ಆಶ್ವಾಸನೆ ನೀಡಿದವರ ನಿಲುವಿಗೆ ಸತ್ವ ಪರೀಕ್ಷೆ
Team Udayavani, Dec 19, 2019, 3:09 AM IST
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಹೊಸ ಜಿಲ್ಲೆ ರಚನೆ ಕೂಗು ಸೇರಿದಂತೆ ಇತರ ವಿಚಾರಗಳಲ್ಲಿ ಉಪಚುನಾವಣೆಗೆ ಮುನ್ನ ಘೋಷಣೆಗಳನ್ನು ಮಾಡಿದ್ದ ನಾಯಕರೆಲ್ಲರೂ ಈಗ ಬಿಜೆಪಿ ಸರ್ಕಾರದಲ್ಲಿ ಒಟ್ಟಾಗಿದ್ದು, ಅವರು ತೆಗೆದುಕೊಳ್ಳುವ ನಿರ್ಣಯದ ಸಂಬಂಧ ಸತ್ವಪರೀಕ್ಷೆಗೆ ಒಳಗಾಗಲಿದ್ದಾರೆ.
ಹೊಸಪೇಟೆ, ವಿಜಯನಗರ, ಗೋಕಾಕ್, ಚಿಕ್ಕೋಡಿ ಜಿಲ್ಲಾ ರಚನೆಗೆ ಆಗ್ರಹ, ಹಿಂದಿನ ಮೈತ್ರಿ ಸರ್ಕಾರ ಜೆಎಸ್‌ಡಬ್ಲೂ ಕಂಪನಿಗೆ 3,600 ಎಕರೆ ಭೂಮಿ ಪರಭಾರೆ ಮಾಡಿರುವ ವಿಚಾರದ ಬಗ್ಗೆ ಮೂಲ ಬಿಜೆಪಿಗರು ಹಾಗೂ ಇತ್ತೀಚೆಗೆ ಬಿಜೆಪಿ ಸೇರಿ ಗೆದ್ದ ಶಾಸಕರ ನಿಲುವು ಭಿನ್ನವಾಗಿತ್ತು. ಇದೀಗ ಎಲ್ಲರೂ ಒಂದೇ ಪಕ್ಷದಲ್ಲಿದ್ದು, ಒಮ್ಮತದ ನಿಲುವಿಗೆ ಬದ್ಧರಾಗಿರುವರೇ ಎಂಬುದು ಮುಂದಿನ ಬೆಳವಣಿಗೆ ಮೇಲೆ ಅವಲಂಬಿತವಾಗಿದೆ.
ಮೈತ್ರಿ ಸರ್ಕಾರದ ಅವಧಿಯಲ್ಲೇ ಬಿಜೆಪಿಯತ್ತ ಮುಖ ಮಾಡಿದ್ದ ಕಾಂಗ್ರೆಸ್, ಜೆಡಿಎಸ್‌ನ ಹಲವು ಶಾಸಕರು ರಾಜೀನಾಮೆ ನೀಡಿ ಅನರ್ಹಗೊಂಡ ಬಳಿಕವೂ ಬಿಜೆಪಿ ಸರ್ಕಾರದಲ್ಲಿ ಆಗಾಗ್ಗೆ ತಮ್ಮ ಪ್ರಭಾವ ಬಳಸುತ್ತಿದ್ದರು. ತಮ್ಮ ಕೆಲ ಕಾರ್ಯಗಳನ್ನು ಪರೋಕ್ಷವಾಗಿ ಮಾಡಿಕೊಳ್ಳಲಾರಂಭಿಸಿದ್ದ ಅವರು ಉಪಚುನಾವಣೆ ಗೆಲ್ಲಲು ಕೆಲ ಮಹತ್ವದ ವಿಚಾರಗಳನ್ನೂ ಜನರ ಮುಂದೆ ಪ್ರಸ್ತಾಪಿಸಿ, ಗೆದ್ದರೆ ಭರವಸೆ ಈಡೇರಿಸುವ ವಾಗ್ಧಾನವನ್ನೂ ನೀಡಿದ್ದರು. ಇದೀಗ ಅದೇ ವಿಚಾರ ಬಿಜೆಪಿ ಸರ್ಕಾರದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದು, ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯನಗರ ಜಿಲ್ಲೆ ರಚನೆ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚಿಸಬೇಕು ಎಂದು ಆಗ್ರಹಿಸಿದ್ದ, ಅದೇ ಕಾರಣ ನೀಡಿ ಕಾಂಗ್ರೆಸ್ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದ ಆನಂದ್ ಸಿಂಗ್ ಈಗ ಬಿಜೆಪಿ ನೂತನ ಶಾಸಕ. ಇದೇ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಜಿಲ್ಲೆಯಾಗಿ ಘೋಷಿಸುವಂತೆ ಮನವಿ ಮಾಡಿದ್ದರು. ಉಪಚುನಾವಣೆಯಲ್ಲಿ ಗೆದ್ದರೆ ವಿಜಯನಗರ ಜಿಲ್ಲೆ ರಚಿಸುವ ಭರವಸೆಯನ್ನೂ ಕ್ಷೇತ್ರದ ಮತದಾರರಿಗೆ ನೀಡಿದ್ದರು. ಇದೀಗ ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿದ್ದು, ವಿಜಯನಗರ ಜಿಲ್ಲೆ ಮಾಡುವ ಪ್ರಯತ್ನದಲ್ಲಿ ಉತ್ಸುಕರಾಗಿದ್ದಾರೆ.
ಆದರೆ, ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆ ಯನ್ನು ವಿಭಜಿಸಬಾರದು ಎಂಬುದು ಬಳ್ಳಾರಿ ಜಿಲ್ಲೆಯ ಹಲವು ಶಾಸಕರ ಆಗ್ರಹ. ಮುಖ್ಯವಾಗಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆಯೇ ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯನ್ನು ವಿಭಜಿಸದಂತೆ ಮನವಿ ಮಾಡಿ ದ್ದಾರೆ. ಆರಂಭದಲ್ಲಿ ಬಳ್ಳಾರಿ ವಿಭಜನೆಯನ್ನು ವಿರೋ ಧಿಸಿದ್ದ ಸಚಿವ ಬಿ.ಶ್ರೀರಾಮುಲು ಅವರು, ಸದ್ಯ ಆ ಬಗ್ಗೆ ಮೌನ ವಹಿಸಿದ್ದಾರೆ. ಒಂದೊಮ್ಮೆ ಆನಂದ್‌ಸಿಂಗ್ ಹಾಗೂ ಸೋಮಶೇಖರ ರೆಡ್ಡಿ ತಮ್ಮ ನಿಲುವು ಗಳಿಗೆ ಅಂಟಿಕೊಂಡರೆ ಬಿಜೆಪಿಯಲ್ಲೇ ಅಪಸ್ವರದ ದನಿ ದೊಡ್ಡದಾಗುವ ಸಾಧ್ಯತೆ ಇದೆ.
ಗೋಕಾಕ್ ಜಿಲ್ಲೆ ರಚನೆ ಕೂಗು: 14 ತಾಲೂಕುಗಳು ಹಾಗೂ 18 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಭಜಿ ಸಬೇಕು ಎಂಬ ಕೂಗು ಬಹಳ ಕಾಲದಿಂದ ಇದೆ. ಗೋಕಾಕ್ ತಾಲೂಕನ್ನು ಜಿಲ್ಲೆ ಮಾಡಬೇಕು ಎಂಬು ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿಲುವು. ಚಿಕ್ಕೋಡಿ ಜಿಲ್ಲೆ ರಚಿಸಬೇಕು ಎಂಬುದು ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ, ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರ ಆಗ್ರಹ. ಪ್ರಕಾಶ್ ಹುಕ್ಕೇರಿ ಹೊರತುಪಡಿಸಿ ಉಳಿದವರೆಲ್ಲಾ ಈಗ ಬಿಜೆಪಿಯಲ್ಲೇ ಇದ್ದಾರೆ. ಬೆಳಗಾವಿಯನ್ನು 3 ಜಿಲ್ಲೆಯಾಗಿ ವಿಂಗಡಿಸಬೇಕೆಂಬ ಒತ್ತಾಯ ವಿದ್ದರೂ ಆ ಭಾಗದ ಜನಪ್ರತಿನಿಧಿಗಳಲ್ಲಿ ಒಮ್ಮತ ಮೂಡದ ಕಾರಣ ಈ ಪ್ರಯತ್ನದಲ್ಲಿ ಯಶಸ್ಸು ಕಂಡಿಲ್ಲ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಚರ್ಚಿಸಿ, ಒಮ್ಮತದ ನಿಲುವಿಗೆ ಬಂದರೆ ಮೂರು