ಸಿದ್ದು, ಬಿಎಸ್‌ವೈ, ಈಶ್ವರಪ್ಪ ಜಟಾಪಟಿ
Team Udayavani, Oct 12, 2019, 3:09 AM IST
ವಿಧಾನಸಭೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಶುಕ್ರವಾರ ನೆರೆ ಪ್ರವಾಹ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, 5 ನಿಮಿಷದಲ್ಲಿ ಪ್ರವಾಹ ಕುರಿತ ಚರ್ಚೆ ಪೂರ್ಣಗೊಳಿಸಿ ಎಂದು ತಾಕೀತು ಮಾಡಿ, ಡೆಡ್‌ಲೈನ್ ವಿಧಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸದನದಲ್ಲಿ ಮಾತನಾಡಲು ಅವಕಾಶ ಕೇಳುವುದು ಭಿಕ್ಷೆಯಲ್ಲ. 5 ನಿಮಿಷದಲ್ಲಿ ಮಾತು ಮುಗಿಸಲು ಸಾಧ್ಯವಿಲ್ಲ ಎಂದರು.
ಇದು ಸಿದ್ದರಾಮಯ್ಯ ಹಾಗೂ ಸ್ಪೀಕರ್ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ಹಂತದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಧ್ಯ ಪ್ರವೇಶಿಸಿ, ಸ್ಪೀಕರ್ ಬೆಂಬಲಕ್ಕೆ ನಿಂತರು. ಇದು ವಾಗ್ವಾದಕ್ಕೆ ಕಾರಣವಾಗಿ, ವೈಯಕ್ತಿಕ ಟೀಕೆಗಳಿಗೆ ಸದನ ಸಾಕ್ಷಿಯಾಯಿತು. ಈ ಹಂತದಲ್ಲಿ ಸಿದ್ದು, ಸ್ಪೀಕರ್, ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ನಡೆದ ಮಾತಿಕ ಚಕಮಕಿಯ ಪರಿಯಿದು.
ಸ್ಪೀಕರ್: ಸಿದ್ದರಾಮಯ್ಯನವರೇ, ಬೇಗ ಮಾತು ಮುಗಿಸಿ.
ಸಿದ್ದು: ನಾನು ಇನ್ನೂ ಮಾತನಾಡುವುದು ಇದೆ.
ಸ್ಪೀಕರ್: ನಿನ್ನೆ ನಾಲ್ಕೂವರೆ ಗಂಟೆ, ಇಂದು ಒಂದೂವರೆ ಗಂಟೆ ಮಾತನಾಡಿದ್ದೀರಿ. ದಾಖಲೆ ಮಾಡಲು ಮಾತನಾಡುವುದು ಬೇಡ. ಆದಷ್ಟು ಬೇಗ ಮುಗಿಸಿ.
ಸಿದ್ದು: (ಜೋರು ಧ್ವನಿಯಲ್ಲಿ) ನೀವು ಹೇಳಿದಂತೆ ನಾನು ಮಾತು ಮುಗಿಸಲು ಸಾಧ್ಯವಿಲ್ಲ.
ಸ್ಪೀಕರ್: ನಾನು ಹೇಳಿದಂತೆ ಕೇಳಲೇಬೇಕು. ಇಲ್ಲಿ ಸದನ ನಡೆಸಬೇಕಿದೆ. ಎಲ್ಲರಿಗೂ ಮಾತನಾಡಲು ಅವಕಾಶ ಕೊಡಬೇಕು. ನ್ಯಾಯ ಒದಗಿಸಬೇಕು. 5 ನಿಮಿಷದಲ್ಲಿ ಮಾತು ಮುಗಿಸದಿದ್ದರೆ ನಾನು ಬೇರೊಬ್ಬರಿಗೆ ಅವಕಾಶ ಕೊಡಬೇಕಾಗುತ್ತದೆ.
