಣ ರೈ ಅವರು ಆತನ ಕುರಿತು ಮರುಕಪಟ್ಟು ತಹಶೀಲ್ದಾರ್‌ ಅವರ ಗಮನಕ್ಕೆ ತಂದು ಆತನಿಗೆ ವ್ಯವಸ್ಥೆ ಕಲ್ಪಿಸಿದರು.

ಮುಂಬಯಿಯಲ್ಲಿ ಕುಟುಂಬವೊಂದು ತೊಂದರೆಗೊಳಗಾಗಿದೆ ಎಂದು ರೈ ಅವರಿಗೆ ಮಾಹಿತಿ ಬಂದಾಗ, ರೈ ಅವರು ತತ್‌ಕ್ಷಣ ಉದ್ಯಮಿ ರೋಹಿತ್‌ ಶೆಟ್ಟಿ ನಗ್ರಿಗುತ್ತು ಅವರನ್ನು ಸಂಪರ್ಕಿಸಿ ಆ ಕುಟುಂಬಕ್ಕೆ ನೆರವನ್ನು ನೀಡಿದ್ದಾರೆ. ಹೀಗೆ ರೈ ಅವರ ವಿನಂತಿಗೆ ಅವರ ತಂಡ ಸಾಕಷ್ಟು ಸಹಾಯ ಮಾಡಿದೆ.

ಇದು ಕೇವಲ ಉದಾಹರಣೆಗಳು ಮಾತ್ರ. ಲಾಕ್‌ ಡೌನ್‌ ತೊಂದರೆಗೊಳಗಾದ ಹತ್ತಾರು ತಂಡಕ್ಕೆ ರೈ ಅವರ ಮೂಲಕ ನೆರವು ಲಭ್ಯವಾಗಿದೆ. ಹೀಗೆ ರೈ ಅವರ ನೇತೃತ್ವದಲ್ಲಿ ರಚನೆಗೊಂಡಿರುವ ಸಹಾಯವಾಣಿಯ ಮೂಲಕ ನೂರಾರು ಸಮಸ್ಯೆಗಳು ಇವರ ಬಳಿಗೆ ಬರುತ್ತದೆ. ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ತೊಂದರೆಗೊಳಗಾದ ವರು ಇಂದೂ ರೈ ಅವರನ್ನು ಸಂಪ ರ್ಕಿಸಿ ನೆರವನ್ನು ಕೇಳುತ್ತಾರೆ.

ಅಂಥ ಸಂದರ್ಭದಲ್ಲಿ ಅವರು ಅಲ್ಲಿನ ಅಧಿಕಾರಿಗಳು, ಜನ ಪ್ರತಿನಿಧಿಗಳನ್ನು ಸಂಪರ್ಕಿಸಿ ಕಷ್ಟದಲ್ಲಿರುವರ ಮಾಹಿತಿ ನೀಡಿ ನೆರವಾಗುವಂತೆ ಮನವಿ ಮಾಡುತ್ತಾರೆ. ರೈ ಹೇಳಿದಾಗ ಯಾರೂ ಕೂಡ ಇಲ್ಲ ಎನ್ನದೆ ನೆರವು ನೀಡಿದ ಬಳಿಕ ಮರುಕರೆ ಮಾಡಿ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ.

ಮೃತ ಪಟ್ಟಿರುವುದಕ್ಕೆ ವಿಷಾದ
ಕೋವಿಡ್ ಸೋಂಕು ದೃಢಪಟ್ಟು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮೂವರು ಮೃತಪಟ್ಟಿರುವ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ದೇವರು ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಬಂಟ್ವಾಳದಲ್ಲಿ ಇಂತಹ ಘಟನೆ ಮರುಕಳಿಸದಂತೆ ಇಡೀ ಕ್ಷೇತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ರೈ ಅವರು ಕಳಕಳಿಯಿಂದ ವಿನಂತಿಸಿದ್ದಾರೆ.

