|| ಪಿಬ ರೇ ರಾಮರಸಂ ||
Team Udayavani, Apr 10, 2022, 6:00 AM IST
ನಮಗೆ ಗೊತ್ತಿದೆ, ರಸವು ಆನಂದರೂಪ ಮತ್ತು ಆನಂದದಾಯಕ. ಅದು ನಮ್ಮನ್ನು ಸಾಂಸಾರಿಕ ಜಂಜಡಗಳಿಂದ ಬಿಡಿಸಿ, ಮೈಮರೆಯುವಂತೆ ಮಾಡಿ ದಿವ್ಯಲೋಕಕ್ಕೆ ಒಯ್ಯುವ ಸಾಮರ್ಥಯವುಳ್ಳದ್ದು. ಹೀಗಿರಲು “ರಸೋ ವೈ ಸಃ’ ಎಂಬುದಾಗಿ ವೇದಗಳೇ ಕೊಂಡಾಡುವ ಪರಮಾನಂದ ಸ್ವರೂಪನಾದ ಭಗವಂತನ ರೂಪಗಳಲ್ಲಿ ಒಂದಾದ ಶ್ರೀರಾಮರೂಪದ ಆಸ್ವಾದದ ಹಿರಿಮೆ ಗರಿಮೆಗಳನ್ನು ವರ್ಣಿಸಲಾಗದು. ಅದಕ್ಕೆ ಎಣೆಯಾದದ್ದು ಮತ್ತೂಂದಿಲ್ಲ. ಅದಕ್ಕಾಗಿಯೇ ಅದರ ಹೆಸರು ರಾಮ. ರಾಮ ಎಂದರೆ ಮನೋಹರ ಆನಂದರೂಪ ಮತ್ತು ಆನಂದದಾಯಕ. ಆನಂದವನ್ನು ವರ್ಣಿಸಲಾಗದು, ಅನುಭವಿಸಬಹುದು. ಹಾಗಾಗಿ ಅರಿತವರು “ಪಿಬ ರೇ ರಾಮರಸಂ’ ರಾಮನೆಂಬ ರಸವನ್ನು ಪಾನ ಮಾಡಿರೋ ಎಂದರು.
ರಾಮಾಯಣವೆಂಬ ಪಾತ್ರೆಯಲ್ಲಿ ರಾಮರಸವನ್ನು ತುಂಬಿಸಿ, ಮೊಗೆ ಮೊಗೆದು ಕುಡಿಯಿರೆಂದು ಕೊಟ್ಟ ವಾಲ್ಮೀಕಿ ಮಹರ್ಷಿಗಳಿಗೆ ಕೋಟಿ ನಮನಗಳನ್ನು ಸಲ್ಲಿಸಿದರೂ ಕಡಿಮೆಯಾದೀತು.
ರಾಮನನ್ನು ದಿವ್ಯಶಕ್ತಿಯನ್ನಾಗಿ ಕಂಡಂತೆ ಆದರ್ಶ ವ್ಯಕ್ತಿಯನ್ನಾಗಿಯೂ ಕಂಡು ಅನುಭವಿಸಬೇಕು. ತಂದೆ-ತಾಯಿಯರಿಗೆ ಉತ್ತಮ ಮಗನಾಗಿ ರಾಮನಂತೆ ರಮಣರಾದವರು ಮತ್ತಿಲ್ಲ.
