ಜ್ಞಾನ-ಭಕ್ತಿ-ಕರ್ಮಯೋಗಗಳ ಸಂಗಮ ಶ್ರೀ ಚೈತನ್ಯರು
Team Udayavani, Mar 28, 2021, 6:40 AM IST
ಧರ್ಮಕ್ಕೆ ಚ್ಯುತಿಯಾದಾಗೆಲ್ಲ ನಾನು ಅವತರಿಸುತ್ತೇನೆ ಎಂಬುದು ಸ್ವಯಂ ಶ್ರೀಕೃಷ್ಣ ಪರಮಾತ್ಮನದೇ ಮಾತು. ಭೂಮಂಡಲವು ಜಾರಿಬೀಳುವುದರಲ್ಲಿದ್ದಾಗ ಅದನ್ನು ಎತ್ತಿ ಮತ್ತೆ ಸ್ವಸ್ಥಾನದಲ್ಲಿ ಕೂಡಿಸಿದ ವರಾಹಾವತಾರದಂತೆ, ಧರ್ಮಗ್ಲಾನಿಯಾದಾಗೆಲ್ಲ ಭಗವಂತ ತನ್ನ ಒಂದೊಂದು ಅವತಾರಗಳನ್ನು ವಸುಂಧರೆಯಲ್ಲಿ ಎತ್ತುತ್ತಾನೆಂಬುದು ಧರ್ಮಿಷ್ಠರ ನಂಬಿಕೆ, ಆಸ್ತಿಕರ ಭರವಸೆ.
ಹದಿನಾರನೆಯ ಶತಮಾನದ ಹೊತ್ತಿಗೆ ಭಾರತದ್ದು ಪ್ರಕ್ಷುಬ್ಧ ಪರಿಸ್ಥಿತಿ. ಮ್ಲೆತ್ಛರ ಆಕ್ರಮಣ, ಆಗಮನಗಳೆರಡೂ ಆಗಿದ್ದವು. ಭಾರತದ ಹಿಂದೂ ರಾಜರು ತಮ್ಮ ನೆಲೆ ಕಳಕೊಂಡಿದ್ದರು. ಬಹುತೇಕರು ಪದಚ್ಯುತರಾಗಿ ಸ್ವರಾಜ್ಯಸ್ಥಾಪನೆಯ ಕನಸು ಕಾಣುತ್ತಿದ್ದರು. ಇಸ್ಲಾಂ ರಿಲಿಜನ್ ನಿಧಾನವಾಗಿ ಎಲ್ಲೆಡೆ ಪಸರಿಸತೊಡಗಿತ್ತು. ಕ್ರಿಶ್ಚಿಯಾನಿಟಿಯ ಪ್ರವೇಶವೂ ಆಗಿಬಿಟ್ಟಿತ್ತು. ಭಾರತದ ಸನಾತನ ಸಂಸ್ಕೃತಿಗೆ ಬಹು ದೊಡ್ಡ ಹೊಡೆತ ಬಿದ್ದಿತ್ತು. ಗುರುಕುಲಗಳಿಗೆ ರಾಜಾಶ್ರಯ ತಪ್ಪಿತ್ತು. ವೇದ-ವೇದಾಂತಗಳನ್ನು ಓದಿಕೊಂಡವರ ಬದುಕು, ಭವಿಷ್ಯಗಳು ಅನಿಶ್ಚಿತವಾಗಿದ್ದವು. ಈ ಸಂದರ್ಭದಲ್ಲಿ ಜನಜಾಗೃತಿಯ ಮೂಲಕ ಭಕ್ತಿಪರಂಪರೆಯ ಪುನರುಜ್ಜೀವನ ಮಾಡಲು ಯತ್ನಿಸಿದ ಹಲವು ಸಾಧಕರಲ್ಲಿ ಎದ್ದು ಕಾಣುವ ವಿಶಿಷ್ಟ ವ್ಯಕ್ತಿತ್ವ ಶ್ರೀಕೃಷ್ಣಚೈತನ್ಯರದು.
