ಸಿಎಸ್‌ಸಿಯಿಂದ ಸೇವಾಸಿಂಧು ಔಟ್
ಶುರುವಾಯಿತು ಗ್ರಾಮ ಒನ್, ಕರ್ನಾಟಕ ಒನ್‌ಗಳತ್ತ ಅಲೆದಾಟ
Team Udayavani, Apr 25, 2022, 4:52 PM IST
ದಾವಣಗೆರೆ: ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ) ಗಳಲ್ಲಿನ ಸೇವಾಸಿಂಧು ಸೇವೆಗಳು ಕಳೆದೊಂದು ವಾರದಿಂದ ಸಂಪೂರ್ಣ ಕಡಿತಗೊಂಡಿದ್ದು, ರಾಜ್ಯದ ಸಾವಿರಾರು ಸಾಮಾನ್ಯ ಸೇವಾ ಕೇಂದ್ರಗಳು ಆರ್ಥಿಕ ಸಂಕಷ್ಟದ ಭೀತಿ ಎದುರಿಸುವಂತಾಗಿದೆ.
ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳ ಹಲವು ಸೇವೆಗಳೊಂದಿಗೆ ರಾಜ್ಯ ಸರ್ಕಾರದ ಸೇವೆಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ, ಸೇವಾಸಿಂಧು ಸೇವೆಗಳನ್ನು ಸಂಪೂರ್ಣ ಕಡಿತಗೊಳಿಸಿದ್ದರಿಂದ ಸಿಎಸ್‌ಸಿ ಕೇಂದ್ರಗಳ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ.
ಕೇಂದ್ರ ಸರ್ಕಾರ ಜನರಿಗೆ ಆನ್ ಲೈನ್ ಮೂಲಕ ಸುಲಭವಾಗಿ ಡಿಜಿಟಲ್ ಸೇವೆ ನೀಡುವ ಉದ್ದೇಶದಿಂದ ದೇಶದಲ್ಲಿ ಲಕ್ಷಾಂತರ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಅದೇ ರೀತಿ ರಾಜ್ಯದಲ್ಲಿಯೂ 20-25ಸಾವಿರ ನಿರುದ್ಯೋಗಿಗಳು ಸಾಮಾನ್ಯ ಸೇವಾ ಕೇಂದ್ರಗಳನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದಾರೆ. ಕೊರೊನಾ ಹಾವಳಿ ಸಂದರ್ಭದಲ್ಲಂತೂ ಮಹಾನಗರಗಳಿಂದ ಹಳ್ಳಿಗೆ ಮರಳಿದ ನೂರಾರು ವಿದ್ಯಾವಂತ ಯುವಕ-ಯುವತಿಯರಿಗೆ ಸೇವಾ ಕೇಂದ್ರಗಳು ವರದಾನವಾಗಿ ಮಾರ್ಪಟ್ಟವು. ಯುವಕರು ತಮ್ಮ ಗ್ರಾಮದಲ್ಲಿಯೇ ಉಳಿದು ಸಣ್ಣ ಮೊತ್ತದ ಬಂಡವಾಳ ಹಾಕಿ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆದುಕೊಂಡಿದ್ದು ಇದನ್ನೇ ಬದುಕಿಗೆ ಆಸರೆಯಾಗಿಸಿಕೊಂಡಿದ್ದಾರೆ. ಈಗ ಸೇವಾಸಿಂಧು ಸೇವೆ ಕಡಿತಗೊಳಿಸಿದ್ದರಿಂದ ಬಾಡಿಗೆ ಕಟ್ಟಡದಲ್ಲಿ ಕೇಂದ್ರ ತೆರೆದವರು ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್, ಇಂಟರ್‌ನೆಟ್ ಬಿಲ್ ಕೂಡ ಕಟ್ಟಲಾಗದೆ ಕೇಂದ್ರ ಮುಚ್ಚಿ ಮತ್ತೆ ನಿರುದ್ಯೋಗಿಗಳಾಗುವ ಭೀತಿ ಎದುರಾಗಿದೆ.
