ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರಲ್ಲ
Team Udayavani, Dec 8, 2019, 3:07 AM IST
ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಲ ಕಾಂಗ್ರೆಸ್ಸಿಗರಲ್ಲ. ಅಧಿಕಾರಕ್ಕಾಗಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಿಗಿದವರು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಮೊಳಕಾಲ್ಮೂರು ತಾಲೂಕು ಬಾಂಡ್ರಾವಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ಉಪಮುಖ್ಯಮಂತ್ರಿ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದರು. ಮುಂದೆ ಕಾಂಗ್ರೆಸ್‌ನಿಂದ ಎಲ್ಲಿಗೆ ಜಿಗಿಯುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆ ತರುವುದಾಗಿ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಸಿಎಂ ಮಾಡ್ತೀನಿ ಅಂದ್ರೆ ಸಿದ್ದರಾಮಯ್ಯ ಯಾರ ಹಿಂದೆ ಬೇಕಾದರೂ ಹೋಗುತ್ತಾರೆ. ಏಕೆಂದರೆ ಅವರು ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ ಅಲ್ಲ. ಇರುವೆ ಕಟ್ಟಿದ ಹುತ್ತದೊಳಗೆ ಹಾವಿನಂತೆ ಬಂದು ಸೇರಿಕೊಂಡು ಹುತ್ತವನ್ನೇ ನಾಶ ಮಾಡುವ ವ್ಯಕ್ತಿ. ಅವರಿಗೆ ಸಿದ್ಧಾಂತದ ರಾಜಕಾರಣ ಗೊತ್ತಿಲ್ಲ. ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರ ಮಾಡುವುದಷ್ಟೇ ಗೊತ್ತಿರಬಹುದು ಎಂದು ಕುಟುಕಿದರು.
ಕಾಂಗ್ರೆಸ್ಸನ್ನೇ ಜನ ಅಟ್ಟಾಡಿಸಿ ಹೊಡೆದಿದ್ದಾರೆ: ಬಿಜೆಪಿಯವರು ಮತ್ತೆ ಆಪರೇಷನ್ ಕಮಲ ಮಾಡಿದರೆ ಜನ ಅಟ್ಟಾಡಿಸಿ ಹೊಡೆಯುತ್ತಾರೆ ಎನ್ನುವ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಶ್ರೀರಾಮುಲು, ಈಗಾಗಲೇ ದೇಶಾದ್ಯಂತ ಜನ ಕಾಂಗ್ರೆಸ್ಸನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಯಾವ ರಾಜ್ಯದಲ್ಲೂ ಬಹುಮತ ಇಲ್ಲದ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದರು.
ಉಪ ಚುನಾವಣೆ ನಡೆದ ರಾಜ್ಯದ 15 ಕ್ಷೇತ್ರಗಳ ಪೈಕಿ ಏಳೆಂಟು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. 12 ರಿಂದ 13 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದವರು ಬಿಜೆಪಿಗೆ ಹೆಚ್ಚು ಮತ ಹಾಕಿದ್ದಾರೆ ಎಂದು ಹೇಳಿದರು.
ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರದು
ಬೆೆಳಗಾವಿ: ಈ ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುತ್ತದೆ. ಸಮೀಕ್ಷೆಗಳು ಕೆಲವೊಮ್ಮೆ ಬೇರೆಯಾಗಬಹುದು. ಗೋಕಾಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಗೆಲ್ಲುವ ಸಮಾನ ಅವಕಾಶವಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ನಿರೀಕ್ಷೆ ಪ್ರಕಾರ ಉಪಚುನಾವಣೆಯಲ್ಲಿ ಕಾಂಗ್ರೆಸ್ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ.
ಜೆಡಿಎಸ್ ಜತೆ ಹೊಂದಾಣಿಕೆ ಬಗ್ಗೆ ಈಗಲೇ ಹೇಳಲು ಆಗುವುದಿಲ್ಲ. ಈಗಿನ ಸ್ಥಿತಿಯಲ್ಲಿ ಹೊಂದಾಣಿಕೆ ಬಹಳ ಕಷ್ಟ. ನಮ್ಮದೇನಿದ್ದರೂ ಮುಂದಿನ ಚುನಾವಣೆಗೆ ಸಿದ್ಧರಾಗುವುದು ಎಂದು ಹೇಳಿದರು. ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆದು ತರುತ್ತೇನೆ ಎಂದು ಹೇಳುವ ರಮೇಶ, ಸುದ್ದಿಯಲ್ಲಿರಲು ದಿನಾ ಒಂದು ಹೇಳಿಕೆ ಕೊಡುತ್ತಾನೆ. ಒಳ್ಳೆಯದು ಅಥವಾ ಕೆಟ್ಟದ್ದನ್ನು ನೋಡದೇ ಮಾತನಾಡುತ್ತಾನೆ. ಹೀಗಾಗಿ, ರಮೇಶನನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಕಿಡಿ ಕಾರಿದರು.