ದ.ಕ. ಜಿಲ್ಲಾಡಳಿತದೊಂದಿಗೆ ಸಂಪರ್ಕ

ದ.ಕ. ಜಿಲ್ಲೆಗೆ ಕೋವಿಡ್ ಆತಂಕ ಪ್ರಾರಂಭವಾದ ದಿನದಿಂದಲೂ ದ.ಕ. ಜಿಲ್ಲಾಡಳಿತದ ಜತೆ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಸಲಹೆ-ಸಹಕಾರ ನೀಡಿದ್ದಾರೆ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌ ಅವರನ್ನು ಜಿಲ್ಲಾ ಕಾಂಗ್ರೆಸ್‌ ನಿಯೋಗದ ಜತೆ ಭೇಟಿಯಾಗಿ ಜನರಿಗಾದ ತೊಂದರೆಗಳು ಹಾಗೂ ಅದಕ್ಕೆ ಪರಿಹಾರದ ಕುರಿತು ಚರ್ಚೆ ನಡೆಸಿದ್ದಾರೆ.

ಪಡಿತರ ವಿತರಣೆಯ ಗೊಂದಲಗಳ ಕುರಿತು ಕೂಡಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗಿದ್ದಾರೆ. ಬಂಟ್ವಾಳದ ಮಹಿಳೆಯೊಬ್ಬರು ಕೋವಿಡ್ ಸೋಂಕು ದೃಢಪಟ್ಟು ಮೃತಪಟ್ಟು, ಆಕೆಯ ಮೃತ ದೇಹದ ಅಂತ್ಯಸಂಸ್ಕಾರದ ಕುರಿತು ಗೊಂದಲ ಉಂಟಾಗಿತ್ತು.

ಅಂದಿನ ಪರಿಸ್ಥಿತಿಯನ್ನು ಖಂಡಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ನಿಯೋಗದ ಜತೆ ಡಿಸಿಯನ್ನು ಸಂಪರ್ಕಿಸಿ, ಮುಂದೆ ಇಂಥ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ದಿಟ್ಟ ನಿಲುವನ್ನು ತಳೆಯಬೇಕು. ಜತೆಗೆ ಜನರಿಗೆ ಸಮರ್ಪಕ ಮಾಹಿತಿ ಕೊಟ್ಟು ಸರಕಾರಿ ರುದ್ರ ಭೂಮಿಯಲ್ಲೇ ಅವರ ಅಂತ್ಯ ಸಂಸ್ಕಾರ ನಡೆಯುವಂತೆ ಕ್ರಮಕೈಗೊಳ್ಳಲು ಸಲಹೆ ನೀಡಿದ್ದಾರೆ.

ಬಂಟ್ವಾಳ ಕಸ್ಬಾ ಗ್ರಾಮ ಹಾಗೂ ನಾಯಿಲ ಸೀಲ್‌ಡೌನ್‌ ಪ್ರದೇಶದ ಕುರಿತು ವಿಶೇಷ ಆದ್ಯತೆಯ ನೆಲೆಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಅವರು ಸಂಬಂಧಪಟ್ಟ ಆಧಿಕಾರಿ ವರ್ಗವನ್ನು ಒತ್ತಾಯಿಸುವ ಕೆಲಸ ಮಾಡಿದ್ದಾರೆ. ಇಲ್ಲಿನ ಎಲ್ಲ ಮನೆಗಳಿಗೂ ಉಚಿತ ಆಹಾರ ಸಾಮಗ್ರಿಗಳನ್ನು ಒದಗಿಸುವ ಕೆಲಸ ಆಗಬೇಕು ಎಂದು ರೈ ಆಗ್ರಹಿಸಿದ್ದಾರೆ.

ಕಾರ್ಮಿಕರ ಪರ ಮಿಡಿಯುವ ಮನಸ್ಸು
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಾರಂಭದಿಂದಲೇ ಸಮಾಜದ ತಳ ಸಮುದಾಯದ ಕುರಿತು ವಿಶೇಷ ಒಲವನ್ನು ಹೊಂದಿ ಅವರ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಾ ಬಂದವರು. ಪ್ರಸ್ತುತ ಲಾಕ್‌ಡೌನ್‌ ವೇಳೆಯಲ್ಲೂ ಕಾರ್ಮಿಕರ ಕುರಿತು ವಿಶೇಷ ಒಲವನ್ನು ಹೊಂದಿ ಅವರು ಜೀವನ ನಡೆಸುವುದಕ್ಕೆ ಸರಕಾರ ವಿಶೇಷ ಆಸಕ್ತಿ ತಳೆಯಬೇಕು ಎಂದು ಒತ್ತಾಯಿಸುತ್ತಿದ್ದರು.

