State-level best teacher ; ಇಬ್ಬರು ಪ್ರಾಂಶುಪಾಲರು, ಇಬ್ಬರು ಶಿಕ್ಷಕರಿಗೆ ರಾಜ್ಯಪ್ರಶಸ್ತಿ
ಪ್ರಾಂಶುಪಾಲರಾದ ಸುಕುಮಾರ, ಮಂಜುನಾಥ ಭಟ್, ಕಲಾ ಶಿಕ್ಷಕ ನರೇಂದ್ರ ಕುಮಾರ್
Team Udayavani, Sep 2, 2023, 7:12 PM IST
ಮಂಗಳೂರು/ ಉಡುಪಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕೊಡಮಾಡುವ 2023-24ನೇ ಸಾಲಿನ ರಾಜ್ಯಮಟ್ಟದ “ಉತ್ತಮ ಪ್ರಾಂಶುಪಾಲ’ ಪ್ರಶಸ್ತಿಗೆ ಹಿರಿಯಡಕ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯ ಪ್ರಾಂಶುಪಾಲ ಮಂಜು ನಾಥ್ ಭಟ್, ಬೆಳ್ತಂಗಡಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುಕುಮಾರ, “ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ನರೇಂದ್ರ ಕುಮಾರ್ ಕೋಟ ಮತ್ತು ಮಡಿಕೇರಿ ತಾಲೂಕಿನ ಬೋಯಕೇರಿ ಸರಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕ ಪೂರ್ಣೇಶ್ ಬಿ.ಟಿ. ಆಯ್ಕೆಯಾಗಿದ್ದಾರೆ. ಇವರಿಗೆ ಸೆ. 5ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ರಾಜ್ಯಾದ್ಯಂತ ಸರಕಾರಿ ಪ್ರಾಥಮಿಕ ಶಾಲೆಯ 20, ಪ್ರೌಢಶಾಲೆಯ 10 ಮತ್ತು ಪದವಿಪೂರ್ವ ಕಾಲೇಜಿನ ಇಬ್ಬರು ಪ್ರಾಂಶುಪಾಲರು ಮತ್ತು ಪದವಿ ಕಾಲೇಜಿನ 8 ಉಪನ್ಯಾಸಕರಿಗೆ ಪ್ರಶಸ್ತಿ ಬಂದಿದೆ.
ಪ್ರಾಂಶುಪಾಲ ಮಂಜುನಾಥ್ ಭಟ್
ಉಡುಪಿ: ಉ.ಕ. ಜಿಲ್ಲೆಯ ಇಡಗುಂಜಿ ಮೂಲದವರಾದ ಮಂಜುನಾಥ್ ಭಟ್ 20 ವರ್ಷಕ್ಕೂ ಅಧಿಕ ಕಾಲದಿಂದ ಉಡುಪಿ ಜಿಲ್ಲೆಯ ವಿವಿಧ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬ್ರಹ್ಮಾವರ ಹಾಗೂ ಶಂಕರನಾರಾಯಣ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. 2017ರಿಂದ ಹಿರಿಯಡಕ ಪ.ಪೂ. ಕಾಲೇಜಿನಲ್ಲಿ (ಈಗ ಅದು ಕರ್ನಾಟಕ ಪಬ್ಲಿಕ್ ಶಾಲೆ) ಸೇವೆ ಸಲ್ಲಿಸುತ್ತಿದ್ದು ಈಗ ಪ್ರಾಂಶುಪಾಲರಾಗಿದ್ದಾರೆ. ಸ್ಥಳೀಯರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಕೆಪಿಎಸ್ ಸಂಪೂರ್ಣ ಅಭಿವೃದ್ಧಿಗೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಸದ್ಯ ಕೆಪಿಎಸ್‌ನಲ್ಲಿ 1,800ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ 724 ವಿದ್ಯಾರ್ಥಿಗಳು ಪದವಿಪೂರ್ವ ವಿಭಾಗದಲ್ಲಿದ್ದಾರೆ. ಇಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗವಿದೆ.
ಕೆಪಿಎಸ್ ಅಭಿವೃದ್ಧಿಯಲ್ಲಿ ಸ್ಥಳೀಯರು, ಆಡಳಿತ ಮಂಡಳಿಯ ಸದಸ್ಯರು, ಜನಪ್ರತಿನಿಧಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಸರಕಾರ ನಮ್ಮ ಕೆಪಿಎಸ್ ಅಭಿವೃದ್ಧಿ ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ.
