ನೆಲ ಕಚ್ಚಿದ್ದ ಶುಂಠಿಗೆ ಬಂತು ಬಂಪರ್ ಧಾರಣೆ
Team Udayavani, Jun 4, 2019, 3:06 AM IST
ಶಿವಮೊಗ್ಗ: ಮಲೆನಾಡಿನ ಎರವಲು ಬೆಳೆ ಶುಂಠಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ನಾಲ್ಕು ವರ್ಷದ ನಂತರ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದರೊಂದಿಗೆ ಈ ಬಾರಿ ಶುಂಠಿ ಬೆಳೆಯಲು ಸಿದ್ಧತೆಯೂ ಹೆಚ್ಚಿದೆ.
ಮೂರ್‍ನಾಲ್ಕು ವರ್ಷಗಳಿಂದ ನೆಲ ಕಚ್ಚಿ ಹೋಗಿದ್ದ ಶುಂಠಿ ಬೆಳೆಗೆ ಈಗ ಬಂಪರ್ ಧಾರಣೆ ಬಂದಿದೆ. ಮುಕ್ತ ಮಾರುಕಟ್ಟೆಯಲ್ಲಿ ಶುಕ್ರವಾರದಂದು ಕ್ವಿಂಟಾಲ್ ಶುಂಠಿ ಈ ವರ್ಷದ ಗರಿಷ್ಠ ಧಾರಣೆ 13 ಸಾವಿರ ರೂ. ತಲುಪಿದೆ. ಮೇ ಮೊದಲ ವಾರದಲ್ಲಿ 6,500 ರೂ. ಇದ್ದ ಧಾರಣೆ ಕೇವಲ ಒಂದೇ ವಾರದಲ್ಲಿ ಮೂರು ಸಾವಿರ ರೂ. ಏರಿಕೆ ಕಂಡು 9500 ರೂ. ತಲುಪಿತ್ತು. ಜೂನ್ ಆರಂಭದಲ್ಲೇ 13 ಸಾವಿರಕ್ಕೆ ಏರಿಕೆ ಆಗಿದೆ. ನಾಗಾಲೋಟದಲ್ಲಿ ಬೆಲೆ ಏರುತ್ತಿದ್ದು, ಇನ್ನೂ ಬೆಲೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಲಾಟರಿ ಬೆಳೆ: ಶುಂಠಿ ಬೆಳೆಯಲು ರಾಜ್ಯದ ಕೊಡಗು, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗದ ಮಲೆನಾಡು ಭಾಗ ಹೆಚ್ಚು ಪ್ರಾಶಸ್ತ್ಯ. ಸೂಕ್ಷ್ಮ ಬೆಳೆಯಾಗಿರುವ ಶುಂಠಿಯನ್ನು ಜನ ಲಾಟರಿ ಬೆಳೆ ಎಂದೇ ಕರೆಯುತ್ತಾರೆ. ಮಳೆ ಹೆಚ್ಚಾದರೆ, ಬಸಿಗಾಲುವೆಯಲ್ಲಿ ನೀರು ಜಾರದಿದ್ದರೆ ಕೊಳೆತು ಹೋಗುತ್ತೆ. ಹಾಕಿದ ಬಂಡವಾಳವೂ ಬರುವುದಿಲ್ಲ, ಬೆಳೆಯುವ ಪ್ರದೇಶ ಸರಿಯಿದ್ದು ಉತ್ತಮ ಬೆಳೆ ಬಂದರೆ ಒಮ್ಮೊಮ್ಮೆ ಬೆಲೆಯೂ ಸಿಗೋದಿಲ್ಲ. ಆದರೆ ನಾಲ್ಕು ವರ್ಷದ ನಂತರ ಈ ಬಾರಿ ಶುಂಠಿ ಬೆಳೆದವರು ಉತ್ತಮ ದರ ಕಾಣುತ್ತಿದ್ದಾರೆ.
