ತೀರ್ಥಕ್ಷೇತ್ರ, ವಿದ್ವಜ್ಜನರ ನಾಡು ಕಾಶ್ಮೀರಕ್ಕೆ ಮರು ವೈಭವ
ಶ್ರೀಕೃಷ್ಣ ಮಠದ "ವಿಶ್ವಾರ್ಪಣಮ್'ನಲ್ಲಿ ಕಾಶೀ ಮಠಾಧೀಶರ ವಿಶ್ವಾಸ
Team Udayavani, Dec 19, 2021, 7:01 AM IST
ಉಡುಪಿ: ಮಮ್ಮಟ, ಕುಮಾರಿಲಭಟ್ಟರಂತಹ ವಿದ್ವಜ್ಜನರನ್ನು ಹೊಂದಿದ್ದ ದೇಶದ ಮುಕುಟಮಣಿ ಕಾಶ್ಮೀರ ಮತ್ತೆ ಗತವೈಭವವನ್ನು ಕಾಣಲಿದೆ ಎಂದು ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ಅದಮಾರು ಮಠ ಪರ್ಯಾಯದ ಮಂಗಲೋತ್ಸವ “ವಿಶ್ವಾರ್ಪಣಮ್’ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಾರಸ್ವತರ ಮೂಲನೆಲೆ
ಕಾಶ್ಮೀರವನ್ನು ಪ್ರವಾಸಿ ತಾಣವಾಗಿ ನೋಡುವುದು ಸರಿಯಲ್ಲ. ಅದು ಬ್ರಿಟಿಷರ ಕಲ್ಪನೆ. ಒಂದು ಕಾಲದಲ್ಲಿ ಕಾಶಿಯಲ್ಲಿ ಅಧ್ಯಯನ ಮಾಡಿದರೆ, ಕಾಶ್ಮೀರದಲ್ಲಿ ಪರೀಕ್ಷೆ ಪಾಸು ಮಾಡಬೇಕಿತ್ತು. ಮುಖ್ಯ ತೀರ್ಥಕ್ಷೇತ್ರಗಳು ಎಲ್ಲಿವೆ ಎಂದು ಯುಧಿಷ್ಠಿರ ಭೀಷ್ಮನನ್ನು ಕೇಳಿದಾಗ ಹೇಳಿದ ಉತ್ತರ ಕಾಶ್ಮೀರ. ಬಲರಾಮನು ತೀರ್ಥಕ್ಷೇತ್ರಕ್ಕೆ ಹೋದ ತಾಣ ಕಾಶ್ಮೀರ. ಇದು ಸರಸ್ವತೀ ನದಿಯ ನಾಡು. ಸಾರಸ್ವತರ ಮೂಲನೆಲೆ ಅದು. ಹೀಗಾಗಿ ನಾವೂ ನಮ್ಮ ಮೂಲನೆಲೆಯನ್ನು ನೋಡಲು ಹೋಗಿದ್ದೆವು ಎಂದು ಸ್ವಾಮೀಜಿ ಹೇಳಿದರು.
ನಮ್ಮಲ್ಲಿ ಧರ್ಮವನ್ನು ಬಿಟ್ಟು ಹೋದ ಬಳಿಕ ವಾಪಸು ಕರೆತರುವ ಪ್ರಯತ್ನಗಳು ನಡೆಯಲಿಲ್ಲ. ಆದರೆ “ದೇವಳ ಸ್ಮತಿ’ ಗ್ರಂಥದಲ್ಲಿ ಇದಕ್ಕೆ ಅವಕಾಶವಿತ್ತು. ಇದು ಸಿಕ್ಕಿದ್ದು ಶ್ರೀನಗರದ ಗ್ರಂಥಾಲಯದಲ್ಲಿ. ಇದನ್ನು ಹರಿಯಟ್ಟನ್ ಅವರು ಹೇಳಿದ್ದರು ಎಂದರು.
ಇಂದು ಹನುಮದ್ ವ್ರತ. ಇದು ಮಧ್ವಾಚಾರ್ಯರ ಲೀಲಾವತಾರದ ಜಾಗ. ಪ್ರಾಣದೇವರ ಅವತಾರರಾದ ಮಧ್ವಾಚಾರ್ಯರು ನಮ್ಮನ್ನು ಜೋಡಿಸಲು ಕಾರಣರು ಎಂದು ಶ್ರೀ ಸಂಯಮೀಂದ್ರತೀರ್ಥರು ನುಡಿದರು.
ಸಂಸ್ಕೃತಿ ರಕ್ಷಣೆ ಅಗತ್ಯ
ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲವಾದರೆ ಮುಂದಿನ ಭವಿಷ್ಯ ಉತ್ತಮವಾಗಿರದು ಎನ್ನುವ ಅನುಭವ ಈಗಾಗಲೇ ಬರುತ್ತಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು. ಕಾಶೀ ಮಠಾಧೀಶರು ಬಿಡುವಿಲ್ಲದ ನಡುವೆಯೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಸಮಾಜಕ್ಕೆ ಸಂದೇಶ ನೀಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಸಂಸ್ಕೃತಿ ಚಿಂತಕಿ ಬೆಂಗಳೂರಿನ ಸಹನಾ ವಿಜಯ ಕುಮಾರ್ ಅವರು “ಕಶೀರ’ – ಕಾಶ್ಮೀರ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸ ನೀಡಿ, ಕಾಶ್ಮೀರದಲ್ಲಿ ಸ್ವಾತಂತ್ರಾéನಂತರ ರಾಜಕೀಯ ತಪ್ಪು ನಿರ್ಧಾರದಿಂದ ಹಿಂದೂಗಳ ಜೀವನ ಅತ್ಯಂತ ಕೆಟ್ಟ ಸ್ಥಿತಿಗೆ ಬಂದಿತ್ತು ಎಂದರು. ಮತಾಂತರವಾದವರಿಗೆ ತಿಳಿವಳಿಕೆ ನೀಡಿ ಅವರನ್ನು ವಾಪಸು ತರುವ ಪ್ರಯತ್ನವನ್ನು ಮಠಾಧೀಶರು ಮಾಡಬೇಕಾಗಿದೆ ಎಂದರು.
