ಎಸೆಸೆಲ್ಸಿ: ಸ್ವರ್ಣಾ ಪ್ರತಿಭಾನ್ವೇಷಣೆ, ಮಕ್ಕಳಿಗೆ ಪ್ರೇರಣೆ
Team Udayavani, Mar 19, 2021, 5:30 AM IST
ಕಾರ್ಕಳ: ಎಲ್ಲ ಮಕ್ಕಳು ಪಾಸಾದರಷ್ಟೆ ಸಾಲದು. ಗುಣಮಟ್ಟದ ಫಲಿತಾಂಶ ಲಭ್ಯವಾಗಬೇಕು. “ಎ’ ಶ್ರೇಣಿಯ ಫಲಿತಾಂಶ ಎಲ್ಲ ಶಾಲೆಗಳಲ್ಲಿ ಬರುವಂತಾಗಬೇಕು. ಇದು ಕಾರ್ಕಳ ಶಿಕ್ಷಣ ಇಲಾಖೆಯ ಸ್ವರ್ಣ ಪ್ರತಿಭಾನ್ವೇಷಣೆ ಮಿಷನ್ -100 ಅಭಿಯಾನದ ಆಶಯ.
ಎಸೆಸೆಲ್ಸಿ ವಿದ್ಯಾರ್ಥಿಗಳು ಎಲ್ಲರೂ ಚೆನ್ನಾಗಿ ಓದಬೇಕು, ಉತ್ತಮ ಅಂಕ ಗಳಿಸಬೇಕು ಎಂಬ ಆಶಯ ಹಿಂದಿನಿಂದಲೂ ಇದ್ದದ್ದೆ. ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.100 ಫಲಿತಾಂಶದ ಗುರಿಯೊಂದಿಗೆ ಗುಣಮಟ್ಟದ ಫಲಿತಾಂಶಕ್ಕೂ ಹೆಚ್ಚಿನ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಶಿಕ್ಷಕರು ಮುತುವರ್ಜಿಯಿಂದ ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಸಿ ವಲಯದ ವಿದ್ಯಾರ್ಥಿಗಳಿಗೆ ಉತ್ತೇಜನ
ಎ-ಟಾಪರ್, ಬಿ-ಮಧ್ಯಮ, ಸಿ- ಕಡಿಮೆ ಪ್ರಗತಿ ಈ ವಲಯಗಳಾಗಿ ಪಟ್ಟಿ ಮಾಡಿ ವಿಶೇಷ ವಾಗಿ ಸಿ ವಲಯದ ವಿದ್ಯಾರ್ಥಿಗಳ ಹೆಚ್ಚಿನ ಪ್ರಗತಿಗೆ ವಿಷಯವಾರು ಸಿದ್ಧತೆ, ಮಾಹಿತಿ, ಸಂಶಯ ನಿವಾರಣೆಗೆ, ಧೈರ್ಯ ನೀಡುವ ಕೆಲಸ ಮಾಡಲಾಗುತ್ತಿದೆ.
ಪುರಸಭೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭೇಟಿ
ಮನೆ ಭೇಟಿಗಾಗಿ 5 ವಲಯಗಳಾಗಿ ವಿಂಗಡಿಸ ಲಾಗಿದೆ. ವಲಯವಾರು ಶಿಕ್ಷಕರು ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆ ಭೇಟಿ ಮಾಡುತ್ತಾರೆ. ಮಕ್ಕಳಲ್ಲಿ ಮತ್ತು ಹೆತ್ತವರಲ್ಲೂ ಧೈರ್ಯ, ಮಾರ್ಗದರ್ಶನ, ಜಾಗೃತಿ ಮೂಡಿಸುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಈ ಎರಡು ದಿನಗಳಲ್ಲಿ ಸಂಜೆ 6 ರಿಂದ 9 ಗಂಟೆಯೊಳಗೆ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ತೆರಳುತ್ತಾರೆ, ಪುರಸಭೆ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತಾರೆ.
ಕೈಪಿಡಿ
ವಿಷಯವಾರು ವಿಶೇಷ ಪಾಸಿಂಗ್ ಪ್ಯಾಕೇಜ್ (ಸಹಕಾರಿ) ಕೈಪಿಡಿ ಎಲ್ಲ ಶಾಲೆಗಳಿಗೆ ಹಿಂದಿನ ಸಾಲಿನಲ್ಲಿ ನೀಡಲಾಗಿತ್ತು. ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆನ್ನುವ ಉದ್ದೇಶವಿಟ್ಟುಕೊಂಡು ಕಳೆದ ವರ್ಷದ ಕೈಪಿಡಿಗೆ ಮತ್ತಷ್ಟೂ ವಿಷಯಗಳನ್ನು ಸೇರಿಸಿ ನೀಡಲಾಗಿದೆ.
