Madhya Pradesh: ಹೃದಯ ಗೆದ್ದು ಬೀಗಿದ ಶಿವರಾಜ: ಬಿಜೆಪಿಯ ಅಮೋಘ ಗೆಲುವಿನ ಡಮರುಗ
ಕಮಾಲ್ ಮಾಡದ ಕಮಲ್; ಕಾಂಗ್ರೆಸ್‌ಗೆ ಭಾರೀ ಮುಖಭಂಗ
Team Udayavani, Dec 3, 2023, 11:30 PM IST
ಬಿಜೆಪಿಯ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣವಾಗುವ ಮೂಲಕ “ಅಸಾಧ್ಯ”ವಾದುದನ್ನು ಸಾಧಿಸಿದ್ದಾರೆ.
ಆಡಳಿತ ವಿರೋಧಿ ಅಲೆ ಬಿಜೆಪಿಯನ್ನು ಮುಳುಗಿಸಲಿದೆ ಎಂಬ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿದ್ದು, ಮತದಾರರು ಮತ್ತೂಮ್ಮೆ ಶಿವ”ರಾಜ”ನಿಗೆ ಪಟ್ಟ ಕಟ್ಟಿದ್ದಾರೆ. 230 ಸದಸ್ಯಬಲದ ವಿಧಾನಸಭೆ ಯಲ್ಲಿ ಬಿಜೆಪಿಯ 163 ಶಾಸಕರು ವಿರಾಜಮಾನರಾಗಲಿದ್ದು, ಪಕ್ಷವು ಭರ್ಜರಿ ಬಹುಮತ ಗಳಿಸುವ ಮೂಲಕ ಗೆಲುವಿನಲ್ಲೂ “ದಾಖಲೆ’ ಬರೆದಿದೆ. “ಮಧ್ಯಪ್ರದೇಶ ನಮಗೆ ಸುಲಭದ ತುತ್ತು’ ಎಂದು ಭಾವಿಸಿದ್ದ ಕಾಂಗ್ರೆಸ್‌ನದ್ದು “ಆಮೆ ಮತ್ತು ಮೊಲದ ಕಥೆ”ಯಂತಾಗಿದ್ದು, ಕೇವಲ 66ಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಚೌಹಾಣ್ ಪ್ರಭಾವ ಮತ್ತು ಕಲ್ಯಾಣ ಯೋಜನೆಗಳು ಬಿಜೆಪಿ ಗೆಲುವಿಗೆ ಕಾರಣವಾದರೆ, ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದೂ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಬಿಜೆಪಿಯು 2022ರಿಂದಲೇ ಚುನಾವಣೆಗೆ ಸಿದ್ಧತೆ ಆರಂಭಿಸಿತ್ತು. ಕಳೆದ ಚುನಾವಣೆಯಲ್ಲಿ ಸೋತಿದ್ದ ಕ್ಷೇತ್ರಗಳಿಗೆ ಮುಂಚಿತವಾಗಿಯೇ ಅಭ್ಯರ್ಥಿಗಳನ್ನು ಪ್ರಕಟಿಸಿತು. ಕೇಂದ್ರ ಸಚಿವ ಅಮಿತ್ ಶಾ ರಾಜ್ಯದ ಪ್ರತಿ ವಲಯಕ್ಕೂ ತೆರಳಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದರು. ಬೇರುಮಟ್ಟದ ಸಂಘಟನೆ, ಮನೆ ಮನೆ ಭೇಟಿ, ಮತದಾರರ ಸಂಪರ್ಕವು ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸುವಲ್ಲಿ ಬಿಜೆಪಿಗೆ ನೆರವಾಯಿತು.
