ಸಂಕಷ್ಟದ ನಡುವೆ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ
Team Udayavani, Feb 16, 2023, 6:00 AM IST
ಅಡಿಕೆ ಬೆಳೆಗಾರರ ಮೊಗದಲ್ಲಿ ಒಂದಿಷ್ಟು ನಗು ಮೂಡಿಸುವಂತಹ ಎರಡು ಸುದ್ದಿಗಳು ಈಗ ಹೊರಬಿದ್ದಿವೆ. ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ದಶಕಗಳಿಂದ ಕೇಳಿ ಬರುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಸಂಶೋಧನೆ ಗಳಿಂದ ಸಾಬೀತಾಗಿದೆ ಎಂಬ ಸಿಹಿ ಸುದ್ದಿಯನ್ನು ರಾಜ್ಯ ಸರಕಾರ ಮೇಲ್ಮನೆಯಲ್ಲಿ ಪ್ರಕಟಿಸಿದ್ದರೆ, ಅತ್ತ ಕೇಂದ್ರ ಸರಕಾರ ವಿದೇಶಗಳಿಂದ ಆಮದಾಗುವ ಅಡಿಕೆಯ ಕನಿಷ್ಠ ಬೆಲೆಯನ್ನು ಕೆ.ಜಿ.ಗೆ 351ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಅದರಲ್ಲೂ ಮಲೆನಾಡು ಮತ್ತು ಕರಾವಳಿಯಲ್ಲಿ ಅಡಿಕೆ ಮರಗಳನ್ನು ಬಾಧಿಸುತ್ತಿರುವ ಎಲೆಚುಕ್ಕೆ ರೋಗದಿಂದಾಗಿ ಅಡಿಕೆ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಮಾತ್ರವಲ್ಲದೆ ಅಡಿಕೆ ಕೃಷಿಯ ಭವಿಷ್ಯದ ಮೇಲೆ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಇದರ ಜತೆಯಲ್ಲಿ ಕಳೆದ ಮಳೆಗಾಲದಲ್ಲಿ ಅಡಿಕೆಯನ್ನು ಕೊಳೆರೋಗ ಬಾಧಿಸಿದ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಇವೆಲ್ಲದರ ನಡುವೆ ವಿದೇಶದಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಕಡಿಮೆ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿರುವುದರಿಂದ ದೇಶದಲ್ಲಿ ಅಡಿಕೆ ಬೆಲೆಯ ಸ್ಥಿರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಇದು ಅಡಿಕೆ ಬೆಳೆಗಾರರನ್ನು ಸಹಜವಾಗಿಯೇ ಆತಂಕದ ಮಡುವಿಗೆ ದೂಡಿತ್ತು.
ಅಡಿಕೆ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂಬ ಮಿಥ್ಯಾರೋಪ ಕಳೆದ ಕೆಲವು ದಶಕಗಳಿಂದೀಚೆಗೆ ದೇಶದಲ್ಲಿ ಪದೇಪದೆ ಮುನ್ನೆಲೆಗೆ ಬರುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆ, ಅಧ್ಯಯನ, ಸಂಶೋಧನೆಗಳು ನಡೆದು ಈವರೆಗೂ ಈ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಇಂಥ ಪೂರ್ವಗ್ರಹ ಪೀಡಿತ ಆರೋಪ ಕೇಳಿಬಂದಾಗಲೆಲ್ಲ ಅಡಿಕೆ ಬೆಳೆಗಾರರು ಆತಂಕಕ್ಕೀಡಾಗಿ ಅಡಿಕೆಯ ಕುರಿತಂತೆ ವಿಸ್ತೃತ ಅಧ್ಯಯನ ನಡೆಸಿ ನೈಜ ವರದಿಯನ್ನು ಜನರ ಮುಂದಿಡುವಂತೆ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದರು. ಸರಕಾರದ ನಿರ್ದೇಶನದಂತೆ ಬೆಂಗಳೂರಿನ ಎಸ್.ಎಸ್.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯಲ್ಲಿ ಅಡಿಕೆ ಸೇವನೆ ಮಾನವನ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಸ್ಪಷ್ಟಪಡಿಸಿದೆ. ಅಷ್ಟು ಮಾತ್ರವಲ್ಲದೆ ಅಡಿಕೆಯಲ್ಲಿ ಕ್ಯಾನ್ಸರ್ ನಿವಾರಕ ಅಂಶವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ.
ಅಡಿಕೆ ಬೆಳೆಗಾರರಲ್ಲಿ ದಿಗಿಲು ಹುಟ್ಟಿಸಿರುವ ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗದ ಬಾಧೆಯ ನಿವಾರಣೆಗಾಗಿ ಸೂಕ್ತ ಔಷಧವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರೋಪಾಯವನ್ನು ಕಂಡುಕೊಳ್ಳಲು ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೂ ಒತ್ತಡ ಹೇರಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದ್ದು ಅಡಿಕೆ ಬೆಳೆಗಾರರಲ್ಲಿ ಆಶಾವಾದ ಮೂಡುವಂತೆ ಮಾಡಿದೆ.
ಇನ್ನು ದೇಶದಲ್ಲಿ ಅಡಿಕೆ ಧಾರಣೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರ ಬೇಡಿಕೆಗೆ ಮಣಿದಿರುವ ಕೇಂದ್ರ ಸರಕಾರ ಕನಿಷ್ಠ ಆಮದು ಬೆಲೆಯನ್ನು ಕೆ.ಜಿ.ಗೆ 100 ರೂ.ಗಳಷ್ಟು ಹೆಚ್ಚಿಸಿ 351 ರೂ.ಗಳೆಂದು ನಿಗದಿ ಪಡಿಸಿದೆ. ಇದರಿಂದ ವಿದೇಶಗಳಿಂದ ಆಮದಾಗುವ ಅಡಿಕೆ ಪ್ರಮಾಣ ಕಡಿಮೆಯಾಗಲಿದ್ದು ದೇಶದ ಅಡಿಕೆ ಬೆಳೆಗಾರರಿಗೆ ಸ್ಥಿರವಾದ ಧಾರಣೆ ಲಭಿಸಲಿದೆ.
ಹತ್ತು ಹಲವು ಸಮಸ್ಯೆಗಳ ನಡುವೆ ಸಿಲುಕಿರುವ ಅಡಿಕೆ ಬೆಳೆಗಾರರನ್ನು ಈ ಎರಡೂ ವರದಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ರಾಜ್ಯದಲ್ಲಿ ಚುನಾವಣೆ ಸನಿಹದಲ್ಲಿರುವಾಗಲೇ ಈ ಎರಡು ಸುದ್ದಿಗಳು ಹೊರಬಿದ್ದಿರುವುದರಿಂದ ಬೆಳೆಗಾರರು ಕೂಡ ಎಚ್ಚರಿಕೆಯ ಹೆಜ್ಜೆ ಇರಿಸಬೇಕಿದೆ. ಅಡಿಕೆ ಬೆಳೆಗಾರರು ಪರ್ಯಾಯ ಬೆಳೆಗಳತ್ತ ಮತ್ತು ಬಹುವಿಧದ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರತ್ತ ಹೆಚ್ಚಿನ ಗಮನ ಹರಿಸುವ ಮೂಲಕ ಇಂಥ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಶಕ್ತರಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.