ನನ್ನ ಹೋರಾಟದಿಂದ ಬಿಜೆಪಿಯವರಿಗೆ ಉರಿ ಬಿದ್ದಂತಾಗಿದೆ
ಮತ ಮಾತು
Team Udayavani, May 16, 2019, 3:09 AM IST
ಹುಬ್ಬಳ್ಳಿ: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ಥಿರ ಯತ್ನ ಹಾಗೂ ಪ್ರಧಾನಿ ನರೇಂದ್ರ ಮೋದಿ ಲೋಪಗಳ ಬಗ್ಗೆ ನೇರ ವಾಗ್ಧಾಳಿ ನಡೆಸಿದ್ದನ್ನು ಸಹಿಸಲಾಗದೆ ಕಾಂಗ್ರೆಸ್ ಶಾಸಕರೊಬ್ಬರನ್ನು ಸೆಳೆದು, ತಮ್ಮನ್ನು ಸೋಲಿಸಲು ಬಹುದೊಡ್ಡ ಸಂಚು ರೂಪಿಸಲಾಗಿತ್ತು. ಏನೇ ಆದರೂ ತತ್ವ -ಸಿದ್ಧಾಂತದಲ್ಲಿ ಶರಣಾಗತಿ ಜಾಯಮಾನ ನನ್ನದಲ್ಲ… ಹೀಗೆಂದವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ. “ಉದಯವಾಣಿ’ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು..
* ಬಿಜೆಪಿ-ಆರ್‌ಎಸ್‌ಎಸ್‌ನ ತತ್ವ-ಸಿದ್ದಾಂತಗಳ ವಿರುದ್ಧ ಸಂಸತ್‌ನಲ್ಲಿಯೇ ನೇರವಾಗಿ ವಾಗ್ಧಾಳಿ ನಡೆಸಿದ್ದೆ. ಪ್ರಧಾನಿಯವರ ಲೋಪಗಳನ್ನು ಭಯ-ಭೀತಿ ಇಲ್ಲದೆ ಟೀಕಿಸಿದ್ದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ರಾಜಕೀಯವಾಗಿ ನನಗೆ ಹಿನ್ನಡೆ ಉಂಟು ಮಾಡಲು ಬಹುದೊಡ್ಡ ಸಂಚು ಮಾಡಲಾಗಿದೆ. ಮತದಾರರು ಯಾವ ತೀರ್ಪು ನೀಡುತ್ತಾರೋ ನೋಡೋಣ.
* ಯಾರ ಮೇಲೂ ವೈಯಕ್ತಿಕ ದ್ವೇಷವೇನೂ ಇಲ್ಲ. ಪ್ರಜಾಪ್ರಭುತ್ವ ರಕ್ಷಣೆ, ಸರ್ವಾಧಿಕಾರ ಧೋರಣೆಗೆ ವಿರೋಧ, ಸಂವಿಧಾನದ ಆಶಯ ಹಾಗೂ ಹಕ್ಕುಗಳ ಸಂರಕ್ಷಣೆ ವಿಚಾರದಲ್ಲಿ ಧ್ವನಿ ಎತ್ತಿದ್ದೇನೆ. ಇದು ದಿಲ್ಲಿಯಿಂದ ಹಳ್ಳಿವರೆಗಿನ ಬಿಜೆಪಿಯವರಿಗೆ ಉರಿ ಬಿದ್ದಂತಾಗಿದೆ.
* ಕೇವಲ 44 ಕಾಂಗ್ರೆಸ್ ಸಂಸದರೊಂದಿಗೆ ಸಂಸತ್‌ನಲ್ಲಿ ಮೋದಿ ವಿರುದ್ಧ ಹೋರಾಟ ನಡೆಸಿದ್ದೇನೆ. ಜನ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವ ಮೂಲಕ ದೇಶದ ಗಮನ ಸೆಳೆದಿದ್ದೇನೆ. ಇದು ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ನನ್ನ ಬಗ್ಗೆ ಅಸೂಯೆಗೆ ಕಾಣವಾಗಿದೆ. ಸಂಖ್ಯೆ ಕಡಿಮೆ ಇದ್ದರೂ ಗಟ್ಟಿ ಹೋರಾಟ ನನಗೇನು ಹೊಸತಲ್ಲ. ಈ ಹಿಂದೆ, ರಾಜ್ಯದಲ್ಲಿ ಕೇವಲ 34 ಕಾಂಗ್ರೆಸ್ ಶಾಸಕರಿದ್ದಾಗಲೂ ವಿಪಕ್ಷ ನಾಯಕನಾಗಿ ಅಳುಕಿಲ್ಲದೆ ಹೋರಾಟ ಮಾಡಿದ್ದೆ.
* ಪ್ರಧಾನಿ ಮೋದಿ ಮಾಡಿದ್ದು ಒಂದೇ. ಅಭಿವೃದ್ಧಿ ಇಲ್ಲದ ಪ್ರಚಾರ, ಮಾರ್ಕೆಟಿಂಗ್. ನಾನು ತಿನ್ನುವುದಿಲ್ಲ, ಇನ್ನೊಬ್ಬರಿಗೆ ತಿನ್ನಲು ಬಿಡದ ಚೌಕಿದಾರ ಎಂದು ಹೇಳುತ್ತಿದ್ದರು. ಇದೀಗ ಅವರ ಹೇಳಿಕೆ ಬದಲಾಯಿಸಬೇಕಾಗಿದೆ. ನಾನು ತಿನ್ನುವುದಿಲ್ಲ. ಆದರೆ, ನನ್ನ ಸೇಹಿತರಿಗೆ ತಿನ್ನಿಸಲು ಹಿಂಜರಿಯುವುದಿಲ್ಲ ಎಂದು!. ಅಂಬಾನಿ, ಅದಾನಿ, ನೀರವ್ ಮೋದಿ ಇನ್ನಿತರರಿಗೆ ಏನು ಬೇಕೋ ಅದನ್ನು ಮಾಡಿದ್ದಾರೆ.
* ಬಿಜೆಪಿ ನಾಯಕರು ಹೇಳುವಂತೆ ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಏನೂ ಆಗುವುದಿಲ್ಲ. ಅವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರಷ್ಟೇ.
* ಖರ್ಗೆ ಏನು ಅಭಿವೃದ್ಧಿ ಮಾಡಿದ್ದಾರೆಂದು ಬಿಜೆಪಿಯವರು ಪ್ರಶ್ನಿಸುತ್ತಿದ್ದಾರೆ. ಶಾಸಕ, ಸಚಿವ, ಸಂಸದ, ವಿಪಕ್ಷ ನಾಯಕನಾಗಿ ಏನೆಲ್ಲಾ ಸಾಧ್ಯವೋ ಅಷ್ಟು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೈ-ಕ ಭಾಗಕ್ಕೆ 371(ಜೆ), ರೈಲ್ವೆ ಯೋಜನೆ, ಆರೋಗ್ಯ ಸೌಲಭ್ಯ, ಕಾರ್ಮಿಕರಿಗೆ ಸವಲತ್ತು…ಹೀಗೆ ನನ್ನದು ಸಾಧನೆಯ ಪಟ್ಟಿ ಇದೆ. ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ.
* ಡಾ| ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿ, ನಂತರ ಅದು ಸಾಧ್ಯವಾಗದು ಎಂದು ಮೋದಿ ಮಾತು ತಪ್ಪಿದ್ದಾರೆ. ಅಷ್ಟೇ ಅಲ್ಲ, ವಾರ್ಷಿಕ 6,000ರೂ.ನೀಡುವ ಮೂಲಕ ರೈತರನ್ನು ಅವಮಾನ ಮಾಡಿದ್ದಾರೆ. ಕಚ್ಚಾ ತೈಲ ಬೆಲೆ ಕುಸಿದರೂ ತೈಲ ಬೆಲೆ ಕಡಿಮೆ ಆಗಿಲ್ಲ. ಹಣದುಬ್ಬರ ಹೆಚ್ಚಿದೆ.
ಒಟ್ಟು ಆಂತರಿಕ ಬೆಳವಣಿಗೆ ದರ (ಜಿಡಿಪಿ) ಶೇ.4-5ರಿಂದ ಶೇ.2-2.5ಕ್ಕೆ ಕುಸಿದಿದೆ. ರಫ್ತು ಕುಂಠಿತವಾಗಿದೆ. ಇಷ್ಟಾದರೂ ನಮ್ಮದು ಆರ್ಥಿಕ ಬಲಾಡ್ಯ ರಾಷ್ಟ್ರವಾಗಿದೆ ಎಂದು ಮೋದಿ ಬಿಂಬಿಸುತ್ತಿದ್ದಾರೆ. ಆರ್ಥಿಕ ಸ್ಥಿತಿ ಬಲಾಡ್ಯವಾಗಿದ್ದರೆ ಕರ್ನಾಟಕಕ್ಕೆ ನರೇಗಾ, ಬರ ಪರಿಹಾರ ಅನುದಾನ ಯಾಕೆ ಬಾಕಿ ಉಳಿಸಲಾಗಿದೆ ಎಂಬುದನ್ನು ಮೋದಿ, ಬಿಜೆಪಿ ರಾಜ್ಯ ನಾಯಕರು ಸ್ಪಷ್ಟಪಡಿಸಬೇಕು.
