ಚಿಂತನೆಯ ಪರಿಧಿಯಲ್ಲಿ ಸ್ವಾತಂತ್ರ್ಯದ ಅಮೃತ ವರ್ಷ
Team Udayavani, Jun 15, 2022, 6:20 AM IST
ನಾಡ ಬಿಡುಗಡೆಯ 75ನೇ ಸಂವತ್ಸರದ ಸಡಗರಕ್ಕೆ ಇದೇ ಬರುವ ಆಗಸ್ಟ್ 15ಕ್ಕೆ ಚುಕ್ಕೆ ಇರಿಸಲಿದ್ದೇವೆ. ಸ್ವತಂತ್ರ ರಾಷ್ಟ್ರಧ್ವಜ ಸ್ವತ್ಛಂದ ನಭದಲ್ಲಿ ಹಾರಾಡಲು ಶುಭಾರಂಭಗೊಂಡು ಏಳೂವರೆ ದಶಕಗಳೇ ಸಂದು ಹೋಗುತ್ತಿವೆ. ವಿಶ್ವ ಕುಟುಂಬದಲ್ಲಿನ ಹಿರಿಯ ಅಕ್ಕಂದಿರ ಸಾಲಿಗೆ ನಮ್ಮ ಭಾರತ ಸೇರಿದ್ದು, ಜನಸಂಖ್ಯಾತ್ಮಕವಾಗಿ ಎರಡನೇ ಸ್ಥಾನ ಹಾಗೂ ವಿಸ್ತಾರದಲ್ಲಿ ಏಳನೆಯ ಸ್ಥಾನವನ್ನು ಅಲಂಕರಿಸಿದೆ. ಒಂದೊಮ್ಮೆ ಬಡ ರಾಷ್ಟ್ರ ಎನಿಸಿದ್ದ ನಮ್ಮ ದೇಶ ಈಗ ಜಗದಗಲ ಬಡಾ ದೇಶ ಎಂದೇ ಗುರುತಿಸಿಕೊಂಡಿದೆ. ಒಂದೊಮ್ಮೆ ಈ ರಾಷ್ಟ್ರ ಸೋಲಿನ ನೋವು ಅನುಭವಿಸಿದರೆ, ಇದೀಗ ಪ್ರಚಂಡ ನೆಲ, ಜಲ, ಭೂ ಸೇನೆಯೊಂದಿಗೆ ಅಣುಶಸ್ತ್ರವನ್ನೂ ಬತ್ತಳಿಕೆ ಯಲ್ಲಿರಿಸಿ, ಅತ್ಯಾಧುನಿಕ ಸುಸಜ್ಜಿತ ರಕ್ಷಣ ವ್ಯೂಹದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ರಾಷ್ಟ್ರ ಜೀವನ ಎಂಬುದು ಒಂದು ನಿರಂತರ ಹರಿ ಯುವ ಮಹಾನ್ ಸಿಂಧೂ ನದಿಯಂತೆ. ಅದರ ಬಿಂದುಗಳು ನಾವೆಲ್ಲ; ಅರ್ಥಾತ್ ನಮ್ಮ ಸಂವಿಧಾನ ಪ್ರಸ್ತಾವನೆಯೇ ಉÇÉೇಖೀಸುವಂತೆ ಭಾರತ ಪ್ರಜೆಗಳಾದ ನಾವೆಲ್ಲ ಎಂದು ಕರೆಸಿಕೊಳ್ಳುತ್ತಿದ್ದೇವೆ. ಸಾಗರದ ತೆರೆ ಹಾಗೂ ಸಮಯ ಎಂದಿಗೂ ಸ್ತಬ್ಧಗೊಳ್ಳುವುದೇ ಇಲ್ಲ ಎಂಬ ಮಾತಿದೆ. ಅದೇ ರೀತಿ “ಸಮಯದ ಹಕ್ಕಿ’ ಸದಾ ಆಗಸದಲ್ಲಿ ಮುಂದೆ ಹಾರುತ್ತಲೇ ಇದೆ ಅಂದರೆ ವೇಳೆ ಸರಿಯುತ್ತಲೇ ಇದೆ ಎಂಬುದಕ್ಕೆ ಗಂಗೆ, ತುಂಗೆ, ನೇತ್ರಾವತಿಯಂತಹ ನದಿಗಳಲ್ಲಿ ನೀರು ಹರಿಯುತ್ತಲೇ ಇದೆ ಎಂಬುದಾಗಿ ವಿಶೇಷಣಾತ್ಮಕವಾಗಿ ವಿವರಿಸುತ್ತೇವೆ. ಹೌದು, 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ಸ್ವತಂತ್ರವಾಗಿ ಕಣ್ಣು ತೆರೆಯಿತು; ಇದರ ಸಮಗ್ರ ಅಭಿವೃದ್ಧಿಯ ಮುಂಬೆಳಕು, ತಂಬೆಳಕು ಈ ನೆಲದ ರಾಷ್ಟ್ರ ಸಂವಿಧಾನದ ತಣ್ತೀಗಳಲ್ಲಿ ಪಸರಿಸಬೇಕಾಗಿದೆ.