ಮುಖ್ಯವಾಗಿ ಪ್ರತಿ ಗ್ರಾ.ಪಂ.ಗಳನ್ನು ಒಂದೊಂದು ಯೂನಿಟ್‌ಗಳನ್ನಾಗಿ ಮಾಡಿ ಗಂಜಿ ಕೇಂದ್ರಗಳನ್ನು ತೆರೆಯಬೇಕು. ಬೇರೆ ಬೇರೆ ಕಾರಣಗಳಿಂದ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ನಮ್ಮ ಊರುಗಳಿಗೆ ಬಂದಿರುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಹಸಿವಿನಿಂದ ಇರಬಾರದು. ಆ ಗ್ರಾಮದಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದ್ದರು.

ಜತೆಗೆ ಕಾರ್ಮಿಕರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದು, ಅವರಿಗೆ ಪಡಿತರ ಅಕ್ಕಿಯ ಜತೆಗೆ ದಿನಸಿ ಸಾಮಗ್ರಿಗಳಾದ ಮೆಣಸು, ಚಾ ಹುಡಿ, ಸಕ್ಕರೆ, ಬೆಲ್ಲ, ಎಣ್ಣೆ, ಬೇಳೆ ಮೊದಲಾದ ಅಗತ್ಯ ವಸ್ತುಗಳನ್ನು ನೀಡುವಂತೆ ಒತ್ತಾಯಿಸಿದ್ದರು.

ಸರಕಾರ ಕಟ್ಟಡ ಕಾರ್ಮಿಕರಿಗೆ 2 ಸಾವಿರ ರೂ. ನೀಡುವ ವೇಳೆ, ನೋಂದಣಿಯಾಗಿ 2 ವರ್ಷಗಳಾಗಿರಬೇಕು ಎಂಬ ಷರತ್ತು ಹಾಕಿತ್ತು. ಅದನ್ನು ತೆರವುಗೊಳಿಸಿ ನೋಂದಣಿಯಾಗಿರುವ ಎಲ್ಲ ಕಟ್ಟಡ ಕಾರ್ಮಿಕರಿಗೂ ಹಣಕಾಸಿನ ನೆರವು ನೀಡಬೇಕು ಎಂದು ಆಗ್ರಹಿಸಿದ್ದರು. ಅವರು ಅಧಿಕಾರದಲ್ಲಿರುತ್ತಿದ್ದರೆ ಅದನ್ನು ಅನುಷ್ಠಾನಗೊಳಿಸುವರೆಗೂ ಸುಮ್ಮನಿರುತ್ತಿರಲಿಲ್ಲ.


ಬಂಟ್ವಾಳ ಕ್ಷೇತ್ರದ 30 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ತಲುಪಿದ್ದೇವೆ: ಮಾಜಿ ಸಚಿವ ಬಿ. ರಮಾನಾಥ ರೈ ಅವರ ಮನದಾಳದ ಮಾತು

ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿ ನಿಮ್ಮ ಸೇವಾ ಕಾರ್ಯ ಹೇಗಿತ್ತು?
ಲಾಕ್‌ಡೌನ್‌ ಆದ ಬಳಿಕ ಮುಖ್ಯವಾಗಿ ಸಾಕಷ್ಟು ಮಂದಿಗೆ ದಿನಬಳಕೆಯ ವಸ್ತುಗಳನ್ನು ಪಡೆಯುವುದಕ್ಕೆ ಕಷ್ಟವಾಗಿರುವುದು ನನ್ನ ಗಮನಕ್ಕೆ ಬಂದಿತ್ತು. ಇದರಿಂದಾಗಿ ದಿನಗೂಲಿ ನೌಕರರು, ಕಾರ್ಮಿಕ ವರ್ಗ ಹಸಿವಿನಿಂದ ಇರುವ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ನಾವು ಕೂಡ ಯೋಚನೆ ಮಾಡಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ನೆರವನ್ನು ನೀಡುವುದಕ್ಕೆ ಯೋಜನೆ ಮಾಡಿದೆವು. ಹೀಗಾಗಿ ಎಲ್ಲರ ಸಹಕಾರದಿಂದ ಜಾತಿ-ಮತ ಭೇದವಿಲ್ಲದೆ ಎಲ್ಲ ಗ್ರಾಮಗಳಲ್ಲಿಯೂ ಈಗಾಗಲೇ ಸಾವಿರಾರು ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ನೆರವು ನೀಡಿದ್ದು, ಮುಂದೆಯೂ ನೆರವನ್ನು ನೀಡಲಿದ್ದೇವೆ.

