ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗಳ ನಡುವೆ ಪೈಪೋಟಿ
Team Udayavani, Mar 2, 2020, 3:09 AM IST
ಪ್ರೌಢಶಾಲೆ ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರಮುಖ ಘಟ್ಟ ಎಂದೇ ಪರಿಗಣಿಸಲಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪದಲ್ಲಿದ್ದು, ಈ ನಿಟ್ಟಿನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಮಧ್ಯೆ, ಜಿಲ್ಲಾವಾರು ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರಲು ಜಿಲ್ಲಾಮಟ್ಟದಲ್ಲಿ ಆಯಾ ಜಿಲ್ಲೆಯ ಅಧಿಕಾರಿಗಳು ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ತರಗತಿ, ಶನಿವಾರ ಹಾಗೂ ಭಾನುವಾರ ಸೇರಿ ರಜಾ ದಿನಗಳಲ್ಲಿ ವಿಶೇಷ ತರಗತಿ, ತಾಯಂದಿರ ಸಭೆ, ಲ್ಯಾಂಪ್ ಕಾರ್ಯಕ್ರಮ ಸೇರಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆಗೆ ಜಿಲ್ಲಾವಾರು ಮಟ್ಟದಲ್ಲಿ ಕೈಗೊಳ್ಳಲಾಗಿರುವ ವಿನೂತನ ಕಾರ್ಯಕ್ರಮಗಳ ಕಿರು ಪರಿಚಯ ಇಲ್ಲಿದೆ.
ವಿಶೇಷ ತರಗತಿ: ಮೈಸೂರು ಜಿಲ್ಲೆ ಮೊದಲ ಸ್ಥಾನಕ್ಕೇರಲು ಹಲವಾರು ತಂತ್ರಗಳನ್ನು ಹೆಣೆದಿದ್ದು, ಪರೀಕ್ಷೆಗೆ ಅಂತಿಮ ಹಂತದ ತಯಾರಿ ಗರಿಗೆದರಿದೆ. ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ತರಗತಿ, ಶನಿವಾರ ಹಾಗೂ ಭಾನುವಾರ ಸೇರಿ ರಜಾ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ.
ಪ್ರೇರಣಾ ಪ್ರಯತ್ನ: ಉತ್ತರ ಕನ್ನಡ ಜಿಲ್ಲೆಯಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಮಾಡಲಾಗಿದೆ. ಇದೊಂದು ರೀತಿ ಡಿಪಾರ್ಟ್‌ಮೆಂಟಲ್ ಎಕ್ಸಾಮ್ ತರಹ. ಪುಸ್ತಕ ನೋಡಿ ಪ್ರಶ್ನೆಗಳಿಗೆ ಉತ್ತರಿಸುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸುವ ಉದ್ದೇಶದಿಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಪದ್ಧತಿಯ ಪರೀಕ್ಷೆ ಪ್ರಯೋಗ ಮಾಡಿಸಿದ್ದರು. ತೆರೆದ ಪುಸ್ತಕ ಪರೀಕ್ಷೆಯಲ್ಲಿ ಸಹ ಫೇಲ್ ಆದ ವಿದ್ಯಾರ್ಥಿಗಳಿಗೆ, ನುರಿತ ಶಿಕ್ಷಕರಿಂದ ಮೂರು ದಿನ ವಿವಿಧ ಶಾಲೆಗಳಲ್ಲಿ ತರಬೇತಿ ಕೊಡಿಸಲಾಗಿದೆ.
ಶಾಲೆಗಳ ದತ್ತು: ಚಿಕ್ಕಬಳ್ಳಾಪುರದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಾ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ಪಠ್ಯಕ್ರಮ ರಚಿಸಲಾಗಿದೆ. ಫಲಿತಾಂಶ ಹೆಚ್ಚಳಕ್ಕೆ ಜಿಲ್ಲೆಯಲ್ಲಿ ಶಿಕ್ಷಣ ತಜ್ಞರನ್ನೊಳಗೊಂಡಂತೆ ಶೈಕ್ಷಣಿಕ ಕಾರ್ಯ ಪಡೆ ರಚಿಸಲಾಗಿದೆ. ವಿದ್ಯಾರ್ಥಿ ಗಳಿಂದ ಮಿಸ್ ಕಾಲ್ ಕೊಟ್ಟು ಶಿಕ್ಷಕರಿಂದ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗುತ್ತಿದೆ. ಜಿಲ್ಲಾಮಟ್ಟದ ಅಧಿಕಾರಿಗಳಿಂದ ಶಾಲೆಗಳ ದತ್ತು ಪಡೆಯಲಾಗಿದೆ.