ಹುಟ್ಟಿದ್ದು ಕ್ರಿಶ 1486ರ ಫೆಬ್ರವರಿ 18. ವಿಕ್ರಮ ಸಂವತ್ಸರದ ಫಾಲ್ಗುಣ ಮಾಸದ ಹುಣ್ಣಿಮೆ. ಹೋಳಿ ಹಬ್ಬದ ಸಡಗರ. ಚಂದ್ರಗ್ರಹಣದ ವಿಶೇಷ ಸಂದರ್ಭವಾದ್ದರಿಂದ ಪದ್ಮೇಯಲ್ಲಿ ಜನಸಾಗರ, ನದೀಸ್ನಾನದ ಸಂಭ್ರಮ. ಹರಿಬೋಲ್ ಎಂಬ ಭಕ್ತಿಯ ಉದ್ಘೋಷ ಕೇಳಿಬರುತ್ತಿದ್ದ ಸೂರ್ಯಾ ಸ್ತದ ಸಮಯದಲ್ಲಿ ಶ್ರೀಚೈತನ್ಯರ ಅವತರಣ. ಗೌರಾಂಗ ಮಗುವಿನ ಮುಖದ ಅಪೂರ್ವ ತೇಜಸ್ಸನ್ನು ಕಂಡು ಪುಳಕಿತರಾದ ಅಜ್ಜನಿಂದ ವಿಶ್ವಂಭರನೆಂದು ನಾಮಕರಣ.
ಬಂಗಾಲದ ನವದ್ವೀಪದಲ್ಲಿ ಹುಟ್ಟಿದ ಶ್ರೀ ಚೈತನ್ಯರು ಪ್ರಚಂಡ ಬುದ್ಧಿಮತ್ತೆಯನ್ನು ಬಾಲ್ಯದಲ್ಲೇ ಪ್ರದರ್ಶಿಸಿದ ಮೇಧಾವಿ. ಎಂಟನೆಯ ವರ್ಷಕ್ಕೆ ಸಂಸ್ಕೃತಾಭ್ಯಾಸ. ವ್ಯಾಕರಣ, ಅಲಂಕಾರ, ನ್ಯಾಯ, ಮೀಮಾಂಸೆ ಕರತಲಾಮಲಕ. 14ನೆಯ ವಯಸ್ಸಿಗೇ ವಿದ್ಯಾಸಾಗರ. ಹದಿನಾರನೆಯ ವಯಸ್ಸಿನಲ್ಲಾಗಲೇ ಅವರು ಒಂದು ಶಾಲೆಯನ್ನೂ ನಡೆಸುತ್ತಿದ್ದರೆಂದರೆ ಅವರ ಪ್ರತಿಭೆಯ ಬೀಸು ಅರ್ಥವಾಗಬಹುದು. ಹುಡುಗನ ಬುದ್ಧಿಮತ್ತೆಯ ಪ್ರಸಿದ್ಧಿ ನಾಲ್ಕೂರುಗಳನ್ನು ದಾಟಿತು. ಕಾಶ್ಮೀರದ ಪ್ರಕಾಂಡ ವಿದ್ವಾಂಸನಾಗಿದ್ದ ಕೇಶವ ಭಟ್ಟರೇ ಸ್ವತಃ ಬಂಗಾಲದ ಈ ಊರಿಗೆ ಬಂದು ವಾದ ಮಾಡಲು ಬಾಲಕ ವಿಶ್ವಂಭರನಿಗೆ ಆಹ್ವಾನವಿತ್ತರು! ಹುಡುಗ ಧೃತಿಗೆಡಲಿಲ್ಲ; ಪಂಥಾ ಹ್ವಾನವನ್ನು ಸವಾಲಾಗಿ ಸ್ವೀಕರಿಸಿದ. ಕೇಶವ ಭಟ್ಟರ ಕೃತಿಗಳಲ್ಲಿದ್ದ ಗಂಭೀರ ತಪ್ಪುಗಳನ್ನು ಎತ್ತಿತೋರಿಸಿ ಅವರನ್ನು ನಿರುತ್ತರರನ್ನಾಗಿ ಮಾಡಿದ. ಪಾಂಡಿತ್ಯದ ಧಾರ್ಷ್ಟ್ಯದಲ್ಲಿ ಮೆರೆಯುತ್ತಿದ್ದವರು ಈ ಹದಿಹರೆಯದ ಯುವಕನ ಮುಂದೆ ತಮ್ಮೆಲ್ಲ ಬಿರುದು ಬಾವಲಿಗಳನ್ನರ್ಪಿಸಿ ಸೋಲೊಪ್ಪಬೇಕಾಯಿತು.