ವ್ಯಕ್ತಿ ಜೀವನದ ಉತ್ತುಂಗತೆ ಸಾಧಿಸುವ ಸಾಧ್ಯತೆ ಯಂತೆಯೇ ರಾಷ್ಟ್ರಜೀವನದ ಪುನರುತ್ಥಾನಕ್ಕೆ ಮೂರು ಮೂಲಧಾತುಗಳಿವೆ. ಒಂದು- ಸಮಗ್ರ ಜನಮನದ ಧನಾತ್ಮಕ ಚಿಂತನೆ; ಎರಡು- ನಿರಂತರ ಪೂರಕ ಕಾರ್ಯ ಚಟುವಟಿಕೆ; ಮೂರು- ಪ್ರೇರಕ, ಸಮರ್ಥ ಮುಂದಾಳತ್ವ. ಸ್ವತಂತ್ರ ಭಾರತದ “ಅಮೃತ ಮಹೋತ್ಸವ’ದ ಈ ಕಾಲಘಟ್ಟದಲ್ಲಿ ಉತ್ತರದ ಹಿಮಗಿರಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗಿನ “ಜನಗಣ’ ಮನದ ಚಿಂತನೆ ಧನಾತ್ಮಕವಾಗಿ ರೂಪುಗೊಂಡಾಗ ಮಾತ್ರ ರಾಷ್ಟ್ರಪ್ರಗತಿಯ ಚಕ್ರ ಮುಂದೆ ಚಲಿಸಬಲ್ಲುದು. ಇಲ್ಲಿ ನೂರಕ್ಕೆ ನೂರು ಫಲಿತಾಂಶ ದೊರಕೀತು ಎಂಬ ಭ್ರಮಾಲೋಕದಲ್ಲಿ ನಾವು ತೇಲುವಂತಿಲ್ಲ. ವಾಸ್ತವಿಕತೆಗೆ ಇಳಿದಾಗ ನೆಲ, ಜಲ, ಭಾಷೆ, ಮತ, ಜಾತಿ, ಆರ್ಥಿಕ ಸಂಪನ್ನತೆ ಇವೆಲ್ಲದರ ವಿಭಿನ್ನತೆಯ ಮಹಾಪೂರದ, ಬಿರುಕುಗಳ ಸರಮಾಲೆ ಭಾರತದ ಉದ್ದಗಲದಲ್ಲಿ ಕಾಣಬಲ್ಲೆವು. ಇಂತಹ ಏರು ತಗ್ಗುಗಳ ಕಂಪನದ ನೆಲದಲ್ಲೇ ನಾವು ನೆಲೆ ಯಾಗಿದ್ದೇವೆ. ಇದರೊಂದಿಗೇ ಸಂಬಂಧಗಳ ವಿಷಮತೆಯೇ ಒದಗಿ, ಗಡಿಯಲ್ಲಿ ಕಾಲ್ಕೆರೆದು ಜಗಳ ಕಾಯುವ, ಒಳ ನುಸುಳುವ, ಅಷ್ಟು ಮಾತ್ರ ವಲ್ಲ ಭಯೋತ್ಪಾದಕತೆ, ನಕ್ಸಲಿಸಂನಂತಹ ವಿಷ ಬೀಜ ಬಿತ್ತುವ ನೆರೆ “ಹೊರೆ’ಯನ್ನೂ ನಾವು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಆಂತರಿಕ ಹಾಗೂ ಅಂತಾರಾಷ್ಟ್ರೀಯ ಆಗುಹೋಗುಗಳ ಬಗೆಗೆ ಸದಾ ಜಾಗೃತವಾಗಿರುವ, ಉತ್ತಮ ವಿಚಾರ ಸಂಪನ್ನ ಪ್ರಜಾ ಸಮೂಹ ತೀರಾ ಅತ್ಯಗತ್ಯ. ಪ್ರಚಲಿತ “ಅಮೃತ ಗಳಿಗೆ’ಯಿಂದ “ಶತಮಾನದ ಉತ್ಸವ’ದ ಉತ್ಸಾಹಕ್ಕೆ ದಾಪುಗಾಲು ಹಾಕುತ್ತಿರುವ ಭಾರತದ ಎಳೆ ಪೀಳಿಗೆ, ತರುಣವೃಂದ ಈ ಜಾಗೃತಿಯ ಪುಷ್ಟಿ ಸತ್ವವನ್ನು ಹೀರಿಕೊಳ್ಳಬೇಕಾಗಿದೆ. ಕವಿ ಗೋಪಾಲಕೃಷ್ಣ ಅಡಿಗರು ನುಡಿದ “ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು; ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ’ ಎಂಬ ಮೈ ನವಿರೇಳಿಸುವ ಪದಃ ಪುಂಜಗಳಿಗೆ ಸಂವಾದಿಯಾಗಿ “ನವಭಾರತ’ ಕನಸಿಗೆ ಕಾವು ನೀಡಬೇಕಾಗಿದೆ.
