ಮುಕ್ತಿಗೆ ಶ್ರೇಷ್ಠ ಮಾರ್ಗ ಭಕ್ತಿ :ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು
ಪಂಚಶತಮಾನೋತ್ಸವ ಪ್ರತೀಕವಾಗಿ ಪಂಚೋತ್ಸವ
Team Udayavani, Jan 18, 2022, 6:08 AM IST
ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳ ಪರ್ಯಾಯ ಪೂಜಾ ಪದ್ಧತಿ 501ನೆಯ ವರ್ಷಕ್ಕೆ ಕಾಲಿಡುವ ಸಂದರ್ಭ ಪಂಚ ಶತಮಾನೋತ್ಸವವಾದ ಕಾರಣ ಪಂಚ ರೀತಿಯ ಉತ್ಸವಗಳನ್ನು ನಡೆಸಲಿದ್ದೇವೆ ಎಂದು ತಿಳಿಸಿರುವ ಪರ್ಯಾಯ ಪೀಠಾರೋಹಣ ಮಾಡುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಜೀವರ ಮುಕ್ತಿಗೆ ಭಗವಂತನ ಮಹಿಮೆಯನ್ನು ಅರಿತ ಭಕ್ತಿಯೇ ಶ್ರೇಷ್ಠ ಮಾರ್ಗ ಎಂದು ಹೇಳಿದ್ದಾರೆ. “ಉದಯವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗವಿದು.
ಪರ್ಯಾಯದ ಆಶಯ ವಿಶ್ವೋಪಾಸನೆ, ವ್ಯಾಪ್ತೋಪಾಸನೆ ಎನ್ನುತ್ತಾರಲ್ಲ? ಹೀಗೆ ಎಷ್ಟು ಬಗೆಯ ಉಪಾಸನಾಕ್ರಮಗಳಿವೆ?
ಪರ್ಯಾಯ ವ್ಯವಸ್ಥೆಯನ್ನು ರೂಪಿಸುವಾಗ ಶ್ರೀ ವಾದಿರಾಜಸ್ವಾಮಿಗಳು ವಿಶ್ವೋ ಪಾಸನೆ, ವ್ಯಾಪೋ ಪಾಸನೆ ರೀತಿಯ ಅಭಿಪ್ರಾಯ ಹೊಂದಿರುವುದಾಗಿ ಕಂಡುಬರುತ್ತದೆ. ವಿವಿಧ ಮುಹೂರ್ತಗಳ ಕಲ್ಪನೆಯೂ ಹೀಗೆ. ಎಲ್ಲ ವರ್ಗದ ಜನರನ್ನು ಯೋಗ್ಯರೀತಿಯಲ್ಲಿ ಗುರುತಿಸಲು, ಶಾಸ್ತ್ರೀಯವಾಗಿ ತೃಪ್ತಿಪಡಿಸುವ, ಜನರನ್ನು ಜೋಡಿಸುವ ಕ್ರಮವಾಗಿದೆ. ಎಲ್ಲೆಡೆ ಇರುವ ಭಗವಂತನನ್ನು ಉಪಾಸನೆ ಮಾಡುವುದು ವ್ಯಾಪ್ತೋಪಾಸನೆ. ಪ್ರತಿಮೆಗಳಲ್ಲಿ ಮಾಡುವ ಉಪಾಸನೆ ಪ್ರಾಥಮಿಕ ಸ್ತರದ್ದು. ಅನಂತರದ ಹಂತ ಅಂತರ್ ಉಪಾಸನೆ. ಈ ಉಪಾಸನೆ ಕ್ರಮದಲ್ಲಿ ಪ್ರಾಮಾಣಿಕವಾಗಿರಬೇಕು, ಜಾಗರೂಕ ಹೆಜ್ಜೆಗಳನ್ನು ಇಡಬೇಕು. ಒಳಗಿರುವ ಭಗವಂತ ತನ್ನೆಲ್ಲ ಚಟುವಟಿಕೆಗಳನ್ನು ಗಮನಿಸುತ್ತಾನೆಂಬ ಎಚ್ಚರ ಬೇಕು. ವ್ಯಾಪ್ತೋಪಾಸನೆ ಎತ್ತರದ ಮಟ್ಟದ್ದು. ಎಲ್ಲರಲ್ಲಿಯೂ ಇರುವ ಭಗವಂತನನ್ನು ತೃಪ್ತಿಪಡಿಸುವ ಮಾರ್ಗ. ಇಲ್ಲವಾದರೆ ಶ್ರೀಕೃಷ್ಣ ಮಠಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಏನು ಸಂಬಂಧ? ಕಲಾವಿದರಲ್ಲಿಯೂ ಇರುವ ಭಗವಂತನನ್ನು ತೃಪ್ತಿಪಡಿಸುವ ಮಾರ್ಗವಿದು.