ವೇದವೇದಾಂತಗಳ ಮೇಲೆ, ತರ್ಕ- ಮೀಮಾಂಸೆಗಳ ಮೇಲೆ ಅತ್ಯದ್ಭುತವಾಗಿವಾದ ಮಾಡುತ್ತಿದ್ದ; ಎದುರಿನವರನ್ನು ನಿಸ್ತೇಜರನ್ನಾಗಿ ಸುತ್ತಿದ್ದ ಶ್ರೀ ಚೈತನ್ಯರು ಮುಂದೆ ಗಯಾಕ್ಷೇತ್ರಕ್ಕೆ ಹೋಗಿ ಬಂದ ಮೇಲೆ ಸಂಪೂರ್ಣ ಬದಲಾದರು. ಜ್ಞಾನದ ಮೂಲಕ ಮಾತ್ರವಲ್ಲದೆ ನಿಷ್ಕಲ್ಮಶ ಭಕ್ತಿಯ ಮೂಲಕವೂ ದೇವರನ್ನು ಮುಟ್ಟಬಹುದೆಂಬ ಅಂತಬೋìಧೆ ಅವರಿಗಾಯಿತು. ಹರೇ ಕೃಷ್ಣ ಮಂತ್ರವನ್ನು ಅವರು ಜಾತಿಭೇದವಿಲ್ಲದೆ ಸರ್ವ ರಿಗೂ ಬೋಧಿಸಿದರು. ಹರಿನಾಮ ಸಂಕೀರ್ತನೆ ಪ್ರಾರಂಭಿಸಿದರು. ಈ ಸಂಕೀರ್ತನೆಯಿಂದ ಊರಿನ ನೆಮ್ಮದಿ ಹಾಳಾಗಿದೆ ಎಂದು ದೂರು ಹೋದಾಗ, ಕಾಜಿಯ ಮನೆಯಲ್ಲೇ ಸಂಕೀರ್ತನೆ ನಡೆಸಿ, ಆತನನ್ನೂ ತನ್ನ ವಲಯಕ್ಕೆ ಸೇರಿಸಿಕೊಂಡರು!
ಶ್ರೀ ಚೈತನ್ಯರು ಕರ್ಮಯೋಗದ ಮಹತ್ವವನ್ನು ಹೇಳಿದ ರೀತಿಯೂ ವಿಶಿಷ್ಟವೇ. ಅವರ ಜೀವಿತದ ಬಹುಪಾಲು ಭಾಗ ಕಳೆದುದು ಪುರಿಯ ಜಗನ್ನಾಥನ ಸನ್ನಿಧಿಯಲ್ಲಿ. ಸನ್ಯಾಸ ವನ್ನು ಸ್ವೀಕರಿಸಿದ ಅನಂತರದ ಹದಿನೆಂಟು ವರ್ಷ ಗಳನ್ನು ಶ್ರೀ ಚೈತನ್ಯರು ಅಲ್ಲಿ ಕಳೆದರು. ಅಲ್ಲಿದ್ದಷ್ಟೂ ಸಮಯವೂ ಗಾನ, ಸಂಕೀರ್ತನೆಗಳು ನಿರಂತರ ವಾಗಿ ನಡೆದವು. ಅವರನ್ನು ನೋಡಲು ಪ್ರತಿನಿತ್ಯ ಜನ ದಂಡುಕಟ್ಟಿಕೊಂಡು ಬರುವುದು, ಅವರಲ್ಲಿ ಹಲವರು ಶ್ರೀ ಚೈತನ್ಯರ ಪ್ರಭಾವಲಯಕ್ಕೆ ಸೆಳೆಯಲ್ಪಟ್ಟು ಅಲ್ಲೇ ಅವರೊಂದಿಗೆ ಒಂದಿಲ್ಲೊಂದು ಸೇವೆ ಮಾಡುತ್ತ ಉಳಿದುಬಿಡು