ಸಿದ್ದು: ಆಗಲ್ಲಪ್ಪಾ, ನೀನು ಹೇಳಿದಂತೆ ಕೇಳಲ್ಲ, ಆಗಲ್ಲ. ನಾನು ಸದನಕ್ಕೆ ಹೊಸಬನಲ್ಲ, 1983ರಿಂದ ಇದ್ದೇನೆ. ನಿನ್ನೆ ಮೊನ್ನೆ ಬಂದಿಲ್ಲ. ಇಟ್ಸ್ ಮೈ ರೈಟ್, ಯೂ ಕಾಂಟ್ ಕರ್ಬ್.
ಸ್ಪೀಕರ್: ನಿಯಮಾವಳಿ 69ರ ಪ್ರಕಾರ ಎಷ್ಟು ಕಾಲಾವಕಾಶ ಕೊಡಬೇಕು ಎಂಬುದು, ಮಾತು ನಿಲ್ಲಿಸಿ ಬೇರೊಬ್ಬರಿಗೆ ಅವಕಾಶ ಕೊಡಲು
ಸ್ಪೀಕರ್‌ಗೆ ಅಧಿಕಾರ ಇದೆ.
ಜೆ.ಸಿ.ಮಾಧುಸ್ವಾಮಿ: ಸ್ಪೀಕರ್‌ಗೆ ಆ ಅಧಿಕಾರ ಇದೆ.
ಬಸವರಾಜ ಬೊಮ್ಮಾಯಿ: ನೀವು ಎಷ್ಟು ಎಂದು ಮಾತನಾಡುವುದು. ಅದಕ್ಕೆ ಒಂದು ಮಿತಿಯಿಲ್ಲವೇ.
ಸಿದ್ದು: ಮಾತನಾಡಲು ಅವಕಾಶ ಕೇಳುವುದು ಭಿಕ್ಷೆಯಾ?
ಸಿಎಂ ಯಡಿಯೂರಪ್ಪ: ಏನೇನೋ ಭಾಷೆ ಯಾಕೆ ಬಳಕೆ ಮಾಡುತ್ತೀರಿ?.
ಸಿದ್ದು: ಅಲ್ಲ ಸಿಎಂ ಅವರೇ, ಖಜಾನೆ ಖಾಲಿ ಅಂತೀರಿ, ನಿಮ್ಮ ಪಕ್ಷದ ಅಧ್ಯಕ್ಷರು ಲೂಟಿಯಾಗಿದೆ ಅಂತಾರೆ. ಖಜಾನೆ ಖಾಲಿ ಎಂದರೆ ಚೀಲ ತೆಗೆದುಕೊಂಡು ಬಂದು ತುಂಬಿಕೊಂಡು ಹೋಗುವುದೇ?.
ಯಡಿಯೂರಪ್ಪ: ಇದಕ್ಕೆ ನಾನು ಉತ್ತರಿಸುತ್ತೇನೆ.
ಸಿದ್ದು: ಪ್ರವಾಹ ಸಂತ್ರಸ್ತರಿಗೆ ಹತ್ತು ಸಾವಿರ ರೂ.ಕೊಟ್ಟಿದ್ದೇ ಹೆಚ್ಚು ಎಂದು ನಿಮ್ಮ ಸಚಿವರು ಹೇಳ್ತಾರೆ ಎಂದು ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಪ್ರದರ್ಶಿಸಿ ಈಶ್ವರಪ್ಪ ಹೆಸರು ಪ್ರಸ್ತಾಪಿಸಿದರು.
ಈಶ್ವರಪ್ಪ: ನಾನು ಅದಕ್ಕೆ ಸ್ಪಷ್ಟನೆ ಕೊಡುತ್ತೇನೆ.
ಸಿದ್ದು: ನಾನು ಕುಳಿತುಕೊಳ್ಳುವುದಿಲ್ಲ.
ಈಶ್ವರಪ್ಪ: ಇದು ರಾಕ್ಷಸಿ ಮನೋಭಾವ. ನನ್ನ ಹೆಸರು ಹೇಳಿದ ಮೇಲೆ ನಾನು ಸ್ಪಷ್ಟನೆ ಕೊಡಲು ಅವಕಾಶ ಕೊಡುವುದು ಮನುಷ್ಯತ್ವ ಅಲ್ಲವೇ?
ಸಿದ್ದು: ಪತ್ರಿಕೆಗಳಲ್ಲಿ ಬಂದಿದೆ ರೀ, ಇದು ನೀವು ಹೇಳಿದ್ದೇ.
