Mescom: ಪವರ್‌ಮನ್ ಕೊರತೆ- ಕರಾವಳಿಯಲ್ಲಿ ಪವರ್‌ಮನ್‌ಗಳು ಸೂಪರ್‌ಮನ್ ಆದರೂ ಸಾಲದು
Team Udayavani, Dec 26, 2023, 5:06 AM IST
ಮಂಗಳೂರು: ವಿದ್ಯುತ್ ಸಂಬಂಧಿತ ನಿರ್ವಹಣ ಕೆಲಸದಲ್ಲಿ “ವಿದ್ಯುತ್”ನಂತೆ ಸಂಚರಿಸಿ ಕೆಲಸ ನಿರ್ವಹಿಸಬೇಕಾದ “ಪವರ್‌ಮನ್” (ಲೈನ್‌ಮ್ಯಾನ್)ಗಳ ನೇಮಕಾತಿಯೇ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಕಾರಣ ಮೆಸ್ಕಾಂನಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿ ಇವೆ!
ಹೀಗಾಗಿ ಪ್ರಸ್ತುತ ಇರುವ ಪವರ್‌ಮನ್‌ಗಳೇ ಎಲ್ಲ ಕಾರ್ಯಒತ್ತಡ ನಿರ್ವಹಿಸಲು “ಸೂಪರ್‌ಮನ್” ಗಳಾಗಬೇಕಾಗಿದೆ.
ಇಷ್ಟಾದ ಮೇಲೂ ಗ್ರಾಮಾಂತರ ಸಹಿತ ಕೆಲವೆಡೆ ವಿದ್ಯುತ್ ನಿರ್ವಹಣ ಕಾರ್ಯ ಸಕಾಲದಲ್ಲಿ ಆಗದಂತಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವ್ಯಾಪ್ತಿ ಹೊಂದಿರುವ ಮೆಸ್ಕಾಂನಡಿ ಒಟ್ಟು 32 ತಾಲೂಕುಗಳಿವೆ. ಮೆಸ್ಕಾಂನಲ್ಲಿ 5271 ಪವರ್‌ಮನ್ ಹುದ್ದೆಗಳು ಮಂಜೂರಾಗಿದ್ದರೂ 2,681 ಮಾತ್ರ ಭರ್ತಿಯಾಗಿವೆ. ಉಳಿದ 2,590 ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯವಾಗಿಲ್ಲ. ಜತೆಗೆ ಫೀಲ್ಡ್ ಆಫೀಸರ್, ಸ್ಟೇಷನ್ ನಿರ್ವಹಿಸುವವರು, ಡ್ರೈವರ್‌ಗಳ ಕೊರತೆಯೂ ಇದೆ.
ಗ್ರಾಮಾಂತರದಲ್ಲಿ ಸಮಸ್ಯೆ: ವಿದ್ಯುತ್ ನಿರ್ವಹಣೆ ಸಮಸ್ಯೆಗಳನ್ನು ನಿರ್ವಹಿಸಲು ಪವರ್‌ಮನ್‌ಗಳು ಅನಿವಾರ್ಯವಾಗಿದ್ದು, ಗ್ರಾಹಕರ ಸಂಖ್ಯೆಗೆ ಅನುಗುಣವಾದಷ್ಟು ಸಿಬಂದಿ ಇಲ್ಲ. ಅದರಲ್ಲೂ ಬಹುತೇಕ ಗ್ರಾಮಾಂತರ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪವರ್‌ಮನ್‌ಗಳೇ ಇಲ್ಲ. ಇದರಿಂದ ಕೃಷಿಕರು ಸೇರಿದಂತೆ ಗ್ರಾಮೀಣ ಭಾಗದ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಲೈನ್ ಸಮಸ್ಯೆ ಆದರೂ ದುರಸ್ತಿ ಮಾಡಲು ಪವರ್‌ಮನ್‌ಗಳೇ ಸಿಗದಂತಾಗಿದೆ. ಇದರೊಂದಿಗೆ ಕಾರ್ಯ ಒತ್ತಡದ ಹಿನ್ನೆಲೆಯಲ್ಲಿ ಬಹುತೇಕ ಎಲ್‌ಟಿ ಲೈನ್ ನಿರ್ವಹಣೆ ಆಗುತ್ತಿಲ್ಲ. ಲೈನ್‌ಗಳಿಗೆ ಮರದ ಕೊಂಬೆ ತಾಗಿದ್ದರೂ ತೆರವುಗೊಳಿಸಲೂ ಸಮಯ ಸಿಗದಂತಾಗಿದೆ. ಟ್ರಾನ್ಸ್‌ಫಾರ್ಮರ್ ಸರ್ವಿಸ್‌ಗೂ ಕಷ್ಟವಾಗುತ್ತಿದೆ ಎನ್ನುತ್ತವೆ ಮೂಲಗಳು.