ಗೆಲ್ಲಿಸಿದ ಮಾತೃಶಕ್ತಿ: ಬಿಜೆಪಿಯ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಹಿಳಾ ಮತದಾರರು. ಚುನಾವಣೆಯಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರ ಅರಿತೇ ಬಿಜೆಪಿ ಮಹಿಳಾಕೇಂದ್ರಿತ ಯೋಜನೆಗಳನ್ನು ಜಾರಿ ಮಾಡಿತು. ಲಾಡ್ಲಿ ಬೆಹನಾ, ಲಾಡ್ಲಿ ಲಕ್ಷ್ಮಿ ಮುಂತಾದ ಯೋಜನೆಗಳು ಪಕ್ಷದ ಕೈಹಿಡಿದವು.
ಮೋದಿ ಫ್ಯಾಕ್ಟರ್: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರಧಾನಿ ಮೋದಿ ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡಿದರು. ಚುನಾವಣೆ ಸಮಯದಲ್ಲೂ 14ಕ್ಕೂ ಅಧಿಕ ರ್ಯಾಲಿಗಳು, ರೋಡ್‌ಶೋಗಳನ್ನು ನಡೆಸಿ, ಡಬಲ್ ಎಂಜಿನ್ ಸರ್ಕಾರದ ಲಾಭಗಳನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. ಹಿಂದಿ ಹಾರ್ಟ್‌ಲ್ಯಾಂಡ್‌ನಲ್ಲಿ ಪಕ್ಷದ ಹಿಡಿತ ಎಲ್ಲೂ ಸಡಿಲವಾಗದಂತೆ ನೋಡಿಕೊಂಡರು.
ಕೇಂದ್ರ ಸಚಿವರ ಎಂಟ್ರಿ: ಕೆಲ ತಿಂಗಳ ಹಿಂದೆ, ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದರ ಅರಿವಿದ್ದ ಬಿಜೆಪಿ ಹೈಕಮಾಂಡ್, ಈ ಅಲೆಗೆ ಬ್ರೇಕ್ ಹಾಕುವ ಸಲುವಾಗಿಯೇ ಕೇಂದ್ರದ ಮೂವರು ಸಚಿವರನ್ನು ಕಣಕ್ಕಿಳಿಸಿತು. ಜತೆಗೆ, ಯಾರನ್ನೂ ಸಿಎಂ ಅಭ್ಯರ್ಥಿ ಎಂದು ಬಿಂಬಿಸದೇ, “ಮೋದಿ ವರ್ಚಸ್ಸಿಗೆ ಮತ ಹಾಕಿ’ ಎಂದು ಹೇಳಿಕೊಂಡೇ ಚುನಾವಣೆ ಎದುರಿಸಿ ಗೆಲುವಿನ ನಗೆ ಬೀರಿತು. ಹಲವು ಪ್ರದೇಶಗಳಲ್ಲಿ ಜ್ಯೋತಿರಾದಿತ್ಯ ಸಿಂದಿಯಾ “ಪ್ರಭಾವ’ವೂ ಕೆಲಸ ಮಾಡಿತು.
ಮುಗ್ಗರಿಸಿದ ಕಾಂಗ್ರೆಸ್: 2003ರಿಂದ ಸೋಲಿನ ರುಚಿ ಅನುಭವಿಸುತ್ತಿದ್ದರೂ ಕಾಂಗ್ರೆಸ್ ಎರಡನೇ ಹಂತದ ನಾಯಕರನ್ನು ಬೆಳೆಸಲೇ ಇಲ್ಲ. 2018ರಲ್ಲಿ 114 ಸೀಟು ಗೆದ್ದರೂ, ಜ್ಯೋತಿರಾದಿತ್ಯ ಸಿಂದಿಯಾ ಅವರು 20 ಶಾಸಕರೊಂದಿಗೆ ಗುಡ್‌ಬೈ ಹೇಳಿದ ಬಳಿಕವೂ ಕಾಂಗ್ರೆಸ್ ಕಮಲ್‌ನಾಥ್‌ರನ್ನು ನೆಚ್ಚಿಕೊಂಡಿತೇ ಹೊರತು, ಹೊಸ ಯುವ ಮುಖಗಳಿಗೆ ಆದ್ಯತೆ ನೀಡಲಿಲ್ಲ. ಮ.ಪ್ರದೇಶದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಭ್ರಮೆ ಹಾಗೂ ಅತಿಯಾದ ಆತ್ಮವಿಶ್ವಾಸ ಪಕ್ಷಕ್ಕೆ ಅತಿದೊಡ್ಡ ಮುಖಭಂಗ ಉಂಟುಮಾಡಿದೆ. ಈಗ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದ್ದು, ಮಧ್ಯಪ್ರದೇಶವು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗದ ಸೋಲನ್ನು ಕಲ್ಪಿಸಿದೆ. ಇಂಥ ಸೋಲಿನಿಂದ ಹೊರಬರಬೇಕೆಂದರೆ ರಾಹುಲ್ ಗಾಂಧಿಯವರು ಎಲ್ಲ ರಾಜ್ಯಗಳಲ್ಲೂ ಒಬ್ಬ “ರೇವಂತ್ ರೆಡ್ಡಿ’ಯನ್ನು ಗುರುತಿಸಬೇಕಾಗಿದೆ.
