ಉಡುಪಿ ಜಿಲ್ಲೆಯಲ್ಲಿಯೇ ತಂತ್ರಜ್ಞಾನದ ಪ್ರಥಮ ಪ್ರಯತ್ನ
ಗುರುಕುಲ ವಿದ್ಯಾಸಂಸ್ಥೆಯಿಂದ ಹೊಸ ಪ್ರಯೋಗ
Team Udayavani, May 16, 2020, 5:55 AM IST
ಕುಂದಾಪುರ: ಕೋವಿಡ್-19 ದಿಂದಾಗಿ ದೇಶವೇ ಲಾಕ್‌ಡೌನ್‌ನಲ್ಲಿದ್ದು, ಎಲ್ಲ ಶಿಕ್ಷಣ ಚಟುವಟಿಕೆಗಳು ಕೂಡ ಸ್ಥಗಿತಗೊಂಡಿವೆ. ಆದರೆ ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಆನ್‌ಲೈನ್ ಮೂಲಕ ಮನೆಯಿಂದಲೇ ಕಲಿಕೆಗೆ ಒತ್ತು ನೀಡುತ್ತಿದೆ. ಅದರಲ್ಲೂ ವಕ್ವಾಡಿಯಲ್ಲಿರುವ ಗುರುಕುಲ ವಿದ್ಯಾ ಸಂಸ್ಥೆಯು ಹೊಸ ತಂತ್ರಜ್ಞಾನದ ಮೂಲಕ ಆನ್‌ಲೈನ್ ತರಗತಿಯಲ್ಲಿಯೂ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಯಲ್ಲಿ ಸದಾ ವಿಭಿನ್ನತೆಯ ಜತೆಗೆ ಹೊಸತನವನ್ನು ಪರಿಚಯಿಸುತ್ತಲೇ ಬಂದಿರುವ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯು ಈಗ ಆನ್‌ಲೈನ್ ತರಗತಿಗಾಗಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದೆ.
ಬೆಂಗಳೂರು ಮೂಲದ ನೆಕ್ಸ್ ಎಲಿಮೆಂಟ್ ಪ್ರೈವೇಟ್ ಲಿಮಿಟೆಡ್ ಸಾಫ್ಟ್ ವೇರ್ ಕಂಪೆನಿಯಿಂದ ಗುರುಕುಲ ಸ್ಕೂಲ್ ಎಲಿಮೆಂಟ್ ಹೆಸರಿನ ಸಾಫ್ಟ್‌ವೇರ್ ತಯಾರಿಸಿ ಅದರಿಂದ ವಿದ್ಯಾರ್ಥಿಗಳಿಗೆ ಆ್ಯಪ್ ಮೂಲಕ ಆನ್‌ಲೈನ್ ತರಗತಿ ಆರಂಭಿಸಿದೆ. ಈಗಾಗಲೇ 8, 9 ಹಾಗೂ
10ನೇ ತರಗತಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗಿದೆ. ಮುಂದಿನ ದಿನಗಳಲ್ಲಿ 1ರಿಂದ 7ನೇ ತರಗತಿಯ ತನಕವೂ ಆನ್‌ಲೈನ್ ತರಗತಿ ಆರಂಭಿಸುವ ಚಿಂತನೆ ಮಾಡುತ್ತಿದ್ದಾರೆ.
ಪ್ರಸ್ತುತ ಸರಿ ಸುಮಾರು 500 ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಊರಿಗೆ ಹೋದ ವಿದ್ಯಾರ್ಥಿಗಳು ಬೆಂಗಳೂರು, ಬೆಳಗಾವಿ, ಬಿಜಾಪುರ, ಶಿವಮೊಗ್ಗ, ಚೆನ್ನಗಿರಿಯೂ ಸೇರಿದಂತೆ ದುಬೈನಿಂದಲೇ ಪಾಠಗಳನ್ನು ಕೇಳುತ್ತಿದ್ದಾರೆ. ಶಿಕ್ಷಕರು ವರ್ಕ್ ಫ್ರಮ್ ಹೋಮ್‌ನಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರಾಂಶುಪಾಲರಾದ ಅರವಿಂದ ಮರಳಿ ಅವರು ಎಲ್ಲವನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಏನಿದು ತಂತ್ರಜ್ಞಾನ?
