World Cup: ಕೋಟ್ಲಾ ಕದನಕ್ಕೆ ಟೀಮ್ ಇಂಡಿಯಾ ಅಣಿ- ಅಫ್ಘಾನ್ ಎದುರು ಬೇಕಿದೆ ಎಚ್ಚರಿಕೆ ನಡೆ
ಹೊಸದಿಲ್ಲಿ ಅಂಗಳದಲ್ಲಿ ರನ್ ಪ್ರವಾಹದ ನಿರೀಕ್ಷೆ - ಕ್ಲಿಕ್ ಆಗಬೇಕಿದೆ ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್
Team Udayavani, Oct 10, 2023, 11:11 PM IST
ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ಇನ್ನೇನು ಆಘಾತ ಅನುಭವಿಸಿಯೇ ಬಿಟ್ಟಿತು ಎಂಬ ಸ್ಥಿತಿಯಲ್ಲಿದ್ದ ಆತಿಥೇಯ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಗೆಲುವಿನಿಂದಲೇ ಆರಂಭಿಸಿ ಅಭಿಮಾನಿಗಳನ್ನು ತೃಪ್ತಿಪಡಿಸಿದೆ. ಆದರೆ ಇಷ್ಟು ಸಾಲದು, ಪಯಣವಿನ್ನೂ ಸುದೀರ್ಘವಾಗಿರುವುದರಿಂದ ಉನ್ನತ ಮಟ್ಟದ ಸಾಧನೆ ಅತ್ಯಗತ್ಯ. ಬುಧವಾರ ಹೊಸದಿಲ್ಲಿಯಲ್ಲಿ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ತನ್ನ ಸಮಸ್ಯೆಗಳನ್ನೆಲ್ಲ ಒಂದೊಂದಾಗಿ ನಿವಾರಿಸಿಕೊಳ್ಳಬೇಕಿದೆ.
ಅಫ್ಘಾನಿಸ್ಥಾನ ಕೆಳ ರ್‍ಯಾಂಕಿಂಗ್ ತಂಡವಾಗಿರ ಬಹುದು, ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿರಬಹುದು, ಆದರೆ ಅದು ಈ ಕೂಟದ ಅತ್ಯಂತ ಅಪಾಯಕಾರಿ ತಂಡ ಎಂಬುದನ್ನು ಮರೆಯಬಾರದು. ಇದಕ್ಕೆ ಕಳೆದ ವಿಶ್ವಕಪ್ ಪಂದ್ಯವೇ ಸಾಕ್ಷಿ. ಸೌತಾಂಪ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅಂದಿನ ಗುಲ್ಬದಿನ್ ನೈಬ್ ಪಡೆ ಭಾರತವನ್ನು ಸೋಲಿಸುವ ಹಂತಕ್ಕೆ ಬಂದಿತ್ತು. ಆದರೆ ಕೊಹ್ಲಿ ಬಳಗದ ನಸೀಬು ಚೆನ್ನಾಗಿತ್ತು. ಅದು ದೊಡ್ಡ ಅವಮಾನದಿಂದ ಪಾರಾಯಿತು. ಭಾರತವನ್ನು 8ಕ್ಕೆ 224 ರನ್ನಿಗೆ ಹಿಡಿದು ನಿಲ್ಲಿಸಿದಾಗ ಎಲ್ಲರಲ್ಲೂ ಆತಂಕ ಮನೆಮಾಡಿತ್ತು. ಆದರೆ ನಮ್ಮ ಬೌಲರ್ ತಿರುಗೇಟು ನೀಡಲು ಯಶಸ್ವಿಯಾದರು. ಗೆಲುವಿನಿಂದ ಅಫ್ಘಾನ್ ಕೇವಲ 11 ರನ್ನುಗಳಿಂದ ಹಿಂದುಳಿಯಿತು.
ನಿಂತು ಆಡಿದರೆ ಯಶಸ್ಸು
ಮತ್ತೆ ಭಾರತ ಇಂಥ ದೊಂದು ಸ್ಥಿತಿಯನ್ನು ಆಹ್ವಾನಿಸಿ ಕೊಳ್ಳಬಾರದು. ಇದಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸುಧಾರಣೆ ಕಾಣುವುದು ಮುಖ್ಯ. ಆಸ್ಟ್ರೇಲಿಯ ವಿರುದ್ಧ 200 ರನ್ ಚೇಸಿಂಗ್ ವೇಳೆ 2 ರನ್ ಆಗುವಷ್ಟರಲ್ಲಿ ರೋಹಿತ್ ಶರ್ಮ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿಕೊಂಡಾಗ ಭಾರತದ ಗೆಲುವಿನ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಅನೇಕರ ಟಿವಿಗಳು ಆಫ್ ಆಗಿದ್ದವು. ಇಂಥ ಸ್ಥಿತಿಯಲ್ಲಿ ವಿರಾಟ್ ಕೊಹ್ಲಿ-ಕೆ.ಎಲ್. ರಾಹುಲ್ ಸೇರಿಕೊಂಡು ಭಾರತದ ಸರದಿಯನ್ನು ಆಧರಿಸಿ ನಿಂತ ರೀತಿ ಅಸಾಮಾನ್ಯ. ನಿಂತು ಆಡಿ ಇನ್ನಿಂಗ್ಸ್ ಕಟ್ಟಿದರೆ ತಂಡವನ್ನು ಎಷ್ಟೇ ಕಠಿನ ಸನ್ನಿವೇಶದಿಂದಲೂ ಪಾರುಮಾಡಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.