“ನನ್ನನ್ನೊಮ್ಮೆ ಗಮನಿಸಿ’: ಕೋಲಾರ ಜಿಲ್ಲೆಯಲ್ಲಿ ಹಿಂದಿನ ಫಲಿತಾಂಶವನ್ನು ವಿಶ್ಲೇಷಣೆ ಮಾಡಿ ಕ್ರಿಯಾ ಯೋಜನೆಯನ್ನು ನಿತ್ಯಸ್ಫೂರ್ತಿ ಹೆಸರಿನಲ್ಲಿ ತಯಾರಿಸಿ ಶಾಲಾ ಹಂತದಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಬದಲಾದ ಪ್ರಶ್ನೆ ಪತ್ರಿಕೆ ಮಾದರಿ ನೀಲನಕ್ಷೆ ಕುರಿತು ತರಬೇತಿ ನೀಡಲಾಗಿದೆ. “ನನ್ನನ್ನೊಮ್ಮೆ ಗಮನಿಸಿ’ ಎಂಬ ಹೆಸರಿನ ಮುಖ್ಯ ಮತ್ತು ಸಂಭವನೀಯ ಪ್ರಶ್ನೆಗಳ ಕಿರುಹೊತ್ತಿಗೆ ತಯಾರಿಸಿ ನೀಡಲಾಗಿದೆ.
ಪುನರ್ ಮನನ ತರಗತಿ: ರಾಮನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳನ್ನು ಸರ್ಕಾರಿ ಅಧಿಕಾರಿಗಳು ದತ್ತು ಪಡೆದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆಗೆ ಅಧಿಕಾರಿ ಮತ್ತು ಶಿಕ್ಷಕರು ಖುದ್ದು ಭೇಟಿ ಕೊಟ್ಟು, ಪೋಷಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಪುನರ್ ಮನನ ತರಗತಿಗಳು, ಯೂನಿಟ್ ಟೆಸ್ಟ್, ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸಲಾಗುತ್ತಿದೆ.
ಮನೆ ಮನೆಗೆ ತೆರಳಿ ಪರಿಶೀಲನೆ: ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮಕ್ಕಳ ಓದಿನ ಬಗ್ಗೆ ಪೋಷಕರೊಂದಿಗೂ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪಡೆದ ಶೇಕಡಾವಾರು ಫಲಿತಾಂಶ ಆಧರಿಸಿ ಐದು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಶೇ.60ಕ್ಕಿಂತ ಕಡಿಮೆ ಇರುವ ಶಾಲೆಗಳ ಒಂದು ಗುಂಪು, ಶೇ.61 ರಿಂದ 81ರವರೆಗೆ ಮತ್ತೂಂದು ಗುಂಪು, ಶೇ.81ರಿಂದ 90ರವರೆಗೆ ಇನ್ನೊಂದು ಗುಂಪು, ಶೇ.91ರಿಂದ ಶೇ.100ರವರೆಗಿನ ಶಾಲೆಗಳಿದ್ದ ಬೇರೆ ಗುಂಪು ಹಾಗೂ ಶೇ.100ರಷ್ಟಿರುವ ಶಾಲೆಗಳನ್ನು ಪ್ರತ್ಯೇಕ ಮಾಡಲಾಗಿದೆ. ಇವುಗಳಿಗೆ ಇಲಾಖೆಯ ಪರೀಕ್ಷಾಧಿಕಾರಿಗಳನ್ನು ನೋಡಲ್ ಆಫೀಸರ್‌ಗಳನ್ನಾಗಿ ಮಾಡಿ ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ.