ಬಿಜೆಪಿ ಗೆಲುವಿಗೆ ಕಾರಣ
-ಪ್ರಧಾನಿ ಮೋದಿ ಕೇಂದ್ರಿತ ಪ್ರಚಾರ. “ಮೋದಿ ಕೆ ಮನ್ ಮೆ ಎಂಪಿ, ಎಂಪಿ ಕೆ ಮನ್ ಮೆ ಮೋದಿ’ ಎಂಬ ಘೋಷವಾಕ್ಯದೊಂದಿಗೇ ಹೋರಾಟಕ್ಕಿಳಿ ದಿದ್ದು. ಮೋದಿಯವರ 14 ರ್ಯಾಲಿಗಳು.
-ಲಾಡ್ಲಿ ಬೆಹನಾ, ಕಿಸಾನ್ ಸಮ್ಮಾನ್ ನಿಧಿಯಂತಹ ಯೋಜನೆಗಳ ಮೂಲಕ ಮಹಿಳೆಯರು, ದಲಿತರು, ಬುಡಕಟ್ಟು ಮತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು.
-ಡಬಲ್ ಎಂಜಿನ್ ಸರ್ಕಾರದಿಂದ ಅನುಕೂಲ ಜಾಸ್ತಿ ಎಂಬುದನ್ನು ಬಿಂಬಿಸಿದ್ದು. ಅಮಿತ್ ಶಾ ಕಾರ್ಯತಂತ್ರ
-ಬೂತ್ ಮಟ್ಟದಲ್ಲಿ ಮತದಾರರನ್ನು ಸಂಪರ್ಕಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಯಶಸ್ವಿಯಾದದ್ದು.
-2022ರಲ್ಲೇ ಸಕ್ರಿಯಗೊಂಡು, ಕಳೆದ ಚುನಾವಣೆ ಯಲ್ಲಿ ಸೋತ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಿದ್ದು ಮತ್ತು ಹೊಸ ಅಭ್ಯರ್ಥಿಗಳನ್ನು ಘೋಷಿಸಿದ್ದು.
-ಸಂಸದರಿಗೆ ಟಿಕೆಟ್ ನೀಡಿ, ಅವರ ಕ್ಷೇತ್ರದ ಜತೆಗೆ ಸುತ್ತಲಿನ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದ್ದು.
ಕಾಂಗ್ರೆಸ್ ಸೋಲಿಗೆ ಕಾರಣ
– ಕರ್ನಾಟಕದ ಮಾದರಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸಿದರೂ, ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ವಿಫಲವಾಗಿದ್ದು.
– ಪ್ರಚಾರದ ವೇಳೆ ಕೇವಲ ಸಾಮಾಜಿಕ ಮಾಧ್ಯಮ ಗಳನ್ನು ನೆಚ್ಚಿಕೊಂಡಿದ್ದು. ಬೇರು ಮಟ್ಟದಲ್ಲಿ ಜನರನ್ನು ಸಂಪರ್ಕಿಸುವಲ್ಲಿ ವಿಫಲವಾಗಿದ್ದು.
