ಬಲ ಪ್ರದರ್ಶನ, ಬೃಹತ್ ರ್‍ಯಾಲಿಯೊಂದಿಗೆ ನಾಮಪತ್ರ ಸಲ್ಲಿಕೆ
ಎನ್‌ಡಿಎಯಿಂದ ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರದ ಅಭ್ಯರ್ಥಿಯಿಂದ ನಾಮಪತ್ರ
Team Udayavani, Apr 2, 2024, 12:35 AM IST
ಬೆಂಗಳೂರು: ಲೋಕಸಭಾ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸೋಮವಾರ ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಬೃಹತ್ ರ್‍ಯಾಲಿಯೊಂದಿಗೆ ಬಲ ಪ್ರದರ್ಶಿಸಿ ನಾಮಪತ್ರ ಸಲ್ಲಿಸಿದರು.
ಬೃಹತ್ ರ್‍ಯಾಲಿ ಮೂಲಕ ಕಾರ್ಯಕರ್ತರ ಜತೆ ತೆರಳಿದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ವೇಳೆ ಆಯಾ ಪಕ್ಷಗಳ ಪ್ರಮುಖ ನಾಯಕರು ಅಭ್ಯರ್ಥಿಗಳ ಜತೆಗಿದ್ದರು.
ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಸಹಸ್ರಾರು ಕಾರ್ಯಕರ್ತರೊಂದಿಗೆ ಸೋಮವಾರ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯ ಸ್ವಾಮಿ ಹಾಗೂ ಸ್ಥಳೀಯ ಶಾಸಕರು ಪಾಲ್ಗೊಂಡಿದ್ದರು.
ಮೂರು ನಾಮಪತ್ರ ಸಲ್ಲಿಕೆ
ಮಧ್ಯಾಹ್ನ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಾಗಿದ್ದರಿಂದ ಮೆರವಣಿಗೆಯ ಅರ್ಧದಲ್ಲಿಯೇ ತೆರೆದ ವಾಹನದಿಂದ ಇಳಿದು ಸ್ಟಾರ್ ಚಂದ್ರು 2 ನಾಮಪತ್ರ ಸಲ್ಲಿಸಿದರು. ಅನಂತರ ಡಿ.ಕೆ. ಶಿವಕುಮಾರ್ ತಡವಾಗಿ ಆಗಮಿಸಿದ್ದರಿಂದ ಅವರ ಜತೆ ಮತ್ತೂಂದು ನಾಮಪತ್ರ ಸಲ್ಲಿಸಿದರು.
ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಬೆಳಗ್ಗೆ ಗೃಹ ಸಚಿವ ಜಿ.ಪರಮೇಶ್ವರ್, ಸಚಿವ ಕೆ.ಎನ್. ರಾಜಣ್ಣ ಜತೆಗೆ ತೆರಳಿ ಚುನಾ ವಣಾಧಿಕಾರಿಯವರಿಗೆ ನಾಮ ಪತ್ರ ಸಲ್ಲಿಸಿದರು. ಅನಂತರ ಡೇರಿ ವೃತ್ತದಿಂದ ಮೆರವಣಿಗೆಯಲ್ಲಿ ಆಗಮಿಸಿ ಮತ್ತೊಂದು ಸೆಟ್ ನಾಮ ಪತ್ರ ಸಲ್ಲಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಪರಮೇಶ್ವರ್, ಚೆಲುವರಾಯಸ್ವಾಮಿ ಜತೆಗಿದ್ದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ| ಕೆ.ಸುಧಾಕರ್ ಚುನಾವಣ ಕಾರ್ಯಾಲಯಕ್ಕೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಕೋಲಾರ ಕ್ಷೇತ್ರ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಕುಟುಂಬ ಸದಸ್ಯರೊಂದಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಸಿದರು. ಪ್ರಮೋದಾ ದೇವಿ, ಶಾಸಕ ಶ್ರೀವತ್ಸ ಜತೆಗಿದ್ದರು.
ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸಾಂಕೇತಿಕ ನಾಮಪತ್ರ ಸಲ್ಲಿಸಿದರು. ಎ. 3ರಂದು ಬಿಜೆಪಿ ನಾಯಕರ ಸಮ್ಮುಖದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ರೋಡ್ ಶೋ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಸಹಿತ ಹಲವು ನಾಯಕರು ಸಾಥ್ ನೀಡಿದರು. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ರೋಡ್ ಶೋ ಮೂಲಕ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.