ಚೀನಿ ಆ್ಯಪ್‌ಗೆ “ಝೆಡ್ ಶೇರ್” ಟಾಂಗ್
"ಶೇರ್ ಇಟ್'ಗೆ ಸಿದ್ದಾಪುರ ಹುಡುಗನ ದೇಸಿ "ಝೆಡ್ ಶೇರ್' ಆ್ಯಪ್!
Team Udayavani, Jun 29, 2020, 11:25 AM IST
ಶಿರಸಿ: ಗಡಿಯಲ್ಲಿ ಕಾಲು ಕೆದರಿ ಜಗಳ ಮಾಡುತ್ತಿರುವ ಚೀನಾ ವಿರುದ್ಧ ಭಾರತ ಸಮರ ಸಾರಿರುವ ಬೆನ್ನಲ್ಲೇ ಈಗ ಚೀನಿ ವಸ್ತುಗಳ ನಿಷೇಧವೂ ಜೋರಾಗಿದೆ. ಬಹು ಸಂಖ್ಯಾತ ಮೊಬೈಲ್ ಗ್ರಾಹಕರು ಬಳಸುವ ಚೀನಿ ಆ್ಯಪ್ “ಶೇರ್ ಇಟ್’ ಬದಲಿಗೆ ಇದೀಗ ದೇಸೀಯ “ಝೆಡ್ ಶೇರ್’ ಆ್ಯಪ್ ಬಿಡುಗಡೆಗೊಂಡಿದ್ದು, ಜನರನ್ನು ಸೆಳೆಯುತ್ತಿದೆ. ಶೇರ್ ಇಟ್‌ಗಿಂತ ಹೆಚ್ಚು ವೇಗ ಹೊಂದಿರುವ ಈ ಝೆಡ್ ಶೇರ್ ಆ್ಯಪ್ ಬಿಡುಗಡೆಗೊಂಡ ಕೇವಲ 24 ಗಂಟೆಯಲ್ಲೇ 5000ಕ್ಕೂ ಹೆಚ್ಚು ಗ್ರಾಹಕರ ಮೊಬೈಲ್‌ಗೆ ಇನ್‌ಸ್ಟಾಲ್ ಆಗಿದೆ. ಚೀನಾ ಆ್ಯಪ್ ಬಹಿಷ್ಕರಿಸುವ ಆಂದೋಲನಕ್ಕೆ ಬೆನ್ನೆಲುಬಾಗಿ ನಿಂತಿದ್ದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಸೂರಿನ ಮಾದ್ನಕಳ್‌ನ ಹಳ್ಳಿ ರೈತನ ಮಗ ಶ್ರವಣ ಹೆಗಡೆ ಎನ್ನುವುದು ವಿಶೇಷ.
21 ವರ್ಷದ ಯುವಕ ಶ್ರವಣ, ಧಾರವಾಡದಲ್ಲಿ ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ಈಗಾಗಲೇ ಧಾರವಾಡದ ಕರ್ನಾಟಕ ವಿವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಆ್ಯಪ್ ರಚಿಸಿಕೊಟ್ಟಿದ್ದಾನೆ. ಸ್ಥಳೀಯ ಒಂದೆರಡು ಕಾಲೇಜುಗಳಿಗೂ ಆ್ಯಪ್ ಸಿದ್ಧಗೊಳಿಸಿದ್ದಾನೆ. ಇದೇ ಹುಡುಗ ಈಗ ಶೇರ್ ಇಟ್‌ಗೆ ಸವ್ವಾ ಸೇರ್ ಎನ್ನುವಂತೆ ಝೆಡ್ ಆ್ಯಪ್ ತಯಾರಿಸಿದ್ದಾನೆ. ಈ ಆ್ಯಪ್ ರಚಿಸಲು ದಿನದಲ್ಲಿ 8-10 ಗಂಟೆ ವ್ಯಯಿಸಿದ್ದಾನೆ. ಜಾವಾ ಭಾಷೆ ಜತೆಗೆ ಕೊಟ್ಲಿನ್ ಭಾಷೆ ಕಲಿತು ಇದನ್ನು ಬಿಡುಗಡೆ ಮಾಡಿದ್ದೇನೆ ಎನ್ನುತ್ತಾನೆ ಶ್ರವಣ.