– ನಾಯಕರ ಒಳಜಗಳಗಳನ್ನು ಶಮನಗೊಳಿಸುವಲ್ಲಿ ಹೈಕಮಾಂಡ್ ತೋರಿದ ನಿರ್ಲಕ್ಷ್ಯ
– ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ “ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆ ಹಿಂದಿ ಭಾಷಿಕ ರಾಜ್ಯದ ಜನರನ್ನು ಘಾಸಿಗೊಳಿಸಿದ್ದು.
– ಎಸ್‌ಪಿ ನಾಯಕ ಅಖೀಲೇಶ್ ಸೇರಿದಂತೆ ಐಎನ್‌ಡಿಐಎ ಮೈತ್ರಿಕೂಟದ ಪಕ್ಷಗಳನ್ನು ಕಡೆಗಣಿಸಿದ್ದು.
ಹಲವು ಸವಾಲುಗಳಿದ್ದರೂ ಅತಿಯಾದ ಆತ್ಮವಿಶ್ವಾಸ. ಕಮಲ್‌ನಾಥ್, ದಿಗ್ವಿಜಯ್ ಸಿಂಗ್‌ರಂಥ ಹಳೆ ಕುದುರೆಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದು.
ಪ್ರಚಾರ ನಡೆಸದೇ ಗೆದ್ದರು!
“ಪ್ರಚಾರವನ್ನೇ ನಡೆಸದ ವೀರ’ ಎಂಬ ಖ್ಯಾತಿಗೆ ಪಾತ್ರವಾಗಿರುವ ಬಿಜೆಪಿ ನಾಯಕ ಗೋಪಾಲ್ ಭಾರ್ಗವ ರೆಹ್ಲಿ ಕ್ಷೇತ್ರದಲ್ಲಿ ಸತತ 9ನೇ ಬಾರಿಗೆ ಗೆಲುವಿನ ಮಾಲೆ ಧರಿಸಿದ್ದಾರೆ. ಭಾರ್ಗವ(71) ಅವರು 72,800 ಮತಗಳಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. 1985ರಿಂದ ಅಂದರೆ ಕಳೆದ 38 ವರ್ಷಗಳಿಂದಲೂ ಇವರಿಗೆ ಗೆಲುವು ಕಾಯಂ ಆಗಿದೆ.
7 ಬಾರಿ ಶಾಸಕನಿಗೆ ಸೋಲು
ಮಧ್ಯಪ್ರದೇಶ ಪ್ರತಿಪಕ್ಷ ನಾಯಕ ಗೋವಿಂದ ಸಿಂಗ್ ಅವರು ಲಹಾರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಂಬರೀಶ್ ಶರ್ಮಾ ಎದುರು ಸೋಲುಂಡಿದ್ದಾರೆ. ವಿಶೇಷವೆಂದರೆ, 1993ರಿಂದಲೂ ಅಂದರೆ ಸತತ 7 ಬಾರಿ ಅವರು ಈ ಕ್ಷೇತ್ರದ ಶಾಸಕರಾಗಿದ್ದವರು.
ಕಣಕ್ಕಿಳಿದ ಕೇಂದ್ರ ಸಚಿವರ ಕಥೆ ಏನಾಯ್ತು?
