ಶಿವಮೊಗ್ಗ: ಕ್ಷೇತ್ರ ಸ್ವಾಧೀನಕ್ಕೆ ಕೈ-ಕಮಲ ರಣತಂತ್ರ
Team Udayavani, Nov 19, 2021, 8:19 PM IST
ಶಿವಮೊಗ್ಗ: ವಿಧಾನ ಪರಿಷತ್‌ನಲ್ಲಿ ಬಹುಮತ ಸಾಧಿಸಲು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಚುನಾವಣೆ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಶಿವಮೊಗ್ಗ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಯಾರಿ ನಡೆಸಿವೆ.
ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡ ಶಿವಮೊಗ್ಗ ಜಿಲ್ಲೆಯ 6 ತಾಲೂಕು ಮತ್ತು ದಾವಣಗೆರೆ ಜಿಲ್ಲೆಯ 3 ತಾಲೂಕುಗಳನ್ನು ಒಳಗೊಂಡ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ರಣತಂತ್ರ ರೂಪಿಸುತ್ತಿದ್ದರೆ, ಬಿಜೆಪಿ ಪ್ರಾಬಲ್ಯದ ಮಧ್ಯೆಯೂ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರತಿತಂತ್ರ ಹೆಣೆಯುತ್ತಿದೆ. 2015 ನೇ ಡಿಸೆಂಬರ್ 27 ರಂದು ನಡೆದ ಚುನಾವಣೆಯಲ್ಲಿ ದ್ವಿತೀಯ ಪ್ರಾಶಸ್ತÂದಲ್ಲಿ 700 ಮತಗಳ ಅಂತರದಿಂದ ಕಾಂಗ್ರೆಸ್‌ನ ಆರ್.ಪ್ರಸನ್ನಕುಮಾರ್ ಜಯಗಳಿಸಿದ್ದರು.
ಅತಿ ಕಡಿಮೆ ಮತದಾರರನ್ನು ಹೊಂದಿದ್ದ ಜೆಡಿಎಸ್ ಅಭ್ಯರ್ಥಿ ನಿರಂಜನ್ ಅವರು ಬಿಜೆಪಿಯ ಆರ್.ಕೆ.ಸಿದ್ದರಾಮಣ್ಣ ಅವರನ್ನು ಮೂರನೇ ಸ್ಥಾನಕ್ಕೆ ಇಳಿಸಿದ್ದರು. ಇದರಿಂದ ಕಾಂಗ್ರೆಸ್ ಬಳಿಕ ಅತಿ ಹೆಚ್ಚು ಮತಗಳನ್ನು ಹೊಂದಿದ್ದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕಳೆದ ಆರು ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ. ಕ್ಷೇತ್ರದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಣ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೆ ಬಿಜೆಪಿ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದರೆ ಜೆಡಿಎಸ್ ಕಳೆದ ಚುನಾವಣೆಗಿಂತಲೂ ಕಳಪೆ ಸ್ಥಿತಿಯಲ್ಲಿದೆ.
ಮತಗಳ ಬಲಾಬಲ:
ಕ್ಷೇತ್ರದಲ್ಲಿ ಬಿಜೆಪಿಯ ಇಬ್ಬರು ಸಂಸದರು, 8 ಶಾಸಕರು, 3 ಎಂಎಲ್‌ಸಿಗಳು ಅಲ್ಲದೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ 115 ಖಚಿತ ಮತಗಳಿವೆ. ಇದರ ಮಧ್ಯೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸರಕಾರದ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಲಾಗಿದೆ. ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸರಕಾರದಿಂದ ನಾಮನಿರ್ದೇಶನಗೊಂಡ 26 ಸದಸ್ಯರಿದ್ದಾರೆ. ಭದ್ರಾವತಿ ನಗರಸಭೆ, ಶಿರಾಳಕೊಪ್ಪ ಪುರಸಭೆ, ಜೋಗ-ಕಾರ್ಗಲ್ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕಕ್ಕೆ ವಿಳಂಬವಾದ ಕಾರಣ ಬಿಜೆಪಿ ತಮ್ಮ ಅಭ್ಯರ್ಥಿಗೆ ಬರಬಹುದಾದ ಸುಮಾರು 20 ಮತಗಳನ್ನು ಕಳೆದುಕೊಂಡಿದೆ.
ಕಾಂಗ್ರೆಸ್‌ಗೆ ತಲಾ ಒಬ್ಬರು ಎಂಎಲ್‌ಎ, ಎಂಎಲ್‌ಸಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 79 ಮತಗಳು ಸೇರಿ 81 ಖಚಿತ ಮತಗಳಿವೆ. ಜೆಡಿಎಸ್‌ಗೆ ಮಾತ್ರ ಕೇವಲ 21 ಖಚಿತ ಮತಗಳಿವೆ. ಇದರ ನಡುವೆ 16 ಪಕ್ಷೇತರ ಸದಸ್ಯರಿದ್ದು ಇವರು ಯಾರನ್ನು ಬೆಂಬಲಿಸುತ್ತಾರೆ ಎಂಬ ಕುತೂಹಲವಿದೆ.