ಹಾಗಿಲ್ಲದಿದ್ದರೆ ರಾಮನ ವಿಯೋಗದಿಂದಲೇ ದಶರಥನಿಗೆ ಮರಣವಾಗುತ್ತಿತ್ತೇ? ವಿಶ್ವಾಮಿತ್ರರು ಕೌಸಲ್ಯಾಸುಪ್ರಜಾರಾಮ ಎಂದು ಪ್ರೀತಿಯಿಂದ ಕರೆಯುತ್ತಿದ್ದರೇ? ಸುಮಿತ್ರೆ ಲಕ್ಷ್ಮಣನನ್ನು ಕುರಿತು ರಾಮನನ್ನು ದಶರಥನೆಂದು ಭಾವಿಸು ಎನ್ನುತ್ತಿದ್ದಳೇ? ಕೈಕೇಯಿಯಂತೂ ರಾಮನಿಗೆ ಕೌಸಲ್ಯೆಗಿಂತಲೂ ನನ್ನಲ್ಲಿ ಹೆಚ್ಚು ಪ್ರೀತಿ ಎಂದಳಲ್ಲಾ? ಸೀತೆಗೆ ಪತಿಯೇ ಸರ್ವಸ್ವ. ಅವನ ನೆರಳಿನಲ್ಲಿ ಸಕಲ ಸುಖಸೌಭಾಗ್ಯ. ಲಕ್ಷ್ಮಣನಿಗೆ ರಾಮನನ್ನು ಬಿಟ್ಟಿರಲಾಗದು. ಎಕೆಂದರೆ ಆತ ರಾಮನ ಪ್ರತಿಬಿಂಬ. ರಾಮನಿಗೆ ಇಲ್ಲದ್ದು ಭರತನಿಗೂ ಬೇಡವಾಯಿತು. ಏಕೆಂದರೆ ಭರತನಿಗೆ ರಾಮನೇ ಬಿಂಬ. ಶತ್ರುಘ್ನನಿಗೆ ರಾಮನ ನೆನಪಿಗಿಂತ ಹೊರತಾಗಿ ಬೇರೇನೂ ಉಳಿಯಲಿಲ್ಲ. ಪುರದ ಜನರು ರಾಮನಿಲ್ಲದೆ ನಿಲ್ಲದಾದರು. ಅಯೋಧ್ಯೆ ಬೇಡವಾಯಿತು. ಕಾಡು ಅವರಿಗೆ ನಾಡಾಯಿತು. ಹೀಗೆ ತಂದೆತಾಯಿಯರಿಂದ ಆರಂಭಿಸಿ ಪುರದ ಜನರವರೆಗೆ ಎಲ್ಲವೂ ರಾಮಮಯ. ರಾಮನು ತನ್ನ ನಡೆ ನುಡಿಗಳಿಂದ ಎಲ್ಲರಿಗೂ ರಾಮನಾಗಿದ್ದ. ಎಲ್ಲರೂ ರಾಮರಸವನ್ನುಂಡ ಸುಖೀಗಳು. ಅವರಂತೆ ನಾವೂ ಸುಖೀಗಳಾಗಬೇಕೇ? ಹಾಗಿದ್ದರೆ ಪಿಬ ರೇ ರಾಮರಸಂ.
ಎಲ್ಲರಿಗೂ ಆನಂದದಾಯಕನಾಗುವುದು, ರಾಮನಾಗುವುದು ಸುಲಭದ ಮಾತಲ್ಲ. ಅದಕ್ಕೆ ರೂಪ, ಶೀಲ, ಪರಾಕ್ರಮ, ವೀರ್ಯ, ಬಲ, ಮತಿ, ವಿದ್ಯೆ, ಕರುಣೆ, ಔದಾರ್ಯ, ವಾತ್ಸಲ್ಯ, ಕ್ಷಮೆ, ಸಂಯಮ, ಶಾಂತಚಿತ್ತತೆ, ಸೌಜನ್ಯ, ವಿನಯ ಹೀಗೆ ಅನಂತ ಗುಣಗಳಿರಬೇಕು. ರಾಮನಲ್ಲಿ ಅವೆಲ್ಲವೂ ಇತ್ತು. ಸನ್ನಿವೇಶಕ್ಕನುಗುಣವಾಗಿ ಅವು ರಾಮನಲ್ಲಿ ಮೆಳೈಸಿ ಸಂತಸವನ್ನುಂಡವು. ಹೀಗೆ ರಾಮನು ಗುಣಗಳಿಗೂ ರಾಮನಾದ. ಇಂತಹ ರಾಮನ ದಿವ್ಯ ಕಥಾನಕದ ಪಾನವದು ಸಂಪಾತಿಗೆ ತಾರುಣ್ಯವನ್ನಿತ್ತು ಸಲಹಿತು. ಅದಕ್ಕಾಗಿಯೇ ತಿಳಿದವರೆಂದರು ಪಿಬ ರೇ ರಾಮರಸಂ.