– ಮಂಜುನಾಥ ಭಟ್,
ಪ್ರಾಂಶುಪಾಲರು, ಕೆಪಿಎಸ್ ಹಿರಿಯಡಕ
ಸಮಾಜ ವಿಜ್ಞಾನ ಶಿಕ್ಷಕ ನರೇಂದ್ರ ಕುಮಾರ್
ಕೋಟ: ಬಹುಮುಖಿ ವ್ಯಕ್ತಿತ್ವದ ಸಾಲಿಗ್ರಾಮ ಚಿತ್ರಪಾಡಿಯ ನರೇಂದ್ರ ಕುಮಾರ್ ಕೋಟ ಎಂ.ಎ., ಬಿ.ಎಡ್. ಪದವೀಧರರಾಗಿದ್ದು, 24 ವರ್ಷಗಳಿಂದ ವಿವೇಕ ವಿದ್ಯಾಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರವಣಿಗೆ, ನಿರ್ದೇಶನ, ನಿರೂಪಣೆ, ತರಬೇತಿ ನೀಡುವಿಕೆ, ಧ್ವನಿ ನೀಡುವಿಕೆ, ಗಾಯನ, ಟಿ.ವಿ. ಕಾರ್ಯಕ್ರಮ ನಿರ್ವಹಣೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರ 200ಕ್ಕೂ ಮಿಕ್ಕಿದ ಕವನಗಳು, 23 ಕಥೆಗಳು, 150 ಲೇಖನಗಳು, 16 ವಿಶೇಷ ಲೇಖನಗಳು, ನೂರಾರು ಪತ್ರಿಕಾ ಅಂಕಣಗಳು ಪ್ರಕಟಗೊಂಡಿವೆ.
ಕಾರಂತ ಹುಟ್ಟೂರು ಪ್ರತಿಷ್ಠಾನ ಸೇರಿದಂತೆ 20ಕ್ಕೂ ಹೆಚ್ಚು ಸ್ವಯಂ ಸೇವಾ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ನಿರ್ಮಾಣದ ಸುಗಂಧಿ ಕನ್ನಡ ಚಲನಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದು, ಇವರ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ವಿಶ್ವ ದಾಖಲೆ ಬರೆದಿದೆ.
ಶಿಕ್ಷಣ ಕ್ಷೇತ್ರ ನನ್ನ ಅಚ್ಚುಮೆಚ್ಚಿನ ಆಯ್ಕೆ. ಜತೆಗೆ ಸಾಹಿತ್ಯ, ನಿರ್ದೇಶನ, ನಿರೂಪಣೆ, ತರಬೇತಿ ನೀಡುವಿಕೆ ಹೀಗೆ ಹತ್ತು ಹಲವು ಹವ್ಯಾಸಗಳಿವೆ. ನನ್ನ ಚಿಕ್ಕ ಮಟ್ಟದ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದಕ್ಕೆ ತುಂಬಾ ಖುಷಿ ಇದೆ.