ಈ ಹಿಂದೆ ತಾಪಂನಲ್ಲಿ (ಹೊನ್ನಾಳಿ, ಚನ್ನಗಿರಿ ಸೇರಿ) ಕಾಂಗ್ರೆಸ್ 74, ಬಿಜೆಪಿ 54, ಜೆಡಿಎಸ್ 19 ಸದಸ್ಯರನ್ನು ಹೊಂದಿತ್ತು. ಈ ಬಾರಿ ಅ ಧಿಕಾರವಿಲ್ಲದ ಕಾರಣ ಅಷ್ಟು ಮತಗಳು ಕೈ ತಪ್ಪಲಿವೆ. ಅದೇ ರೀತಿ ಜಿಪಂನಲ್ಲಿ ಬಿಜೆಪಿ 15, ಕಾಂಗ್ರೆಸ್ 8, ಜೆಡಿಎಸ್ 7, ಒಬ್ಬರು ಪಕ್ಷೇತರ ಸದಸ್ಯರಿದ್ದರು. ಕ್ಷೇತ್ರದಲ್ಲಿ ದಾವಣಗೆರೆ ಜಿಲ್ಲೆಯ 3 ತಾಲೂಕುಗಳಿಂದ 1245 ಮತ್ತು ಶಿವಮೊಗ್ಗ ಜಿಲ್ಲೆಯ 6 ತಾಲೂಕುಗಳಿಂದ 2653 ಸದಸ್ಯರು ಸೇರಿ 9 ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳ 3898 ಸದಸ್ಯರು ಇದ್ದಾರೆ.
ಅಭ್ಯರ್ಥಿಗಳು ಯಾರು?
ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ಆರ್.ಪ್ರಸನ್ನಕುಮಾರ್ ಬಿ ಫಾರಂ ಸಿಗುವ ವಿಶ್ವಾಸದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ಮುಖಂಡ ಜಿಲ್ಲಾ ಸೇವಾದಳ ಅಧ್ಯಕ್ಷ ವೈ.ಎಚ್. ನಾಗರಾಜ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಮಾಜಿ ಎಂಎಲ್‌ಸಿ ಆರ್.ಕೆ. ಸಿದ್ದರಾಮಣ್ಣ, ಭದ್ರಾ ಕಾಡಾ ಮಾಜಿ ಅಧ್ಯಕ್ಷ ಗಿರೀಶ್ ಪಟೇಲ್ ಹಾಗೂ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಮಗ ಮತ್ತು ರಾಜ್ಯ ಆರ್ಯವೈಶ್ಯ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಅವರು ಆಕಾಂಕ್ಷಿಗಳಾಗಿದ್ದಾರೆ.
ಆರ್.ಕೆ. ಸಿದ್ದರಾಮಣ್ಣ ಅವರಿಗೆ ಎರಡು ಬಾರಿ ಅವಕಾಶ ನೀಡಲಾಗಿದೆ. ಬಹಳಷ್ಟು ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯಿತರಿಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಗಿರೀಶ್ ಪಟೇಲ್ ಅವರ ಬದಲಿಗೆ ಹಿಂದುಳಿದ ವರ್ಗ ಆರ್ಯವೈಶ್ಯ ಸಮಾಜದ ಅರುಣ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿದೆ. ಪಕ್ಷದ ರಾಜ್ಯ ಘಟಕವು ಅರುಣ್ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಜೆಡಿಎಸ್ ಸಹ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಬಿಜೆಪಿಗೆ ಪ್ರಬಲರ ಬಲ
ಕ್ಷೇತ್ರದಲ್ಲಿ ಬಿಜೆಪಿ ಮೇಲ್ನೋಟಕ್ಕಷ್ಟೇ ಅಲ್ಲದೆ ಮತಗಳ ಲೆಕ್ಕದಲ್ಲೂ ಪ್ರಬಲವಾಗಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಜಿ.ಎಂ. ಸಿದ್ದೇಶ್, ಬಿ.ವೈ. ರಾಘವೇಂದ್ರ, ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಹರತಾಳು ಹಾಲಪ್ಪ, ಮಾಡಾಳು ವಿರೂಪಾಕ್ಷಪ್ಪ ಅವರ ಬಲ ಪಕ್ಷಕ್ಕಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಅವಕಾಶವೂ ಬಿಜೆಪಿಗೆ ಹೆಚ್ಚಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.