ಈಶ್ವರಪ್ಪ: ನೀವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆ ಬಾಗಿಲು ಕಾದರೂ ಒಳಗೆ ಬಿಟ್ಟುಕೊಳ್ಳಲಿಲ್ಲ. ಬ್ಲಾಕ್‌ವೆುಲ್ ಮಾಡಿ ಪ್ರತಿಪಕ್ಷ ನಾಯಕರಾಗಿದ್ದೀರಿ. ಕಾಂಗ್ರೆಸ್ ಕಟ್ಟಿ ಬೆಳೆಸಿದವರು ಇಲ್ಲೇ ಕುಳಿತಿದ್ದಾರೆ. ನೀವು ಆ ಪಕ್ಷ ಸಮಾಧಿ ಮಾಡಿದ್ದೀರಿ. 115 ಇದ್ದದ್ದನ್ನು 78ಕ್ಕೆ ಇಳಿಸಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ. ಸಮ್ಮಿಶ್ರ ಸರ್ಕಾರ ಪತನಗೊಳಿಸಿದ್ದು ನೀವೇ ಎಂದು ಜೆಡಿಎಸ್‌ನವರೇ ಹೇಳಿದ್ದಾರೆ. ನಿಮಗೆ ಪ್ರತಿಪಕ್ಷ ಸ್ಥಾನ ಬೇಕಿತ್ತು? ನಿಮ್ಮ ಹಣೆಬರಕ್ಕಿಷ್ಟು ಬೆಂಕಿಹಾಕಾ.
ಸಿದ್ದು: ಸುಮ್ಮನೆ ಕುಳಿತುಕೊಳ್ರಿ. ನೀವು ಎಂಎಲ್‌ಎ ಸ್ಥಾನಕ್ಕಾಗಿ ಗುಲಾಮಗಿರಿ ಮಾಡಿದೋರು, ಉಪ ಮುಖ್ಯಮಂತ್ರಿಯಾಗಿಧ್ದೋರು ಮಂತ್ರಿಯಾಗಿ ದ್ದೀರಿ, ನಾನಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ. ನಿಮ್ಮ ಯೋಗ್ಯತೆಗೆ ಪ್ರಧಾನಿ ಭೇಟಿ ಮಾಡಲಿಕ್ಕೆ ಆಗಲಿಲ್ಲ. ರಾಜಕೀಯ ಸಂಸ್ಕೃತಿ ಇಲ್ಲದವರು ನೀವು. ನಿಮ್ಮ ಜತೆ ಮಾತನಾಡುವುದು ಏನಿದೆ?.
ಮಾಜಿ ಸ್ಪೀಕರ್ ರಮೇಶ್‌ಕುಮಾರ್: ಈಶ್ವರಪ್ಪ ಮಾತನಾಡಲು ನಿಂತರೆ ನಾವು ಏನೂ ಮಾತನಾ ಡಲ್ಲ, ಅವರ ಲೆವೆಲ್ ಬೇರೆ, ನಮ್ಮ ಲೆವೆಲ್ ಬೇರೆ.
ಭೀಮಾನಾಯ್ಕ: ನಿಮ್ಮ ರಾಯಣ್ಣ ಬ್ರಿಗೇಡ್ ಎಲ್ಲಿ ಹೋಯಿತು. ಪ್ರತಿಪಕ್ಷ ನಾಯಕನ ಸ್ಥಾನ ಆಯ್ಕೆ ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ, ನೀವ್ಯಾಕೆ ಮಾತಾಡ್ತೀರಿ. ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಿತಿ ಹೇಗಿದೆ ನೋಡಿಕೊಳ್ಳಿ.
ಸಿದ್ದು: ಆಯ್ತು, ಬೇಗ ಮಾತು ಮುಗಿಸುತ್ತೇನೆ.
