ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
ಚಿಕ್ಕಮಗಳೂರು ಬಳಿಕ ದ.ಕ. ಜಿಲ್ಲೆಯಲ್ಲಿ ಅನುಷ್ಠಾನ
Team Udayavani, May 6, 2024, 7:30 AM IST
ಬೆಳ್ತಂಗಡಿ: ಕಾಡಾನೆಗಳ ನಿರಂತರ ಹಾವಳಿಯಿಂದ ಅರಣ್ಯದಂಚಿನ ಕೃಷಿಕರು ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸರಕಾರವು ಆನೆ ಕಂದಕ, ಖಾಸಗಿ ಸೋಲಾರ್ ಬೇಲಿಗೆ ಪ್ರೋತ್ಸಾಹ, ಕಾಂಕ್ರೀಟ್ ಬ್ಯಾರಿಕೇಡ್, ರೈಲ್ವೇ ಬ್ಯಾರಿಕೇಡ್ ಪ್ರಯೋಗ ನಡೆಸಿತ್ತು. ಆದರೂ ಆನೆಗಳು ಚಾಕಚಕ್ಯತೆಯಿಂದ ಅವನ್ನೆಲ್ಲ ದಾಟಿ ಕೃಷಿಯನ್ನು ಧ್ವಂಸಗೊಳಿಸುತ್ತಿವೆ. ಇದನ್ನು ಹೇಗಾದರು ತಡೆಗಟ್ಟಬೇಕೆಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಜೋತಾಡುವ ಸೌರ ಬೇಲಿಯ ಅನುಷ್ಠಾನಕ್ಕೆ ಮುಂದಾಗಿದೆ.
ದ.ಕ. ಜಿಲ್ಲೆಯ ಚಾರ್ಮಾಡಿ, ಶಿಶಿಲ, ಶಿಬಾಜೆ, ಶಿರಾಡಿ ಹಾಗೂ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಗಡಿಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಕೃಷಿಯ ಜತೆಗೆ ಅನೇಕ ಜೀವಹಾನಿಯೂ ಸಂಭವಿಸಿದೆ. ಇದನ್ನು ತಡೆಯಲು ಅರಣ್ಯ ಇಲಾಖೆಯು ಜೋತಾಡುವ ಸೌರಬೇಲಿ (Solar Powered Double line Hanging Fence) ಯನ್ನು ಈಗಾಗಲೇ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದು, ಪರಿಣಾಮಕಾರಿ ಎನಿಸಿರುವುದರಿಂದ ದ.ಕ. ಜಿಲ್ಲೆಯಲ್ಲಿ ಪ್ರಯೋಗವಾಗಿ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯದಲ್ಲಿ ಅನುಷ್ಠಾನ ಗೊಳಿಸಿದೆ.
ಏನಿದು ಜೋತಾಡುವ ಬೇಲಿ: ಈ ಹಿಂದೆ ನೆಲದಿಂದ ಸುಮಾರು 6ರಿಂದ 8 ಅಡಿಗಳಷ್ಟು ಎತ್ತರಕ್ಕೆ ಕಂಬಗಳಿಗೆ ಸೋಲಾರ್ ಬೇಲಿ ಅಳವಡಿಸುವ ಕ್ರಮವಿತ್ತು. ಹ್ಯಾಂಗಿಂಗ್ ಸೋಲಾರ್ ಬೇಲಿಯು ಸುಮಾರು 14 ಅಡಿ ಎತ್ತರವಿದೆ. ಒಂದು ಕಂಬದಿಂದ ಒನ್ನೊಂದು ಕಂಬಕ್ಕೆ 80 ಅಡಿ ದೂರ. ಕಂಬದ ಮೇಲ್ಭಾಗದಿಂದ ವಿದ್ಯುತ್ ತಂತಿಯಂತೆ ಎರಡೂ ಬದಿ ತಂತಿ ಹಾದು ಹೋಗುತ್ತದೆ. ಆ ತಂತಿಗೆ ಎರಡು ಬದಿಯಲ್ಲಿ ನೆಲದವರೆಗೆ ತಂತಿಯನ್ನು ಇಳಿಯಬಿಟ್ಟು ಸುಮಾರು 9 ವೋಲ್ಟ್ನಷ್ಟು ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.
