SEP ರಚನೆಯಿಂದ ಹಿಂದೆ ಸರಿಯುವುದಿಲ್ಲ: ಮಧು ಬಂಗಾರಪ್ಪ
Team Udayavani, Dec 7, 2023, 11:47 PM IST
ಬೆಳಗಾವಿ: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರಚನೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯ ಡಾ| ಸಿ.ಎನ್.ಅಶ್ವತ್ಥನಾರಾಯಣ ಅವರು, ಸಿಎಂ ಹಾಗೂ ಸಚಿವರು ಮಕ್ಕಳ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದಿದ್ದಾರೆ. ಗುರುವಾರ ಸುವರ್ಣಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದತಿ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾವಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿರುವುದು ಗೊತ್ತಿದೆ. ಅವರು ಪ್ರಸ್ತಾವಿಸಲಿ, ನಾವು ಸಮರ್ಥ ಉತ್ತರ ನೀಡುತ್ತೇವೆ. ಈಗಾಗಲೇ ಸಮಿತಿ ರಚಿಸಿ ಅಧ್ಯಕ್ಷರ ನೇಮಕವೂ ಆಗಿದೆ. ಎಸ್‌ಇಪಿ ರಚನೆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ನಾವು ಅಧಿಕಾರಕ್ಕೆ ಬಂದರೆ ಎನ್‌ಇಪಿ ರದ್ದುಪಡಿಸುತ್ತೇವೆ ಎಂದಿ ದ್ದೆವು. ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ರಚಿಸಲಾಗುತ್ತಿದೆ. ಎನ್‌ಇಪಿಗಿಂತ ಎಸ್‌ಇಪಿ ಉತ್ತಮವಾಗಿರಲಿದೆ. ಬಹುಭಾಷೆಯ ಆಯ್ಕೆಗಳು ಇರಲಿವೆ. ಎನ್‌ಸಿಇಆರ್‌ಟಿಯಿಂದಲೇ ಪಠ್ಯಕ್ರಮ ಕೊಡಲಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, 1968ರಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಆರಂಭವಾಗಿದೆ. ಅಂದಿನ ಕೇಂದ್ರ ಸರಕಾರವೇ ಘೋಷಿಸಿದ ಶಿಕ್ಷಣ ನೀತಿ ಅದು. ಪ್ರತ್ಯೇಕ ಶಿಕ್ಷಣ ನೀತಿ ತರಲು ಸಾಧ್ಯವಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಶಾಲೆಯಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿದ್ದಾರಾ? ಯುಜಿಸಿ ಮಾನ್ಯತೆ ಇಲ್ಲದೆ ಪದವಿ ಕಾಲೇಜು ನಡೆಸಲು ಸಾಧ್ಯವಿಲ್ಲ. ಸುಮ್ಮನೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಎನ್‌ಇಪಿಯಲ್ಲಿ ಏನು ಕೊರತೆ ಇದೆ ಎಂಬುದನ್ನು ಹೇಳಲಿ. ಎಸ್‌ಇಪಿ ಸಮಿತಿಗೆ ಉತ್ತರ ಭಾರತೀಯರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅರ್ಧ ದಿನದ ಕಲಾಪವನ್ನೇ ನುಂಗಿದ ಶಿಕ್ಷಣ ನೀತಿ ಚರ್ಚೆ
ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮದ ಪರ ಹಾಗೂ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಸತತ ಮೂರು ಗಂಟೆ ಚರ್ಚೆ ನಡೆಯಿತು. ಗುರುವಾರ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಆರಂಭವಾದ ಕಲಾಪದಲ್ಲಿ ಇದೇ ವಿಚಾರವಾಗಿ ಆಡಳಿತ-ವಿಪಕ್ಷಗಳ ಬರೋಬ್ಬರಿ 25 ಸದಸ್ಯರು ಸಂಜೆ 6.30ರ ವರೆಗೆ ಬೆಳಕು ಚೆಲ್ಲಿದರು. ವಿಪಕ್ಷ ಬಿಜೆಪಿ ಸದಸ್ಯರು ಎನ್‌ಇಪಿ ಜಾರಿಗೆ ಆಗ್ರಹಿಸಿದರೆ, ಆಡಳಿತಾರೂಢ ಸದಸ್ಯರು ಎಸ್‌ಇಪಿ ಜಾರಿಗೆ ಆಗ್ರಹಿಸಿದರು.
ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಿಬಿಎಸ್‌ಇ, ಐಸಿಎಸ್‌ಇ ಇನ್ನಿತರ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಸರಕಾರದ ವ್ಯಾಪ್ತಿಯ 48 ಸಾವಿರ ಶಾಲೆಗಳಲ್ಲಿ ಮಾತ್ರ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತೀರಾ? ಎನ್‌ಇಪಿ ರದ್ದುಪಡಿಸುವ ಮೊದಲು ಅದರಲ್ಲಿನ ಲೋಪದೋಷಗಳ ಬಗ್ಗೆ ಏನಾದರೂ ಅಧ್ಯಯನಗಳು ನಡೆದಿವೆಯೇ? ಎನ್‌ಇಪಿ ಅಡಿ 50 ಸಾವಿರ ಕೋಟಿ ರೂ. ರಾಷ್ಟ್ರೀಯ ಸಂಶೋಧನ ನಿಧಿಯನ್ನು ಕೇಂದ್ರ ಸರಕಾರ ಕೊಡುತ್ತದೆ. ಕರ್ನಾಟಕದ ಪಾಲು ಕೈತಪ್ಪಿ ಹೋಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಎಸ್‌ಇಪಿ ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್‌ನ ನಾಗರಾಜ ಯಾದವ್, ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕಿತ್ತು. ರಾಜ್ಯ ಸರಕಾರ, ಇಲ್ಲಿನ ಶಿಕ್ಷಣ ಸಂಸ್ಥೆ, ಪೋಷಕರ ಅಭಿಪ್ರಾಯ ಸಂಗ್ರಹಿಸಿ ಎನ್‌ಇಪಿ ಮಾಡಬೇಕಿತ್ತು. ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದರು. ಚರ್ಚೆಯ ಬಳಿಕ ಸರಕಾರ ಉತ್ತರ ಕೊಡಬೇಕಿತ್ತಾದರೂ ಸಚಿವ ಸಂಪುಟ ಸಭೆ ಇದ್ದುದರಿಂದ ಸದಸ್ಯರ ಚರ್ಚೆಯ ಬಳಿಕ ಉಪಸಭಾಪತಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.
ಉಪನ್ಯಾಸಕರ ಹುದ್ದೆಗೆ ಪದೋನ್ನತಿ – ಈ ಅಧಿವೇಶನದಲ್ಲೇ ತೀರ್ಮಾನ
ರಾಜ್ಯದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡುವ ವಿಷಯದಲ್ಲಿ ರೂಪಿಸಿರುವ ನಿಯಮಗಳ ತಾರತಮ್ಯಗಳ ಬಗ್ಗೆ ಈ ಚಳಿಗಾಲದ ಅಧಿವೇಶನದಲ್ಲೇ ವಿಶೇಷ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಮರಿತಿಬ್ಬೇಗೌಡ ಅವರು ಗಮನ ಸೆಳೆಯುವ ಸೂಚನೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವ್ಯಾಪ್ತಿಯ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಭಡ್ತಿ ನೀಡುವಲ್ಲಿ ಒಂದು ನಿಯಮ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಭಡ್ತಿ ನೀಡುವಲ್ಲಿ ಮತ್ತೂಂದು ನಿಯಮ ರೂಪಿಸಿ ತಾರತಮ್ಯ ಮಾಡಿರುವ ಗಂಭೀರ ಸಮಸ್ಯೆ ಕುರಿತು ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿ ಮಾತನಾಡಿದರು.
ಸದ್ಯ ಪ್ರೌಢಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಭಡ್ತಿ ಹೊಂದಲು ಪ್ರೌಢಶಾಲಾ ಸಹ ಶಿಕ್ಷಕರಾಗಿ 10 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿರಬೇಕು. ಒಂದು ವೇಳೆ 10 ವರ್ಷ ಪೂರೈಸಿರುವವರು ಲಭ್ಯವಿಲ್ಲದಿದ್ದಲ್ಲಿ 7 ವರ್ಷ ಸೇವೆ ಪೂರೈಸಿರುವವರನ್ನು ಪರಿಗಣಿಸಲಾಗುವುದು ಎಂದರು.
ಈಗ ಚಾಲನೆಯಲ್ಲಿರುವಂತೆ 2014ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಉಪನ್ಯಾಸಕ ವೃಂದದಲ್ಲಿ ನೇರ ನೇಮಕಾತಿಗೆ ಶೇ.74 ಮತ್ತು ಶೇ.1ರಷ್ಟು ಸೇವಾ ನಿರತ ಸಿ ಗುಂಪಿನ ನೌಕರರಿಗೆ ಹಾಗೂ ಶೇ.25 ರಷ್ಟು ಸೇವಾ ನಿರತ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಅರ್ಹತಾದಾಯಕ ಪರೀಕ್ಷೆ ಉತ್ತೀರ್ಣರಾಗುವ ಷರತ್ತಿನಂತೆ ಅನುಪಾತ ವನ್ನು ಹಂಚಿಕೆ ಮಾಡಿ ಭಡ್ತಿ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪದೋನ್ನತಿ ನೀಡುವ ವಿಚಾರದಲ್ಲಿ ತಾರ ತಮ್ಯ ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ಶಾಸಕರು ಮತ್ತು ಶಿಕ್ಷಕ ವೃಂದದಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಅಧಿವೇಶನದ ಸಮಯದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಪ್ರೌಢಶಾಲಾ ಶಿಕ್ಷಕರಿಗೆ ಭಡ್ತಿ ನೀಡಲು ಅರ್ಹತಾ ಪರೀಕ್ಷೆಯನ್ನು ರದ್ದು ಮಾಡುವ ಬಗ್ಗೆ ಚರ್ಚಿಸಲಾಗುವುದು. ಬಳಿಕ ಭಡ್ತಿಯಲ್ಲಿನ ಅನುಪಾತದ ಬಗ್ಗೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.