ತಾನು ಮಾಜಿ ಸಚಿವನಾಗಿ, ಮಾಜಿ ಶಾಸಕನಾಗಿ ತನ್ನ ಶಕ್ತಿಮೀರಿ ನೆರವನ್ನು ನೀಡುವ ಕಾರ್ಯ ಮಾಡಿದ್ದೇನೆ. ಹೋಂಗಾರ್ಡ್‌ ಸಿಬಂದಿಗೂ ಗೌರವದ ಸಂಕೇತವಾಗಿ ಅಕ್ಕಿ ನೀಡಿದ್ದೇವೆ. ಆಶಾ ಕಾರ್ಯಕರ್ತೆಯರನ್ನು ಸಮ್ಮಾನಿಸುವ ಕಾರ್ಯವನ್ನೂ ಮಾಡಿದ್ದೇವೆ. ಕ್ಷೇತ್ರದ ಎಲ್ಲ ಪ್ರದೇಶಕ್ಕೂ ತಲುಪಿದ್ದು, ಮುಂದೆ ಇನ್ನಷ್ಟು ಪ್ರದೇಶಕ್ಕೆ ನೆರವು ನೀಡ ಲಿದ್ದೇವೆ. ರಮ್ಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜದ ಬಂಧುಗಳು ನಮ್ಮ ಕಿಟ್‌ಗಳ ಜತೆ ಅವರ ಕಿಟ್‌ಗಳನ್ನೂ ನೀಡಿ ಸಹಕರಿಸಿದ್ದಾರೆ. ಹೊರ ಜಿಲ್ಲೆ- ರಾಜ್ಯಗಳಿಂದ ಬಂದವರು, ಬೇರೆ ರಾಜ್ಯಗಳಲ್ಲಿ ಇರುವವರಿಗೂ ನೆರವು ನೀಡಿದ್ದೇವೆ.

ಕೋವಿಡ್ ನಿಯಂತ್ರಣದ ದೃಷ್ಟಿಯಲ್ಲಿ ಸರಕಾರದ ನಿರ್ಧಾರಗಳ ಕುರಿತು ತಮ್ಮ ಅಭಿಪ್ರಾಯ?
ಇಂತಹ ಸಂದರ್ಭಗಳಲ್ಲಿ ಸರಕಾರಗಳು ಕೆಲವೊಂದು ನಿರ್ದಿಷ್ಟ ನಿರ್ಧಾರಗಳನ್ನು ಕೈಗೊಂಡಿಲ್ಲ, ನಿಖರ ಇಲ್ಲದ ಕೆಲವು ನಿರ್ಧಾರಗಳಿಂದ ತೊಂದರೆಯಾಗಿದೆ ಎನ್ನುವುದು ತನ್ನ ಅಭಿಪ್ರಾಯ. ಪ್ರಾರಂಭದಲ್ಲೇ ವಿದೇಶದಿಂದ ಭಾರತಕ್ಕೆ ಬಾರದಂತೆ ಕ್ರಮ ಕೈಗೊಳ್ಳಬೇಕಿತ್ತು. ಬಂದವರನ್ನು ನೇರವಾಗಿ ಬಿಡದೆ ಕ್ವಾರಂಟೈನ್‌ನಲ್ಲಿ ಇಡುವ ಕೆಲಸ ಮಾಡಬೇಕಿತ್ತು. ಹೊಸದಿಲ್ಲಿಯ ಪ್ರಕರಣದಲ್ಲೂ ಅನುಮತಿಯನ್ನು ನೀಡಬಾರದಿತ್ತು.

ಇದಕ್ಕೆ ವಿದೇಶದಿಂದ ಬರುವವರಿಗೆ ವೀಸಾವನ್ನು ಕೊಡಬಾರದಿತ್ತು. ಆಗ ಸಮಸ್ಯೆಯೇ ಇರುತ್ತಿರಲಿಲ್ಲ. ಜತೆಗೆ ಲಾಕ್‌ಡೌನ್‌ ನಿರ್ಧಾರವನ್ನು ಮಾರ್ಚ್‌ಗಿಂತ ಮೊದಲೇ ಹೇರಬೇಕಿತ್ತು. ಬಾಂಗ್ಲಾ, ನೇಪಾಲ, ಶ್ರೀಲಂಕಾಗಳಲ್ಲಿ ಕೋವಿಡ್ ಸೋಂಕು ದೊಡ್ಡ ಮಟ್ಟಿನ ಹೊಡೆತ ನೀಡಿಲ್ಲ. ಹೀಗಾಗಿ ನಮ್ಮಲ್ಲಿ ಹೆಚ್ಚು ಕಂಡುಬರುವುದಕ್ಕೆ ನಮ್ಮ ಉದಾಸೀನ ಕಾರಣ ಆಗಿರಬಹುದು ಎಂಬುದು ನನ್ನ ಒಂದು ಅಭಿಪ್ರಾಯ. ಕಾರ್ಮಿಕರಿಗೆ ನಿತ್ಯದ ವಸ್ತುಗಳನ್ನು ಮನೆಗೆ ತಲುಪಿಸುವ ಕಾರ್ಯ ಮಾಡಬಹುದಿತ್ತು.

ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ನಿಮ್ಮ ಪಕ್ಷದ ಕಾರ್ಯಕರ್ತರು ಯಾವ ರೀತಿಯ ಸಹಕಾರ ನೀಡಿದ್ದಾರೆ?
ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ವತಿಯಿಂದ ಎಲ್ಲ ವಲಯ ಕಾಂಗ್ರೆಸ್‌ ಅಧ್ಯಕ್ಷರು, ಬೂತ್‌ ಸಮಿತಿಯ ಅಧ್ಯಕ್ಷರ ದಾನಿಗಳ ದೇಣಿಗೆಯ ಸಹಕಾರದಿಂದ ನೀಡುವ ಕಾರ್ಯ ಮಾಡಿದ್ದೇವೆ. ಪಕ್ಷದ 2 ಬ್ಲಾಕ್‌ ಅಧ್ಯಕ್ಷರು, ನಮ್ಮ ಪಕ್ಷದ ಜಿ.ಪಂ., ತಾ.ಪಂ.ಸದಸ್ಯರು, ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಹೀಗೆ ಎಲ್ಲರೂ ಕೈಜೋಡಿಸಿದ್ದಾರೆ. ನಾನು ಸ್ವಲ್ಪಮಟ್ಟಿನ ಸಹಾಯ ಮಾಡಿದ್ದರೆ, ಅವರು ಹೆಚ್ಚಿನ ಸಹಾಯ ಸೇರಿಸಿ ನೆರವು ನೀಡುವ ಕಾರ್ಯ ಮಾಡಿದ್ದಾರೆ. ಕೆಲವು ಕಡೆ ವಲಯ ಕಾಂಗ್ರೆಸ್‌ ಅಧ್ಯಕ್ಷರ ಆಸಕ್ತಿಯಿಂದ ಪರಿಣಾಮಕಾರಿಯಾಗಿ ಆಹಾರವನ್ನು ಒದಗಿಸುವ ಕಾರ್ಯ ಮಾಡಿದ್ದಾರೆ.

ಬಂಟ್ವಾಳದಲ್ಲಿ ಅಧಿಕಾರಿಗಳ ಕಾರ್ಯ ವೈಖರಿಯ ಕುರಿತು ಏನು ಹೇಳುತ್ತೀರಿ?
ಬಂಟ್ವಾಳ ಕಸ್ಬಾ ಗ್ರಾಮದಲ್ಲಿ ವ್ಯಾಪ್ತಿಯನ್ನು ಮೀರಿ ಸೀಲ್‌ಡೌನ್‌ ಮಾಡಲಾಗಿದೆ ಎಂಬ ಅಭಿಪ್ರಾಯ ಜನರಲ್ಲಿದ್ದು, ಅದನ್ನು ಸರಿಪಡಿಸುವ ಕಾರ್ಯ ಮಾಡಬೇಕಿತ್ತು. ನಾಯಿಲದಲ್ಲಿಯೂ ವಸ್ತುಗಳು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಬಂಟ್ವಾಳ ತಾಲೂಕು ಕೇಂದ್ರವೂ ಆಗಿರುವುದರಿಂದ ಜಿಲ್ಲಾಡಳಿತವೇ ಹೆಚ್ಚಿನ ಆಸಕ್ತಿ ತಳೆದು, ಜಿಲ್ಲಾ ಮಟ್ಟದಿಂದಲೇ ನಿಗಾ ವಹಿಸಬೇಕಿತ್ತು.


ನಿಮ್ಮ ನೆರವು ಎಷ್ಟು ಗ್ರಾಮ, ಕುಟುಂಬಗಳನ್ನು ತಲುಪಿದೆ?

