India Vs West Indies;100ನೇ ಟೆಸ್ಟ್; ಆಲ್ ದಿ ಬೆಸ್ಟ್
Team Udayavani, Jul 20, 2023, 7:20 AM IST
ಪೋರ್ಟ್ ಆಫ್ ಸ್ಪೇನ್: ಭಾರತ-ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಕ್ರಿಕೆಟ್ ನಂಟು ಗುರುವಾರ ಪೋರ್ಟ್ ಆಫ್ ಸ್ಪೇನ್‌ನ “ಕ್ವೀನ್ಸ್ ಪಾರ್ಕ್ ಓವಲ್’ನಲ್ಲಿ 100ನೇ ಪಂದ್ಯಕ್ಕೆ ವಿಸ್ತರಿಸಲಿದೆ. ಇದು ಇತ್ತಂಡಗಳ ನಡುವಿನ “ಅಮೃತ ಮಹೋತ್ಸವ’ ವರ್ಷವೂ ಹೌದು. 1948ರಲ್ಲಿ ಹೊಸದಿಲ್ಲಿಯ “ಫಿರೋಜ್ ಶಾ ಕೋಟ್ಲಾ’ ಅಂಗಳದಲ್ಲಿ ಬಲಗೊಂಡ ಈ ನಂಟು 75ನೇ ವರ್ಷಕ್ಕೆ ಕಾಲಿಟ್ಟಿದೆ.
ಸಹಜವಾಗಿ ಈ ಅವಳಿ ಸಂಭ್ರಮದ ವೇಳೆ ಹಬ್ಬದ ವಾತಾವರಣ ಮನೆಮಾಡಬೇಕಿತ್ತು. ದೊಡ್ಡದೊಂದು ಸಂಭ್ರಮಾಚರಣೆ ನಡೆಯಬೇಕಿತ್ತು. ಆದರೆ ಒಂದು ಕಾಲದ ದೈತ್ಯ ತಂಡವಾದ ವೆಸ್ಟ್ ಇಂಡೀಸ್ ಈಗ ಇಂಥದೊಂದು ಸ್ಥಿತಿಯಲ್ಲಿಲ್ಲ. ಅದಕ್ಕೆ ಕ್ರಿಕೆಟ್ ಎನ್ನುವುದು ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದರೆ ಪ್ರವಾಸಿ ಭಾರತ ಮಾತ್ರ ಇದನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಈ ಪಂದ್ಯವನ್ನೂ ಗೆದ್ದು, ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡು “ಟೆಸ್ಟ್ ಶತಕ’ವನ್ನು ಸ್ಮರಣೀಯಗೊಳಿಸುವುದು ಟೀಮ್ ಇಂಡಿಯಾದ ಯೋಜನೆ. ಡೊಮಿನಿಕಾ ಟೆಸ್ಟ್ ಪಂದ್ಯವನ್ನು ಮೂರೇ ದಿನದಲ್ಲಿ ಗೆದ್ದು ಮೆರೆದವರಿಗೆ ಇದು ಅಸಾಧ್ಯವೇನಲ್ಲ.
ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಬಿಟ್ಟರೆ ಭಾರತದ ಮುಂದೆ ಸದ್ಯಕ್ಕೆ ಟೆಸ್ಟ್ ಪಂದ್ಯಗಳಿಲ್ಲ. ಇನ್ನೇನಿದ್ದರೂ ವರ್ಷಾಂತ್ಯದ ದಕ್ಷಿಣ ಆಫ್ರಿಕಾ ಪ್ರವಾಸದ ತನಕ ಕಾಯಬೇಕು. ಹೀಗಾಗಿ ಟೀಮ್ ಇಂಡಿಯಾ ಮುಂದಿನೈದು ತಿಂಗಳ ಕಾಲ ನೆನಪಿನಲ್ಲಿಡಬೇಕಾದ ರೀತಿಯಲ್ಲಿ “ಕ್ವೀನ್ಸ್‌ಪಾರ್ಕ್ ಓವಲ್’ನಲ್ಲಿ ಕಿಂಗ್ ಆಗಿ ಮೆರೆಯಬೇಕು.