ವಿವಾದಾತ್ಮಕ ಹೇಳಿಕೆ ಸರಿಯಲ್ಲ: ರಾಜ್ಯದಲ್ಲಿ ಮಿತ್ರ ಪಕ್ಷಗಳ ಮುಖಂಡರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಸಮ್ಮಿಶ್ರ ಸರಕಾರ ಪತನಕ್ಕೆ ಬಿಜೆಪಿಯ ಎಲ್ಲ ಕುತಂತ್ರ-ಷಡ್ಯಂತ್ರಗಳ ನಡುವೆಯೂ ಸರಕಾರ ಸದೃಢವಾಗಿದ್ದು, ಯಾವುದೇ ತೊಂದರೆ ಇಲ್ಲ. ಮೇ 23ರ ನಂತರ ಕೇಂದ್ರದಲ್ಲಿ ಸರಕಾರ ಬದಲಾಗಲಿದ್ದು, ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ. ವಿವಿಧ ಪಕ್ಷಗಳ ಬೆಂಬಲದೊಂದಿಗೆ ರಾಹುಲ್‌ಗಾಂಧಿ ಪ್ರಧಾನಿಯಾಗುತ್ತಾರೆ.
ಸರಕಾರ ಅಸ್ಥಿರ ನಿಟ್ಟಿನಲ್ಲಿ ವಿಶೇಷ ಆಸಕ್ತಿ: ಮೋದಿ ನಾಮಬಲವೊಂದಿದ್ದರೆ ಸಾಕು ಗೆಲುವು ಖಚಿತ ಎಂದು ಬಿಂಬಿಸುವ ಬಿಜೆಪಿ ನಾಯಕರು, ನನ್ನ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಶಾಸಕ ಡಾ| ಉಮೇಶ ಜಾಧವಗೆ ದೊಡ್ಡ ಪ್ರಮಾಣದ ಆಮಿಷ ತೋರಿಸಿ, ಬಿಜೆಪಿಗೆ ಕರೆ ತಂದು ಚುನಾವಣೆಗೆ ನಿಲ್ಲಿಸಿದ್ದು ಯಾಕೆ?. ಮೋದಿ-ಶಾ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವನ್ನು ಹೇಗಾದರೂ ಬೀಳಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಸರಕಾರ ಅಸ್ಥಿರ ನಿಟ್ಟಿನಲ್ಲಿ ಇಬ್ಬರು ನಾಯಕರು ವಿಶೇಷ ಆಸಕ್ತಿ ವಹಿಸಿ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡುವಂತೆ ಮಾಡಿದ್ದಾರೆ.
ಸಿಎಂ ಆಗ್ಬೇಕು ಅನ್ನೋದಕ್ಕೆ ಮಹತ್ವ ಬೇಕಿಲ್ಲ: “ತಾವು ಮುಖ್ಯಮಂತ್ರಿ ಆಗಬೇಕು ಅನ್ನೋದು ಚುನಾವಣಾ ಸಂದರ್ಭದ ಹೇಳಿಕೆಯಾಗಿದೆ. ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಚುನಾವಣೆ ಸಂದರ್ಭ ಇಂತಹ ಪ್ರಸ್ತಾಪಗಳು ಬಂದು ಹೋಗುತ್ತವೆ. ಚುನಾವಣೆ ಮುಗಿದ ಮೇಲೆ ಅಥವಾ ಅಗತ್ಯವಿರುವ ಸಂದರ್ಭ ಇಂತಹ ಹೇಳಿಕೆಗಳನ್ನು ನೀಡಿದರೆ ಅದಕ್ಕೊಂದು ಅರ್ಥ ಇರುತ್ತದೆ. ಆ ವಿಚಾರದ ಬಗ್ಗೆ ಚುನಾವಣೆ ಸಂದರ್ಭ ಹೆಚ್ಚು ಒತ್ತು ಕೊಡುವುದಿಲ್ಲ. ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ’ ಎಂದು ತಿಳಿಸಿದರು
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.