ಯಾರ ಮಾತನ್ನೂ ಒಪ್ಪದೆ ವನವಾಸಕ್ಕೆ ತೆರಳಿದ ರಾಮ ಅದೆಷ್ಟೋ ಜನರಿಗೆ ನೋವನ್ನೀಯಲಿಲ್ಲವೇ? ತನಗಾಗಿ ಜೀವವನ್ನು ಕೈಯ್ಯಲ್ಲಿ ಹಿಡಿದು ಕಾದಿದ್ದ ಸೀತೆಗೆ ಅಗ್ನಿಪರೀಕ್ಷೆಯೊಡ್ಡಿ ನೋವನ್ನುಂಟು ಮಾಡ ಲಿಲ್ಲವೇ? ತುಂಬು ಗರ್ಭಿಣಿಯಾದ ಆಕೆಯನ್ನು ಕಾಡಿಗಟ್ಟಿ ಆಕೆಗೂ ತನ್ನವರಿಗೂ ಅಸಹ್ಯವಾದ ನೋವನ್ನೀಯಲಿಲ್ಲವೇ? ಹೀಗೆ ದುಃಖದಾಯಕ ನಾದರೆ ರಾಮನಾಗುವುದೆಂತು? ದಿಟ. ಪಿತೃವಚನ ಪರಿಪಾಲನೆಗಾಗಿ ವನವಾಸ. ಸೀತೆಯ ವಿಚಾರದಲ್ಲಿ ಬರಬಹುದಾದ ಅಪವಾದಗಳ ನಿವೃತ್ತಿಗಾಗಿ ಅಗ್ನಿಪರೀಕ್ಷೆ. ಆಕೆ ಪರಿಶುದ್ಧಳೆಂದು ಸಾರಿದ ಅನಂತರವೂ ಅಪವಾದ ಬಂದಾಗ ಆಕೆಯ ಪರಿತ್ಯಾಗ. ಅದು ರಾಜಮನೆತನದ ಪರಂಪ ರಾಗತವಾಗಿ ಬಂದ ಮರ್ಯಾದೆಯ ಉಳಿವಿಗಾಗಿ, ಸಿಂಹಾಸನಕ್ಕಂಟಿದ ಮಿಥ್ಯಾಕಲಂಕದ ದೂರೀ ಕರಣಕ್ಕಾಗಿ. ಕುಟುಂಬದ ಹಿತಕ್ಕಿಂತಲೂ ರಾಜ್ಯದ ಹಿತವೇ ತನಗೆ ಮುಖ್ಯ ಎಂದು ಸಾರುವುದಕ್ಕಾಗಿ. ಪ್ರಜೆಗಳ ಸುಖಕ್ಕಾಗಿ ಜಾನಕಿಯ ತ್ಯಾಗವೂ ನನಗೆ ದುಃಖದಾಯಕವಲ್ಲ ಎನ್ನುವ ಆದರ್ಶ ಪ್ರಜಾಪಾಲಕ, ಪ್ರಜಾರಂಜಕ. ತನ್ನ ಸ್ವಾರ್ಥಕ್ಕಾಗಿ ರಾಮನು ಎಂಥಾ ಸನ್ನಿವೇಶದಲ್ಲಿಯೂ ತನ್ನ ಅಯನ(ಮಾರ್ಗ)ವನ್ನು ಬದಲಿಸಿದ್ದಿಲ್ಲ. ಹಾಗಾಗಿಯೇ ಅದು ರಾಮಾಯಣ. ರಾಮನ ಇಂತಹ ಅಮೂಲ್ಯ ಗುಣಗಳ ಸಾಕಾರ ನಮಗಾಗಬೇಕಾದರೆ ಪಿಬ ರೇ ರಾಮರಸಂ.
