ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ
Team Udayavani, Jan 24, 2022, 6:45 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಮುಂದಿನ 2 ವರ್ಷಗಳಲ್ಲಿ ಶಿರಾಡಿಘಾಟ್ ಮೇಲ್ದರ್ಜೆಗೇರಿ ಸಲು ಉದ್ದೇಶಿತ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ಹಾಗೊಂದು ವೇಳೆ ಯಾವುದೇ ಪರ್ಯಾಯಗಳಿಲ್ಲದೆ, ಶಿರಾಡಿಘಾಟ್ ಸ್ಥಗಿತಗೊಳಿಸಿದರೆ, ರಾಜ್ಯದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕೆಯ ಸಂಪರ್ಕ ಕೊಂಡಿಯೇ ಕಳಚಿದಂತಾಗಲಿದೆ.
ರಾಜ್ಯದಲ್ಲಿ ಆಮದು ಮತ್ತು ರಫ್ತು ಹಾಗೂ ವಾಣಿಜ್ಯ ಸರಕು ಸಾಗಣೆಗೆ ಇದೇ ಮಂಗಳೂರು ಬಂದರು ಪ್ರಮುಖ ಕೇಂದ್ರ ಬಿಂದು ಆಗಿದೆ. ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ರಾಜ್ಯದ ನಾನಾ ಭಾಗಗಳಿಂದ ಉತ್ಪನ್ನಗಳು ಈ ಬಂದರಿನ ಮೂಲಕ ರಫ್ತಾಗುತ್ತವೆ. ಅದೇ ರೀತಿ, ಬೇರೆ ಬೇರೆ ಜಿಲ್ಲೆಗಳಿಗೆ ಸರಬರಾಜು ಕೂಡ ಆಗುತ್ತದೆ. ಈ ಎಲ್ಲ ವಹಿವಾಟಿಗೆ ಶಿರಾಡಿಘಾಟ್ ಮೂಲಕ ಹಾದುಹೋಗುವ ರಸ್ತೆಯು ಸಂಪರ್ಕ ಸೇತುವೆಯಾಗಿದೆ. ಈಗ ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ, ಪರೋಕ್ಷವಾಗಿ ರಾಜ್ಯದ ಒಟ್ಟಾರೆ ಆಂತರಿಕ ವೃದ್ಧಿ ದರದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವರ್ಷಗಟ್ಟಲೆ ಹೀಗೆ ಅಭಿವೃದ್ಧಿಗಾಗಿ ಒಂದು ಪ್ರಮುಖ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡರೆ, ಸಹಜವಾಗಿ ಅದು ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಿಂತ ಹೆಚ್ಚಾಗಿ ಮಂಗ ಳೂರು ಬಂದರು ಮೂಲಕ ಆಗುವ ವ್ಯಾಪಾರ-ವಹಿವಾಟು ನೆರೆಯ ತಮಿಳುನಾಡಿನ ಚೆನ್ನೈ, ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಅಥವಾ ಮಹಾರಾಷ್ಟ್ರದ ಮುಂಬೈ ಬಂದರಿಗೆ “ಶಿಫ್ಟ್’ ಆಗುವ ಸಾಧ್ಯತೆ ಇದೆ. ಈಗಾಗಲೇ ಹಲವು ಕಾರಣಗಳಿಗಾಗಿ ಹೀಗೆ ಸ್ಥಳಾಂತರ ಆಗಿದ್ದುಂಟು. ಈಗ ಮತ್ತಷ್ಟು ಪೆಟ್ಟುಬೀಳಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಮಾಜಿ ಅಧ್ಯಕ್ಷ ಜೆ. ಕ್ರಾಸ್ಟಾ ಕಳವಳ ವ್ಯಕ್ತಪಡಿಸುತ್ತಾರೆ.
ಮಂಗಳೂರು ಬಂದರು ಮೂಲಕ ಬೆಂಗಳೂರು ಸೇರಿ ವಿವಿಧ ಭಾಗಗಳಿಗೆ ಅದಿರು, ರಾಸಾಯನಿಕ ಉತ್ಪನ್ನಗಳು, ಪೇಪರ್ ಸೇರಿ ಹಲವು ಉತ್ಪನ್ನಗಳು ಪೂರೈಕೆ ಆಗುತ್ತವೆ. ಅಲ್ಲದೆ, ನಿತ್ಯ ಸಾವಿರಕ್ಕೂ ಅಧಿಕ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಈ ಮಾರ್ಗದ ಮೂಲಕ ಕಾರ್ಯಾಚರಣೆ ಮಾಡುತ್ತವೆ. ಉಡುಪಿಯಿಂದ ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ಬರಬಹುದು. ಅದೇ ರೀತಿ, ಮಂಗಳೂರಿನಿಂದ ಕೊಡಗು, ಮೈಸೂರು ಮೂಲಕವೂ ಪರ್ಯಾಯ ಮಾರ್ಗವಿದೆ. ಆದರೆ, ಈ ಎರಡೂ ಮಾರ್ಗಗಳು ತುಂಬಾ ಕಿರಿದಾಗಿವೆ. ಲಾರಿಗಳ ಸಂಚಾರಕ್ಕೆ ಸೂಕ್ತವಾಗಿಲ್ಲ. ಈ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ರೈಲುಗಳ ಸಂಖ್ಯೆ ಹೆಚ್ಚಿಸಬೇಕು. ಉಡಾನ್ ಯೋಜನೆಯಡಿ ವಿಮಾನ ಸೌಲಭ್ಯಗಳನ್ನು ಕಲ್ಪಿಸಬೇಕು. ಆಗ ಹೆಚ್ಚು ಸಮಸ್ಯೆ ಆಗದು ಎಂದು ಎಫ್ಕೆಸಿಸಿಐ ಮತ್ತೂಬ್ಬ ಮಾಜಿ ಅಧ್ಯಕ್ಷ ಜೆ.ಆರ್. ಬಂಗೇರಾ ಸಲಹೆ ಮಾಡುತ್ತಾರೆ.