ಇತಿಹಾಸವನ್ನು ಅರಿಯದವ ಇತಿಹಾಸ ನಿರ್ಮಿಸಲಾರ ಎಂಬ ಮಾತಿದೆ. ಬಹಳಷ್ಟು ತ್ಯಾಗ, ಬಲಿದಾನದ ಫಲಶ್ರುತಿಯಾಗಿ ದೂರದ ಬ್ರಿಟನ್‌ನ ಯೂನಿಯನ್ ಜಾಕ್ ಧ್ವಜ ಈ ನಮ್ಮ ಪುಣ್ಯ ಭೂಮಿಯಿಂದ ಕೆಳಗಿಳಿಯಿತು. ಆದರೆ ಇಲ್ಲೊಂದು ಗಂಭೀರ ಪ್ರಶ್ನೆ – ನಾವು, ಈ ವಿಶಾಲ ದೇಶ, ಅಪಾರ ಜನಸ್ತೋಮ ಈಸ್ಟ್ ಇಂಡಿಯಾದಂತಹ ಯಕಶ್ಚಿತ್ ಒಂದು ಕಂಪೆನಿಯ ಹಾಗೂ ಆ ಬಳಿಕ ಲಂಡನಿನ ನೇರ ಆಡಳಿತಕ್ಕೆ ಏಕೆ, ಹೇಗೆ ತಲೆ ಬಗ್ಗಿಸಿ, ಮುಜುರೆ ಸಲ್ಲಿಸಿತು ಎಂಬುದನ್ನು ಆಳವಾಗಿ ಅಭ್ಯಸಿಸಬೇಕು. ಈ ಅಮೃತ ಮಹೋತ್ಸವದ ಪರ್ವಕಾಲದಲ್ಲಿ ಕಳೆದ ನಿನ್ನೆಗಳ ತಾಯಿ ಭಾರತೀಯ ಸೋಲಿನ ಮಾನದಂಡಕ್ಕೆ ಯಾರು ಹೊಣೆ ಎಂಬುದನ್ನೂ ನಾವು ಇತಿಹಾಸಕ್ಕೆ ಮುಖಾಮುಖೀಯಾಗಿ ನೇರ ಸಂವಾದಿಸಬೇಕಾಗಿದೆ. ಆ ಕಾಲ ಘಟ್ಟದಲ್ಲಿನ ರಾಜ ಮಹಾ ರಾಜರ ಪರಸ್ಪರ ಅಂತಃಕಲಹ, ಕೌಟುಂಬಿಕ ಮೈಮನಸ್ಸು, ಸ್ವಾರ್ಥ, ಲೋಭ-ಈ ಎಲ್ಲ ಪಾಶಗಳಿಂದ ನಮ್ಮನ್ನು ನಾವೇ ಬಂಧಿಸಿಕೊಂಡೆವು; ದೂರದಿಂದ ವ್ಯಾಪಾರಕ್ಕಾಗಿ ಹಡಗು ಏರಿ ಬಂದ ಪೋರ್ಚುಗೀಸರು, ಡಚ್ಚರು, ಫ್ರೆಂಚರು ಕೊನೆಗೆ ಆಗಮಿಸಿದ ಇಂಗ್ಲಿಷರು- ಇವರಿಂದ ಸೋಲುಂಡೆವು. ಪ್ಲಾಸಿ ಕದನದಲ್ಲಿ ಗೆದ್ದ ರಾಬರ್ಟ್ ಕ್ಲೈವ್‌ನ ಕೇವಲ 200 ಮಂದಿಯಷ್ಟು ಸೈನಿಕರ ಬಿಂಕದ ಸಿಪಾಯಿಗಳ ಮೇಲೆ, ಅಲ್ಲಿ ಆ ಸಂಭ್ರಮವನ್ನು ಕಾಣುತ್ತಿದ್ದ 2,000ಕ್ಕಿಂತಲೂ ಮಿಕ್ಕಿದ ಜನಸ್ತೋಮ ಒಂದೊಂದು ಕಲ್ಲು ಎಸೆದಿದ್ದರೂ ಆ ಬ್ರಿಟಿಷ್ ಸಿಪಾಯಿಗಳ ದಂಡು ಅಪ್ಪಚ್ಚಿಯಾಗುತ್ತಿತ್ತು ಎಂಬುದಾಗಿ ಓರ್ವ ಇತಿಹಾಸಕಾರ ಉಲ್ಲೇಖೀಸುತ್ತಾನೆ.