ನಿಮಗೆ ನಾಲ್ಕನೆಯ ಬಾರಿಗೆ ಪರ್ಯಾಯ ಪೀಠ ಅಲಂಕರಿಸುವ ಅವಕಾಶ ಬಂದಿರುವುದಕ್ಕೆ ಅನಿಸಿಕೆ ಏನು?
ಕಾಲಸಂದ ಹಾಗೆ ಇಂತಹ ಅವಕಾಶ ಬರುತ್ತದೆ. ನಮಗೆ ಮಾತ್ರ ಇಂತಹ ಅವಕಾಶ ಬಂದಿಲ್ಲ. ಹಿಂದೆಯೂ ಅನೇಕರಿಗೆ ಬಂದಿದೆ.
ವಾದಿರಾಜಸ್ವಾಮಿಗಳು ಎರಡು ವರ್ಷಗಳ ಪರ್ಯಾಯ ಪದ್ಧತಿ ಆರಂಭಿಸಿದ ಬಳಿಕ ಈಗ ನಿಮ್ಮ ಅವಧಿಯಲ್ಲಿ 501ನೆಯ ವರ್ಷಕ್ಕೆ ಕಾಲಿಡುವಾಗ ಸಂತೋಷವೆನಿಸುವುದಿಲ್ಲವೆ?
ಇದೊಂದು ಅಪೂರ್ವ ಅವಕಾಶವೆಂದು ಭಾವಿಸುತ್ತೇನೆ. ನಾವು ಮಾಡುವುದೇನಿಲ್ಲ. ಎಲ್ಲವೂ ದೈವಚಿತ್ತ. ನಮಗೆ ಬೇಕೆಂದರೆ ಸಿಗದು, ನಾವು ಕರ್ತವ್ಯವನ್ನು ಮಾತ್ರ ಮಾಡಬೇಕು.
ಈ ನಿಟ್ಟಿನಲ್ಲಿ ಏನು ಮಾಡಬೇಕೆಂದುಕೊಂಡಿದ್ದೀರಿ?
ಪರ್ಯಾಯದ ಪಂಚ ಶತಮಾನೋತ್ಸವವಾದ ಕಾರಣ ವಾದಿರಾಜರ ಅಣತಿಯಂತೆ ಘೋಷೋತ್ಸವ (ಧರ್ಮಪ್ರಸಾರ), ನೇತ್ರೋತ್ಸವ (ಕಣ್ಣುಗಳಿಗೆ ಆನಂದ ಸಿಗುವ ಅಲಂಕಾರ ಇತ್ಯಾದಿ), ರಥೋತ್ಸವ, (ಸಂಭಾವನೆ ವಿತರಣೆ), ಭೋಜನೋತ್ಸವ (ಭಕ್ತರಿಗೆ ಭಗವಂತನ ಪ್ರಸಾದವನ್ನು ಲಭ್ಯವಾಗುವಂತೆ ಮಾಡುವುದು) ಈ ಪಂಚೋತ್ಸವವನ್ನು ನಡೆಸಲಿದ್ದೇವೆ. ನಿತ್ಯ ರಥೋತ್ಸವವನ್ನು ನಡೆಸಬೇಕೆಂದಿದ್ದೇವೆ. ವಿವಿಧ ಪುಸ್ತಕಗಳ ಪ್ರಕಾಶನ, ಧಾರ್ಮಿಕ ಚಿಂತನೆಯ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತೇವೆ.
ನಿಮ್ಮ ಪರಂಪರೆಯಲ್ಲಿ ನಾಲ್ಕು ಪರ್ಯಾಯಗಳ ಅವಕಾಶ ಬೇರೆ ಯಾರಿಗೆ ಸಿಕ್ಕಿದೆ?
1880ರ ವರೆಗೆ ವಿರಾಜಮಾನರಾಗಿದ್ದ ಶ್ರೀ ವಿದ್ಯಾಧೀಶತೀರ್ಥರು ನಾಲ್ಕು ಪರ್ಯಾಯಗಳನ್ನು ನಡೆಸಿದ್ದು ಗೊತ್ತಿದೆ. ಅವರು ಆ ಕಾಲದ ಶ್ರೇಷ್ಠ ವಿದ್ವಾಂಸರಾಗಿ ಸುಧಾ ಮಂಗಲೋತ್ಸವದಲ್ಲಿ ಆ ಕಾಲದ ದಾಖಲೆ ಮಾಡಿದ್ದಾರೆ.
ಪರ್ಯಾಯ ಅವಧಿ ಏನು ಯೋಜನೆಗಳನ್ನು ಹಾಕಿಕೊಂಡಿದ್ದೀರಿ?
