Summer: ವಾಡಿಕೆಗಿಂತ ಮೊದಲೇ ರಾಜ್ಯಕ್ಕೆ ಬೇಸಗೆ ಕಾಲ!
ಮುಂದಿನ ವಾರವೇ ಬೇಸಗೆ ಹವಾ ಸೃಷ್ಟಿ ಮುನ್ಸೂಚನೆ- ಮಳೆ ಕೊರತೆ, ಚಳಿ ಅಭಾವದಿಂದ ಉಷ್ಣಾಂಶ ಏರಿಕೆ
Team Udayavani, Feb 4, 2024, 5:10 AM IST
ಬೆಂಗಳೂರು: ರಾಜ್ಯಕ್ಕೆ ಈ ಬಾರಿ ವಾಡಿಕೆಗಿಂತ ಮೊದಲೇ ಬೇಸಗೆ ಕಾಲಿಟ್ಟಿದ್ದು, ಫೆಬ್ರವರಿ 2ನೇ ವಾರದಿಂದ ಬೇಸಗೆ ಕಾಲ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.
ಕರ್ನಾಟಕದೆಲ್ಲೆಡೆ ಬರ ಪರಿಸ್ಥಿತಿ ಉಲ್ಬಣಗೊಂಡಿರುವ ಬೆನ್ನಲ್ಲೇ 2024ರಲ್ಲಿ ವಾಡಿಕೆಗಿಂತ 2 ತಿಂಗಳು ಮುಂಚಿತವಾಗಿ ಬೇಸಗೆ ಅನುಭವ ಆಗಿದೆ. ಪ್ರತಿ ವರ್ಷವೂ ಕಾಲಕ್ಕೆ ಸರಿಯಾಗಿ ಮುಂಗಾರು ಹಾಗೂ ಹಿಂಗಾರು ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಚಳಿಯ ಪ್ರಭಾವವೂ ಅಧಿಕವಾಗಿರುತ್ತಿತ್ತು. ಹೀಗಾಗಿ ಬೇಸಗೆ ಕಾಲವು ವಾಡಿಕೆಯಂತೆ ಎಪ್ರಿಲ್ ಬಳಿಕ ರಾಜ್ಯಕ್ಕೆ ಕಾಲಿಡುತ್ತಿತ್ತು. ಆದರೆ 2023 ರಲ್ಲಿ ಮಳೆಯ ಕೊರತೆ ಎದುರಾಗಿ ರಾಜ್ಯಾದ್ಯಂತ ಬರ ಉಂಟಾಗಿರುವುದು, ಎಲ್‌ನಿನೋ ತೀವ್ರವಾಗಿರುವುದು, ಉಷ್ಣಾಂಶ ಹೆಚ್ಚಾಗಿ ಭೂಮಿಯ ತೇವಾಂಶ ಭಾರೀ ಇಳಿಕೆಯಾಗಿರುವ ಕಾರಣದಿಂದ ಈ ಬಾರಿ ಫೆ. 15ರ ಬಳಿಕ ಬೇಸಗೆ ಆರಂಭವಾಗಲಿದೆ ಎಂದು ಹವಾಮಾನ ತಜ್ಞರು “ಉದಯವಾಣಿ’ಗೆ ತಿಳಿಸಿದ್ದಾರೆ.
ಕರಾವಳಿಯಲ್ಲಿ ಉಷ್ಣ ಅಲೆಯ ಪ್ರಭಾವ?
ಫೆ.5ರ ಬಳಿಕ ಕನಿಷ್ಠ ಉಷ್ಣಾಂಶವು ವಾಡಿಕೆಗಿಂತ 3 ಡಿ.ಸೆ.ಗಿಂತ ಹೆಚ್ಚಾಗಲಿದೆ. ಎಲ್ ನಿನೋ ಇನ್ನೂ ತೀವ್ರವಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯಾ ದ್ಯಂತ ಗರಿಷ್ಠ ಉಷ್ಣಾಂಶ ವಾಡಿಕೆಗಿಂತ ಅಧಿಕವಾಗಿದೆ. ಮುಂದಿನ ವಾರದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು 34 ಡಿ.ಸೆ. ದಾಟಲಿದೆ. ಮಾರ್ಚ್, ಎಪ್ರಿಲ್‌ನಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಳೆದ ಹಲವು ವರ್ಷಗಳಿಗಿಂತ ಈ ಬಾರಿ ಅತ್ಯಧಿಕ ತಾಪಮಾನ ಉಂಟಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಸಹಿತ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಉಷ್ಣ ಅಲೆಯ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಮಳೆ ಸುರಿಯುವ ಸಾಧ್ಯತೆಯೂ ಹೆಚ್ಚು
ಕರ್ನಾಟಕದ ಸದ್ಯದ ಹವಾಮಾನದ ಸ್ಥಿತಿಗತಿಯನ್ನು ಗಮನಿಸಿದಾಗ ಎಲ್‌ನಿನೋ ತಾಪವು ಎಪ್ರಿಲ್, ಮೇ ತಿಂಗಳಿನಲ್ಲಿ ಕಡಿಮೆಯಾಗಲಿದ್ದು, ಎಪ್ರಿಲ್‌ನಲ್ಲೇ ಗುಡುಗು, ಮಿಂಚಿನಿಂದ ಕೂಡಿದ ಮಳೆ ಸುರಿಯುವ ಲಕ್ಷಣ ಗೋಚರಿಸಿದೆ. ಸದ್ಯದ ವಾತಾವರಣ ಬದಲಾವಣೆ ಗಮನಿಸಿದಾಗ 2024ರಲ್ಲಿ ಮುಂಗಾರು ಮಳೆ ಚೆನ್ನಾಗಿರಲಿದೆ ಎಂಬುದು ಕಂಡು ಬಂದಿದೆ.