ಜಿಲ್ಲೆ ರಚಿಸಲು ಬದ್ಧ ಎಂದು ಹೇಳಿದ್ದರು. ಆದರೆ, ಆ ಭಾಗದ ಶಾಸಕರು ಒಮ್ಮತದ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರಿದ್ದು, ಸದ್ಯದಲ್ಲೇ ಸಚಿವರಾಗಲಿದ್ದಾರೆ. ಹಾಗಾಗಿ, ಹೊಸ ಜಿಲ್ಲೆಗಳ ರಚನೆ ಪ್ರಯತ್ನ ವೇಗ ಪಡೆಯುವುದೇ ಎಂಬ ಕುತೂಹಲ ಮೂಡಿದೆ.
ಜಿಂದಾಲ್ ಜಟಾಪಟಿ: ಹಿಂದಿನ ಮೈತ್ರಿ ಸರ್ಕಾರ ಜೆಎಸ್‌ಡಬ್ಲೂ ಕಂಪನಿಗೆ 3,600 ಎಕರೆ ಭೂಮಿಯನ್ನು ಪರಭಾರೆ ಮಾಡಿದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಆಗ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಅಹೋರಾತ್ರಿ ಧರಣಿ ನಡೆಸಿದ್ದರು. ಬೆಲೆಬಾಳುವ ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡುವ ಮೂಲಕ ಮೈತ್ರಿ ಸರ್ಕಾರ ಕಿಕ್‌ಬ್ಯಾಕ್ ಪಡೆದಿದೆ ಎಂದು ಆರೋಪಿಸಿದ್ದರು. ಆದರೆ, ಬಿಜೆಪಿ ಸರ್ಕಾರ ರಚನೆಯಾಗಿ ನಾಲ್ಕೂವರೆ ತಿಂಗಳು ಕಳೆದರೂ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿರುವ ಬಗ್ಗೆ ಯಾವುದೇ ಕ್ರಮ ಕೈಗೊಂಡಂತಿಲ್ಲ.
ಈ ವಿಚಾರದಲ್ಲೂ ಸಚಿವ ಶ್ರೀರಾಮುಲು ಅವರು ಸ್ಪಷ್ಟ ನಿಲುವು ಪ್ರಕಟಿಸಿರಲಿಲ್ಲ. ಬದಲಿಗೆ ಕೈಗಾರಿಕೆಗಳಿಗೆ ಪ್ರೋತ್ಸಾಹ ಅಗತ್ಯ ಎಂಬರ್ಥದಲ್ಲಿ ಮಾತನಾಡಿದ್ದರು. ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡಿರುವುದನ್ನು ವಿರೋಧಿಸಿಯೇ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಆನಂದ್ ಸಿಂಗ್ ಹೇಳಿದ್ದರು. ಇದೀಗ ಆನಂದ್ ಸಿಂಗ್ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ, ಈ ವಿಚಾರದಲ್ಲೂ ಸ್ವಪಕ್ಷೀಯರಲ್ಲೇ ಹಿತಾಸಕ್ತಿ ಸಂಘರ್ಷ ಸೃಷ್ಟಿಯಾಗುವ ಆತಂಕದ ಮಾತುಗಳು ಕೇಳಿ ಬರುತ್ತಿವೆ.
ವಿಜಯನಗರ ಜಿಲ್ಲೆ ರಚನೆ, ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ವಿಚಾರದ ಬಗ್ಗೆ ನನ್ನ ನಿಲುವು, ಮನವಿಯನ್ನು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ.
-ಆನಂದ್ ಸಿಂಗ್, ಬಿಜೆಪಿ ಶಾಸಕ
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.