ಕೌನ್ ಬನೇಗಾ ವಿದ್ಯಾಪತಿ: ರಾಜ್ಯದಲ್ಲೇ ಮೊಟ್ಟ ಮೊದಲು ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯದಲ್ಲಿ ಆಸಕ್ತಿ ಮೂಡಿಸಲು ಕನ್ನಡ ಮಾಧ್ಯಮ ಮಕ್ಕಳಿಕೆ ಕೌನ್ ಬನೇಗಾ ವಿದ್ಯಾಪತಿ ಹಾಗೂ ಉರ್ದು ಮಾಧ್ಯಮ ಮಕ್ಕಳಿಕೆ ಕೌನ್ ಬನೇಗಾ ಅಲ್ಲಮ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 9:30ರಿಂದ 10:30ರವರೆಗೆ ವಿಶೇಷ ತರಗತಿ ಆಯೋಜಿಸಲಾಗಿದೆ.
ನೋಡೆಲ್ ಅಧಿಕಾರಿಗಳ ನೇಮಕ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದ 27 ಶಾಲೆಗಳನ್ನು ಗುರುತಿಸಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡೆಲ್ ಅಧಿಕಾರಿಗಳು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ದಿನದ ತರಗತಿ ಮುಗಿದ ಬಳಿಕ ಸಂಜೆ ವಿದ್ಯಾರ್ಥಿಗಳ ಗುಂಪು ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿ ಗಳಲ್ಲಿರುವ ಗೊಂದಲ ನಿವಾರಣೆಗೆ ಅನುಕೂಲ ವಾ ಗಲಿದೆ. ಶೃಂಗೇರಿ, ಕಡೂರು, ಕೊಪ್ಪ ತಾಲೂ ಕಿನ ಕೆಲ ಶಾಲೆಗಳಲ್ಲಿ ರಾತ್ರಿ ಶಾಲೆ ಆರಂಭಿಸ ಲಾಗಿದೆ.
ಲ್ಯಾಂಪ್ ಕಾರ್ಯಕ್ರಮ: ಚಾಮರಾಜನಗರ ಜಿಲ್ಲೆಯಲ್ಲಿ ಡೀಸಿ ಅಧ್ಯಕ್ಷತೆಯಲ್ಲಿ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಉಪನಿರ್ದೇಶಕರು ತಾಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಫಲಿತಾಂಶ ಉತ್ತಮ ಪಡಿಸಲು ಲರ್ನಿಂಗ್ ಅಚೀವ್‌ಮೆಂಟ್ ಮಾನಿಟರಿಂಗ್ ಪ್ರೋಗ್ರಾಂ (ಲ್ಯಾಂಪ್) ಕಾರ್ಯಕ್ರಮ ಕಳೆದ ಜೂನ್‌ನಿಂದ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿಯನ್ನು ವೀಕ್ಷಿಸುತ್ತಿದ್ದಾರೆ.
ರಾತ್ರಿ ಶಾಲೆ ಆರಂಭ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ತಲಾ ಹತ್ತು ಕಡೆ ರಾತ್ರಿ ಶಾಲೆಗಳನ್ನು ಆರಂಭಿಸಲಾಗಿದೆ. ಜಿಲ್ಲೆಯಾದ್ಯಂತ ಪ್ರತಿ ಶನಿವಾರ ಬೆಳಗಿನ ತರಗತಿ ಮುಗಿದ ನಂತರ ಆಯಾ ಭಾಗದ ಶಾಲೆಗಳ ಮುಖ್ಯ ಶಿಕ್ಷಕರು, ವಿಷಯವಾರು ಶಿಕ್ಷಕರನ್ನು ಸೇರಿಸಿಕೊಂಡು ಬಿಇಒಗಳು ಸಂವಾದ ಮಾಡಿ ವಿದ್ಯಾರ್ಥಿಗಳ ಕಲಿಕೆ ಕುರಿತು ಅವಲೋಕನ ಮಾಡುತ್ತಿದ್ದಾರೆ. ಆಂಗ್ಲ ಭಾಷಾ ಶಿಕ್ಷಕರ ಕಾರ್ಯಾಗಾರ ನಡೆಸಿದ್ದು, ಕೌಶಲ್ಯ ಕೇಂದ್ರದ ಅಧ್ಯಕ್ಷ ಗುರುರಾಜ ಕರ್ಜಗಿ ಅವರನ್ನು ಕರೆಸಿ ಕಾರ್ಯಾಗಾರ ಆಯೋಜಿಸ ಲಾಗಿದೆ. ಇಂಗ್ಲಿಷ್ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಶಿಕ್ಷಕರಿಗೆ ವಿಷಯವಾರು ಪುಸ್ತಕಗಳನ್ನು ತಯಾರು ಮಾಡಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಒಂದು ಸೆಟ್ ಕಳುಹಿಸಲಾಗುತ್ತಿದೆ.