“ಪ್ರತಿ ಹೆಕ್ಟೇರ್ ಬೆಳೆನಷ್ಟಕ್ಕೆ ಲಕ್ಷ ರೂ. ಪರಿಹಾರ ನೀಡಿ’
ವಿಧಾನಸಭೆ: “ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೆಳೆನಷ್ಟ ಪರಿಹಾರವಾಗಿ ಪ್ರತಿ ಹೆಕ್ಟೇರ್‌ಗೆ ಒಂದು ಲಕ್ಷ ರೂ. ನೀಡಬೇಕು. ನೆರೆಗೆ ಅಂಗಡಿ-ಮುಂಗಟ್ಟು ಕೊಚ್ಚಿ ಹೋಗಿದ್ದರೆ ಅದರ ಮಾಲೀಕರಿಗೂ ಪರಿಹಾರ ನೀಡಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪ್ರವಾಹ ಪರಿಹಾರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, “ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವೇ ಪರಿಹಾರ ಕೊಡಬೇಕು ಎಂದೇನಿಲ್ಲ. ರಾಜ್ಯ ಸರ್ಕಾರದ ವತಿಯಿಂದಲೂ ಕೊಡಬಹುದು. ನಾನು ಮುಖ್ಯಮಂತ್ರಿಯಾಗಿದ್ದಾಗ ಆಲಿಕಲ್ಲು ಮಳೆಗೆ ಬೆಳೆನಷ್ಟವಾದಾಗ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ನೀಡಲಾಗಿತ್ತು’ ಎಂದರು.
ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಖುಷ್ಕಿ ಹಾಗೂ ತರಿ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ ಕ್ರಮವಾಗಿ 15,500 ಹಾಗೂ 6,800 ರೂ. ನಿಗದಿಯಾಗಿದೆ. ಆದರೆ, ಒಂದು ಎಕರೆ ಕಬ್ಬು ಅಥವಾ ಭತ್ತ ಬೆಳೆಯಲು ಕನಿಷ್ಠ 50 ಸಾವಿರ ರೂ. ಖರ್ಚು ಬರುತ್ತದೆ. ಹೀಗಾಗಿ, ಈ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರವಾಹದಿಂದ ಸಾವಿರಾರು ಎಕರೆ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿ ಕೃಷಿ ಚಟುವಟಿಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಕೃಷಿ ಯೋಗ್ಯ ಭೂಮಿ ಮಾಡಿಕೊಳ್ಳಲು ಅಗತ್ಯ ನೆರವು ನೀಡಬೇಕು. ರೈತರು ತಮ್ಮ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಮನೆ ಪ್ರವಾಹಕ್ಕೆ ಕುಸಿದಿದ್ದರೂ ಹತ್ತು ಲಕ್ಷ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಶಾಲಾ ಕಟ್ಟಡಗಳು ಕುಸಿದಿವೆ. ಪಠ್ಯ ಪುಸ್ತಕಗಳು ಕೊಚ್ಚಿ ಹೋಗಿವೆ. ಮಕ್ಕಳಿಗೆ ಬದಲಿ ಪಠ್ಯಪುಸ್ತಕ ಇದುವರೆಗೂ ವಿತರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಹೊಣೆಗಾರಿಕೆ ನಿಭಾಯಿಸುತ್ತಿಲ್ಲ. ತಮ್ಮ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರವಾಹದಿಂದ ಸಾವಿರ ಹಳ್ಳಿಗಳು ತೊಂದರೆಗೊಳಗಾಗಿವೆ. ಅದರಲ್ಲಿ ಬಾದಾಮಿಯ 43 ಹಳ್ಳಿಗಳೂ ಸೇರಿವೆ. ನದಿ ದಂಡೆ, ಹೊಳೆ ದಂಡೆ ಹಳ್ಳಿಗಳನ್ನ ಸಂಪೂರ್ಣವಾಗಿ ಸ್ಥಳಾಂತರ ಮಾಡಿ. ಮನೆ ಕೊಟ್ಟಿಗೆ ಕಟ್ಟಿಕೊಳ್ಳಲು 2400 ಚದರಡಿ ವಿಸ್ತೀರ್ಣದ ಜಾಗ ನೀಡಿ ಎಂದು ಒತ್ತಾಯಿಸಿದರು.
