ಕೋಡಶಿಂಗೆಯಲ್ಲಿ ಸೋಲಾರ್ ಗಾಣ, ಗಿರಣಿ; ಎರಡು ತಿಂಗಳಿಂದ ಪ್ರಾಯೋಗಿಕ ಆರಂಭ
ವಿದ್ಯುತ್ ಇಲ್ಲದೇ ಇದ್ರೂ ಎಣ್ಣೆ, ಮೆಣ್ಸು, ಅಕ್ಕಿ ಹಿಟ್ಟಾಗುತ್ತೆ!
Team Udayavani, Jun 30, 2022, 11:06 AM IST
ಶಿರಸಿ: ಇಲ್ಲಿ ತೆಂಗಿನ ಕೊಬ್ಬರಿ ಹಿಂಡಿ ಎಣ್ಣೆ, ಗರಿ ಗರಿಯ ಮೆಣಸನ್ನೂ ಹುಡಿ ಮಾಡುತ್ತಾರೆ, ಅಕ್ಕಿ, ಗೋಧಿ ಹಿಟ್ಟೂ ಸಮಯಕ್ಕೆ ಸಿದ್ಧವಾಗುತ್ತದೆ!
ಒಂದೇ ಸೂರಿನ ಅಡಿ ಇದೆಲ್ಲವೂ ಆಗುತ್ತದೆ. ಇಲ್ಲಿ ಕರೆಂಟ್ ಇಲ್ಲದಿದ್ದರೂ ಹಿಟ್ಟು, ಎಣ್ಣೆ ಎರಡೂ ಸಕಾಲಕ್ಕೆ ಸರಾಗವಾಗಿ ಇಲ್ಲಿನ ಯಂತ್ರ ಮಾಡುತ್ತದೆ. ಗ್ರಾಹಕರು ಹತ್ತಾರು ನಿಮಿಷದಲ್ಲಿ ತಮ್ಮ ಕೆಲಸ ಮುಗಿಸಿ ವಾಪಸ್ ಆಗುತ್ತಾರೆ!
ಇದೆಲ್ಲ, ನಗರದ ಮಾತಲ್ಲ, ಬದಲಿಗೆ ಹಳ್ಳಿಯಲ್ಲೂ ಇಂತಹ ಶ್ರಮಗಾಥೆ ಅರಳುತ್ತಿದೆ.
ಉತ್ತರ ಕನ್ನಡದ ಅತ್ಯಂತ ಗ್ರಾಮೀಣ ಭಾಗವಾಗಿ, ಸೂರ್ಯನ ಬಿಸಿಲೇ ಪೂರ್ಣ ಪ್ರಮಾಣದಲ್ಲಿ ಭುವಿಗೆ ತಲುಪಲು ಸಮಯ ಪಡೆದುಕೊಳ್ಳುವ ಹಳ್ಳಿಯಲ್ಲೂ ಸೂರ್ಯನಿಗೇ ಪ್ಲಗ್ ಹಾಕಿ ಒಂದು ಎಣ್ಣೆ, ಹಿಟ್ಟಿನ ಗಿರಣಿ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಇದೊಂದು ನೆರವಾದರೆ, ಈ ಕುಟುಂಬಕ್ಕೆ ಪೂರ್ಣ ಪ್ರಮಾಣದ ಆಸರೆಯಾಗುವಲ್ಲೂ ಹೊಂಗಿರಣವಾಗಿದೆ.
ಏನಿದು ಸೌರ ಗಿರಣಿ?
ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ, ಶಿರಸಿಗೆ ನೀರು ಪೂರೈಕೆ ಮಾಡುವ ಮಾರಿಗದ್ದೆ ದಾರಿಯಲ್ಲಿರುವ ಪುಟ್ಟ ಊರು ಕೋಡಶಿಂಗೆ. ಅಲ್ಲಿನ ರಸ್ತೆಯ ತಿರುವಿನಲ್ಲಿರುವ ಸುಬ್ರಾಯ ವೆಂ ಹೆಗಡೆ ಅವರ ಬದುಕೂ ಈಗ ಸೆಲ್ಕೋ ಸೋಲಾರ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಮತ್ತೊಂದು ಬೆಳಕಿನಡೆ ಹೊಸ ತಿರುವು ಪಡೆದಿದೆ.
ಸೆಲ್ಕೋ ಫೌಂಡೇಶನ್ ಹಾಗೂ ಕೆಡಿಸಿಸಿ ಬ್ಯಾಂಕ್ ನೆರವಿನಲ್ಲಿ ಒಂದು ಗಿರಣಿ ಆರಂಭಿಸಿದ್ದಾರೆ.
ದೂರದ ಶಿರಸಿ ಪೇಟೆಗೋ, ಕಾನಸೂರಿಗೋ ಹೋಗಿ ತೆಂಗಿನ ಎಣ್ಣೆ, ಅಕ್ಕಿ, ಮೆಣಸು, ಅರಸಿನ ಹಿಟ್ಟು ಮಾಡಿಕೊಂಡು ಬರಬೇಕಿದ್ದ ಕೋಡಶಿಂಗೆ, ಅಡಕಳ್ಳಿ, ಕೆರೆಗದ್ದೆ, ತಟ್ಟೀಕೈ, ತ್ಯಾರಗಲ್, ಸರಕುಳಿ ಭಾಗದ ಗ್ರಾಮೀಣ ಜನರು ಇಲ್ಲಿಗೆ ಬಂದು ತಮ್ಮ ಮನೆಯ ಕೆಲಸ ಪೂರ್ಣಗೊಳಿಸಿಕೊಂಡು ಹೋಗುತ್ತಿದ್ದಾರೆ. ಕೋಡಶಿಂಗೆ ಸುಬ್ರಾಯ ಹೆಗಡೆ ಅವರ ಮನೆಯಲ್ಲಿ ಎಣ್ಣೆ, ಗಿರಣಿ ಎರಡೂ ಆರಂಭವಾಗಿದೆ.
ಕರೆಂಟ್ ಇರದೇ ಇದ್ದರೂ ಇಲ್ಲಿ ಕೆಲಸ ಆಗುತ್ತದೆ! ಸೋಲಾರ್ ಶಕ್ತಿ ಈ ಯಂತ್ರಗಳನ್ನು ಓಡಿಸುತ್ತಿದೆ.
ಸೋಲಾರ್ ಪ್ಲಗ್!
ಸೂರ್ಯನ ಬಿಸಿಲು ಹಿಡಿಯಲು ಇವರ ಮನೆಯ ಮೇಲೆ 10 ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಸುಮಾರು 3200 ವ್ಯಾಟ್ ವಿದ್ಯುತ್ ಹಿದಡಿದುಕೊಳ್ಳಲು 18 ಎಎಚ್‌ನ 8 ಬ್ಯಾಟರಿ ಬಳಸಲಾಗಿದೆ. ಆರು ಕೇವಿ ಇನವರ್ಟರ್ ಇಲ್ಲಿ ಮೂರು ಪ್ರತ್ಯೇಕ ಯಂತ್ರ ನಡೆಯಲು ಸಹಾಯಕವಾಗಿದೆ.
ಕೋಲ್ಡ್ ಪ್ರೊಸೆಸ್‌ನಲ್ಲಿ ನಡೆಯುವ ದಿನಕ್ಕೆ ಕನಿಷ್ಠ 1 ಕ್ವಿಂಟಾಲ್ ತೆಂಗಿನ ಕೊಬ್ಬರಿಯನ್ನು ಎಣ್ಣೆ ಮಾಡಿಕೊಡುವ ಸಾಮರ್ಥ್ಯದ ಯಂತ್ರ ಓಡುತ್ತದೆ. ಮೆಣಸಿನ ಪುಡಿ, ಅರಸಿನ ಪುಡಿ, ಅಕ್ಕಿ ಹಿಟ್ಟು ಮಾಡುವ ಎರಡು ಪ್ರತ್ಯೇಕ ಯಂತ್ರಗಳೂ ಇವೆ. ಸುಮಾರು 6.50 ಲಕ್ಷ ರೂ. ತಗುಲಿದ್ದು, ಸೆಲ್ಕೋ ಅಳವಡಿಸಿದೆ.
ಸೆಲ್ಕೋ ಫೌಂಡೆಶನ್ 3.50 ಲಕ್ಷ ರೂ. ಸಹಾಯ ಧನದ ಮೂಲಕ ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ ನೀಡಿದೆ. ಸುಬ್ರಾಯ ಹೆಗಡೆ ಅವರು ಕೆಡಿಸಿಸಿ ಬ್ಯಾಂಕ್‌ನಲ್ಲಿ 3 ಲಕ್ಷ ರೂ. ಸಾಲ ಮಾಡಿದ್ದಾರೆ. ಈಗಾಗಲೇ ಎಣ್ಣೆಗಾನ, ಹಿಟ್ಟಿನ ಗಿರಣಿಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಸೆಲ್ಕೋದ ಸುಬ್ರಾಯ ಹೆಗಡೆ.
ಆಸಕ್ತರು ಗೃಹೋದ್ಯಮಿ ಸುಬ್ರಾಯ ಹೆಗಡೆ ಕೋಡಶಿಂಗೆ ಅವರನ್ನು 8277677276 ಸಂಪರ್ಕಿಸಬಹುದು.
ಶುದ್ದ ತೆಂಗಿನ ಎಣ್ಣೆ, ಹಿಟ್ಟಿಗೆ, ಮೆಣಸಿನ ಪುಡಿಗೆ ದೂರದ ಪೇಟೆಗೆ ಹೋಗುವದು ತಪ್ಪಿಸಲು ಸೆಲ್ಕೋ ನೆರವಾಗಿದೆ. ಜನರ ಸ್ಪಂದನೆ ಕೂಡ ಒಳ್ಳೆಯದಿದೆ. –ಸುಬ್ರಾಯ ಹೆಗಡೆ ಕೋಡಶಿಂಗೆ, ಮಾಲಕ
ಭರವಸೆಯ ವ್ಯವಸ್ಥೆಯಲ್ಲಿ ಗ್ರಾಮೀಣ ಅಗತ್ಯಗಳು ಪೂರೈಸುವಂತಾದರೆ ಮನುಷ್ಯನ ಅನಗತ್ಯ ಓಡಾಟ, ಶ್ರಮ, ಹಣ ಹಾಗೂ ಶಕ್ತಿ ಉಳಿತಾಯ ಆಗುತ್ತದೆ. ಇದೇ ಗ್ರಾಮೀಣ ಅಭಿವೃದ್ದಿ. ಇಂತಹದ್ದಕ್ಕೆ ತೆರಿಗೆ ವಿನಾಯತಿ ಅತೀ ಅಗತ್ಯ. – ಮೋಹನ ಭಾಸ್ಕರ ಹೆಗಡೆ, ಸಿಇಓ, ಸೆಲ್ಕೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.