ಪರಿಹಾರ ವಿತರಣೆಯಲ್ಲಿ ಲಂಚ ಪಡೆದರೆ ಸಸ್ಪೆಂಡ್
Team Udayavani, Oct 13, 2019, 3:08 AM IST
ವಿಧಾನ ಪರಿಷತ್: ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿದ್ದು ಕಂಡರೆ, ಅಂತಹ ಅಧಿಕಾರಿಯನ್ನು ಸರ್ಕಾರಿ ಸೇವೆಯಲ್ಲಿ ಮುಂದುವರಿಯಲಿಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಸದನದಲ್ಲಿ ನೆರೆ ಹಾವಳಿ ಕುರಿತ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ, ಚೆಕ್ ವಿತರಣೆಗೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾರೆಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆಯದಂತೆ ಎಚ್ಚರ ವಹಿಸಲಾಗಿದೆ. ಆದಾಗ್ಯೂ ಲಂಚ ಸ್ವೀಕರಿಸಿದರೆ, ದೇವರು ಅಂತಹವರನ್ನು ಬಿಡುವುದಿಲ್ಲ. ಅಷ್ಟೇ ಅಲ್ಲ, ಸರ್ಕಾರವೂ ಆ ಅಧಿಕಾರಿಯನ್ನು ರಕ್ಷಿಸುವುದಿಲ್ಲ. ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
ನೆರೆ ಹಾವಳಿ ನಿರ್ವಹಣೆ ವಿಚಾರದಲ್ಲಿ ಬಹುತೇಕ ಸಂಬಂಧಪಟ್ಟ ಎಲ್ಲ ಸರ್ಕಾರಿ ನೌಕರರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದಾಗ್ಯೂ ಕೆಲವರು ದುಡ್ಡು ಹೊಡೆಯೋಕೆ ಉತ್ತಮ ಅವಕಾಶ ಎಂದು ತಿಳಿದಿರಬಹುದು. ಹಾಗೊಂದು ವೇಳೆ ದುಡ್ಡು ಹೊಡೆದಿದ್ದು ಸ್ವಲ್ಪ ಸುಳಿವು ಸಿಕ್ಕರೂ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಖಜಾನೆ ಖಾಲಿಯಾಗಿಲ್ಲ: ಸಂತ್ರಸ್ತರಿಗೆ ಪರಿಹಾರದ ಚೆಕ್ ತಮ್ಮ ಮೂಲಕ ವಿತರಿಸಬೇಕು ಎಂದು ಕೆಲ ಶಾಸಕರು, ಅಧಿಕಾರಿಗಳಿಗೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚೆಕ್ ಪದ್ಧತಿ ಕೈಬಿಟ್ಟು, ಆರ್‌ಟಿಜಿಎಸ್‌ನಿಂದ ನೇರವಾಗಿ ಸಂತ್ರಸ್ತರ ಖಾತೆಗೆ ಜಮಾ ಮಾಡಲು ಕ್ರಮಕೈಗೊಳ್ಳಲಾಗಿದೆ. ಇದುವರೆಗೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಸಂತ್ರಸ್ತರಾದವರಿಗೆ ಒಟ್ಟಾರೆ 2.03 ಲಕ್ಷ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳಂತೆ 200 ಕೋಟಿ ರೂ. ವಿತರಣೆ ಮಾಡಲಾಗಿದೆ. ಪ್ರವಾಹ ಪರಿಹಾರಕ್ಕಾಗಿ ರಾಜ್ಯ ಸರ್ಕಾರದಿಂದಲೇ ಈವರೆಗೆ ಒಟ್ಟು 2,949 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಖಜಾನೆ ಖಾಲಿ ಆಗಿಲ್ಲ. ನಿರಂತರವಾಗಿ ಸರ್ಕಾರಕ್ಕೆ ಆದಾಯ ಬರುತ್ತಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಶಾಶ್ವತ ಶಿಫ್ಟ್ ಮಾಡಿ: ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಹಿಂದೆಂದೂ ಕಂಡರಿಯದ ನೆರೆ ಹಾವಳಿಗೆ ರಾಜ್ಯ ತುತ್ತಾಗಿದೆ. ಹಾಗಾಗಿ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಅಲ್ಲದೆ, ಅತಿ ಹೆಚ್ಚು ಬಾಧಿತ ಗ್ರಾಮಗಳಲ್ಲಿನ ಮನೆಗಳನ್ನು ಶಾಶ್ವತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮಾತನಾಡಿ, ಆಗಾಗ್ಗೆ ನೆರೆ ಉಂಟಾಗುತ್ತಿದೆ. ಆಸ್ತಿ-ಪಾಸ್ತಿ ಹಾನಿ ನಿರಂತರವಾಗಿ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಳುಗಡೆ ಆಗಿರುವ ಪ್ರದೇಶವನ್ನು ಸರ್ಕಾರ ಈಗಲೇ ಗುರುತಿಸಿ, ಅಲ್ಲಿನ ಎಲ್ಲ ಮನೆಗಳನ್ನು ನೆಲಸಮ ಮಾಡಬೇಕು. ಪ್ರತಿಯಾಗಿ ಎತ್ತರದ ಮತ್ತು ಸುರಕ್ಷಿತ ಸ್ಥಳಗಳಲ್ಲಿ ವ್ಯವಸ್ಥಿತ ಮನೆಗಳನ್ನು ನಿರ್ಮಿಸಿ ನೆರೆ ಸಂತ್ರಸ್ತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಪುನರ್‌ವಸತಿ ಕಲ್ಪಿಸಿದರೂ ಸಂತ್ರಸ್ತರು ಅತ್ತ ಮುಖಮಾಡುವುದಿಲ್ಲ. ಇಂತಹ ಸುಮಾರು ಎಂಟು ಸಾವಿರಕ್ಕೂ ಅಧಿಕ ಮನೆಗಳು ಪಾಳುಬಿದ್ದಿವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬೊಕ್ಕಸಕ್ಕೆ 2800 ಕೋಟಿ ಹೊರೆ: ನೆರೆಯಿಂದ ಜಖಂಗೊಂಡ ಮನೆಗಳಿಗೆ ನೀಡುವ ಪರಿಹಾರದ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದ್ದರಿಂದ ಸರ್ಕಾರಕ್ಕೆ 2,800 ಕೋಟಿ ರೂ. ಹೆಚ್ಚುವರಿ ಹೊರೆಯಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು. ಈ ಮೊದಲು ಶೇ.25ರಿಂದ ಶೇ.75 ಹಾಗೂ ಶೇ.75ಕ್ಕೂ ಮೇಲ್ಪಟ್ಟು ಜಖಂಗೊಂಡ ಮನೆಗಳಿಗೆ ಕನಿಷ್ಠ 1ರಿಂದ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಈ ವರ್ಗೀಕರಣ ತೆಗೆದು, ಈಗ ಒಂದೇ ಮಾದರಿ ಪರಿಹಾರ ಘೋಷಿಸಲಾಗಿದೆ. ಇದರಿಂದ 2,800 ಕೋಟಿ ರೂ. ಹೆಚ್ಚುವರಿ ಹೊರೆಯಾಗಿದೆ. ಇದುವರೆಗೆ 244.11 ಕೋಟಿ ರೂ. ಪರಿ ಹಾರ ಹಣ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಂದಾಯ ಇಲಾಖೆಗೆ 417.93 ಕೋಟಿ, ಮೂಲಸೌಕರ್ಯಕ್ಕೆ 500 ಕೋಟಿ, ವಸತಿ ಇಲಾಖೆಗೆ 1,231 ಕೋಟಿ, ಲೋಕೋಪಯೋಗಿ ಇಲಾಖೆಗೆ 500 ಕೋಟಿ ರೂ. ನೀಡಲಾಗಿದೆ. ನೆರೆ ಹಾವಳಿಗೆ ತುತ್ತಾದ ಜಿಲ್ಲೆಗಳ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟಾರೆ 1,394.31 ಕೋಟಿ ರೂ. ಜಮೆಯಾಗಿದೆ. ಒಟ್ಟು 1,747 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ವಾರ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತಿದೆ ಎಂದರು.