ಈ ಬಾರಿ ಮಧ್ಯಪ್ರದೇಶದಲ್ಲಿ ತನ್ನ ಕಾರ್ಯತಂತ್ರದ ಭಾಗವಾಗಿ ಬಿಜೆಪಿ ಮೂವರು ಕೇಂದ್ರ ಸಚಿವರು ಮತ್ತು ಕೇಂದ್ರದ ಹಲವು ನಾಯಕರನ್ನು ಕಣಕ್ಕಿಳಿಸಿತ್ತು. ಸಚಿವರ ಪೈಕಿ ಒಬ್ಬರು ಸೋತಿದ್ದರೆ, ಮತ್ತಿಬ್ಬರು ಗೆಲುವಿನ ನಗೆ ಬೀರಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದಿಮಾನಿ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿಯನ್ನು 24 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ಕೇಂದ್ರದ ಮತ್ತೂಬ್ಬ ಸಚಿವ ಪ್ರಹ್ಲಾದ್ ಪಟೇಲ್ ನರಸಿಂಗಪುರದಲ್ಲಿ 31,310 ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ, ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಮಾತ್ರ ಎಸ್‌ಟಿ ಮೀಸಲು ಕ್ಷೇತ್ರವಾದ ನಿವಾಸ್‌ನಲ್ಲಿ 9,723 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೈನ್‌ಸಿಂಗ್ ವರ್ಕಡೆ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸಂಸದರಾದ ರಾಕೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್, ರಿತಿ ಪಾಠಕ್, ಗಣೇಶ್ ಸಿಂಗ್ ಕೂಡ ಜಯ ಸಾಧಿಸಿದ್ದಾರೆ.
ಸಿಎಂ ರೇಸ್‌ನಲ್ಲಿರುವ ಪ್ರಮುಖರು
“ಶಿವ”ಶಕ್ತಿಯ ಮಹಾ ಪವಾಡ
ಶಿರಾಜ್ ಸಿಂಗ್ ಚೌಹಾಣ್… ಮೃದು ಸ್ವಭಾವದ, ಅಪ್ಯಾಯಮಾನ ವ್ಯಕ್ತಿತ್ವದ ಜನಾನುರಾಗಿ ನಾಯಕ. ಮಧ್ಯಪ್ರದೇಶದ ಜನರು ಇವರನ್ನು ಪ್ರೀತಿಯಿಂದ “ಮಾಮಾ’ ಎಂದು ಕರೆಯುವುದೂ ಇದೇ ಕಾರಣಕ್ಕೆ. 4 ಬಾರಿ ಸಿಎಂ ಆಗಿ ಬಿಜೆಪಿಯ “ದೀರ್ಘಾವಧಿ’ ಮುಖ್ಯಮಂತ್ರಿ ಎಂಬ ಪಟ್ಟ ಗಿಟ್ಟಿಸಿಕೊಂಡವರು. ಈ ಬಾರಿ ಇವರಿಗೆ ಟಿಕೆಟ್ ಸಿಗುವುದೇ ಅನುಮಾನ ಎಂಬಂಥ ಸ್ಥಿತಿಯಿತ್ತು. ಆದರೂ, ಛಲಬಿಡದ ಶಿವರಾಜ್ ಸಿಂಗ್, ಈಗ ಮಧ್ಯಪ್ರದೇಶದಲ್ಲಿ ಬಿಜೆಪಿಯ ಜಯಭೇರಿಯ ಹಿಂದಿನ “ಮಹಾಶಕ್ತಿ’ಯಾಗಿ ಹೊರಹೊಮ್ಮಿದ್ದಾರೆ. ಈ ವಿಜಯವು ಅವರನ್ನು ಪಕ್ಷದ ಟಾಪ್‌ಮೋಸ್ಟ್ ನಾಯಕರ ಸಾಲಿಗೆ ತಂದು ನಿಲ್ಲಿಸಿದೆ.
