ತುಂಬೆ ಡ್ಯಾಂನಿಂದ ಗ್ರಾಮೀಣ ಭಾಗಕ್ಕೆ ಪ್ರತ್ಯೇಕ ನೀರಿನ ಕೊಳವೆ !
ಮಂಗಳೂರಿಗೆ ನೀರು ಸೋರಿಕೆ ತಡೆಯಲು ಪಾಲಿಕೆ ನಿರ್ಧಾರ
Team Udayavani, Feb 21, 2023, 10:41 AM IST
ಮಂಗಳೂರು: ಮಂಗಳೂರಿಗೆ ನೀರುಣಿಸುವ ಪೈಪ್‌ಲೈನ್‌ನಲ್ಲಿ ಗ್ರಾಮಾಂತರ ಭಾಗದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಂತೆ ಶೀಘ್ರದಲ್ಲಿ ತುಂಬೆ ಡ್ಯಾಂನಿಂದ ಗ್ರಾಮಾಂತರ ಭಾಗಕ್ಕೆ ಹೊಸ ಕೊಳವೆ ಮಾರ್ಗ ನಿರ್ಮಿಸಿ ಪ್ರತ್ಯೇಕವಾಗಿ ನೀರು ಕೊಡಲು ನಿರ್ಧರಿಸಲಾಗಿದೆ. ತುಂಬೆಯಲ್ಲಿನ 2.25 ಎಂಜಿಡಿ ನೀರಿನ ಸ್ಥಾವರವನ್ನು ಅಮೃತ್ ಯೋಜನೆಯಡಿ ಹೊಸದಾಗಿ 20 ಎಂಎಲ್‌ಡಿಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು ಇದರ ಕಾಮಗಾರಿ ಪ್ರಗತಿಯಲ್ಲಿದೆ.
ಈ ಯೋಜನೆಯಲ್ಲಿ 10 ಎಂ.ಎಲ್.ಡಿ. ನೀರನ್ನು ಮಹಾನಗರ ಪಾಲಿಕೆಗೆ ಹಾಗೂ 10 ಎಂ.ಎಲ್.ಡಿ. ನೀರನ್ನು ಮುಖ್ಯ ಕೊಳವೆ ಹಾದು ಬರುವ ಗ್ರಾ.ಪಂ. ಪ್ರದೇಶಗಳಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಮಂಗಳೂರಿಗೆ ನೀರು ಸರಬರಾಜು ಮಾಡುವ ಗ್ರಾಮ ಪಂಚಾಯತ್ ವ್ಯಾಪ್ತಿಯ 1000 ಎಂಎ ಹಾಗೂ 1100 ಎಂಎಂ ಮುಖ್ಯ ಕೊಳವೆಯಲ್ಲಿ ಆಗಿರುವ ಜೋಡಣೆ ಮಾಡಿರುವ ಎಲ್ಲ ಕೊಳವೆ ತೆಗೆದು, 20 ಎಂಎಲ್‌ಡಿ ಯೋಜನೆಯ ಕೊಳವೆ ಮಾರ್ಗಕ್ಕೆ ಸ್ಥಳಾಂತರಿಸಲು ಪಾಲಿಕೆ ಉದ್ದೇಶಿಸಿದೆ. ತುಂಬೆಯಿಂದ ನಗರಕ್ಕೆ ಬರುವ ದಾರಿಯಲ್ಲಿ ಇರುವ ಅಡ್ಯಾರ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಖ್ಯ ಕೊಳವೆಯಿಂದ ಅಡ್ಯಾರ್, ಅರ್ಕುಳ ಗ್ರಾಮಗಳಿಗೆ ಹಲವು ವರ್ಷಗಳಿಂದ ಪ್ರತೀದಿನ ಸುಮಾರು 7ರಿಂದ 8 ಲಕ್ಷ ಲೀ. ನೀರನ್ನು ಬಳಕೆ ಮಾಡಲಾಗುತ್ತಿದೆ. ಜತೆಗೆ ಇತರ ಭಾಗಗಳಲ್ಲಿಯೂ ಮಂಗಳೂರಿಗೆ ಬರುವ ಮುಖ್ಯ ಕೊಳವೆಯಿಂದ ನೀರು ಸೋರಿಕೆಯಾಗುತ್ತಿದೆ.
