Shastriji Jayanti: ಮೂರ್ತಿ ಚಿಕ್ಕದಾದರೂ… ಕೀರ್ತಿ ದೊಡ್ಡದು
Team Udayavani, Oct 1, 2023, 11:35 PM IST
“ಹತ್ಯಾರೋಂಕೋ ಹತ್ಯಾರೋಂಸೆ ಹಠಾವೋ’ ಎಂದು ಕರೆಕೊಟ್ಟು, ಕಾಲುಕೆರೆದು ಗೂಳಿಯಂತೆ ಯುದ್ಧಕ್ಕೆ ಬಂದ ಶತ್ರುರಾಷ್ಟ್ರದ ಮೇಲೆ ಹುಲಿಯಂತೆ ಎಗರಿ ಹೆಡೆಮುರಿ ಕಟ್ಟುವ ಮೂಲಕ ದೈಹಿಕ ಬಲಕ್ಕೂ ಮಾನಸಿಕ ಶಕ್ತಿಗೂ ಸಂಬಂಧವೇ ಇಲ್ಲ, ಮಾನಸಿಕವಾಗಿ ಶಕ್ತನಾಗಿರುವವನು ಅದೆಂತಹ ಕಠಿನತೆಯನ್ನೂ ಧೈರ್ಯವಾಗಿ ಎದುರಿಸಬಲ್ಲ ಎಂದು ವಿಶ್ವಕ್ಕೆ ಸಾರಿ, ಒಬ್ಬ ರಾಜಕಾರಣಿಯೆಂದರೆ, ಒಬ್ಬ ನಾಯಕನೆಂದರೆ, ಒಬ್ಬ ಮನುಷ್ಯನೆಂದರೆ ಹೀಗಿರಬೇಕೆಂದು ತನ್ನ ಗುಣಗಳಿಂದಲೇ ತೋರಿಸಿಕೊಟ್ಟು, ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನೊಳಗೂ ಉಳಿದುಹೋಗುವಂತಹ ಮಹಾನ್ ಚೇತನ, ನಮ್ಮ ದೇಶ ಕಂಡ ದೊಡ್ಡ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರೀಜಿ.
ಶಿಕ್ಷಕರೆಂದರೆ ಬಡಪಾಯಿಗಳು ಎನ್ನುವಂತಹ ಕಾಲದಲ್ಲಿ ಒಬ್ಬ ಬಡ ಶಿಕ್ಷಕನಾದ ಶಾರದಾ ಪ್ರಸಾದ್ ಮತ್ತು ದುಲಾರಿದೇವಿಯವರ ಮಗನಾಗಿ ಅ. 2, 1904ರಲ್ಲಿ, ಉತ್ತರಪ್ರದೇಶದ ಮುಘಲ್ ಸರಾಯಿ ಎಂಬಲ್ಲಿ ಜನಿಸಿದ ಶಾಸ್ತ್ರೀಜಿಯವರು, ಬಾಲ್ಯದಿಂದಲೂ ಬಡತನವನ್ನು ಭರಪೂರ ಎದುರಿಸಿಯೇ ಬೆಳೆದವರು. ಒಂದು ಸೈಕಲ್ ಕೊಂಡುಕೊಳ್ಳುವಷ್ಟೂ ಆರ್ಥಿಕವಾಗಿ ಶಕ್ತರಿಲ್ಲದ್ದರಿಂದ ಪ್ರತೀ ದಿನ ಎಂಟು ಕಿಲೋಮೀಟರ್ ದೂರವಿದ್ದ ಶಾಲೆಗೆ ನಡೆದುಕೊಂಡೇ ಹೋಗಿಬರಬೇಕಾಗಿತ್ತು. ಇಂತಹ ಬಡತನದಲ್ಲೇ ಹುಟ್ಟಿ, ಬಡನತದಲ್ಲಿಯೇ ಬೆಳೆದ ಲಾಲ್ ಬಹದ್ದೂರ್ ವಿದ್ಯಾಭ್ಯಾಸದಲ್ಲಿ ತುಂಬಾ ಚುರುಕಾಗಿದ್ದರಿಂದ, ಪ್ರಾಥಮಿಕ ಹಂತವನ್ನು ತನ್ನ ಊರಿನ ಸುತ್ತಮುತ್ತಲೇ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ವಾರಾಣಸಿಗೆ ತೆರಳಿ, ಕಾಶೀ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡಿ, “ಶಾಸ್ರ್ತೀ’ ಎಂಬ ಬಿರುದು ಪಡೆದು, ‘ಲಾಲ್ ಬಹದ್ದೂರ್ ಶ್ರೀವಾಸ್ತವ’ನಿಂದ “ಲಾಲ್ ಬಹದ್ದೂರ್ ಶಾಸ್ರ್ತೀ’ ಆಗುತ್ತಾರೆ.