ಭವಿಷ್ಯದ ದೃಷ್ಟಿಯಿಂದ ಸ್ವಾಗತ
ಭವಿಷ್ಯದ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆ ದೃಷ್ಟಿಯಿಂದ ಶಿರಾಡಿಘಾಟ್ ರಸ್ತೆ ಮೇಲ್ದರ್ಜೆಗೇರಿ ಸುತ್ತಿರುವುದು ಸ್ವಾಗತಾರ್ಹ. ಆದರೆ, ಪ್ರಸ್ತುತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಕೈಗಾರಿಕಾ ವಲಯಕ್ಕೆ ಇದು ತುಸು ವ್ಯತ್ಯಯ ಉಂಟುಮಾಡಲಿದೆ. ಭವಿಷ್ಯದ ದೃಷ್ಟಿ ಇಟ್ಟುಕೊಂಡು ಬೆಂಗಳೂರಿನ ಪೀಣ್ಯದಲ್ಲಿ ನಿರ್ಮಿಸಿರುವ ತುಮಕೂರು ರಸ್ತೆ ಫ್ಲೈಓವರ್ ಈಗಲೂ ಕೈಗಾರಿಕೆಗಳಿಗೆ ಎಷ್ಟು ಸಮಸ್ಯೆ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇನೇ ಇರಲಿ, ಪರ್ಯಾಯ ಮಾರ್ಗಗಳಿಲ್ಲದಿದ್ದರೆ ಪ್ರಯಾಣಿಕರ ಸಂಚಾರ, ಸರಕು-ಸಾಗಣೆ ಎರಡೂ ವಲಯಗಳಿಗೆ ಸಮಸ್ಯೆ ಆಗಲಿದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಒಕ್ಕೂಟ (ಎಫ್ಐಸಿಸಿಐ-ಫಿಕ್ಕಿ) ಕರ್ನಾಟಕ ಘಟಕದ ಕಾರ್ಯನಿರ್ವಾಹಕ ಸದಸ್ಯೆ ಉಮಾ ರೆಡ್ಡಿ ತಿಳಿಸುತ್ತಾರೆ.
ಪರ್ಯಾಯಗಳಿಲ್ಲದೆ ಶಿರಾಡಿಘಾಟ್ ಸ್ಥಗಿತಗೊಂಡರೆ, ಮಂಗಳೂರು ಬಂದರಿನ ವಹಿವಾಟಿಗೆ ಹೊಡೆತಬೀಳುವ ಸಾಧ್ಯತೆ ಹೆಚ್ಚಿದೆ. ಹಾಗಂತ, ಅಭಿವೃದ್ಧಿಪಡಿಸುವುದು ಬೇಡ ಎಂದು ನಮ್ಮ ಅಭಿಪ್ರಾಯವಲ್ಲ; ಇದೆಲ್ಲದರ ಗಮನ ದಲ್ಲಿಟ್ಟುಕೊಂಡು ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬ ಮನವಿ ಅಷ್ಟೇ ಎಂದು ಎಐಎಂಒ ಕರ್ನಾಟಕ ಘಟಕದ ಅಧ್ಯಕ್ಷ ಎಸ್. ಸಂಪತ್‌ರಾಮನ್ ಆಗ್ರಹಿಸುತ್ತಾರೆ.
ಏನೇನು ರಫ್ತು-ಆಮದು?
ರಾಜ್ಯದಿಂದ ಮಂಗಳೂರು ಬಂದರು ಮೂಲಕ ವಿವಿಧ ದೇಶಗಳಿಗೆ ಜವಳಿ, ಸಿದ್ಧ ಉಡುಪುಗಳು, ಚಿನ್ನಾಭರಣ, ಸಾಂಬಾರು ಪದಾರ್ಥಗಳು, ಕಾಫಿ, ಕೃಷಿ ಉತ್ಪನ್ನಗಳು ರಫ್ತು ಆಗುತ್ತವೆ. ಅದೇ ರೀತಿ, ಕಚ್ಚಾತೈಲ, ಪೆಟ್ರೋ ಲಿಯಂನ ಇತರೆ ಉತ್ಪನ್ನಗಳು, ಕಲ್ಲಿದ್ದಲು ಆಮದು ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅದು ಸಹಜವಾಗಿ ಬೆಂಗಳೂರಿಗೆ ಪೂರೈಕೆ ಆಗುತ್ತದೆ. ಇದೆಲ್ಲವೂ ಶಿರಾಡಿಘಾಟ್ ಮೂಲಕವೇ ಬರುತ್ತಿದೆ. ಪರ್ಯಾಯ ಮಾರ್ಗ ಗಳಿದ್ದರೂ, ರಸ್ತೆಗಳು ಅತ್ಯಂತ ಕಿರಿದಾಗಿವೆ. ಇನ್ನು ರೈಲುಗಳೂ ಸೀಮಿತವಾಗಿವೆ. ಹಾಗಾಗಿ, ಖಂಡಿತ ವಾಗಿಯೂ ವಾಣಿಜ್ಯ ಮತ್ತು ಕೈಗಾರಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಕ್ರಾಸ್ಟಾ ಆತಂಕ ವ್ಯಕ್ತಪಡಿಸುತ್ತಾರೆ.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.