ಇ ಖಾತೆ ನೋಂದಣಿಗೆ ಸರ್ವರ್ ಸಮಸ್ಯೆ: ಜನತೆ ಹೈರಾಣು
Team Udayavani, Mar 8, 2022, 4:50 PM IST
ಸುರತ್ಕಲ್ : ಇ ಖಾತೆ ನೋಂದಣಿಗೆ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಲಯ ಕಚೇರಿಯಲ್ಲಿ ಇರುವ ಸರ್ವರ್ ಕೈಕೊಡುತ್ತಿದ್ದು, ಆಸ್ತಿ ತೆರಿಗೆ ಪಾವತಿಸಲೂ ಆಗದೆ ಮಹಾನಗರ ಪಾಲಿಕೆಯಲ್ಲಿ ಆನ್‌ಲೈನ್ ವ್ಯವಸ್ಥೆ ಮುಂದೆ ಜನರು ದಿನಗಟ್ಟಲೆ ಕಾಯುವಂತೆ ಆಗಿದ್ದು, ಆನ್‌ಲೈನ್ ವ್ಯವಸ್ಥೆಗಿಂತ ಈ ಹಿಂದಿನ ಪದ್ದತಿಯೇ ವಾಸಿ ಎಂಬಂತೆ ಆಗಿದೆ.
ಸದಾ ಕೈಕೊಡುತ್ತಿರುವ ಸರ್ವರ್ ತಂತ್ರಜ್ಞಾನವು ದಿನಕ್ಕೆ ಇಪ್ಪತ್ತು ಮೂವತ್ತು ಮಂದಿಯ ಇ ಖಾತೆ ಅಪ್‌ಲೋಡ್ ಮಾಡಲೂ ತ್ರಾಸ ಪಡುವಂತಾಗಿದೆ. ಇದರಿಂದ ತಮ್ಮ ವ್ಯಾಪಾರ ವಹಿವಾಟಿನ ನಡುವೆ ಅಮೂಲ್ಯ ಸಮಯವನ್ನು ಕಂಪ್ಯೂಟರ್ ಮುಂದೆ ಸಾಲಿನಲ್ಲಿ ನಿಂತು ಕಳೆಯುವಂತಾಗಿದೆ.
ಮೂಲ ಸೌಕರ್ಯ ಅಗತ್ಯ
ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ಒಂದು ಕಂಪ್ಯೂಟರ್ ಇದ್ದು, ನೂತನ ವ್ಯವಸ್ಥೆ ಆದ ಬಳಿಕ ಆಸ್ತಿ ತೆರಿಗೆ ಕಟ್ಟಲು ಇ ಖಾತೆ ನೋಂದಣಿ ಆಗಬೇಕಿರುವುದರಿಂದ ಪ್ರತೀ ದಾಖಲೆಯನ್ನು ಅಪ್‌ಲೋಡ್ ಮಾಡಬೇಕಿದೆ. ಮನೆ ನಂಬ್ರ, ಆಸ್ತಿ ವಿವರ ಮತ್ತಿತರ ದಾಖಲೀಕರಣ ಆಗಿದೆ. ಏಕಾ ಏಕಿ ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದಿರುವುದು ಸಮಸ್ಯೆ ಉದ್ಭವಿಸಲು ಕಾರಣ. ಆದರೆ ಇದನ್ನು ಮಾಡಲು ಹೋದರೆ ಸರ್ವರ್ ಆಗಾಗ ಕೈಕೊಡುತ್ತದೆ. ಒಂದು ಕಂಪ್ಯೂಟರ್ ವ್ಯವಸ್ಥೆ ಬದಲು ಮೂರ್‍ನಾಲ್ಕು ಮಂದಿಗೆ ತಾತ್ಕಾಲಿಕವಾಗಿಯಾದರೂ ಈ ವಿಭಾಗಕ್ಕೆ ಹಾಕಿ ನೋಂದಣಿ ಪೂರ್ಣಗೊಳಿಸಲು ಕ್ರಮ ಜರಗಿಸಬೇಕಿದೆ.
ಹೆಚ್ಚು ಸಮಸ್ಯೆ
ಮೂಲ ವ್ಯವಸ್ಥೆಯನ್ನು ಸರಿಪಡಿಸದೆ ಇದೀಗ ಆನ್‌ಲೈನ್ ವ್ಯವಸ್ಥೆ ಮಾಡಿರುವುದರಿಂದ ಜನತೆಗೂ ತೊಂದರೆಯಾಗಿದೆ. ಇನ್ನೊಂದೆಡೆ ಪಾಲಿಕೆ ಬೊಕ್ಕಸಕ್ಕೆ ಹಣ ನಿಗದಿತ ಅವಧಿಯಲ್ಲಿ ಹೋಗಿ ಸೇರುತ್ತಿಲ್ಲ. ಪಾಲಿಕೆಯಲ್ಲಿ ಸ್ಮಾರ್ಟ್ ಸಿಟಿ ಸರ್ವರ್ ಮತ್ತು ರಾಜ್ಯ ಸರಕಾರದ ಸರ್ವರ್ ಎರಡು ಬಳಕೆಯಲ್ಲಿದ್ದು, ಇ ಖಾತೆ ನೋಂದಣಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ.
ಈ ಹಿಂದೆ ನೇರವಾಗಿ ಆಸ್ತಿ ತೆರಿಗೆಯನ್ನು ನಗದಾಗಿ ಬ್ಯಾಂಕಿನಲ್ಲಿ ಜಮಾ ಮಾಡಬಹುದಿತ್ತು. ಇದೀಗ ಆನ್‌ಲೈನ್ ವ್ಯವಸ್ಥೆಯಿಂದ ದಿನವಿಡೀ ಪಾಲಿಕೆ ಮುಂಭಾಗ ಕಾಯುವಂತಾಗಿದೆ. ಒಂದು ಯೋಜನೆ ರೂಪಿಸುವಾಗ ಶೇ. 100ರಷ್ಟು ಸರಿಯಾದ ಬಳಿಕ ಜಾರಿಗೆ ತರಬೇಕು. ಇಲ್ಲವೇ ಸಂಪೂರ್ಣ ಸರಿಯಾಗುವವರೆಗೆ ಹಿಂದಿನ ಪದ್ದತಿ ಮುಂದುವರಿಸಲಿ ಎನ್ನುತ್ತಾರೆ ಸ್ಥಳೀಯರಾದ ಮಧುಸೂದನ ರಾವ್ .
ಶೀಘ್ರವಾಗಿ ಕೈಗೊಳ್ಳಲಾಗುವುದು
ಇ ಖಾತೆ ನೋಂದಣಿ ಮಾಡಲು ಸರ್ವರ್ ಸಮಸ್ಯೆ ಇದ್ದರೆ, ವ್ಯವಸ್ಥೆ ಸರಿಪಡಿಸಲು ಬೇಕಾದ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು. ಇಲಾಖೆಯಿಂದಾಗಿ ತೆರಿಗೆ ಕಟ್ಟಲು ವಿಳಂಬವಾದರೆ ಹೆಚ್ಚುವರಿ ಅವಧಿ ನೀಡುವ ಬಗ್ಗೆ ಮುಂದಾಗುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ.
-ಅಕ್ಷಯ್ ಶ್ರೀಧರ್, ಆಯುಕ್ತರು ಮನಪಾ
– ಲಕ್ಷ್ಮೀ ನಾರಾಯಣ ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.