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ| ಸತ್ಯನಾರಾಯಣ ಆಚಾರ್ಯ ಅಭಿನಂದನ ಭಾಷಣ ಮಾಡಿ, ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರ ಜತೆಗಿನ ಎರಡು ವರ್ಷಗಳ ನಿಕಟ ಸಂಪರ್ಕವನ್ನು ಸ್ಮರಿಸಿಕೊಂಡರು.
ಶಾಸಕರಾದ ಮಂಗಳೂರಿನ ವೇದವ್ಯಾಸ ಕಾಮತ್, ಉಡುಪಿಯ ಕೆ. ರಘುಪತಿ ಭಟ್ ಉಭಯ ಶ್ರೀಪಾದರನ್ನು ಗೌರವಿಸಿದರು.
ಅಭಿನಂದನೆ
ವಿದ್ವಾಂಸರಾದ ವಿ| ಪಂಜ ಭಾಸ್ಕರ ಭಟ್, ವಿ| ಪ್ರವೀಣ ತಂತ್ರಿ ಮಟ್ಟು, ಬಹುಭಾಷಾ ವಿದ್ವಾಂಸ ಮಣಿಪಾಲದ ಶಾಂತಾರಾಮ ಬಾಳಿಗ, ಶ್ರೀಕೃಷ್ಣಮಠದ ಸೇವಕ ಸುರೇಶ ಲಕ್ಷ್ಮಣ ಬಳ್ಳಾರಿ ಅವರನ್ನು ಅಭಿನಂದಿಸಲಾಯಿತು. ವಿದ್ವಾಂಸರಾದ ಮಂಗಳೂರಿನ ಪಂಡಿತ ನರಸಿಂಹ ಆಚಾರ್ಯ, ಸುಧಾಕರ ಭಟ್, ಚೇಂಪಿ ಶ್ರೀಕಾಂತ ಭಟ್, ಜಿಎಸ್‌ಬಿ ದೇವಸ್ಥಾನಗಳ ಸಂಘದ ಅಧ್ಯಕ್ಷ ಜಗನ್ನಾಥ ಕಾಮತ್, ಉಪಾಧ್ಯಕ್ಷ ದಿನೇಶ ಕಾಮತ್, ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಉಡುಪಿಯ ಪಿ. ವಿಟuಲದಾಸ ಶೆಣೈ, ಮಂಗಳೂರಿನ ಸಿ.ಎಲ್.ಶೆಣೈ ಅವರನ್ನು ಗೌರವಿಸಲಾಯಿತು.
ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಪ್ರೊ| ಹರಿದಾಸ ಭಟ್ ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಕೃಷ್ಣ ಮಠಕ್ಕೆ ಮೊದಲ ಭೇಟಿ
ಇದೇ ಮೊತ್ತ ಮೊದಲ ಬಾರಿಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರಿಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ದೇವರ ದರ್ಶನವನ್ನು ಮಾಡಿಸಿ ಪರ್ಯಾಯ ಮಠದ ವತಿಯಿಂದ ಶ್ರೀಗಳನ್ನು ಗೌರವಿಸಿದರು. ಕಾಶೀ ಮಠಾಧೀಶರು ಕಾಶೀ ಮಠದ ವತಿಯಿಂದ ಅದಮಾರು ಮಠಾಧೀಶರನ್ನು ಗೌರವಿಸಿದರು.
1956ರಲ್ಲಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೀಠಸ್ಥರಾಗಿ ಅದಮಾರು ಮಠದ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಇದ್ದ ಸಂದರ್ಭ ಶ್ರೀ ಕಾಶೀ ಮಠದ ಆಗಿನ ಗುರುಗಳಾದ ಶ್ರೀ ಸುಧೀಂದ್ರತೀರ್ಥ ಶ್ರೀಪಾದರು ಭೇಟಿ ನೀಡಿ ದೇವರ ದರ್ಶನ ಮಾಡಿದ ಸಂದರ್ಭದ ಚಿತ್ರವಿದು. ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಶಿಷ್ಯರಾದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಡಿ. 18ರಂದು ವಿಬುಧೇಶತೀರ್ಥ ಶ್ರೀಪಾದರ ಪ್ರಶಿಷ್ಯರಾದ ಶ್ರೀ ಈಶಪ್ರಿಯ ತೀರ್ಥರ ಪರ್ಯಾಯ ಪೂಜಾವಸರದ ಸಂದರ್ಭ ಕೃಷ್ಣ ಮಠಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.