ಭೂ ಸುಧಾರಣೆ ಕಾಯ್ದೆ ಅನ್ವಯ ಆಗಲ್ವಾ?: “ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನನ್ನದೂ 100 ಎಕರೆ ಇದೆ, 1 ಕೋಟಿ ಕೊಡಬೇಕೆಂದು ಹೇಳಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ ಎದ್ದು ನಿಂತ ಲಕ್ಷ್ಮಣ ಸವದಿ, “ನಾನು ಹೇಳಿದ್ದು ಹಾಗಲ್ಲ ಸರ್. ನನ್ನ ಆತ್ಮೀಯ ರೈತ ಸಂಘದ ಮುಖಂಡ ಎಕರೆಗೆ 1 ಲಕ್ಷ ರೂ. ಕೊಡಿ ಎಂದು ಕೇಳಿದರು. ಅದಕ್ಕೆ ಹಾಗಾದರೆ ನಮ್ಮದು 80 ಎಕರೆ ಇದೆ, ನನಗೂ 80 ಲಕ್ಷ ರೂ. ಬರಬೇಕಾಗುತ್ತದೆ ಎಂದು ಹೇಳಿದ್ದೆ’ ಎಂದರು. ಅದಕ್ಕೆ ಸಿದ್ದರಾಮಯ್ಯ, “ನಿಮಗೆ ಭೂ ಸುಧಾರಣೆ ಕಾಯ್ದೆ ಅನ್ವಯ ಆಗಲ್ವಾ?’ ಎಂದಾಗ “80 ಎಕರೆ ನಮ್ಮ ಇಡೀ ಕುಟುಂಬದ್ದು’ ಎಂದು ಲಕ್ಷ್ಮಣ ಸವದಿ ಸಮಜಾಯಿಷಿ ನೀಡಿದರು.
ಬೆಳೆ ವಿಮೆ ನಿರ್ಲಕ್ಷ್ಯ ಆರೋಪ: “ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆಯಡಿ ರಾಜ್ಯ ಸರ್ಕಾರವು ಪ್ರವಾಹ ಸ್ಥಿತಿಯ ಬಗ್ಗೆ 15 ದಿನಗಳಲ್ಲಿ ಪ್ರಕೃತಿ ವಿಕೋಪ ಎಂದು ಅಧಿಸೂಚನೆ ಹೊರಡಿಸಿದ್ದರೆ ವಿಮೆ ಮಾಡಿಸಿ ಬೆಳೆನಷ್ಟ ಹೊಂದಿದ ರೈತರಿಗೆ 3 ರಿಂದ 5 ಸಾವಿರ ಕೋಟಿ ರೂ. ವರೆಗೆ ಪರಿಹಾರ ಸಿಗುತ್ತಿತ್ತು. ಆದರೆ, ಸರ್ಕಾರ ಆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ’ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಆರೋಪಿಸಿದರು.
ಮತ್ತೊಬ್ಬ ಸದಸ್ಯ ಈಶ್ವರ್ ಖಂಡ್ರೆ, “ನಾನು ಈ ಕುರಿತು ಮೊದಲೇ ಮುಖ್ಯ ಮಂತ್ರಿಗೆ ಪತ್ರ ಬರೆದಿದ್ದೆ ಆದರೂ ನಿರ್ಲಕ್ಷ್ಯ ಮಾಡಲಾ ಯಿತು’ ಎಂದು ದೂರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಕುಮಾರ್ ಬಂಗಾರಪ್ಪ, “ವಿಮಾ ಕಂಪೆನಿಯವರು ತಮ್ಮದೇ ಮಾನದಂಡದಗಳಡಿ ಹವಾಮಾನ, ಮಳೆ ಪರಿಸ್ಥಿತಿ ನೋಡಿ ಪರಿಹಾರ ನೀಡುತ್ತಾರೆ’ ಎಂದರು. ಹಿರಿಯ ಸದಸ್ಯ ಸಿ.ಎಂ.ಉದಾಸಿ, ರೈತರಿಗೆ ವಿಮೆ ಮಾಡಿಸಿ ಅವರಿಗೆ ಪರಿಹಾರ ಕೊಡಿಸುವ ವಿಚಾರದಲ್ಲಿ ಜನಪ್ರತಿನಿಧಿಗಳ ಜವಾಬ್ದಾರಿಯೂ ಇದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.