ಸಕಲ ಸಿದ್ಧತೆ: ಕಲ್ಪತರು ನಾಡು ತುಮಕೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿ, ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಕ್ಕಳೊಂದಿಗೆ ಚರ್ಚೆ ನಡೆಸುತ್ತಿ ದ್ದಾರೆ. ಪೋಷಕರಿಗೆ ಪತ್ರ ಬರೆದು ಟಿವಿ ಮತ್ತು ಮೊಬೈಲ್‌ನಿಂದ ದೂರವಿರಲು ಸಲಹೆ, ಶಾಲಾ ಮುಖ್ಯೋಪಾಧ್ಯಾಯರಿಗೆ ಪತ್ರ ಬರೆದಿದ್ದಾರೆ.
ಶಿವಮೊಗ್ಗದಲ್ಲಿ ತಾಯಂದಿರ ಸಭೆ: ಶಿವಮೊಗ್ಗ ಜಿಲ್ಲೆಯಲ್ಲಿ ಕಡಿಮೆ ಫಲಿತಾಂಶ ದಾಖಲಿಸಿದ ಶಾಲೆಯ ಶಿಕ್ಷಕರಿಗೆ ಘಟಕ ಪರೀಕ್ಷೆ ಹಾಗೂ ಕ್ವಿಜ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರತಿ ಶಾಲೆಯಲ್ಲಿ 30ರಿಂದ 40 ಮಕ್ಕಳಿದ್ದು ಅದರಲ್ಲಿ ಕಡಿಮೆ ಅಂಕ ಪಡೆಯುವ ಮಕ್ಕಳನ್ನು ಶಿಕ್ಷಕರು ದತ್ತು ಪಡೆಯುವುದು, ಪೋಷಕರಿಗೆ ಶಿಕ್ಷಕರು ಕರೆ ಮಾಡಿ ಮಕ್ಕಳ ವಿದ್ಯಾಭ್ಯಾಸ, ಚಟುವಟಿಕೆ ಬಗ್ಗೆ ವಿಚಾರಿಸುವುದು, ತಾಲೂಕು ಮಟ್ಟ, ಜಿಲ್ಲಾಮಟ್ಟದಲ್ಲಿ ಸಂಭಾವ್ಯ ಪ್ರಶ್ನೆಗಳ ಪತ್ರಿಕೆ ರಚನೆ ಹಾಗೂ ಪರೀಕ್ಷೆ ಮಾಡುವುದು, ತೀರ್ಥಹಳ್ಳಿ, ಹೊಸನಗರದಲ್ಲಿ ರಾತ್ರಿ ಶಾಲೆ (ಹುಡುಗರಿಗೆ ಮಾತ್ರ), ಎಲ್ಲ ತಾಲೂಕುಗಳಲ್ಲೂ ತಾಯಂದಿರ ಸಭೆ ನಡೆಸಲಾಗಿದೆ.