ಶೇ. 41 ಹುದ್ದೆ ಖಾಲಿ: ಮೆಸ್ಕಾಂನ ಗ್ರೂಪ್ “ಎ” ಪೈಕಿ 269ರಲ್ಲಿ 68 ಹುದ್ದೆ ಖಾಲಿ. ಗ್ರೂಪ್ “ಬಿ”ಯಲ್ಲಿ 372ರ ಪೈಕಿ 66, ಗ್ರೂಪ್ “ಸಿ”ಯಲ್ಲಿ 2,821ರ ಪೈಕಿ 905 ಹಾಗೂ ಗ್ರೂಪ್ “ಡಿ’ಯಲ್ಲಿ 5,799 ಹುದ್ದೆಗಳ ಪೈಕಿ 2,812 ಹುದ್ದೆ ಖಾಲಿ. ಅಂದರೆ ಒಟ್ಟು ಶೇ. 41ರಷ್ಟು ಹುದ್ದೆಗಳು ಖಾಲಿ ಇವೆ.
ಹುದ್ದೆ ಭರ್ತಿಗೆ ದಾಖಲೆ ವಿಳಂಬ!
2019-20ನೇ ಸಾಲಿನಲ್ಲಿ 667 ಕಿರಿಯ ಪವರ್‌ಮನ್ ಹುದ್ದೆಗಳಲ್ಲಿ 580 ಮಂದಿಗೆ ನೇಮಕ ಆದೇಶ ನೀಡಲಾಗಿದೆ. ಉಳಿದವರ ದಾಖಲಾತಿ ಪರಿಶೀಲನೆ ಬಾಕಿ ಇದೆ. ಅವರು ವಿವಿಧ ಮೀಸಲಾತಿ ಕೋರಿ ಸಲ್ಲಿಸಿದ ಪ್ರಮಾಣಪತ್ರಗಳ ನೈಜತೆ, ಸಿಂಧುತ್ವ ಪ್ರಮಾಣಪತ್ರ, ನಡತೆ ಮತ್ತು ಪೂರ್ವ ಚರಿತ್ರೆಯ ಪೊಲೀಸ್ ವರದಿ ಪರಿಶೀಲನೆಯಾಗದೆ ನೇಮಕಾತಿ ಆದೇಶ ನೀಡುವಂತಿಲ್ಲ. ಒಂದು ವೇಳೆ ದಾಖಲೆ ಸಲ್ಲಿಸದಿದ್ದರೆ ಅವರ ಅಭ್ಯರ್ಥಿತನವೇ ರದ್ದುಗೊಳ್ಳುವ ಸಾಧ್ಯತೆ ಇದೆ.
ಆವಶ್ಯಕ ಹುದ್ದೆಗಳ ಆಧಾರದ ಮೇರೆಗೆ ಕವಿಪ್ರನಿನಿಯಿಂದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸಾಮಾನ್ಯ ಉದ್ಯೋಗ ಪ್ರಕಟನೆಯ ಪ್ರಕಾರ ಆಗಾಗ್ಗೆ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಂತೆ ಹುದ್ದೆ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
-ಡಿ. ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ
ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.