ರಮೇಶ ತನ್ನ ನೆಲೆ ಬಿಟ್ಟು ಬೇರೆಯವರ ನೆಲೆ ಮೇಲೆ ಬಂದು ಕೂಡುತ್ತಾನೆ. ಬೇರೆಯವರ ಬಗ್ಗೆ ಟೀಕೆ ಮಾಡುತ್ತಾನೆ. ಸುದ್ದಿಯಲ್ಲಿರಲು ಸಂಬಂಧವಿಲ್ಲದ ಹೇಳಿಕೆಗಳನ್ನು ನೀಡುವುದು ರಮೇಶ ಕೆಲಸ ಎಂದು ಏಕವಚನದಲ್ಲಿ ಟೀಕಿಸಿದರು. ಬಿಜೆಪಿ ಗರ್ಭಗುಡಿ ಇದ್ದ ಹಾಗೆ. ಒಳಗೆ ಮಂಗಳಾರತಿ ಮಾಡುವುದಕ್ಕೆ ಪೂಜಾರಿಗಳು ಇರುತ್ತಾರೆ.
ಹೊರಗಿನಿಂದ ಬಂದು ತೀರ್ಥ ಪ್ರಸಾದ ತೆಗೆದುಕೊಂಡು ಹೋಗುವವರು ಬೇರೆ. ಅಲ್ಲಿ ರಮೇಶನದ್ದು ಇದೇ ವ್ಯವಸ್ಥೆಯಾಗಿದೆ ಎಂದರು. ರಮೇಶ ಬಿಜೆಪಿಯಲ್ಲಿ ಮೂರನೇ ಸ್ಥಾನದಲ್ಲಿ ಇರುತ್ತಾನೆ. ಇನ್ನು ಬಿಜೆಪಿಗೆ ಹೋಗಿರುವ 15 ಶಾಸಕರ ಆಸೆಗಳನ್ನು ಪೂರೈಸುವುದು ಯಡಿಯೂರಪ್ಪ ಅಲ್ಲ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸೇರಿ ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಖರ್ಗೆ ಸಿಎಂ ಆಗಬೇಕು ಎಂದು ಹೇಳಿರುವ ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ನಡೆಯನ್ನು ಇದುವರೆಗೆ ಯಾರಿಗೂ ಕಂಡು ಹಿಡಿಯಲು ಆಗಿಲ್ಲ. ಆದರೆ, ದೇವೇಗೌಡರು ಯಾವಾಗಲೂ ಬಿಜೆಪಿಗೆ ವಿರೋಧವಾಗಿರುತ್ತಾರೆ ಎಂಬುದು ನಮ್ಮ ಆಶಯ ಎಂದು ಮಾರ್ಮಿಕವಾಗಿ ಹೇಳಿದರು.
ನನಗೂ ಸಚಿವ ಸ್ಥಾನ ಬೇಕು
ಹೊನ್ನಾಳಿ: “ನಾನೇನು ರಾಜಕೀಯ ಸನ್ಯಾಸಿಯಲ್ಲ. ಉಪ ಚುನಾವಣೆ ಫಲಿತಾಂಶದ ನಂತರ ನಡೆಯುವ ಸಂಪುಟ ಪುನರ್ ರಚನೆ ವೇಳೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುವೆ’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರಿಗೆ ಮೊದಲು ಸಚಿವ ಸ್ಥಾನ ನೀಡಲಿ.
ನಂತರ, ನನಗೂ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುತ್ತೇನೆ ಎಂದರು. ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವುದಲ್ಲದೆ ಮುಖ್ಯಮಂತ್ರಿಗಳು ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿರುವೆ. ಹೀಗಾಗಿ, ತಮಗೆ ಸಚಿವ ಸ್ಥಾನ ನೀಡುತ್ತಾರೆಂಬ ವಿಶ್ವಾಸವಿದೆ ಎಂದರು.
ಪೂರ್ಣಾವಧಿ ಸರ್ಕಾರ: ಉಪಚುನಾವಣೆಯಲ್ಲಿ 10 ರಿಂದ 12 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಮೂರೂವರೆ ವರ್ಷ ಅಧಿ ಕಾರ ನಡೆಸುತ್ತಾರೆ. ವಿಪಕ್ಷಗಳ ಲೆಕ್ಕಾಚಾರವನ್ನು ರಾಜ್ಯದ ಜನತೆ ಈಗಾಗಲೇ ಉಲ್ಟಾ ಮಾಡಿದ್ದಾರೆ. ಮೂರೂವರೆ ವರ್ಷ ವಿಪಕ್ಷ ಸ್ಥಾನದಲ್ಲಿದ್ದು, ಆಡಳಿತ ಪಕ್ಷದ ತಪ್ಪು-ಒಪ್ಪುಗಳನ್ನು ತಿಳಿಸುವುದನ್ನು ಬಿಟ್ಟು ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.