ಲೆಕ್ಕದ ಭರ್ತಿಯ ತಂಡ
ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಶೋಚ ನೀಯ ವೈಫಲ್ಯ ಕಂಡಿತ್ತು. ಇದು ನಿರೀಕ್ಷಿತವೇ ಆಗಿತ್ತು. ಏಕೆಂದರೆ, ಈಗಿನ ವಿಂಡೀಸ್ ಎಂಬುದು ಕೇವಲ ಲೆಕ್ಕದ ಭರ್ತಿಯ ಒಂದು ತಂಡ. ಸ್ಟಾರ್ ಆಟಗಾರರೆಲ್ಲ ಬೇರೆ ಬೇರೆ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಅಳಿದುಳಿದ ಕ್ರಿಕೆಟಿಗರು ಟೆಸ್ಟ್ ಆಡಲಿಳಿದಿದ್ದಾರೆ. ಗತಕಾಲದ ಕ್ರಿಕೆಟ್ ಪ್ರೀತಿ, ಆ ಜೋಶ್, ಬದ್ಧತೆ ಯಾವುದೂ ಇವರಲ್ಲಿಲ್ಲ. ಜತೆಗೆ ವೀಕ್ಷಕರ ಬರಗಾಲ. ಅವರಿಗೂ ಕ್ರಿಕೆಟ್ ಬೇಡವಾಗಿದೆ. ಡೊಮಿನಿಕಾ ಸ್ಟೇಡಿಯಂನಲ್ಲಿ ನೂರು ಮಂದಿ ಕೂಡ ಇದ್ದಿರಲಿಕ್ಕಿಲ್ಲ!
ಭಾರತ ಇದರ ಲಾಭವನ್ನು ಎರಡೂ ಕೈಗಳಿಂದ ಬಾಚಿ
ಕೊಂಡಿತು. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹೀರೋ ಆಗಿ ಮೂಡಿಬಂದರೆ, ಆರ್. ಅಶ್ವಿನ್ ಬೌಲಿಂಗ್ ಮ್ಯಾಜಿಕ್ ಮಾಡಿದರು. ದ್ವಿತೀಯ ಟೆಸ್ಟ್‌ನಲ್ಲಿ ಮಿಂಚುವವರ್ಯಾರು ಎಂಬುದೊಂದು ಕುತೂಹಲ.
ಓಪನಿಂಗ್‌ನಿಂದ ವನ್‌ಡೌನ್‌ಗೆ ಬಂದ ಶುಭ ಮನ್ ಗಿಲ್, ಅನುಭವಿ ಅಜಿಂಕ್ಯ ರಹಾನೆ, ಹೆಚ್ಚಿನ ಬ್ಯಾಟಿಂಗ್ ಅವಕಾಶ ಪಡೆಯದ ಇಶಾನ್ ಕಿಶನ್ ರನ್ ಗಳಿಸಬೇಕಾದ ಅಗತ್ಯವಿದೆ. ಹಾಗೆಯೇ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಯಾವುದೇ ಪರಿವರ್ತನೆಯಾಗುವ ಸಾಧ್ಯತೆ ಇಲ್ಲ.
ತ್ರಿವಳಿ ಸ್ಪಿನ್ ದಾಳಿ?
ಬೌಲಿಂಗ್ ವಿಭಾಗದತ್ತ ಬಂದರೆ, ಭಾರತ ತ್ರಿವಳಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ದೂರದ ಸಾಧ್ಯತೆ ಯೊಂದಿದೆ. ಪೋರ್ಟ್ ಆಫ್ ಸ್ಪೇನ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವ ಟ್ರ್ಯಾಕ್ ಹೊಂದಿದೆ. ಹೀಗಾಗಿ ಅಶ್ವಿನ್, ಜಡೇಜ ಜತೆಗೆ ಅಕ್ಷರ್ ಪಟೇಲ್ ಕೂಡ ಅವಕಾಶ ಪಡೆಯಬಹುದು. ಇವರಿಗಾಗಿ ಜೈದೇವ್ ಉನಾದ್ಕತ್ ಅಥವಾ ಶಾರ್ದೂಲ್ ಠಾಕೂರ್ ಜಾಗ ಬಿಡಬೇಕಾದೀತು.
ಡೊಮಿನಿಕಾದಲ್ಲಿ ವಿಂಡೀಸ್ ಕಡೆಯಿಂದ ಒಂದೂ ಅರ್ಧ ಶತಕ ದಾಖಲಾಗಲಿಲ್ಲ ಎಂಬುದು ಆ ತಂಡ ಕುಸಿದ ಮಟ್ಟವನ್ನು ಸಾರುತ್ತದೆ. ಬೌಲಿಂಗ್ ಆದರೂ ಪರಿಣಾಮಕಾರಿ ಆಗಿರಲಿದೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಬಹುಶಃ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಆತಿಥೇಯ ತಂಡದ ಸ್ಥಿತಿ ಇದಕ್ಕಿಂತ ಭಿನ್ನ ಆಗಿರಲಿಕ್ಕಿಲ್ಲ. ಕನಿಷ್ಠಪಕ್ಷ ಹೋರಾಟವಾದರೂ ಕಂಡುಬರಬೇಕು. ಆಗ ಗೆಲುವನ್ನು ಇನ್ನಷ್ಟು ಸಂಭ್ರಮಿಸಲು ಸಾಧ್ಯವಾಗುತ್ತದೆ.