ಇಲ್ಲೊಂದು ಕಣ್ಣು ತೆರೆಸುವ ಜಾಣ್ಣುಡಿಯಿದೆ. ಇತಿಹಾಸ ಕಲಿಸುವ ಒಂದೇ ಒಂದು ಪಾಠವೆಂದರೆ ನಾವು ಇತಿಹಾಸದಿಂದ ಏನನ್ನೂ ಕಲಿತಿಲ್ಲ ಎಂಬುದಾಗಿ. ದಾಟಿ ಬಂದ ಪಥವನ್ನೂ ಮರೆತು, ಮುಂದೆ ಸಾಗಲಿರುವ ದಾರಿಯ ಬಗೆಗೂ ಗಮನವಿರಿಸದೆ, ವರ್ತಮಾನದ ಬಗೆಗಷ್ಟೇ ಬೆಳಕು ಸೀಮಿತಗೊಳಿಸಿ ಸೂರ್ಯೋದಯ, ಸೂರ್ಯಾಸ್ತಮಾನಗಳನ್ನು ಎಣಿಸಿ ಸಾಗುವ ಬದುಕಿನಲ್ಲಿ ರಾಷ್ಟ್ರೋನ್ನತಿಯ ಸಂಭ್ರಮವನ್ನು ಕಾಣಲಾರೆವು. ಸಂವಿಧಾನ ರಚನಾ ಸಭೆಯಲ್ಲಿಯೇ ಈ ಬಗೆಗೆ ಡಾ| ಬಿ.ಆರ್.ಅಂಬೇಡ್ಕರ್ ಸ್ಪಷ್ಟವಾಗಿ ನಮ್ಮೆಲ್ಲರನ್ನು ಎಚ್ಚರಿಸಿ¨ªಾರೆ. ಪಕ್ಕದ ರಾಷ್ಟ್ರಗಳ ಜನತಂತ್ರೀಯ ಸಂವಿಧಾನ, ಕಾನೂನು ವ್ಯವಸ್ಥೆ ಎಲ್ಲವೂ ಅಗಾಧ ಕಂಪನದಿಂದ ಕುಸಿದು ಬಿದ್ದರೂ ನಮ್ಮ ಸಾಂವಿಧಾನಿಕ ತಳಹದಿ ಪ್ರಜಾಪ್ರಭುತ್ವದ ಸೌರಭ ತುಂಬಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರಕಾರಗಳಲ್ಲಿ ಸಕಾರಾತ್ಮಕವಾಗಿ ಸಂಚಲನ ಮೂಡಿಸುವಲ್ಲಿ ಶಕ್ತವಾಗಿದೆ. ಅದೇ ರೀತಿ ಪ್ರಜಾ ಸಮುದಾಯ ತಮ್ಮ ಹಕ್ಕುಗಳನ್ನು ಅನುಭವಿಸುವ ಜತೆಗೇ ಕರ್ತವ್ಯ ಅಥವಾ ಬಾಧ್ಯತೆಗಳನ್ನೂ ಸಮರ್ಪಕವಾಗಿ ನಿಭಾಯಿಸುವ ಮನೋಭೂಮಿಕೆಯನ್ನು ಹೊಂದಬೇಕಾಗಿದೆ.
ಭಾರತ ಸ್ವಾತಂತ್ರ್ಯದ “ಅಮೃತ ಮಹೋತ್ಸವ’ ಕಳೆದ ನಿನ್ನೆಗಳ ನೆನಪುಗಳ ಜತೆಗೆ, ವರ್ತಮಾನದ ಹೊಣೆಗಾರಿಕೆ ಹಾಗೂ ಭವಿಷ್ಯದ ಭದ್ರ ಬುನಾದಿಗಾಗಿ ಚಿಂತನೆಯ ಪುಷ್ಟಿ ತುಂಬ ಬೇಕಾಗಿದೆ. ಹಾಗಾದಾಗ ಮಾತ್ರ ಈ ಉತ್ಸವದ ನೈಜ ಉತ್ಸಾಹ, ಯೋಜನಾ ಪರಿಧಿ ಮೈದುಂಬಿಕೊಳ್ಳುತ್ತದೆ.
– ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.