ಹೀಗಾಗಿ ಅಡ್ಯಾರ್ ಗ್ರಾ.ಪಂ., ಪುದು, ತುಂಬೆ ಹಾಗೂ ಕಳ್ಳಿಗೆ ಗ್ರಾ.ಪಂ.ಗೆ ಪ್ರತ್ಯೇಕವಾಗಿ ನೀರು ಸರಬರಾಜು ಮಾಡಲು ಪೈಪ್ ಲೈನ್ ಅಳವಡಿಕೆಗೆ ತೀರ್ಮಾನಿಸಲಾಗಿದೆ.ನೀರು ಸರಬರಾಜು ಕೊಳವೆ ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ನೀರು ಪೂರೈಕೆಯ ಮೂಲವಾದ ತುಂಬೆಯ ನೇತ್ರಾವತಿ ನದಿಯಿಂದ 1959ರಲ್ಲಿ 2.25 ಎಂಜಿಡಿ (12.27 ಎಂಎಲ್‌ಡಿ) ಮಂಗಳೂರು ನಗರಕ್ಕೆ ನೀರು ಪೂರೈಸುವ ಯೋಜನೆ ಪ್ರಾರಂಭಿಸಿತ್ತು.
ಅನಂತರ ಕೆಯುಡಬ್ಲ್ಯುಎಸ್ ಹಾಗೂ ಒಳಚರಂಡಿ ಮಂಡಳಿಯವರು 1974ರಲ್ಲಿ 18 ಎಂಜಿಡಿ ನೀರು ಪೂರೈಕೆಯ (80 ಎಂಎಲ್‌ಡಿ)ಯೋಜನೆ ಅನುಷ್ಠಾನಿಸಿತ್ತು. ಈ ಯೋಜನೆಯನ್ನು 1997ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. 2007ರಲ್ಲಿ ಕುಡ್ಸೆಂಪ್‌ನವರು ಎಡಿಬಿ ಸಹಾಯದಿಂದ 80 ಎಂಎಲ್‌ಡಿ ನೀರು ಪೂರೈಸುವ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಪ್ರತ್ಯೇಕ ಪೈಪ್‌ಲೈನ್ ತುಂಬೆ ಡ್ಯಾಂನಿಂದ ಮಂಗಳೂರಿಗೆ ನೀರುಣಿಸುವ ಪೈಪ್‌ಲೈನ್ ಸೋರಿಕೆ ತಡೆಗಟ್ಟುವ ಸಲುವಾಗಿ, ಗ್ರಾಮಾಂತರ ಭಾಗದ ಜನರಿಗೆ ನೀರು ಸರಬರಾಜು ಮಾಡುವ ಆಶಯದಿಂದ ಪ್ರತ್ಯೇಕ ಪೈಪ್‌ಲೈನ್ ಅಳವಡಿಕೆಗೆ ಉದ್ದೇಶಿಸಲಾಗಿದೆ. ಕಳ್ಳಿಗೆ, ತುಂಬೆ, ಪುದು, ಅಡ್ಯಾರ್ ಗ್ರಾ.ಪಂ. ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಉದ್ದೇಶವಿದೆ.
– ಪ್ರೇಮಾನಂದ ಶೆಟ್ಟಿ , ಮುಖ್ಯ ಸಚೇತಕರು, ಮಂಗಳೂರು ಪಾಲಿಕೆ
ಪ್ರತ್ಯೇಕ ಪೈಪ್‌ಲೈನ್
ತುಂಬೆ ಡ್ಯಾಂನಿಂದ 160 ಎಂಎಲ್‌ಡಿ (ದಾಖಲೆಯ ಪ್ರಕಾರ ಮಾತ್ರ)ನೀರನ್ನು ಪ್ರತೀ ದಿನ ಮಂಗಳೂರಿಗೆ ಪಂಪಿಂಗ್ ಮಾಡಲಾಗುತ್ತದೆ. 80 ಎಂಎಲ್‌ಡಿ (2009ರಲ್ಲಿ ನಿರ್ಮಾಣ) ಹಾಗೂ 81.07 (1983ರಲ್ಲಿ ನಿರ್ಮಾಣ) ಎಂಎಲ್‌ಡಿಯ 2 ನೀರು ಶುದ್ಧೀಕರಣ ಘಟಕಗಳಲ್ಲಿ ನೀರು ಶುದ್ಧೀಕರಣ ಮಾಡಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಇದಕ್ಕೆ ಜತೆಯಾಗಿ ಇದೀಗ 20 ಎಂಎಲ್‌ಡಿಯ ಹೊಸ ನೀರು ಶುದ್ಧೀಕರಣ ಘಟಕ ತುಂಬೆ ಡ್ಯಾಂ ಸಮೀಪದ ರಾಮಲ್‌ಕಟ್ಟೆಯಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ 10 ಎಂಎಲ್‌ಡಿ ಗ್ರಾಮಾಂತರಕ್ಕೆ ಸರಬರಾಜು ಮಾಡಿದರೆ ಉಳಿದ 10 ಎಂಎಲ್‌ಡಿ ಸೇರಿ 170 ಎಂಎಲ್‌ಡಿ ನೀರು ಲಭಿಸಲಿದೆ.
~ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.