ನಮ್ಮ ನೆರವು ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿಯೂ ತಲುಪಿ, ಈಗಾಗಲೇ 30 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಕಿಟ್‌ಗಳನ್ನು ನೀಡಿದ್ದೇವೆ. ಅದರ ನಿಖರವಾದ ಮಾಹಿತಿಯ ಕುರಿತು ನಾವು ಲೆಕ್ಕ ಹಾಕಿಲ್ಲ. ನಾವು ನಿತ್ಯವೂ ಈ ಕಾರ್ಯ ಮಾಡುತ್ತಿದ್ದು, ಮುಂದೆಯೂ ನೆರವನ್ನು ನೀಡಲಿದ್ದೇವೆ.

ನಿಮ್ಮ ನೇತೃತ್ವದ ಸಹಾಯವಾಣಿ ಯಾವ ರೀತಿ ಕೆಲಸ ಮಾಡಿತ್ತು?
ಹೊರ ಜಿಲ್ಲೆ- ರಾಜ್ಯಗಳಲ್ಲಿ ಇದ್ದು ತೊಂದರೆಗೊಳಗಾದ ಕುರಿತು ನಮಗೆ ಮಾಹಿತಿ ಬಂದಾಗ, ಅಲ್ಲಿ ನಮ್ಮ ಪರಿಚಯಸ್ಥರು, ಅಲ್ಲಿಯ ಸರಕಾರದ ಮೂಲಕ ನೆರವನ್ನು ನೀಡುವ ಕಾರ್ಯ ಮಾಡಲಾಗಿದೆ. ಹೊರರಾಜ್ಯಗಳಿಗೆ ತೆರಳುವ ಕಾರ್ಮಿಕರಿಗೆ ತೊಂದರೆಯಾದಾಗ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಪೊಲೀಸ್‌, ಅಧಿಕಾರಿ ವರ್ಗಗಳ ಸಹಕಾರದಿಂದ ಅವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಕಾರ್ಯ ಮಾಡಲಾಗಿದೆ. ಕಿಟ್‌ಗಳು ಸಿಕ್ಕಿಲ್ಲ ಎಂಬ ಮಾಹಿತಿ ಬಂದರೆ ಅದಕ್ಕೂ ಸ್ಪಂದನೆ ನೀಡುವ ಕಾರ್ಯ ಸಹಾಯವಾಣಿ ಮೂಲಕ ಮಾಡಲಾಗಿದೆ.

ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಬಂಟ್ವಾಳ ಜನತೆಯ ಸಹಕಾರ ಹೇಗಿತ್ತು?
ಜನರು ಕೋವಿಡ್ ಸೋಂಕಿನ ಗಂಭೀರವನ್ನು ಅರ್ಥ ಮಾಡಿಕೊಂಡು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದರು. ಇಲ್ಲಿ ಜನರ ಸಹಭಾಗಿತ್ವ ವಿಶೇಷವಾಗಿದ್ದು, ಆಡಳಿತದ ಜತೆ ಸಹಕಾರ ನೀಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕೆಲವು ಅನಿವಾರ್ಯ ಸನ್ನಿವೇಶಗಳಲ್ಲಿ ಗಮನಕ್ಕೆ ಬಾರದೆ ಸಾಮಾಜಿಕ ಅಂತರಕ್ಕೆ ತೊಂದರೆಯಾಗಿರುವ ಸ್ಥಿತಿಯೂ ಇರಬಹುದು. ನಮ್ಮ ತಾ| ನ ಅಧಿಕಾರಿಗಳು, ಪೊಲೀಸ್‌, ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬಂದಿ ಅವರವರ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.

ಸರಕಾರದ ಮುಂದೆ ಯಾವುದಾರೂ ಬೇಡಿಕೆಗಳಿವೆಯೇ?
ದಿನಸಿ ವಸ್ತುಗಳನ್ನು ಜನತೆಗೆ ವಿತರಿಸುವಂತೆ ತಾನು ಮೊದಲೇ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದು, ಅದನ್ನು ಇನ್ನೂ ಅನುಷ್ಠಾನ ಮಾಡಿಲ್ಲ. ವಲಸೆ ಕಾರ್ಮಿಕರನ್ನು ವಾಪಸು ಕಳುಹಿಸಲು ವ್ಯವಸ್ಥೆ ಮಾಡಬೇಕು. ಪುರಸಭೆ, ಗ್ರಾ.ಪಂ.ಗಳನ್ನು ಯೂನಿಟ್‌ಗಳನ್ನಾಗಿ ಮಾಡಿ ಗಂಜಿಕೇಂದ್ರ ತೆರೆದು ವಲಸೆ ಕಾರ್ಮಿಕರಿಗೆ ನೆರವಾಗಬೇಕು. ಸಾಮಾಜಿಕ ಅಂತರವನ್ನು ಕಾಯುವಲ್ಲಿ ವಾಹನಗಳ ಮೂಲಕ ಪ್ರಚಾರ ಅಭಿಯಾನ, ಬ್ಯಾನರ್‌ಗಳನ್ನು ಅಳವಡಿಸುವ ಕಾರ್ಯ ಮಾಡಬೇಕು. ನಗರ ಪ್ರದೇಶಗಳಲ್ಲಿ ಇದು ನಿತ್ಯವೂ ಸಂಚರಿಸುವ ವ್ಯವಸ್ಥೆ ಆಗಬೇಕು.