ಎಲ್ಲೆಲ್ಲಿ ಉಷ್ಣಾಂಶ ಹೆಚ್ಚಳ
ಬೆಂಗಳೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ 31.4 ಡಿ.ಸೆ.ದಾಖಲಾದರೆ, ಕಲಬುರಗಿಯಲ್ಲಿ 34.4 ಡಿ.ಸೆ. ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ ವರದಿಯಾಗಿದೆ. ಮಂಗಳೂರು 32.6, ಧಾರವಾಡ 32.4, ದಾವಣಗೆರೆ 32, ರಾಯಚೂರು 34, ಮೈಸೂರು 32.8, ಚಾಮರಾಜನಗರ 33.6, ಬಾಗಲಕೋಟೆ 32.2, ಹಾಸನ 33.8, ಮಂಡ್ಯ 33, ವಿಜಯಪುರ 31.5, ಕೊಪ್ಪಳ 33.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೇಸಗೆ ಕಾಯಿಲೆ ಬಗ್ಗೆ ಇರಲಿ ಎಚ್ಚರ
ಮತ್ತೂಂದೆಡೆ ವಾತಾವರಣದಲ್ಲಿನ ಬಿಸಿಲಿನ ಬೇಗೆಗೆ ತತ್ತರಿಸಿರುವ ಜನ ಸಾಮಾನ್ಯರಲ್ಲಿ ಜ್ವರ, ವಾಂತಿಬೇಧಿ, ನಿರ್ಜಲೀಕರಣದ ಸಮಸ್ಯೆ ಹೆಚ್ಚುತ್ತಿರುವುದು ಆತಂಕಕ್ಕೀಡು ಮಾಡಿದೆ. ಮಕ್ಕಳಲ್ಲಿ ಮ್ಯಾಂಪ್ಸ್ ಸೋಂಕು ಕಂಡು ಬಂದರೆ, ಡಿ ಹೈಡ್ರೇಷನ್‌ನಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಮೊರೆ ಹೋಗುತ್ತಿರುವವರ ಪ್ರಮಾಣವೂ ಏರಿಕೆಯಾಗಿರುವುದನ್ನು ಬೆಂಗಳೂರಿನ ಕೆಲ ವೈದ್ಯರು ದೃಢಪಡಿಸಿದ್ದಾರೆ. ಬೇಸಿಗೆ ಕಾಲಕ್ಕೆ ತಕ್ಕುದಾದ ಆಹಾರ ಪದ್ಧತಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ವಾತಾವರಣದಲ್ಲಿ ಒಣ ಹವೆ ಹೆಚ್ಚಾದ ಹಿನ್ನೆಲೆಯಲ್ಲಿ ತೇವಾಂಶ ಕಡಿಮೆಯಾಗಿ ಉಷ್ಣಾಂಶ ಹೆಚ್ಚಾಗಿರುವ ಅನುಭವ ಉಂಟಾಗುತ್ತಿದೆ. ಉತ್ತರ ಭಾರತದಿಂದ ಗಾಳಿಯು ದಕ್ಷಿಣ ಭಾರತದತ್ತ ಬೀಸಿದಾಗ ಚಳಿ ಹೆಚ್ಚಾಗುತ್ತದೆ. ಆದರೆ ಈ ಬಾರಿ ತಾಪಮಾನವು ವಾಡಿಕೆಗಿಂತ ಹೆಚ್ಚಾಗುವ ಲಕ್ಷಣ ಗೋಚರಿಸಿದೆ.
-ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞ
ಫೆಬ್ರವರಿ ಎರಡನೇ ವಾರದಿಂದ ಬೇಸಗೆ ಕಾಲವು ರಾಜ್ಯಕ್ಕೆ ಕಾಲಿಡುವ ಸಾಧ್ಯತೆಗಳಿವೆ. ಈ ಬಾರಿ ಬೇಸಗೆಯಲ್ಲಿ ತೀವ್ರ ತಾಪಮಾನ ಇರಲಿದೆ. ಉಷ್ಣಾಂಶ ಹೆಚ್ಚಾಗಿ ಕೆಲವು ಕಡೆ ಮಳೆ ಸುರಿಯಲಿವೆ.
-ಪ್ರಸಾದ್, ಹವಾಮಾನ ತಜ್ಞ, ಭಾರತೀಯ ಹವಾಮಾನ ಇಲಾಖೆ
ಅನಿವಾಶ ಮೂಡಂಬಿಕಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.