ವುದೂ ನಡೆಯುತ್ತಿತ್ತು. ಶ್ರೀ ಚೈತನ್ಯರು ಪುರಿಯಿಂದ ವೃಂದಾವನಕ್ಕೆ ಹೊರಟು, ಅಲ್ಲಿ ಪಾಳುಬಿದ್ದಿದ್ದ ಅನೇಕ ದೇವಾಲಯಗಳನ್ನು ದುರಸ್ತಿ ಮಾಡಿಸಿದರು. ಹಾಗೆಯೇ ಪುರಿಯಲ್ಲೂ ಜಗನ್ನಾಥನ ವಾರ್ಷಿಕ ರಥೋತ್ಸವದ ಹಿಂದಿನ ದಿನ ಅವರು ಇಡೀ ದೇವಾಲಯದ ಪ್ರಾಂಗಣವನ್ನು ತನ್ನ ಶಿಷ್ಯರೊಂದಿಗೆ ಸೇರಿ ಶುಚಿಗೊಳಿಸುವ, ಪುರಿಯನ್ನು ರಥೋತ್ಸವಕ್ಕೆ ಅಣಿಗೊಳಿಸುವ ಕೆಲಸಕ್ಕೆ ಟೊಂಕಕಟ್ಟಿ ನಿಂತರು. ಆ ಮಹಾ ದೇಗುಲ ಪ್ರಾಕಾರದ ಉದ್ದಗಲಕ್ಕೂ, ಒಂದಿಂಚೂ ಬಿಡದಂತೆ ಭಕ್ತಗಡಣ ಸಂಪೂರ್ಣವಾಗಿ ಶುಚಿಗೊಳಿಸಿತು (ಈ ಕ್ರಮ, ಇಂದಿಗೂ ಆನೂಚಾನ ನಡೆದುಬಂದಿದೆ!). ದೇವರ ಪ್ರೀತಿಯನ್ನು ಗೆಲ್ಲುವುದೆಂದರೆ ದೊಡ್ಡ ಗ್ರಂಥಗಳ ಪಠನ, ಪಾರಾಯಣ ಮಾತ್ರವಲ್ಲ; ಹರೇ ಕೃಷ್ಣದಂಥ ಹದಿನಾರು ನುಡಿಗಳ ಸರಳ ಶ್ಲೋಕದ ಪಾರಾಯಣವೂ ಸೈ; ಮೈಮುರಿದು ಶ್ರಮವಹಿಸಿ ಮಾಡುವ ದೈಹಿಕ ಕೆಲಸವೂ ಸೈ ಎಂಬುದು ಶ್ರೀ ಚೈತನ್ಯರ ಸಂದೇಶ.
ಹೀಗೆ ದೇವರನ್ನು ಮುಟ್ಟಲು ಜ್ಞಾನ, ಭಕ್ತಿ, ಕಾಯಕದ ಯಾವ ದಾರಿಯನ್ನಾದರೂ ನಾವು ಆರಿಸಿಕೊಳ್ಳಬಹುದು. ಅದರಲ್ಲಿ ಅದಮ್ಯ ಪ್ರೀತಿ ಮತ್ತು ತಾದಾತ್ಮವನ್ನು ಸಾಧಿಸಬೇಕು ಅಷ್ಟೆ – ಎಂಬುದನ್ನು, ಒಣ ಉಪನ್ಯಾಸಗಳಿಲ್ಲದೆ, ಸ್ವತಃ ಆ ಮೂರೂ ದಾರಿಗಳಲ್ಲೂ ನಡೆದುತೋರಿದ ಸಂತ ಶ್ರೀ ಚೈತನ್ಯರು.
– ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.