1956ರಲ್ಲಿ ತಮಿಳುನಾಡಿನ ಅರಿಯಾಲೂರಿನಲ್ಲಿ ನಡೆದ ರೈಲು ದುರಂತ, ಭಾರತ ದೇಶದಲ್ಲೇ ಅತೀ ದೊಡ್ಡ ಮತ್ತು ಹೃದಯ ವಿದ್ರಾವಕ ದುರಂತವೆಂದು ಅನೇಕ ಪತ್ರಿಕೆಗಳ ವರದಿಗಳು ಹೇಳುತ್ತವೆ. ಸುಮಾರು ನೂರೈವತ್ತು ಜನರನ್ನು ಬಲಿ ಪಡೆದು, ನೂರಾರು ಜನರು ತೀವ್ರ ಗಾಯಗೊಂಡ ಘಟನೆಯದು. ಬೇರೆ ಯಾರೇ ಆಗ ಅಧಿಕಾರದಲ್ಲಿದ್ದರೂ ನೂರಾರು ಸಬೂಬುಗಳ ಸಮಜಾಯಿಶಿ ನೀಡಿ, ತನ್ನ ಅಧಿಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡು, ಗಟ್ಟಿಯಾಗಿ ಕುಳಿಬಿಡುತ್ತಿದ್ದರೇನೋ. ಆದರೆ ಒಬ್ಬ ರೈಲ್ವೇ ಸಚಿವನಾಗಿ, ನೈತಿಕ ಹೊಣೆ ಹೊತ್ತು, ತಮ್ಮ ಖಾತೆಗೆ ರಾಜೀನಾಮೆ ನೀಡಿ, ಎಲ್ಲರಿಗೂ ಮಾದರಿಯಾಗಿ ಶಾಸ್ತ್ರೀಜಿ ನಿಲ್ಲುತ್ತಾರೆ.
ನಾನಕರ ಬೋಧನೆಯಿಂದ ತುಂಬಾ ಪ್ರಭಾವಕ್ಕೊಳಗಾದ ಶಾಸ್ತ್ರೀಜಿಯವರು, 1915ರಲ್ಲಿ ವಾರಾಣಸಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಮಹಾತ್ಮಾ ಗಾಂಧೀಜಿಯವರ ಭಾಷಣ ಕೇಳಿ, ಗಾಢವಾಗಿ ಪ್ರಭಾವಿತರಾಗಿ, ಅಂದಿನಿಂದಲೇ ಗಾಂಧೀಜಿಯವರ ಸರಳತೆಯನ್ನು ಮೈಗೂಡಿಸಿಕೊಂಡು, ಜೀವನಪರ್ಯಂತ ಹಾಗೆಯೇ ಬಾಳಿದ ಮಹಾನ್ ವ್ಯಕ್ತಿ. ಒಬ್ಬ ರೈಲ್ವೇ ಸಚಿವರಾಗಿದ್ದಾಗ ಲೂ ರೈಲುಗಳಲ್ಲಿ ಎರಡನೇ ದರ್ಜೆಯ ಬೋಗಿ ಗಳಲ್ಲಿ ಪ್ರಯಾಣಿಸುತ್ತಿದ್ದರೆಂದರೆ ಅವರ ಸರಳತೆ ಅರ್ಥವಾಗುತ್ತದೆ. ಇಡೀ ರಾಷ್ಟ್ರದ ಪ್ರಧಾನಮಂತ್ರಿಯಾಗಿದ್ದಾಗಲೂ ತಮ್ಮದೇ ಆದ ಒಂದು ಸ್ವಂತ ಕಾರನ್ನು ಹೊಂದಿರಲಿಲ್ಲವೆಂದರೆ, ಒಂದು ಸಣ್ಣ ಅಧಿಕಾರ ಸಿಕ್ಕರೆ ಅಥವಾ ಒಂದಿಷ್ಟು ಕಾಸಿದ್ದರೆ ಕಾರಿನಲ್ಲೇ ಓಡಾಡಬೇಕೆಂದು ತರತರದ ಕಾರುಗಳನ್ನು ಕೊಳ್ಳುವವರ ಮುಂದೆ ಶಾಸ್ತ್ರೀಜಿಯವರು ಸರಳತೆಯ ಮೇರು ಪರ್ವತದಂತೆ ಕಾಣುತ್ತಾರೆ. ದೇಶದ ಗೃಹಸಚಿವನಾಗಿದ್ದೂ ಒಂದು ಸ್ವಂತ ಮನೆಯನ್ನೂ ಕಟ್ಟಿಸಿಕೊಂಡಿರಲಿಲ್ಲವೆಂಬುದು ಸೋಜಿಗವೇ ಸರಿ.
