3,150 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ
ಕಾಪು ತಾಲೂಕಿನಲ್ಲಿ ಬಿರುಸುಗೊಂಡ ಕೃಷಿ ಚಟುವಟಿಕೆ
Team Udayavani, Jun 5, 2020, 5:58 AM IST
ಕಾಪು: ಈ ಮುಂಗಾರು ಋತುವಿನಲ್ಲಿ ಕಾಪು ತಾಲೂಕಿನಲ್ಲಿ 3,150 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಇರಿಸಿಕೊಳ್ಳಲಾಗಿದೆ.
ಕಾಪು ತಾಲೂಕು (ಹೋಬಳಿ) ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ 30 ಗ್ರಾಮಗಳಲ್ಲಿ ಕಳೆದ ವರ್ಷ ಸುಮಾರು 3,116 ಹೆಕ್ಟೇರ್ ನಲ್ಲಿ ಭತ್ತ ಬೆಳೆದು, ಅಂದಾಜು 1,24,640 ಕ್ವಿಂಟಾಲ್ ಇಳುವರಿ ಪಡೆಯಲಾಗಿತ್ತು. ಈ ಬಾರಿ ಈ ವರ್ಷ 25-30 ಹೆಕ್ಟೇರ್ ಹೆಚ್ಚುವರಿ ಜಮೀನಿನಲ್ಲಿ ಭತ್ತ ಬೆಳೆಯುವ ನಿರೀಕ್ಷೆಯಿದೆ. ಅದೇ ಅಂದಾಜಿನಲ್ಲಿ ಬಿತ್ತನೆ ಬೀಜವೂ ವಿತರಣೆಯಾಗುತ್ತಿದೆ.
ಕರ್ನಾಟಕ ಬೀಜ ನಿಗಮದ ಮೂಲಕವಾಗಿ ಕಾಪು ತಾಲೂಕು ಕೃಷಿ ಕಚೇರಿಗೆ 350 ಕ್ವಿಂಟಾಲ್ ಎಂಒ-4, 15 ಕ್ವಿಂಟಾಲ್ ಜ್ಯೋತಿ ಬಿತ್ತನೆ ಬೀಜ ಸರ ಬರಾಜು ಆಗಿದೆ. ಎಂಒ-4 ಬಿತ್ತನೆ ಬೀಜ ವಿತರಿಸಲಾಗಿದೆ. 10 ಕ್ವಿಂಟಾಲ್ ಜ್ಯೋತಿ ಬೀಜವೂ ವಿತರಣೆಯಾಗಿದೆ. ಎಂಒ-4 ಬಿತ್ತನೆ ಬೀಜಕ್ಕೆ ಮತ್ತಷ್ಟು ಬೇಡಿಕೆ ಇದೆ.
ಸುಲಭದಲ್ಲಿ ಬಿತ್ತನೆ ಬೀಜ
ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನೀಡಿ ಕೃಷಿ ಇಲಾಖೆಯಲ್ಲಿ ಹೆಸರು ನೋಂದಾಯಿಸಿ ಬಿತ್ತನೆ ಬೀಜ ಪಡೆದುಕೊಳ್ಳಬಹುದು. ಈ ಹಿಂದೆ ನೋಂದಣಿ ಮಾಡಿಕೊಂಡವರಿಗೆ ನೇರ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಪ್ರತೀ ಕೆಜಿ ಬಿತ್ತನೆ ಬೀಜಕ್ಕೆ 32 ರೂ. ಇದ್ದು, ಸಾಮಾನ್ಯ ವರ್ಗ ರೈತರಿಗೆ ಸರಕಾರದಿಂದ 8 ರೂ. ಸಹಾಯಧನ ದೊರೆಯುತ್ತದೆ. ಪರಿಶಿಷ್ಟ ಜಾತಿ/ಪಂಗಡದವರಿಗೆ 12 ರೂ. ರಿಯಾಯಿತಿ ಇದೆ.