– ನರೇಂದ್ರ ಕುಮಾರ್ ಕೋಟ, ಪ್ರಶಸ್ತಿ ಪುರಸ್ಕೃತರು
ಪ್ರಾಂಶುಪಾಲ ಸುಕುಮಾರ್
ಬೆಳ್ತಂಗಡಿ: ಸುಕುಮಾರ್ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ಕೆಳಗಿನ ಗುತ್ತು ಬಾಲೇಶ್ವರ ಜಿನರಾಜ ಚೌಟ ಹಾಗೂ ರತ್ನಾವತಿ ದಂಪತಿಯ ಪುತ್ರ. ಗರ್ಡಾಡಿ ಸಂತ ಅಂತೋನಿ ಶಾಲೆ, ವೇಣೂರು ಸರಕಾರಿ ಪ್ರೌಢಶಾಲೆ, ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಹಿರಿಯ ವಿದ್ಯಾರ್ಥಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು 1993ರಲ್ಲಿ ಬೈಂದೂರಿನ ಸರಕಾರಿ ಪ.ಪೂ. ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ನೇಮಕಗೊಂಡರು. ಬಳಿಕ ವಾಮದಪದವು, ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ 2018ರಲ್ಲಿ ಪದೋನ್ನತಿ ಹೊಂದಿ ಬೆಳ್ತಂಗಡಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಥಮ ಪಿಯುಸಿ ಜೀವಶಾಸ್ತ್ರ ಪಠ್ಯಪುಸ್ತಕದ ಕನ್ನಡ ಅನುವಾದ ಸಮಿತಿಯ ಸದಸ್ಯರು. ದಕ್ಷಿಣ ಕನ್ನಡ ಜಿಲ್ಲೆಯ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಸ್ಥಾಪಕ ಅಧ್ಯಕ್ಷರು. ಯೂಟ್ಯೂಬ್ ಚಂದನ ವಾಹಿನಿಗಳಲ್ಲಿ ಪಾಠ ಪ್ರವಚನ. ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ವಿಜ್ಞಾನ ವಿಭಾಗ ಆರಂಭ ಮತ್ತು ಅಭಿವೃದ್ಧಿಗೋಸ್ಕರ ವಿವಿಧ ಸಂಘ ಸಂಸ್ಥೆಗಳ ಸಹಾಯ ವಿವಿಧ ಬ್ಯಾಂಕುಗಳ ಸಿಎಸ್‌ಆರ್‌ಫಂಡಗಳನ್ನು ಬಳಸಿಕೊಂಡು ಕಾಲೇಜನ್ನು ಅಭಿವೃದ್ಧಿಪಡಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಜತೆಗೆ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ನನ್ನನ್ನು ಗುರುತಿಸಿ ನೀಡಿದ ಪ್ರಶಸ್ತಿಗಾಗಿ ಬಹಳ ಹರ್ಷವಾಗಿದೆ. ಜವಾಬ್ದಾರಿ ಹೆಚ್ಚಾಗಿದೆ. ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ನಮ್ಮ ವಿದ್ಯಾಸಂಸ್ಥೆಯನ್ನು ಒಂದು ಮಾದರಿ ವಿದ್ಯಾ ಸಂಸ್ಥೆಯಾಗಿ ರೂಪಿಸಲು ಎಲ್ಲರ ಸಹಕಾರ ಬೇಕಿದೆ.
– ಸುಕುಮಾರ್
ದೈಹಿಕ ಶಿಕ್ಷಣ ಶಿಕ್ಷಕ ಬಿ.ಟಿ. ಪೂರ್ಣೇಶ್
ಮಡಿಕೇರಿ: ಹಳ್ಳಿ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ನಕ್ಷತ್ರಗಳನ್ನಾಗಿಸಿದವರು ಮಡಿಕೇರಿ ಬೋಯಿಕೇರಿ ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಿ.ಟಿ. ಪೂರ್ಣೇಶ್.
29 ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಹಲವು ಹಾಕಿ ಕ್ರೀಡಾಪಟುಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಾಕಿ ಶಿಬಿರಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ಇವರದ್ದು. ಹಾಕಿ ಕ್ರೀಡೆಯನ್ನು ತಮ್ಮ ಜೀವನಾಡಿಯನ್ನಾಗಿಸಿಕೊಂಡು ಉಚಿತ ತರಬೇತಿ ಶಿಬಿರಗಳನ್ನು ನಡೆಸಿ ಗ್ರಾಮೀಣ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಾರೆ.
ಪ್ರಸ್ತುತ 36ನೇ ರಾಷ್ಟ್ರೀಯ ಕ್ರೀಡೆಯಲ್ಲಿ ಪೂರ್ಣೇಶ್ ಅವರ ಇಬ್ಬರು ವಿದ್ಯಾರ್ಥಿಗಳಾದ ಅಪ್ಸರಾ ಹಾಗೂ ಅರ್ಪಿತಾ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಈಗಾಗಲೇ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನನ್ನ ನಿವೃತ್ತಿಗೆ ಇನ್ನು ಕೇವಲ 3 ವರ್ಷ ಬಾಕಿ ಉಳಿದಿದೆ, ನಿವೃತ್ತಿಯ ಅನಂತರವೂ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ನಕ್ಷತ್ರಗಳನ್ನಾಗಿಸಲು ಶ್ರಮಿಸುತ್ತೇನೆ. ಈ ಪ್ರಶಸ್ತಿಯನ್ನು ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅರ್ಪಿಸುವೆ.
– ಪೂರ್ಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ
Koteshwara: ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಖಾದರ್, ಸೊರಕೆ ಭೇಟಿ
ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.