ಯಾವ ಯೋಜನೆಗಳನ್ನೂ ಹಾಕಿಕೊಂಡಿಲ್ಲ. ಭಕ್ತರಿಗೆ ಪ್ರಸಾದ ವಿತರಣೆ, ದರ್ಶನಾವಕಾಶ ಸಿಗಬೇಕು. ಕೊರೊನಾ ಸೋಂಕು ಎಲ್ಲೆಡೆ ಇರುವುದರಿಂದ ಸರಕಾರ ಸೂಚಿಸುವ ಮಾರ್ಗದರ್ಶನಗಳನ್ನು ಪಾಲಿಸಿಕೊಂಡು ನಮ್ಮದೇ ಆದ ಇತಿಮಿತಿಯಲ್ಲಿ ನಿರ್ವಹಿಸಬೇಕೆಂದುಕೊಂಡಿದ್ದೇವೆ.
ಕಳೆದ ನಿಮ್ಮ ಪರ್ಯಾಯದಲ್ಲಿ ಮುಖ್ಯಪ್ರಾಣ ದೇವರಿಗೆ ವಜ್ರದ ಕವಚ ಸಮರ್ಪಿಸಿದ್ದೀರಲ್ಲ? ಹಾಗೆ ಈ ಬಾರಿ ಯೋಜನೆಗಳೇಕೆ ಇಲ್ಲ?
ಕಳೆದ ಪರ್ಯಾಯದಲ್ಲಿ ಮೊದಲ ಒಂದೂವರೆ ವರ್ಷದಲ್ಲಿ ನಾವೇನು ಯೋಜನೆಗಳನ್ನು ಹಾಕಿಕೊಂಡಿರಲಿಲ್ಲ. ಕೊನೆಯಲ್ಲಿ ಭಕ್ತರು ಕೊಟ್ಟ ಹಣವನ್ನು ವಜ್ರ ಕವಚ ರೀತಿಯಲ್ಲಿ ವಿನಿಯೋಗಿಸಿದೆವು ಅಷ್ಟೆ. ಅದೇ ರೀತಿ ಭಕ್ತರ ಸಹಕಾರದನ್ವಯ ಕಾಲಕಾಲಕ್ಕೆ ಬೇಕಾದ ಕೆಲಸಗಳನ್ನು ಮಾಡುತ್ತೇವೆ.
ಪರ್ಯಾಯ ಪೀಠಾರೋಹಣ ಮಾಡುವಾಗ ಭಕ್ತರಿಗೆ
ನೀಡುವ ಸಂದೇಶವೇನು?
ದೇವರನ್ನು ಒಲಿಸಿಕೊಳ್ಳಲು ಮಧ್ವಾಚಾರ್ಯರ ಭಕ್ತ ಮಾರ್ಗ ಶ್ರೇಯಸ್ಕರವಾಗಿದೆ. ಅದು ಮೂಢ ಭಕ್ತಿಯಲ್ಲ. ಭಗವಂತನ ಮಹತ್ವವನ್ನು ಅರಿತು ಮಾಡುವ ಭಕ್ತಿ ಅದು. ಆತ ಮಹಾಮಹಿಮ, ಆತನೇ ಸ್ವಾಮಿ ಎಂಬ ದೃಢಪ್ರಜ್ಞೆಯೊಂದಿಗೆ ಆತನ ಮೇಲೆ ನಿರಂತರ ಪ್ರೇಮಪ್ರವಾಹ ಹರಿಯಬೇಕು. ಇದುವೇ ಸಂಸಾರದಿಂದ ಮುಕ್ತಿಗೆ ದಾರಿ ಎನ್ನುವುದು ಮಧ್ವಾಚಾರ್ಯರ ಸಂದೇಶ. ಮುಕ್ತಿಗೆ ಸಾಧನವಾದ ಭಗವದ್ಭಕ್ತಿಯ ಜಾಗೃತಿ ಎಲ್ಲೆಡೆ ಆಗಬೇಕು.
ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ
ಆರ್ಥಿಕ ಸಮಸ್ಯೆ ಆಗಬಹುದೆ?
ಕೊರೊನಾ ಸೋಂಕು ಇರುವುದರಿಂದ ನಾವು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಆದರೆ ಪರ್ಯಾಯಕ್ಕೆ ಬಂದ ಸಹಕಾರ ನೋಡಿದರೆ ನಾವು ಎಣಿಸಿದ್ದಕ್ಕಿಂತ ಹೆಚ್ಚಾಗಿದೆ. ಹಿಂದಿನ ಮೂರು ಪರ್ಯಾಯಕ್ಕಿಂತಲೂ ಹೆಚ್ಚಿನ ಸಹಕಾರ ದೊರಕಿದೆ. ಆದ್ದರಿಂದ ಮುಂದಿನ ದಿನಗಳನ್ನು ಊಹಿಸಲಾಗದು.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.