ಯಾಂತ್ರೀಕೃತ ಪದ್ಧತಿ ವ್ಯಾಪಕ
ಜಿಲ್ಲೆಯ ಇತರ ಹೋಬಳಿಗಳಿಗೆ ಹೋಲಿಸಿದರೆ ಕಾಪು ತಾಲೂಕಿನಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿಯೇ ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಕಾರ್ಮಿಕರ ಕೊರತೆ, ದುಬಾರಿ ಕೂಲಿ ಮೊದಲಾದ ಕಾರಣಗಳಿಂದಾಗಿ ರೈತರು ಯಾಂತ್ರೀಕೃತ ಪದ್ಧತಿಯತ್ತ ಹೊರಳಿದ್ದಾರೆ.
ಯಾಂತ್ರೀಕೃತ ಬೇಸಾಯ ಪದ್ಧತಿ ಯೊಂದಿಗೆ ಹಡೀಲು ಗದ್ದೆಗಳಲ್ಲೂ ಕೃಷಿ ಮಾಡಲು ಅನೇಕರು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಭತ್ತ ಬೆಳೆಯುವ ರೈತರನ್ನು ಪ್ರೋತ್ಸಾ ಹಿಸುವ ಸಲುವಾಗಿ ಕೃಷಿ ಇಲಾಖೆಯು ಹಲವು ಸೌಕರ್ಯಗಳನ್ನು ಒದಗಿ ಸುತ್ತಿದೆ. ಸಬ್ಸಿಡಿ ಸಹಾಯಧನ ದೊಂದಿಗೆ ಸಾವಯವ ಗೊಬ್ಬರ, ಸುಣ್ಣ, ಗೊಬ್ಬರ ಬೀಜ (ಸೆಣಬು), ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ರೈತ ಸೇವಾ ಕೇಂದ್ರಗಳ ಮೂಲಕ ಬಾಡಿಗೆ ಆಧಾರದಲ್ಲಿ ಸರಕಾರದ ಸಹಾಯ ಧನದೊಂದಿಗೆ ಆಧುನಿಕ ಯಂತ್ರೋಪಕರಣ ಒದಗಿಸಲಾಗುತ್ತಿದೆ.
ಬಿತ್ತನೆ ಬೀಜಕ್ಕೆ ಬೇಡಿಕೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾಪು ಹೋಬಳಿಯಲ್ಲಿ ಹೆಚ್ಚಿನ ರೈತರು ಕೃಷಿ ನಡೆಸಲು ಉತ್ಸಾಹ ತೋರುತ್ತಿದ್ದಾರೆ. ಕೋವಿಡ್ 19ರ ಕಾರಣದಿಂದಾಗಿ ಹೆಚ್ಚಿನ ಕಡೆಗಳಲ್ಲಿ ಜನರು ಮನೆಯಲ್ಲೇ ಉಳಿದಿದ್ದು, 30 ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಹೆಚ್ಚುವರಿ ಭತ್ತ ಬೆಳೆಯುವ ನಿರೀಕ್ಷೆಯಿದೆ. ಯುವಕರು ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ನಡೆಸಲು ಚಿಂತನೆ ನಡೆಸುತ್ತಿದ್ದು, ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆಯೂ ಜಾಸ್ತಿಯಾಗಿದೆ.
– ಪುಷ್ಪಾ, ಕೃಷಿ ಅಧಿಕಾರಿ, ಕಾಪು ತಾಲೂಕು
ಕೃಷಿಯಿಂದಲೇ ಬದುಕು ಹಸನು
ಖಂಡಿತವಾಗಿಯೂ ಕೃಷಿಯನ್ನು ಲಾಭ ದಾಯಕವನ್ನಾಗಿಸಿಕೊಳ್ಳಲು ಸಾಧ್ಯವಿದೆ. ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಭತ್ತದ ಬೇಸಾಯದಲ್ಲಿ ಹೆಚ್ಚು ಇಳುವರಿ ಪಡೆಯಬಹುದು. ಸರಕಾರ ಯಾಂತ್ರೀಕೃತ ಕೃಷಿ ಪದ್ಧ ತಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದರೆ ಮತ್ತಷ್ಟು ಯುವಕರನ್ನು ಕೃಷಿಯತ್ತ ಸೆಳೆಯಬಹುದು.
– ಸಂತೋಷ್ ಶೆಟ್ಟಿ, ಮೂಡುಬೆಟ್ಟು ಬರ್ಪಾಣಿ, ಎರ್ಮಾಳು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.