ವಿಶಿಷ್ಟವಾಗಿ ದೀಪಾವಳಿ ಆಚರಿಸಿದ ಸುಬ್ರಹ್ಮಣ್ಯದ ದಂಪತಿ
ಬಾಲೆಯ ಬದುಕಿಗೆ ಬೆಳಕಾದ ದಂಪತಿ
Team Udayavani, Nov 20, 2020, 6:01 AM IST
ಬಾಲಕೃಷ್ಣ ಪೈ ಹಾಗೂ ಸೌಮ್ಯಾ ಪೈ ದಂಪತಿ ಪ್ರತೀಕ್ಷಾ ಕುಟುಂಬಕ್ಕೆ ವಸ್ತ್ರ ವಿತರಿಸಿ ಮಗುವಿನ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡರು.
ಸುಬ್ರಹ್ಮಣ್ಯ: ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ಬಡ ದಂಪತಿಯ ಕರುಳ ಕುಡಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಸುಬ್ರಹ್ಮಣ್ಯದ ದಂಪತಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.
ಕಾರ್ಕಳ ತಾಲೂಕು ಡೊಂಕುಬೆಟ್ಟು ನಿವಾಸಿಗಳಾಗಿರುವ ಲಕ್ಷ್ಮಣ ನಾಯಕ್(48) -ರೇವತಿ (38) ದಂಪತಿಯ ಪುತ್ರಿ ಪ್ರತೀಕ್ಷಾ ಐದರ ಬಾಲೆ. ಲಕ್ಷ್ಮಣ ಪೋಲಿಯೋ ಪೀಡಿತರಾಗಿದ್ದರೆ, ರೇವತಿ ದೃಷ್ಟಿಹೀನರಾಗಿದ್ದಾರೆ. ಮಗಳಿಗೆ ಶಿಕ್ಷಣ ಕೊಡಿಸುವುದೆಂತು ಎಂಬುದು ಹೆತ್ತವರ ಚಿಂತೆ.
ಈ ವಿಚಾರ ತಿಳಿದ ಕುಕ್ಕೆ ಸುಬ್ರಹ್ಮಣ್ಯದ ಕೆಎಸ್‌ಎಸ್ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಪೈ ಹಾಗೂ ಪತ್ನಿ ಸೌಮ್ಯಾ ಪೈ ಬಡ ಕುಟುಂಬಕ್ಕೆ ನೆರವಾಗಲು ಯೋಚಿಸಿದರು. ದೀಪಾವಳಿ ಯಂದು ಅವರ ಮನೆಗೆ ತೆರಳಿದ ದಂಪತಿ ಪ್ರತೀಕ್ಷಾ ಮತ್ತು ಆಕೆಯ ಹೆತ್ತವರಿಗೆ ಹೊಸ ವಸ್ತ್ರ, ಆರ್ಥಿಕ ನೆರವು ನೀಡಿ ಶುಭಾಶಯ ಹೇಳಿದ್ದಲ್ಲದೆ ಮಗಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು. ಕುಟುಂಬಕ್ಕೆ ಅವಶ್ಯ ನೆರವಿನ ಭರವಸೆಯನ್ನೂ ನೀಡಿದರು. ಈ ಸಂದರ್ಭ ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಸದಸ್ಯ ಮೋಹನದಾಸ್ ರೈ, ಸ್ಥಳೀಯರಾದ ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಅಸಹಾಯಕರಿಗೆ ನೆರವು
ಬಾಲಕೃಷ್ಣ – ಸೌಮ್ಯಾ ದಂಪತಿ ಈ ಹಿಂದೆಯೂ ಹಲವು ಮಂದಿ ಅಸಹಾಯಕರಿಗೆ ವಿವಿಧ ರೂಪದಲ್ಲಿ ನೆರವಾಗಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಮನೋಭಾವ ಅವರದು. ಹಳ್ಳಿಗಳ ಅಂಗನವಾಡಿ ಕೇಂದ್ರ, ಸರಕಾರಿ ಶಾಲೆಗಳಿಗೆ ಪ್ರತೀ ವರ್ಷ ಲೇಖನಿ, ಪುಸ್ತಕ, ಛತ್ರಿ ಇತ್ಯಾದಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಅವರ ಸೇವಾ ಮನೋಭಾವದಿಂದ ಅದೆಷ್ಟೋ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.
ಸಂಕಷ್ಟದ ಬದುಕು
5 ಸೆಂಟ್ಸ್ ನಿವೇಶನದ ಪುಟ್ಟ ಗುಡಿಸಲಿನಲ್ಲಿ ಅವರ ವಾಸ. ದೃಷ್ಟಿಹೀನರಾಗಿರುವ ರೇವತಿ ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. ನಡೆದಾಡಲು ಕಷ್ಟಪಡುವ ಲಕ್ಷ್ಮಣ ಏನೂ ಕೆಲಸ ಮಾಡುವಂತಿಲ್ಲ. ಸರಕಾರದಿಂದ ಬರುವ 2,800 ರೂ. ಮಾಸಾಶನ ಹಾಗೂ ಸ್ಥಳೀಯರ ನೆರವಿನಿಂದ ದೈನಂದಿನ ಬದುಕು ಸಾಗುತ್ತದೆ. ಕುಟುಂಬ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದೆ. ಪ್ರತೀಕ್ಷಾಳ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಂದರ್ಭ ಕುಟುಂಬದ ಸಂಕಷ್ಟವನ್ನು ಕಂಡು ಸೌಮ್ಯಾ ಪೈ ಅವರು ಗದ್ಗದಿತರಾದರು.
ನಾಲ್ಕು ಗೋಡೆಗಳ ಮಧ್ಯೆ ನಮ್ಮ ಜೀವನ ಸಾಗುತ್ತದೆ. ಬಾಳಿ ಬೆಳಗಬೇಕಾದ ಮಗುವಿನ ಶಿಕ್ಷಣ, ಭವಿಷ್ಯ ಕಮರುತ್ತದೆಯಲ್ಲ ಎಂಬ ಚಿಂತೆಯಲ್ಲಿದ್ದಾಗ ಬಾಲಕೃಷ್ಣ ದಂಪತಿ ನಮ್ಮ ಪಾಲಿನ ದೇವರಂತೆ ಬಂದಿದ್ದಾರೆ. ನಮ್ಮ ಮಗಳ ಬಾಳಲ್ಲಿ ಈಗ ಬೆಳಕು ಮೂಡಿದೆ.
– ಲಕ್ಷ್ಮಣ ನಾಯಕ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.