24 ಗಂಟೆಯಲ್ಲಿ 5 ಸಾವಿರ!: ಶನಿವಾರ ನೂತನ ಆ್ಯಪ್ ಬಿಡುಗಡೆ ಮಾಡಿದ್ದು, ಕೇವಲ 24 ಗಂಟೆಯೊಳಗೆ 5 ಸಾವಿರ ಜನ ಈ ಆ್ಯಪ್ ಬಳಸುತ್ತಿದ್ದಾರೆ. ಶೇರ್ ಇಟ್‌ಗಿಂತ ವೇಗವಾಗಿ ಬಳಕೆಗೆ ಸಿಗುತ್ತದೆ ಎಂಬುದೇ ವಿಶೇಷ. ಅನಿವಾಸಿ ಭಾರತೀಯ ಮೊಬೈಲ್ ಬಳಕೆದಾರರೂ ಇದರ ಗ್ರಾಹಕರಾಗಿದ್ದಾರೆ. ಮುಂದೆ ಮೊಬೈಲ್ ಕ್ಯಾಮ್ ಆ್ಯಪ್ ಕೂಡ ಸಿದ್ಧಗೊಳಿಸುವ ಆಸಕ್ತಿ ಇದೆ
ಎನ್ನುತ್ತಾರೆ ಶ್ರವಣ.
ಝೆಡ್ ಶೇರ್ ಆ್ಯಪ್!: ಶೇರ್ ಇಟ್ ಬದಲಿಗೆ ದೇಸಿ ಯುವಕ ನೀಡಿದ ಆ್ಯಪ್ ಹೆಸರು “ಝೆಡ್ ಶೇರ್’ ಆ್ಯಪ್. ಗಡಿಬಿಡಿಯಲ್ಲೇ ಈ ಹೆಸರು ಇಟ್ಟಿದ್ದೇನೆ. ಜನರಿಗೂ ನೆನಪು ಇಟ್ಟುಕೊಳ್ಳಲು ಹಾಗೂ ಆಂಗ್ಲ ಭಾಷೆಯ ಕೊನೆ ಅಕ್ಷರವೂ ಅದೇ ಆಗಿದ್ದು ಅನುಕೂಲವಾಗುತ್ತದೆ ಎನ್ನುತ್ತಾರೆ ಶ್ರವಣ. ಗೂಗಲ್ ಪ್ಲೇ ಸ್ಟೋರಿನಲ್ಲಿ ಝೆಡ್ ಶೇರ್ ಆ್ಯಪ್ ಎಂದು ಟೈಪ್ ಮಾಡಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದು ಉಚಿತ ಆ್ಯಪ್. ಕಳೆದ 2 ದಿನಗಳಿಂದ ಶ್ರವಣ ಹೆಗಡೆ ಸಾಧನೆಗೆ ಶ್ಲಾಘನೆ ಮಹಾಪುರವೇ ಹರಿದು ಬಂದಿದೆ. ಆಸಕ್ತರು ಮಾತನಾಡಬಹುದು 9611464225.
ಚೀನಾ ವಸ್ತು ಬಳಕೆ ನಿಷೇಧಿಸಬೇಕೆಂಬ ಕೂಗು ಜೋರಾಗಿದ್ದರಿಂದ ಶೇರ್ ಇಟ್‌ಗೆ ಪರ್ಯಾಯವಾಗಿ ರಚಿಸಬೇಕೆಂದು ಯೋಚಿಸಿದಾಗ “ಝೆಡ್ ಶೇರ್’ ಆ್ಯಪ್ ಐಡಿಯಾ ಹೊಳೆಯಿತು. ಅದನ್ನೇ ನಿರ್ಮಿ ಸಿದ್ದೇನೆ. ಇದರಿಂದ ದೇಶದ ಜನರಿಗೆ ಅನುಕೂಲವಾಗಲಿದೆ.
ಶ್ರವಣ ಹೆಗಡೆ, ಸಂಶೋಧಕ
ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.