ರಾಮರಾಜ್ಯದಲ್ಲಿ ಎಲ್ಲೆಲ್ಲೂ ರಾಮ ರಾಮ ಎಂಬ ಹೆಸರು ಕೇಳುತ್ತಿತ್ತು. ಎಲ್ಲರಿಗೂ ಎಲ್ಲದ್ದಕ್ಕೂ ಅವನೇ ಮಾದರಿ. ಅವನ ಆಳ್ವಿಕೆಯಲ್ಲಿ ಜಗತ್ತೇ ರಾಮಮಯ ವಾಗಿತ್ತು. ತನ್ನ ಪ್ರಜೆಗಳ ಏಳಿಗೆಯಲ್ಲಿ ತನಗೇ ಏಳಿಗೆಯುಂಟಾದಂತೆ ರಾಮನು ಸಂತಸಪಡುತ್ತಿದ್ದನು. ಅವರ ಕಷ್ಟಗಳಲ್ಲಿ ಅವರಿಗಿಂತಲೂ ಹೆಚ್ಚು ನೋವನ್ನು ಣ್ಣುತ್ತಿದ್ದನು. ತನ್ನ ಕುಟುಂಬದವರಂತೆ ಪುರದ ಜನರನ್ನು ಕಂಡು ನಿತ್ಯವೂ ಅವರ ಕುಶಲವಾರ್ತೆಯನ್ನು ವಿಚಾರಿಸುತ್ತಿದ್ದನು. ಪ್ರಜೆಗಳೂ ಕೂಡ, ಹಿರಿಯರು ಕಿರಿಯರೆನ್ನದೆ ಎಲ್ಲರೂ ರಾಮನ ಒಳಿತಿಗಾಗಿ ದೇವರನ್ನು ಬೇಡಿಕೊಳ್ಳುತ್ತಿದ್ದರು. ಇದು ರಾಮನ ರಾಜ್ಯ ಪರಿಪಾಲನೆ. ಆಗಿನ ಜನರು ಯಾವುದೇ ಲೋಪವಿಲ್ಲದೆ, ಲೋಭವಿಲ್ಲದೆ ವರ್ಣಾಶ್ರಮ ಧರ್ಮವನ್ನು ಪಾಲಿಸುತ್ತಿದ್ದರು. ರಾಮರಾಜ್ಯದಲ್ಲಿ ಎಂದಿಗೂ ದುರ್ಭಿಕ್ಷೆ ಇಲ್ಲ, ಸಂತತಿಯ ಕೊರತೆಯಿಲ್ಲ, ಕಲಹಗಳಿಲ್ಲ, ವಂಚನೆಗಳಿಲ್ಲ, ಸ್ವಾರ್ಥದ ಲವಲೇಶವೂ ಇಲ್ಲ, ಅಕಾಲಮರಣಾದಿ ಅನಿಷ್ಟಗಳಿಲ್ಲ, ರೋಗ ರುಜಿನಗಳ ಭಯವಿಲ್ಲ. ಕಳ್ಳಕಾಕರ ಪೀಡೆಯಿಲ್ಲ. ಭ್ರಷ್ಟರ ಉಸಿರಿಲ್ಲ. ಅವರ ಜೀವನ ಸುಖಮಯ, ಏಕೆಂದರೆ ಅದು ರಾಮಮಯ. ಅಂತಹ ಸುಖಮಯ ರಾಜ್ಯಕ್ಕಾಗಿ ಪಿಬ ರೇ ರಾಮರಸಂ.
– ಡಾ| ಅಮೃತೇಶ ಆಚಾರ್ಯ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.