ಪುಣ್ಯದ ಕೆಲಸ
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜನಸೇವೆಯ ಇಚ್ಛಾಶಕ್ತಿಯ ಮೂಲಕ ಸಂಕಷ್ಟದಲ್ಲಿರುವವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಪುಣ್ಯದ ಕೆಲಸ ಮಾಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮ ಗ್ರಾಮಕ್ಕೂ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕಾರ್ಯ ಮಾಡಿದ್ದಾರೆ. ನಮ್ಮ ನಾಯಕರಾಗಿರುವ ಅವರ ಈ ಕಾರ್ಯಕ್ಕೆ ತಾ.ಪಂ.ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಿ ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುತ್ತೇನೆ.

-ಚಂದ್ರಹಾಸ ಕರ್ಕೇರ, ಅಧ್ಯಕ್ಷರು, ತಾ.ಪಂ. ಬಂಟ್ವಾಳ

ಜನರ ಕಷ್ಟಗಳಿಗೆ ಸ್ಪಂದನೆ
ಲಾಕ್‌ಡೌನ್‌ ಆದೇಶ ಜಾರಿಯಾದ ದಿನದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮದ ಜನತೆಯ ಕಷ್ಟಗಳಿಗೆ ಸ್ಪಂದಿಸುತ್ತಾ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲ ಸಮುದಾಯದವರ ಹಿತ ಕಾಪಾಡುವಲ್ಲಿ ತನ್ನ ಆರೋಗ್ಯವನ್ನು ಲೆಕ್ಕಿಸದೆ ಜನಸಾಮಾನ್ಯರ ಜತೆ ಬೆರೆತ ಅಪರೂಪದ ರಾಜಕಾರಣಿ ಮಾಜಿ ಸಚಿವ ರಮಾನಾಥ ರೈ ಅವರು.

– ಬೇಬಿ ಕುಂದರ್‌, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌, ಬಂಟ್ವಾಳ

ಕಾರ್ಮಿಕ ವರ್ಗಕ್ಕೆ ಆಸರೆ
ನಿಸ್ವಾರ್ಥ ರಾಜಕಾರಣಿಯಾದ ರಮಾನಾಥ ರೈ ಅವರು ಅಧಿಕಾರ, ಸ್ವಾರ್ಥ ಲಾಲಸೆ ಬಿಟ್ಟು ಜನಹಿತಕ್ಕಾಗಿ ಜೀವನ ವಿನಿಯೋಗಿಸಿದವರು. ಕೋವಿಡ್ ಸೋಂಕು ಮಹಾಮಾರಿಯಿಂದ ಕಂಗೆಟ್ಟ ಜನರಲ್ಲಿ ಧೈರ್ಯ ತುಂಬಿ, ಬಡಜನತೆಯ, ಕಾರ್ಮಿಕ ವರ್ಗದವರಿಗೆ ಆಸರೆಯಾಗಿರುವ ಅವರ ಕಾರ್ಯ ಶ್ಲಾಘನೀಯ.

