![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 27, 2023, 2:17 PM IST
ಶಿಕಾರಿಪುರ: ಒಳ ಮೀಸಲಾತಿಯಲ್ಲಿ ಅನ್ಯಾಯ ಖಂಡಿಸಿ ನಡೆಸುತ್ತಿದ್ದ ಹೋರಾಟ ತೀವ್ರತೆ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ಶಿಕಾರಿಪುರದ ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಅಲ್ಲದೆ ಪಟ್ಟಣದಲ್ಲಿ ಅಳವಡಿಸಿದ್ದ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ. ಇತ್ತೀಚಿಗೆ ಒಳ ಮೀಸಲಾತಿ ಘೋಷಿಸಲಾಗಿದ್ದು, ಇದರಲ್ಲಿ ಅನ್ಯಾಯ ಆಗಿದೆ ಎಂದು ಬಂಜಾರ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕಲ್ಲು ತೂರಾಟ, ಟೈರ್‌ಗೆ ಬೆಂಕಿ ಹಚ್ಚಲಾಗಿದೆ.
ಅಂಬೇಡ್ಕರ್ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕೆಲವರು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಬ್ಯಾನರ್‌ಗಳನ್ನು ಕಿತ್ತೊಗೆದರು: ಶಿಕಾರಿಪುರದ ಮಿನಿ ವಿಧಾನಸೌಧ, ಬಸ್ ನಿಲ್ದಾಣದ ಬಳಿ ಬಂಜಾರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದರು. ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕೆಲವರು ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಬ್ಯಾನರ್, ಫ್ಲೆಕ್ಸ್‌ಗಳನ್ನು ಕಿತ್ತೊಗೆದಿದ್ದಾರೆ. ಈ ವೇಳೆ ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಮನೆಯತ್ತ ಕಲ್ಲು: ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯತ್ತ ಕಲ್ಲು ತೂರಾಟ ಮಾಡಲಾಗಿದೆ. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಶಿಕಾರಿಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಪೊಲೀಸರಿಗೆ ಗಾಯವಾಗಿದೆ ಎನ್ನಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.