ಬಿಜೆಪಿಯ ಒಬ್ಬ ಸಾಮಾನ್ಯ ಸಂಸದರಾಗಿದ್ದ ಚೌಹಾಣ್ 2005ರಲ್ಲಿ ಅನಿರೀಕ್ಷಿತವಾಗಿ ಸಿಎಂ ಪಟ್ಟಕ್ಕೇರಿದರು. ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 2008, 2013, 2018ರಲ್ಲೂ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂ ಡರು. ದೇಶದಲ್ಲೇ ಅತಿ ದೀರ್ಘಾವಧಿ ಸಿಎಂ ಆದ ಬಿಜೆಪಿ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು. ಆದರೆ, ಈ ಬಾರಿ ಅಭ್ಯರ್ಥಿಗಳ ಮೊದಲ ಪಟ್ಟಿ ಯಲ್ಲಿ ಚೌಹಾಣ್ ಹೆಸರಿರಲಿಲ್ಲ. ಆದರೂ, ಎಲ್ಲೂ ಅವರು ಅಸಮಾಧಾನ ತೋರಿಸಿಕೊಳ್ಳಲಿಲ್ಲ. ತಮ್ಮ ಅಭಿವೃದ್ಧಿ ಕಾರ್ಯ, ಲಾಡ್ಲಿ ಬೆಹನಾದಂಥ ಯೋಜನೆಗಳೇ ತಮಗೆ ಶ್ರೀರಕ್ಷೆ ಎಂದು ನಂಬಿಕೊಂಡು ಜನರ ಮುಂದೆ ಹೋದರು. 150ಕ್ಕೂ ಅಧಿಕ ರ್ಯಾಲಿಗಳನ್ನು ನಡೆಸಿದರು. ಪ್ರಚಾರದ ಒಂದು ಹಂತದಲ್ಲಿ, “ನಾನು ನಿಮ್ಮಿಂದ ದೂರವಾದ ಬಳಿಕ ಖಂಡಿತಾ ನೀವೆಲ್ಲ ನನ್ನನ್ನು ಮಿಸ್ ಮಾಡಿಕೊಳ್ಳುತ್ತೀರಿ’ ಎಂದು ಹೇಳಿ ಅವರು ಕಣ್ಣೀರಿಟ್ಟಾಗ ಅಲ್ಲಿದ್ದ ಜನಸ್ತೋಮದ ಕಣ್ಣಂಚಲ್ಲೂ ನೀರು ಜಿನುಗಿತ್ತು. ಉಳಿದ ನಾಯಕರು ಅಬ್ಬರಿಸುತ್ತಿದ್ದಾಗ ಚೌಹಾಣ್ “ಮೌನ’ವಾಗಿಯೇ ಮ.ಪ್ರದೇಶದ ಹೃದಯ ಗೆದ್ದು ಪವಾಡ ಮಾಡಿ ಮತ್ತೆ ಸಿಎಂ ರೇಸ್‌ಗೆ ಎಂಟ್ರಿ ಪಡೆದರು.
ಪಟ್ಟದಾಸೆಯಲ್ಲಿ “ಮಹಾರಾಜ”
ಬಿಜೆಪಿಯ ಗೆಲುವಿನಲ್ಲಿ ಯುವ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರ ಪಾತ್ರವೂ ಮಹತ್ವದ್ದು. ಗ್ವಾಲಿಯರ್‌ನ ರಾಜಮನೆತನ ದಲ್ಲಿ ಜನಿಸಿದ ಜ್ಯೋತಿರಾದಿತ್ಯ ಸಿಂದಿಯಾ ಅವರು, ರಾಜ್ಯದ ವರ್ಚಸ್ವಿ ಹಾಗೂ ಪ್ರಭಾವಿ ನಾಯಕನೂ ಹೌದು. ತಮ್ಮ ಅಪ್ಪ, ಕಾಂಗ್ರೆಸ್ ನಾಯಕ ಮಾಧವ್‌ರಾವ್ ಸಿಂದಿಯಾ ಅವರ ನಿಧನಾನಂತರ 2002ರಲ್ಲಿ ಗುನಾ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದು, ಮೊದಲ ಬಾರಿಗೆ ಕಾಂಗ್ರೆಸ್ ಸಂಸದರಾದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೂ, ಸಿಎಂ ಕಮಲ್‌ನಾಥ್ ವಿರುದ್ಧದ ಮುನಿಸು ಮತ್ತು ಸಿಎಂ ಸ್ಥಾನ ಸಿಗಲಿಲ್ಲವೆಂಬ ಸಿಟ್ಟಿನಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರು. ಈ ಬಾರಿ ಬಿಜೆಪಿಯ ಗೆಲುವಲ್ಲಿ “ಸಿಂದಿಯಾ ಫ್ಯಾಕ್ಟರ್’ ಹೆಚ್ಚೇ ಕೆಲಸ ಮಾಡಿದೆ. ಗ್ವಾಲಿಯರ್-ಚಂಬಲ್ ವಲಯದಲ್ಲಿ ಬಿಜೆಪಿಗೆ ಅಮೋಘ ಬೆಂಬಲ ಸಿಗುವಂತೆ ಮಾಡುವ ಮೂಲಕ “ಮಧ್ಯಪ್ರದೇಶದಲ್ಲಿ ಸಿಂದಿಯಾ ಯಾವುದೇ ಪ್ರಭಾವ ಹೊಂದಿಲ್ಲ’ ಎಂಬ ರಾಜಕೀಯ ವಿರೋಧಿಗಳ ಆರೋಪಕ್ಕೆ ತಕ್ಕ ತಿರುಗೇಟು ನೀಡಿದ್ದಾರೆ “ಗ್ವಾಲಿಯರ್ ಮಹಾರಾಜ’. 2018 ರಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆಯೂ ಸಿಂದಿಯಾ ಪ್ರಾಬಲ್ಯವಿರುವ ಪ್ರದೇಶಗಳೇ ಕಾರಣವಾಗಿದ್ದವು. ಈ ಬಾರಿ ಈ ಮತಗಳು ಬಿಜೆಪಿಯತ್ತ ಕ್ರೋಡೀಕರಣ ಗೊಂಡವು. ಬಿಜೆಪಿಯ ಗೆಲುವು ಸಿಂದಿಯಾರನ್ನು ಮತ್ತಷ್ಟು ಬಲಶಾಲಿಯಾಗಿಸಿದ್ದು, “ಮಹಾರಾಜ’ನ ಕಣ್ಣು ಈಗ “ಸಿಎಂ ಕುರ್ಚಿ’ಯತ್ತ ನೆಟ್ಟಿದೆ.
ಬಲವೀರನ ಗೆದ್ದ “ನರೇಂದ್ರ”
ಹಲವು ಸಂಭಾವ್ಯ ಸಿಎಂ ಅಭ್ಯರ್ಥಿಗಳನ್ನು ಮುಂದಿಟ್ಟುಕೊಂಡು ಆಡಳಿತ ವಿರೋಧಿ ಅಲೆ ಎದುರಿಸುವ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ ಕಣಕ್ಕಿಳಿದವರೇ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್. ಸಿಎಂ ರೇಸ್‌ನಲ್ಲಿರುವವರ ಪೈಕಿ ಇವರ ಹೆಸರೂ ಕೇಳಿ ಬರುತ್ತಿದೆ. ದಿಮಾನಿ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಬಲವೀರ್ ಸಿಂಗ್ ದಂಡೋತಿ ಯಾರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ ರಾಗಿಯೂ ಬಿಜೆಪಿ ಗೆಲುವಿನಲ್ಲಿ ಅವರ ಕೊಡುಗೆ ಮಹತ್ವದ್ದು. ಪಕ್ಷದಲ್ಲಿ ಸಂಘಟನಾ ಚತುರ ಎಂದೇ ಪ್ರಸಿದ್ಧ. ತಳಮ ಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ನಿಸ್ಸೀಮ. ಇವರನ್ನು “ಸಿಎಂ ಅಭ್ಯರ್ಥಿ’ಗಳ ಪೈಕಿ ಒಬ್ಬರು ಎಂದು ಬಿಂಬಿಸುವ ಮೂಲಕ ಬಿಜೆಪಿಯು ರಾಜ್ಯದಲ್ಲಿ ಮೇಲ್ವರ್ಗ ಹಾಗೂ ಒಬಿಸಿ ವೋಟ್‌ಬ್ಯಾಂಕ್ ಅನ್ನು ಭದ್ರಪಡಿಸಿದೆ. ಚೌಹಾಣ್‌ರಂತೆ ಮಾಸ್ ಲೀಡರ್ ಅಲ್ಲದಿದ್ದರೂ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವಂಥ ಛಾತಿಯು ತೋಮರ್ ಪ್ಲಸ್‌ಪಾಯಿಂಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.