ನಿಯಮ ಮೀರಿ ಪರಿಹಾರ ನೀಡಿದ್ದೇವೆ: ಸಿಎಂ
ವಿಧಾನ ಪರಿಷತ್: ಪ್ರವಾಹದಿಂದ ಸಂತ್ರಸ್ತರಾಗಿರುವ ವರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮ ಮೀರಿ ಪರಿಹಾರ ನೀಡುತ್ತಿದ್ದೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಪ್ರವಾಹ ಪರಿಹಾರ ಕುರಿತ ಚರ್ಚೆಗೆ ಉತ್ತರಿಸಿ, ರಾಜ್ಯದ ಇತಿಹಾಸದಲ್ಲೇ ಭೀಕರವಾದ ಪ್ರವಾಹ ಪರಿಸ್ಥಿತಿಯನ್ನು ಈಗ ಎದುರಿಸುತ್ತಿದ್ದೇವೆ. ಹಾಗೆಯೇ ರಾಜ್ಯದ ಹಣಕಾಸಿನ ಪರಿಸ್ಥಿತಿ ಕೂಡ ಅಷ್ಟೊಂದು ಚೆನ್ನಾಗಿಲ್ಲ. ಆದರೂ, ಪ್ರವಾಹ ಪರಿಹಾರ ಕಾರ್ಯಕ್ಕೆ ಎಲ್ಲ ಮೂಲಗಳಿಂದಲೂ ಹಣಹೊಂದಿಸಿಕೊಂಡು ಎಷ್ಟು ಸಾಧ್ಯವೋ, ಅಷ್ಟು ಗರಿಷ್ಠ ಮಟ್ಟದಲ್ಲಿ ಪರಿಹಾರ ನೀಡುತ್ತಿದ್ದೇವೆಂದು ತಿಳಿಸಿದರು.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ನಲ್ಲಿ ಸೂಚಿಸಿರುವುದಕ್ಕಿಂತಲೂ ಹೆಚ್ಚು ಅನುದಾನ ನೀಡುತ್ತಿದ್ದೇವೆ. ಎಲ್ಲ ರೀತಿಯ ಪರಿಹಾರ ಕಾರ್ಯದಲ್ಲೂ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮದಲ್ಲಿ ಸೂಚಿಸಿರುವುದಕ್ಕಿಂತ 10 ಸಾವಿರ ರೂ. ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ಹಣಕಾಸಿನ ಪರಿಸ್ಥಿತಿ ಚೆನ್ನಾಗಿದ್ದಿದ್ದರೆ, ಪ್ರತಿಪಕ್ಷಗಳು ಹೇಳುವ ಮೊದಲೇ ಇದಕ್ಕಿಂತಲೂ ಹೆಚ್ಚಿನ ಪರಿಹಾರ ಬಿಡುಗಡೆ ಘೋಷಿಸುತ್ತಿದ್ದೆ. ಎ ಮತ್ತು ಬಿ ವರ್ಗದಲ್ಲಿ ನಾಶವಾಗಿರುವ 42,893 ಮನೆಗಳ ಕುಟುಂಬಕ್ಕೆ ತಲಾ 5 ಲಕ್ಷ ಘೋಷಣೆ ಮಾಡಿದ್ದೇವೆ.
ಶೆಡ್ ಕಟ್ಟಿಕೊಳ್ಳಲು 50 ಸಾವಿರ, ಮನೆ ಬಾಡಿಗೆಗೆ 5 ಸಾವಿರ, 2 ಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ತತಕ್ಷಣದ ಪರಿಹಾರವಾಗಿ 10 ಸಾವಿರ ನೀಡಿದ್ದೇವೆ ಎಂದರು. ಸಿಎಂ ಯಡಿಯೂರಪ್ಪ ಉತ್ತರಕ್ಕೆ ತೃಪ್ತಿಯಾಗದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಭೀಕರ ಪ್ರವಾಹವನ್ನು ಏಕೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುತ್ತಿಲ್ಲ? ನೀವು ಮನಸ್ಸು ಮಾಡಿದರೇ ಎಲ್ಲವೂ ಆಗುತ್ತದೆ. ಏಕೆ ಮನಸ್ಸು ಮಾಡುತ್ತಿಲ್ಲ ? ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತಿತ್ತು. ಈಗ ಬಿ.ಎಸ್.ಯಡಿಯೂರಪ್ಪ ಅಸಾಹಯಕರಾಗಿರುವುದು ಏಕೆ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮ*ಹತ್ಯೆ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.