ಅಫ್ಘಾನ್ ವಿರುದ್ಧದ ಪಂದ್ಯದಿಂದಲೂ ಇನ್‌ಫಾರ್ಮ್ ಆರಂಭಕಾರ ಶುಭಮನ್ ಗಿಲ್ ಹೊರಗುಳಿಯಲಿದ್ದಾರೆ. ಮತ್ತೆ ರೋಹಿತ್ ಜತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ವಿಶ್ವಕಪ್‌ನಂಥ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಲು ಲಭಿಸಿದ ಅವಕಾಶವನ್ನು ಇಶಾನ್‌ನಂಥ ಯುವ ಆಟಗಾರರು ಸರಿಯಾಗಿ ಬಳಸಿಕೊಳ್ಳಬೇಕಿದೆ. ಹಾಗೆಯೇ ಶ್ರೇಯಸ್ ಅಯ್ಯರ್. ಆಗಲೇ ಬೆನ್ನು ಬೆನ್ನಿಗೆ 2 ವಿಕೆಟ್ ಬಿದ್ದಾಗ ಹೆಚ್ಚು ಜವಾಬ್ದಾರಿಯುತವಾಗಿ, ಅಷ್ಟೇ ಜಾಗರೂಕವಾಗಿ ಆಡುವುದನ್ನು ಬಿಟ್ಟು ಕೇರ್‌ಲೆಸ್ ಆಗಿ ಆಡಿ ವಿಕೆಟ್ ಕಳೆದುಕೊಂಡಿದ್ದರು. ಇಂಥ ಅವಸರ ಸಲ್ಲದು.
ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್. ಅಶ್ವಿನ್ ಅವರಿಂದಲೂ ಹೆಚ್ಚಿನ ರನ್ ನಿರೀಕ್ಷಿಸಲಾಗಿದೆ. ಚೆನ್ನೈ ಟ್ರ್ಯಾಕ್ ತಿರುವಿನಿಂದ ಕೂಡಿ ಸ್ಪಿನ್ನಿಗೆ ನೆರವು ನೀಡಿದ್ದರೆ, ಹೊಸದಿಲ್ಲಿಯಲ್ಲಿ ರನ್ ಪ್ರವಾಹ ಹರಿಯುವ ಎಲ್ಲ ಸಾಧ್ಯತೆ ಇದೆ. ಮೊನ್ನೆ ದಕ್ಷಿಣ ಆಫ್ರಿಕಾ 428 ರನ್ ರಾಶಿ ಹಾಕಿದ್ದು, ಬೆನ್ನಟ್ಟಿಕೊಂಡು ಹೋದ ಶ್ರೀಲಂಕಾ 326 ರನ್ ಪೇರಿಸಿದ್ದು ಇದೇ “ಕೋಟ್ಲಾ’ ಅಂಗಳದಲ್ಲಿ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಭಾರತಕ್ಕೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಲಭಿಸಿದರೆ ಲಾಭ ಹೆಚ್ಚಿದೆ.
ಅಫ್ಘಾನ್ ಅಪಾಯಕಾರಿ
ಅಫ್ಘಾನಿಸ್ಥಾನಕ್ಕೆ ಕಳೆದುಕೊಳ್ಳುವಂಥದ್ದೇನಿಲ್ಲ. ಅಚ್ಚರಿಯ ಹಾಗೂ ಏರುಪೇರಿನ ಫಲಿತಾಂಶ ದಾಖಲಿಸಿ ಪಂದ್ಯದ ಚಿತ್ರಣವನ್ನು ಬದಲಿಸಿದರೆ ಅಷ್ಟೇ ಸಾಕು. ಹೊಸದಿಲ್ಲಿಯಲ್ಲಿ ಅಫ್ಘಾನ್ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಇವರಿಂದ ಎಷ್ಟರ ಮಟ್ಟಿಗೆ ಸ್ಫೂರ್ತಿ ಲಭಿಸಬಹುದು ಎಂಬ ನಿರೀಕ್ಷೆ ಸಹಜ.
ಅಫ್ಘಾನ್ ಬ್ಯಾಟಿಂಗ್ ಸರದಿಯಲ್ಲಿ ಆರಂಭಕಾರ ರೆಹಮಾನುಲ್ಲ ಗುರ್ಬಜ್ ಮಾತ್ರ ಫಾರ್ಮ್ನಲ್ಲಿದ್ದಾರೆ. ಉಳಿದವರು ಡೆಲ್ಲಿಯ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಾದರೂ ಮಿಂಚುವರೇ ಎಂಬುದೊಂದು ಪ್ರಶ್ನೆ.
ಬೌಲಿಂಗ್ ವಿಭಾಗಕ್ಕೆ ಬರುವುದಾದರೆ, ಆಫ್ಘಾನಿಸ್ಥಾನದ ಸ್ಪಿನ್ ವಿಭಾಗ ಬಲಿಷ್ಠ. ಹೀಗಾಗಿ ಮುಜೀಬ್ ಜದ್ರಾನ್ ಅವರಿಂದ ಬೌಲಿಂಗ್ ಆರಂಭಿಸಲಾಗುತ್ತದೆ. ರಶೀದ್ ಖಾನ್ ಟ್ರಂಪ್‌ಕಾರ್ಡ್. ಆದರೆ ಹೊಸದಿಲ್ಲಿ ಪಿಚ್ ಬ್ಯಾಟಿಂಗ್‌ಗೆ ನೆರವು ನೀಡಿದರೆ ಸ್ಪಿನ್ ಬೌಲಿಂಗ್ ಚಿಂದಿಯಾಗುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.