ಗುರುಕುಲ ಸಂಸ್ಥೆಯಲ್ಲಿ ವರ್ಚುವಲ್ ಕ್ಲಾಸ್ ರೂಂ ರೀತಿಯಲ್ಲಿ ಲೈವ್ ಆಗಿ ತರಗತಿಗಳನ್ನು ನಡೆಸಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ಗೆ ಸ್ಕೂಲ್ ಎಲಿಮೆಂಟ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲಾಗಿದ್ದು, ಈ ಆ್ಯಪ್‌ನಲ್ಲಿ ವಿದ್ಯಾರ್ಥಿಗಳು ದಿನನಿತ್ಯ ಪಾಠ ಆಲಿಸುತ್ತಿದ್ದಾರೆ. ಮೊಬೈಲ್ ಮಾತ್ರವಲ್ಲದೆ ಲ್ಯಾಪ್‌ಟಾಪ್, ಟ್ಯಾಬ್ ಮುಂತಾದವುಗಳಿಂದಲೂ ಪಾಠ ಕೇಳುತ್ತಿದ್ದಾರೆ. ಗರಿಷ್ಠ 40 ಮಂದಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಲಾಗಿನ್ ಆಗಿ ಪಾಠ ಕೇಳಬಹುದು. ಲಾಗಿನ್ ಆದ ಎಲ್ಲರ ಚಲನವಲನ ಕೆಮೆರಾ ದಲ್ಲಿ ಸೆರೆಯಾಗುತ್ತದೆ. ಇನ್ನೊಂದು ವೈಶಿಷ್ಟ್ಯವೆಂದರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಸಂವಹನಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ನಿತ್ಯದ ತರಗತಿಯಂತೆ ಇಲ್ಲೂ ಕೂಡ ವಿದ್ಯಾರ್ಥಿಗಳಿಗೆ ಪಾಠದ ಬಗ್ಗೆ ಅನುಮಾನಗಳಿದ್ದರೆ ಪ್ರಶ್ನೆಗಳನ್ನು ಕೇಳಬಹುದು.
ವಿದ್ಯಾರ್ಥಿ ಸ್ನೇಹಿ
ಗುರುಕುಲ ವಿದ್ಯಾಸಂಸ್ಥೆಯು ಸಾಮಾಜಿಕ ಅಂತರಕ್ಕೆ ಮನ್ನಣೆ ನೀಡಿ ಪ್ರಧಾನಿಯವರ ವರ್ಕ್ ಫ್ರಮ್ ಹೋಮ್ ಸಂದೇಶವನ್ನು ಪಾಲಿಸುತ್ತಿದೆ. ಶಿಕ್ಷಕರು ಊರಿನಿಂದಲೇ ಮನೆಯಲ್ಲಿಯೇ ಇದ್ದುಕೊಂಡು ಮೊಬೈಲ್, ಲ್ಯಾಪ್‌ಟಾಪ್‌ಗ್ಳ ಮೂಲಕ ತರಗತಿಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂವಹನ ಉಳಿದ ಎಲ್ಲ ವಿದ್ಯಾರ್ಥಿಗಳಿಗೂ ತಲುಪುತ್ತದೆ. ವಿದ್ಯಾರ್ಥಿ ಸ್ನೇಹಿಯಾಗಿಯೇ ತರಗತಿ ನಡೆಸಲಾಗುತ್ತಿದೆ.
– ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ, ಗುರುಕುಲ ವಿದ್ಯಾಸಂಸ್ಥೆಯ
ಜಂಟಿ ನಿರ್ದೇಶಕ .