ಒಬ್ಬ ಸಚಿವರಾದಾಗಲೂ ಅಡುಗೆ ಮಾಡಲು ಒಬ್ಬ ಅಡುಗೆಯವರನ್ನು ನೇಮಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಬದುಕುತ್ತಿದ್ದರೆಂದರೆ ಅವರ ಸರಳತೆಗೆ, ಸ್ವತ್ಛ ರಾಜಕಾರಣಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲವೆನಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಪ್ರಯುಕ್ತ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅಂದರೆ 1942ರಲ್ಲಿ ತನ್ನ ಸ್ವಂತ ಮಗಳು ತೀವ್ರ ಅನಾರೋಗ್ಯಕ್ಕೊಳಗಾದಾಗ ವೈದ್ಯರು ಬರೆದು ಕೊಟ್ಟ ಔಷಧಗಳನ್ನು ಕೊಡಿಸಲು ಬೇಕಾದ ಹಣವಿಲ್ಲದೆ, ಮಗಳನ್ನು ಕಳೆದುಕೊಳ್ಳುವಷ್ಟು ಬಡತನದಲ್ಲಿ ಶಾಸ್ತ್ರೀಜಿಯವರು ಬದುಕಿದ್ದರೆಂದರೆ ಅಧಿಕಾರದಲ್ಲಿ ಅವರ ಪ್ರಾಮಾಣಿಕತೆ ಎದ್ದುಕಾಣುತ್ತದೆ.
ಸ್ವಾರ್ಥ ರಾಜಕಾರಣವೇ ತುಂಬಿರುವ ರಾಜಕಾರಣಿ ಗಳ ನಡುವೆ, ಒಬ್ಬ ಪ್ರಧಾನ ಮಂತ್ರಿಯಾಗಿ, ದೇಶದಲ್ಲಿ ಆಹಾರ ಕೊರತೆಯಾದಾಗ, ದೇಶದ ಜನರಿಗೆಲ್ಲ ಒಂದು ಹೊತ್ತು ಊಟ ತ್ಯಜಿಸುವಂತೆ ಕರೆ ನೀಡುವುದರ ಜತೆಗೆ, ತಾವು ಮತ್ತು ತಮ್ಮ ಕುಟುಂಬದವರೆಲ್ಲರೂ ಕೇವಲ ಒಂದು ಹೊತ್ತು ಊಟ ಮಾಡುತ್ತಿದ್ದ ಶಾಸ್ತ್ರೀಜಿ ಎಂದೆಂದಿಗೂ ಎಲ್ಲ ನಾಯಕರಿಗೂ ಮಹಾನ್ ಮಾದರಿ.
ಭಾರತ ದೇಶವು ವಿಷಮ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಿ ಸುಮಾರು ಒಂದೂವರೆ ವರ್ಷದ ಅಧಿಕಾರದ ಅವಧಿಯಲ್ಲಿ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿ, ಗೆದ್ದವರು ಶಾಸ್ತ್ರೀಜಿಯವರು. ಸುಖಾಸುಮ್ಮನೆ ಜಗಳಕ್ಕೆ ಬಂದ ನೆರೆ ರಾಷ್ಟ್ರ ಪಾಕಿಸ್ಥಾನದ ಮೇಲೆ ಯುದ್ಧ ಸಾರಿ, ಗೆದ್ದವರು. ಅಮೆರಿಕದಿಂದ ಆಮದಾಗುತ್ತಿದ್ದ ಕಳಪೆ ಮಟ್ಟದ ಗೋಧಿಯನ್ನು ನಿಷೇಧಿಸಿ, ನಮ್ಮದೇ ದೇಶದ ರೈತರಿಗೆ ಬೆಳೆ ಬೆಳೆಯಲು ಹುರಿದುಂಬಿಸಿ “ಜೈ ಜವಾನ್, ಜೈ ಕಿಸಾನ್” ಎಂದು ಕರೆ ನೀಡಿ, ಆಹಾರ ವಸ್ತುಗಳಲ್ಲಿ ಸ್ವಾವಲಂಬಿ ದೇಶವನ್ನಾಗಿ ಮಾಡಹೊರಟ ಹೋರಾಟಗಾರ.
ಇಂತಹ ಆದರ್ಶಪ್ರಾಯ ವ್ಯಕ್ತಿಗಳು ಇಂದು ಕಣ್ಣಿಗೂ ಕಾಣದಂತಿರುವುದು, ಇವರ ಆದರ್ಶಗಳನ್ನು ಕೇವಲ ಜನ್ಮದಿನಾಚರಣೆ ದಿನ ನೆನೆದು ಮತ್ತೆ ಮರೆತುಬಿಟ್ಟು, ಅಪ್ರಾಮಾಣಿಕತೆ, ಭ್ರಷ್ಟಾಚಾರ, ಆರಾಜಕತೆಗಳ ಕೂಪದಲ್ಲಿಯೇ ಮುಳುಗೇಳುತ್ತಿರುವುದು ಇಂದಿನ ಅನೇಕ ನಾಯಕರ ದಿನಚರಿಯಾಗಿದೆ. ಇನ್ನಾದರೂ ಶಾಸ್ತ್ರೀಜಿಯವರ ಆದರ್ಶ ನಮ್ಮ ನಾಯಕರ ಮೈಮನಗಳಲ್ಲಿ ಒಡಮೂಡಿ, ಎದ್ದು ನಿಂತರೆ ಭಾರತದ ಭ್ರಷ್ಟಾಚಾರ, ಅಪ್ರಾಮಾಣಿಕತೆಗಳು ತೊಲಗಿ, ಭಾರತವು ವಿಶ್ವಗುರುವಾಗಬಹುದು.
ರಾಘವೇಂದ್ರ ಈ ಹೊರಬೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.