ತಂತಿ ಅಳವಡಿಕೆಗೆ ಕಂಬವನ್ನು ಕಾಂಕ್ರೀಟ್ ಅಡಿಪಾಯದಿಂದ ನಿರ್ಮಿಸುವುದರಿಂದ ಬಲಿಷ್ಠ ಹಾಗೂ ಸುದೀರ್ಘ ಬಾಳಿಕೆ ಬರುತ್ತದೆ. ಸೋಲಾರ್ ಪವರ್ ಜನರೇಟರನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ತಂತಿಯ ಸ್ಪರ್ಶವಾದಾಗ ಲಘು ವಿದ್ಯುತ್ ಆಘಾತವಾಗುವುದರಿಂದ ಆನೆಗಳು ಮತ್ತೂಮ್ಮೆ ಆ ದಾರಿಯಲ್ಲಿ ಬರಲು ಹಿಂಜರಿಯುತ್ತವೆ. ಈ ವಿದ್ಯುತ್‌ನಿಂದ ಆನೆಗಳ ಜೀವಕ್ಕೆ ಅಪಾಯವಿಲ್ಲ. ಅವುಗಳ ಚಲನವಲನ ದಾಖಲಿಸಲು ಸಿಸಿ ಕೆಮರಾವನ್ನೂ ಅಳವಡಿಸಲಾಗಿದೆ. ಆನೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶವೂ ರವಾನೆಯಾಗುತ್ತದೆ.
ಬೆಳ್ತಂಗಡಿ, ಸುಬ್ರಹ್ಮಣ್ಯದಲ್ಲಿ ಅಳವಡಿಕೆ
ಸುಬ್ರಹ್ಮಣ್ಯ ಸಮೀಪ ಸುಮಾರು 1 ಕಿ.ಮೀ. ದೂರಕ್ಕೆ ಯೋಜನೆ ಅಳವಡಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ನರ್ಸರಿಗೆ ಕಾಡಾನೆ ದಾಳಿ ನಡೆಸಿ 2,000ಕ್ಕೂ ಅಧಿಕ ಗಿಡಗಳನ್ನು ಧ್ವಂಸಗೊಳಿತ್ತು. ಇದರಿಂದ ಮುಂಡಾಜೆ ಹಾಗೂ ಕಡಿರುದ್ಯಾವರ ಗ್ರಾಮಕ್ಕೆ ವ್ಯಾಪಿಸುವ ಅರಣ್ಯದಲ್ಲಿ ಫರ್ಲಾನಿವರೆಗೆ 2.5 ಕಿ.ಮೀ. ದೂರದಲ್ಲಿ 12 ಲಕ್ಷ ರೂ. ಅನುದಾನದಲ್ಲಿ ಜೋತಾಡುವ ಸೌರ ಬೇಲಿ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ವಿಸ್ತರಿಸಿದರೆ ಇನ್ನಷ್ಟು ಕೃಷಿಕರಿಗೆ ಪ್ರಯೋಜನವಾಗಲಿದೆ.
2023-24ರಲ್ಲಿ ಆನೆ ಕಂದಕ
ಬೆಳ್ತಂಗಡಿ-4.500 ಕಿ.ಮೀ., ಕಡಬ-3 ಕಿ.ಮೀ., ಸುಳ್ಯ 2 ಕಿ.ಮೀ. ಸೇರಿ 34 ಲಕ್ಷ ರೂ. ಆನೆ ಕಂದಕಕ್ಕೆ ವಿನಿಯೋಗಿಸಿದರೆ, ಇರುವ ಕಂದಕದ ವಿಸ್ತರಣೆಗಾಗಿ 72.150 ಲಕ್ಷ ರೂ.ಗಳನ್ನು ಅರಣ್ಯ ಇಲಾಖೆ ವಿನಿಯೋಗಿಸಿದೆ.
ಕಾಡಾನೆ ದಾಳಿ ತಡೆಗೆ ಅರಣ್ಯ ಇಲಾಖೆ ಈ ಬಾರಿ ವಿಶೇಷ ಪ್ರಯೋಗ ನಡೆಸಿದೆ. ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯದಲ್ಲಿ ಹ್ಯಾಂಗಿಂಗ್ ಸೋಲಾರ್ ಬೇಲಿ ಅಳವಡಿಸಿದ್ದೇವೆ. ಯಶಸ್ಸು ಕಂಡಿದ್ದರಿಂದ ಕಡಬ, ಸುಳ್ಯದಲ್ಲಿ ಹೆಚ್ಚುವರಿ ಬೇಡಿಕೆಯಿದೆ. ಮುಂದಿನ ವರ್ಷ ಹೆಚ್ಚಿನ ಅವಕಾಶ ಕೋರಿ ಅನುಷ್ಠಾನ ಮಾಡಲಾಗುವುದು.
– ಅಂಥೋನಿ ಎಸ್. ಮರಿಯಪ್ಪ,
ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.