ನಾಗರಿಕರಿಗೂ ಸಮಸ್ಯೆ: ಸಾಮಾನ್ಯ ಸೇವಾ ಕೇಂದ್ರಗಳು ಕೇಂದ್ರ ಸರ್ಕಾರದ ವಿವಿಧ ಸೇವೆಗಳೊಂದಿಗೆ ಸೇವಾಸಿಂಧು ಮೂಲಕ ರಾಜ್ಯ ಸರ್ಕಾರದ ಅಂದರೆ ಜಾತಿ, ಆದಾಯ, ಜನನ, ಮರಣ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ, ಕಾರ್ಮಿಕರ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್ ಸೇರಿದಂತೆ ಹಲವು ಸೇವೆಗಳನ್ನು ಜನರಿಗೆ ನೀಡುತ್ತಿದ್ದವು. ಜನರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಹೋಗಿ ತಮಗೆ ಬೇಕಾದ ಸೇವೆಯನ್ನು ಸುಲಭವಾಗಿ ಪಡೆದುಕೊಳ್ಳುತ್ತಿದ್ದರು. ಪ್ರಸ್ತುತ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳು ಎಲ್ಲೆಂದರಲ್ಲಿ ಇಲ್ಲ. ಆದರೆ, ಸಾಮಾನ್ಯ ಸೇವಾ ಕೇಂದ್ರಗಳು ಹಳ್ಳಿ-ಹಳ್ಳಿ, ಓಣಿ-ಓಣಿಗಳಲ್ಲಿದ್ದು ಸಾಮಾನ್ಯ ಸೇವಾ ಕೇಂದ್ರಗಳಲ್ಲಿನ ಸೇವಾಸಿಂಧು ಸೇವೆ ನಿಷ್ಕ್ರೀಯಗೊಳಿಸಿದ್ದರಿಂದ ಜನರು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ಎದುರಾಗಿದೆ.
ಸೇವೆ ಕಡಿತ ಏಕೆ? ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೀಡಲಾಗುತ್ತಿದ್ದ ಸೇವಾಸಿಂಧು ಸೇವೆಗಳನ್ನು ಏಕಾಏಕಿ ಏಕೆ ಕಡಿತಗೊಳಿಸಲಾಗಿದೆ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಗ್ರಾಮ ಒನ್, ಕರ್ನಾಟಕ ಒನ್‌ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸೇವೆ ಕಡಿತಗೊಳಿಸಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸಾಮಾನ್ಯ ಸೇವಾ ಕೇಂದ್ರದವರು ಸೇವಾಸಿಂಧು ಸೇವೆಗೆ ನೀಡಬೇಕಾದ ಸೇವಾ ಶುಲ್ಕ ಸರಿಯಾಗಿ ಪಾವತಿಸದೆ ಇರುವುದರಿಂದ ನವೀಕರಣಗೊಳಿಸದೇ ಸೇವೆ ಕಡಿತಗೊಳಿಸಿರಬಹುದು ಎನ್ನುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಸ್ಪಷ್ಟನೆ ನೀಡಬೇಕಾಗಿದೆ.
ಸೇವಾಸಿಂಧು ಸೇವೆ ನೀಡಲು ಸಾಮಾನ್ಯ ಸೇವಾ ಕೇಂದ್ರ ಮಾಡಿಕೊಂಡಿರುವ ಒಪ್ಪಂದದ ಅವಧಿ ಮುಗಿದಿರುವುದರಿಂದ ಪ್ರಸ್ತುತ ಸಾಮಾನ್ಯ ಸೇವಾ ಕೇಂದ್ರಗಳಲ್ಲಿನ ಸೇವಾಸಿಂಧು ಸೇವೆಗಳನ್ನು ಕಡಿತಗೊಳಿಸಲಾಗಿದೆ. –ಶಾಂತರಾಜ್ ಎಸ್., ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಇ-ಆಡಳಿತ, ದಾವಣಗೆರೆ
ರಾಜ್ಯದ ಮೂಲೆ ಮೂಲೆಗಳಲ್ಲಿ ಇಂದು ಸಾಮಾನ್ಯ ಸೇವಾ ಕೇಂದ್ರಗಳಿವೆ. ಈ ಕೇಂದ್ರಗಳಲ್ಲೇ ಸೇವಾಸಿಂಧು ಸೇವೆ ಇದ್ದರೆ ಜನರಿಗೆ ಸುಲಭವಾಗಿ ಸೇವೆ ಸಿಗುತ್ತದೆ. ಇಲ್ಲದಿದ್ದರೆ ಜನ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ಮೊದಲಿನಂತೆ ಸಾಮಾನ್ಯ ಸೇವಾ ಕೇಂದ್ರಗಳಿಗೆ ಸೇವಾಸಿಂಧು ಸೇವೆ ಅಳವಡಿಸಿ, ಕೇಂದ್ರದವರಿಗೂ, ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಬೇಕು. –ಸೋಮಶೇಖರ ಹತ್ತಿ, ಮಾಲೀಕರು, ಸಿಎಸ್‌ಸಿ, ಹುಬ್ಬಳ್ಳಿ –ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.