– ಪಿಯೂಸ್‌ ಎಲ್‌.ರೊಡ್ರಿಗಸ್‌, ಸದಸ್ಯರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ದೂರದೃಷ್ಟಿಯ ನಾಯಕ
ಮಾಜಿ ಸಚಿವ ರಮಾನಾಥ ರೈ ಅವರ ದೂರದೃಷ್ಟಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಡಿಯುವ ನೀರಿನ ಸಮಸ್ಯೆ ದೂರಗೊಳಿಸುವಲ್ಲಿ ಪ್ರಸ್ತುತ ಫಲಕಾರಿಯಾಗಿದೆ. ರೈ ಅವರು ಬಂಟ್ವಾಳ ವಿಧಾನಸಭೆ ಕ್ಷೇತ್ರಾದ್ಯಂತ ಸಂಚರಿಸಿ ಅಕ್ಕಿ, ದಿನಬಳಕೆಯ ವಸ್ತುಗಳನ್ನು ವಿತರಿಸುವುದರೊಂದಿಗೆ ಜನರ ಸಂಕಷ್ಟದಲ್ಲಿ ಭಾಗಿಯಾಗಿ ಅವರ ಆರೋಗ್ಯ ಕಾಳಜಿ ವಹಿಸಿರುವುದು ನಮಗೆ ಹೆಮ್ಮೆಯಾಗಿದೆ.

– ಪದ್ಮನಾಭ ರೈ, ಅಧ್ಯಕ್ಷರು, ಎಪಿಎಂಸಿ, ಬಂಟ್ವಾಳ

ಹಸಿವು ನೀಗಿಸುವ ಕಾರ್ಯ
ಮಾರಕ ಕೋವಿಡ್ ಸೋಂಕಿನಿಂದ ಲಾಕ್‌ಡೌನ್‌ ಆಗಿ ಕಂಗೆಟ್ಟಿದ್ದ ಜನತೆಯ ಮೇಲೆ ಪ್ರೀತಿಯಿಟ್ಟು , ಜನಪ್ರತಿ ನಿಧಿಯ, ಅಧಿಕಾರಿಗಳ ಕಾರ್ಯದಂತೆ ಜವಾಬ್ದಾರಿ ವಹಿಸಿ ಕ್ಷೇತ್ರದ ಪ್ರತೀ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಉತ್ತೇಜಿಸಿ, ದಾನಿಗಳನ್ನು ಒಗ್ಗೂಡಿಸಿ ಬಡವರ ಹಸಿವು ನೀಗಿಸುವ ಕಾರ್ಯ ಕೈಗೊಂಡ ನಿಜ ಜನನಾಯಕರು ರಮಾನಾಥ ರೈ ಅವರು.

– ಸುದೀಪ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌, ಪಾಣೆ ಮಂಗಳೂರು

ಸಮಾನತೆಯ ಹರಿಕಾರ
ಸುದೀರ್ಘ‌ ಅವಧಿಯಿಂದ ಜನ ಸೇವೆ ಮಾಡುತ್ತಾ, ಕೋವಿಡ್‌-19 ವಿರುದ್ಧದ ಸಮರದಲ್ಲಿ ಶಕ್ತಿ ಮೀರಿ ಜನಸ್ಪಂದನೆಯಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಯ ಮತ್ತು ಸಮಾನತೆಯ ಹರಿಕಾರರಾದ ಬಿ. ರಮಾನಾಥ ರೈ ಅವರ ಕಾಯಕ ಪ್ರಶಂಸನೀಯ.

– ಅಬ್ಟಾಸ್‌ ಆಲಿ, ಉಪಾಧ್ಯಕ್ಷರು, ತಾ.ಪಂ. ಬಂಟ್ವಾಳ

ಜನಸೇವೆಯಲ್ಲಿ ಪ್ರಾಮಾಣಿಕತೆ
ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಜನಸೇವೆಯಲ್ಲಿ ಪ್ರಾಮಾಣಿಕತೆ, ಬದುಕಿನಲ್ಲಿ ಬದ್ಧತೆಯನ್ನು ಮೈಗೂಡಿಸಿಕೊಂಡು ಬಂದಿರುವ ರಮಾನಾಥ ರೈ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಜನತೆಗೆ ಅನನ್ಯ ಕೊಡುಗೆ ನೀಡಿದ ಸಚ್ಚಾರಿತ್ರ್ಯದ ರಾಜಕಾರಣಿ, ಜನಹಿತವೇ ಅವರ ಧ್ಯೇಯವಾಗಿದೆ.

– ಕೆ.ರಮೇಶ್‌ ನಾಯಕ್‌ ರಾಯಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರು

ಟಾಪ್ ನ್ಯೂಸ್

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು

Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು

Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು

Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು

Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

7(1

Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !

6

Mangaluru: ಬಾವುಟಗುಡ್ಡೆ ತಂಗುದಾಣ ಬಸ್‌ ಬೇ ಬಳಕೆಗೆ ಅನುವು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.