ವಿವಿಧ ಯೋಜನೆ
ತಾಲೂಕಿನ ಎಲ್ಲ ಪ್ರೌಢಶಾಲೆ ಶಿಕ್ಷಕರಿಗೆ ವಿಷಯವಾರು ಕಾರ್ಯಾಗಾರ ಮಾಡಲಾಗಿದೆ. ಶಿಕ್ಷಕರ ವ್ಯಾಟ್ಸ್ ಆ್ಯಪ್ ಗ್ರೂಪ್‌ಗ್ಳಲ್ಲೂ ಚರ್ಚೆ ಮಾಡಲಾಗುತ್ತಿದೆ. ಪ್ರಶ್ನೆ ಪತ್ರಿಕೆಗಳ ಸ್ವರೂಪ ಬದಲಾವಣೆ ಇತ್ಯಾದಿಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತಿದೆ.
ಯಾವೊಂದು ವಿದ್ಯಾರ್ಥಿಯೂ ಅನುತ್ತೀರ್ಣ ಆಗಬಾರದೆಂಬ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ.
ಮಕ್ಕಳೇ ಚಿಂತೆ ಬೇಡ
ಕಳೆದ ವರ್ಷವಂತೂ ಆತಂಕದ ನಡುವೆ ಎಸೆಸೆಲ್ಸಿ ಪರೀಕ್ಷೆ ಮುಗಿದಿತ್ತು. ಕೊರೊನಾ ಕಾರಣ ಈ ಬಾರಿಯೂ ಪರೀಕ್ಷೆ ನಡೆಯುತ್ತದೋ ಇಲ್ಲವೋ ಇತ್ಯಾದಿ ವಿಷಯದ ಕುರಿತು ಮಕ್ಕಳಿಗೆ ಭಯವಿರುವುದು ಸಹಜ. ಆದರೆ ಈ ಹಿಂದೆ ಸುರಕ್ಷತೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸಿ ಯಶಸ್ವಿಯಾದ ಬಗ್ಗೆ ಉದಾಹರಣೆಯಿದೆ. ಆದ್ದರಿಂದ ಪರೀಕ್ಷೆ ಬಗ್ಗೆ ಯಾವುದೇ ಗೊಂದಲವಿಲ್ಲದೆ ತಯಾರಿಗಷ್ಟೇ ಗಮನ ನೀಡುವುದು ಅವಶ್ಯವಾಗಿದೆ.
ಗುಣಮಟ್ಟದ ಕಲಿಕೆಗೆ ಒತ್ತು
ಮಕ್ಕಳ ಮನೆಗಳಿಗೆ ಪ್ರೇರಣದಾಯಕ ಭೇಟಿ ನೀಡಲಾಗುತ್ತಿದೆ. ಮಕ್ಕಳಲ್ಲಿ ಅದರಲ್ಲೂ ಹಿಂದುಳಿದ ಹೆಣ್ಣು ಹಾಗೂ ಗಂಡು ಮಕ್ಕಳಲ್ಲಿ ಸ್ಫೂರ್ತಿ ತುಂಬಿ, ಅವರ ಕನಸುಗಳು ಮುಂದಿನ ಓದು ಮತ್ತು ವೃತ್ತಿ ಬಗ್ಗೆ ಆಸಕ್ತಿ ಕುರಿತು ಮನದ ಅನಿಸಿಕೆಗಳನ್ನು ಕೇಳಲಾಗುತ್ತಿದೆ. ಹೆಚ್ಚು ಅಂಕ, ಗುಣಮಟ್ಟ ಸಾಧಿಸಲು ಅವರ ಮನೋಭೂಮಿಕೆಯನ್ನು ಸಜ್ಜುಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ.
-ಶಶಿಧರ್ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ
ಹೆತ್ತವರ ಮುತುವರ್ಜಿ ಅಗತ್ಯ
ನೂರರಷ್ಟು ಫಲಿತಾಂಶದ ಜತೆಗೆ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ. ಮಕ್ಕಳನ್ನು ಪರೀಕ್ಷೆ ಸಿದ್ಧಪಡಿಸುವ ಪ್ರಯತ್ನವನ್ನು ಶಿಕ್ಷಕರು ಅಭಿಯಾನದ ಮೂಲಕ ನಡೆಸುತ್ತಿದ್ದಾರೆ. ಶಿಕ್ಷಕರಂತೆ ಹೆತ್ತವರು ಮುತುವರ್ಜಿ ವಹಿಸಿ ಸಹಕರಿಸಬೇಕಿದೆ.
-ವೆಂಕಟರಮಣ ಕಲ್ಕೂರ,ಬಿಆರ್‌ಪಿ, ಮಿಷನ್ 100 ನೋಡಲ್ ಅಧಿಕಾರಿ
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.