ವಿದ್ಯಾರ್ಥಿಗಳ ಮೇಲೆ ಗಮನ: ಹಾಸನ ಜಿಲ್ಲೆಯಲ್ಲಿ ತಾಯಂದಿರ ಸಭೆ ನಡೆಸಲಾಗಿದೆ. ಮಕ್ಕಳ ಪ್ರಗತಿಯನ್ನು ತಿಳಿಸಿ ಓದಿನಲ್ಲಿ ಹಿಂದೆ ಬಿದ್ದಿದ್ದರೆ ಮನೆಯಲ್ಲಿಯೂ ಆ ವಿದ್ಯಾರ್ಥಿಯ ಮೇಲೆ ಗಮನಹರಿಸಲು ಸಲಹೆ ನೀಡಲಾಗುತ್ತಿದೆ. ವಿದ್ಯಾರ್ಥಿಯ ತಂದೆ – ತಾಯಿ ಅಥವಾ ಪೋಷಕರ ಸಭೆಯನ್ನು ಶಾಲೆಯಲ್ಲಿ ಆಗಿಂದಾಗೆ ಕರೆದು ವಿದ್ಯಾರ್ಥಿಯ ಓದಿಗೆ ಪೂರಕ ವ್ಯವಸ್ಥೆಯನ್ನು ಮನೆಯಲ್ಲಿಯೂ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಕಬ್ಬಿಣದ ಕಡಲೆಗೆ ಒತ್ತು: ಧಾರವಾಡ ಜಿಲ್ಲೆ ಈ ವರ್ಷ ಕನಿಷ್ಠ ಮೊದಲ ಹತ್ತು ಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕೆ ಶತ ಪ್ರಯತ್ನ ಮಾಡುತ್ತಿದೆ. ಈಗಾಗಲೇ 85 ಸಾವಿರಕ್ಕೂ ಅಧಿಕ ಕಳಪೆ ಸಾಧನೆ ವಿದ್ಯಾರ್ಥಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪರೀಕ್ಷೆ ಪಾಸು ಮಾಡುವುದಕ್ಕೆ ಸಿದ್ಧಗೊಳಿಸುವಲ್ಲಿ ಯಶಸ್ವಿಯಾಗಿವೆ. ಈ ವರ್ಷ ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳು ಸರಾಗವಾಗಿ ಪಾಸಾಗುವಂತೆ ಮಾಡಲು ತಂತ್ರಾಧಾರಿತ ತರಬೇತಿ ನೀಡಲಾಗಿದೆ. ಇಲ್ಲಿ ಚಿತ್ರಗಳನ್ನು ಬರೆದರೆ 16 ಅಂಕ ಪಡೆಯುವ ಅವಕಾಶವಿದೆ. 70 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಚಿತ್ರಗಳ ವಿಶೇಷ ಚಾರ್ಟ್‌ಗಳನ್ನು ಮುದ್ರಿಸಿ ನೀಡಲಾಗಿದೆ. ಇದಕ್ಕೆ ಸಂಸದ ಪ್ರಹ್ಲಾದ ಜೋಶಿ ಅವರು ಚಾರ್ಟ್‌ಗಳನ್ನು ಮಾಡಿಕೊಡಲು ಹಣಕಾಸಿನ ನೆರವು ನೀಡಿದ್ದಾರೆ.
ಪಾಲಕರ ಮೊಬೈಲ್‌ಗೆ ಕರೆ: ಹಾವೇರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶಿಕ್ಷಕರು ನಿತ್ಯ ನಸುಕಿನಜಾವ 4:30ರಿಂದ 5ಗಂಟೆ ಅವಧಿಯಲ್ಲಿ ವಿದ್ಯಾರ್ಥಿಗಳ ಪಾಲಕರ ಮೊಬೈಲ್‌ಗೆ ಕರೆ ಮಾಡಿ ಮಕ್ಕಳಿಗೆ ಓದಿಸಲು ಹೇಳುತ್ತಿದ್ದಾರೆ. ಬಳಿಕ ಒಂದು ತಾಸು ಬಿಟ್ಟು ಮರು ಕರೆ ಮಾಡಿ ಮಕ್ಕಳು ಓದುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ರಾತ್ರಿ ಹಾಗೂ ನಸುಕಿನ ಜಾವ ಅಭ್ಯಾಸದಲ್ಲಿ ತೊಡಗಿದ್ದಾರೋ ಇಲ್ಲವೋ ಎಂದು ಶಿಕ್ಷಕರು ಹತ್ತಿರದ ವಿದ್ಯಾರ್ಥಿಗಳ ಮನೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮಕ್ಕಳ ಏಕಾಗ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಪಾಲಕರಿಂದ ಮನೆಯಲ್ಲಿ ಟಿವಿ ಹಚ್ಚುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಮಾಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.