ಮೊದಲ ಟೆಸ್ಟ್‌ನಲ್ಲೇ ಫಾಲೋಆನ್
ಭಾರತ-ವೆಸ್ಟ್ ಇಂಡೀಸ್ ನಡುವಿನ 100ನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಮೊದಲ್ಗೊಂಡಿದೆ. ಈ ಸಂದರ್ಭದಲ್ಲಿ ಇತ್ತಂಡಗಳ ಪ್ರಪ್ರಥಮ ಟೆಸ್ಟ್ ಪಂದ್ಯದತ್ತ ಒಂದು ಇಣುಕು ನೋಟ.
ಈ ಟೆಸ್ಟ್ ನಡೆದದ್ದು 1948ರಲ್ಲಿ. 5 ಪಂದ್ಯಗಳ ಸರಣಿಗೆಂದು ವೆಸ್ಟ್ ಇಂಡೀಸ್ ತಂಡ ಮೊದಲ ಸಲ ಭಾರತಕ್ಕೆ ಆಗಮಿಸಿತ್ತು.ಲಾಲಾ ಅಮರನಾಥ್ ಮತ್ತು ಜಾನ್ ಗೊಡಾರ್ಡ್ ನಾಯಕರಾಗಿದ್ದರು. ಪ್ರಥಮ ಟೆಸ್ಟ್ ಪಂದ್ಯದ ತಾಣ ಹೊಸದಿಲ್ಲಿಯ “ಫಿರೋಜ್ ಶಾ ಕೋಟ್ಲಾ’ ಕ್ರೀಡಾಂಗಣ.
ವೆಸ್ಟ್ ಇಂಡೀಸ್ ತನ್ನ ಪ್ರಚಂಡ ಬ್ಯಾಟಿಂಗ್ ಬಲವನ್ನು ಸಾಬೀತುಪಡಿಸಿ ಮೊದಲ ಪಂದ್ಯದಲ್ಲೇ ಭಾರತಕ್ಕೆ ಫಾಲೋಆನ್ ವಿಧಿಸಿತು. ವಿಂಡೀಸ್ ಮೊದಲ ಸರದಿಯಲ್ಲಿ ಪೇರಿಸಿದ್ದು 631 ರನ್. ನಾಲ್ವರಿಂದ ಸೆಂಚುರಿ ದಾಖಲಾಯಿತು. 27ಕ್ಕೆ 3 ವಿಕೆಟ್ ಬಿದ್ದ ಬಳಿಕ ಕ್ಲೈಡ್ ವಾಲ್ಕಾಟ್ 152, ಗ್ಯಾರಿ ಗೋಮ್ಸ್ 101, ಎವರ್ಟನ್ ವೀಕ್ಸ್ 128 ಮತ್ತು ರಾಬರ್ಟ್ ಕ್ರಿಸ್ಟಿಯಾನಿ 107 ರನ್ ಬಾರಿಸಿದರು. ಕಮಾಂಡರ್ ರಂಗಾಚಾರಿ 5 ವಿಕೆಟ್ ಬೇಟೆಯಾಡಿದ್ದರು.
ಭಾರತದ ಜವಾಬು ಕೂಡ ದಿಟ್ಟ ರೀತಿಯಿಂದಲೇ ಕೂಡಿತ್ತು. ಹೇಮು ಅಧಿಕಾರಿ ಅಜೇಯ ಶತಕ ಬಾರಿಸಿದರು (114). ಕೆ.ಸಿ. ಇಬ್ರಾಹಿಂ (85), ರುಸಿ ಮೋದಿ (63), ಲಾಲಾ ಅಮರನಾಥ್ (62) ಅರ್ಧ ಶತಕ ಹೊಡೆದರು. ಸ್ಕೋರ್ 454ಕ್ಕೆ ಏರಿತು. 150 ಪ್ಲಸ್ ರನ್ ಹಿನ್ನಡೆಯಾದ ಕಾರಣ ವಿಂಡೀಸ್ ಭಾರತದ ಮೇಲೆ ಫಾಲೋಆನ್ ಹೇರಿತು. 9 ಬೌಲರ್‌ಗಳನ್ನು ಛೂ ಬಿಟ್ಟರೂ ವಿಂಡೀಸ್‌ಗೆ ಗೆಲ್ಲಲಾಗಲಿಲ್ಲ. ಮರಳಿ ಬ್ಯಾಟಿಂಗ್ ನಡೆಸಿದ ಭಾರತ 6ಕ್ಕೆ 220 ರನ್ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.