ವಲಸೆ ಬಂದ ಬೆಳೆ: ಮಲೆನಾಡಿನ ಜಮೀನು ಶುಂಠಿ ಬೆಳೆಗೆ ಯೋಗ್ಯ ಎಂಬುದನ್ನು ತೋರಿಸಿಕೊಟ್ಟವರು ಕೇರಳಿಗರು. 2 ದಶಕಗಳ ಹಿಂದೆ ಕೇರಳದಿಂದ ಇಲ್ಲಿಗೆ ಬಂದು ಜಮೀನು ಕೊಂಡ ಮಲೆಯಾಳಿಗಳು ರಬ್ಬರ್ ಬೆಳೆಯಲು ಮುಂದಾದರು. ಆದರೆ ಪದೇ ಪದೆ ಕಾಡ್ಗಿಚ್ಚಿಗೆ ಕರಕಲಾಗುತ್ತಿದ್ದ ರಬ್ಬರ್ ಬೆಳೆಯ ಮಧ್ಯೆ ಶುಂಠಿ ಹಾಕಿ ಲಾಭ ಮಾಡಿಕೊಂಡರು. ನಂತರ ಮಲೆನಾಡಿಗರ ಜಮೀನನ್ನು ಕೊಂಡು, ಭೋಗ್ಯಕ್ಕೆ ಪಡೆದು ಹೆಕೇರ್‌ಗಟ್ಟಲೆ ಬೆಳೆಯಲಾರಂಭಿಸಿದರು. ಕ್ರಮೇಣ ಮಲೆನಾಡಿನ ಜನರೇ ಶುಂಠಿ ಬೆಳೆಯುತ್ತಿದ್ದಾರೆ.
ಹೆಚ್ಚಿದ ಬೇಡಿಕೆ: ಮೂರ್‍ನಾಲ್ಕು ವರ್ಷಗಳಿಂದ ಶುಂಠಿಗೆ ಉತ್ತಮ ಬೆಲೆ ಇರಲಿಲ್ಲ. ಕಳೆದ ವರ್ಷದ ಗರಿಷ್ಠ ಧಾರಣೆ 6,500 ರೂ., 2015-16ರಲ್ಲಿ 1,800 ರೂ.ಗೆ ಕುಸಿದಿತ್ತು. ಹೀಗಾಗಿ ರೈತರು ಶುಂಠಿ ಬೆಳೆಯುವುದನ್ನು ಕಡಿಮೆ ಮಾಡಿದ್ದರು. ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್‌ಗಿಂತ ಅಧಿಕ ಇದ್ದ ಶುಂಠಿ ಬೆಳೆ ಪ್ರದೇಶ ಕಳೆದ ವರ್ಷ 5 ಸಾವಿರ ಹೆಕ್ಟೇರ್‌ಗೆ ಕುಸಿದಿತ್ತು. ಆದರೆ ಈ ಬಾರಿ ಉತ್ತರ ಭಾರತದ ರಾಜ್ಯಗಳಿಂದ ಶುಂಠಿಗೆ ಅತಿ ಹೆಚ್ಚಿನ ಬೇಡಿಕೆ ಬರುತ್ತಿದೆ. ಮತ್ತೂಂದು ಕಡೆ ಈಗ ಬಿತ್ತನೆ ಸಮಯವಾದ್ದರಿಂದ ಬಿತ್ತನೆಗೂ ಬಳಕೆಯಾಗುತ್ತಿದೆ.
ಶೇ.80ರಷ್ಟು ಶುಂಠಿ ಕಿತ್ತು ಮಾರಾಟ ಮಾಡಲಾಗಿದ್ದು ಕೆಲ ರೈತರು ಧಾರಣೆ ಇನ್ನಷ್ಟು ಏರಿಕೆ ಕಾಣುವ ವಿಶ್ವಾಸದಲ್ಲಿ ಇದುವರೆಗೆ ಕಿತ್ತಿಲ್ಲ. ಧಾರಣೆ ಏರುತ್ತಿದ್ದಂತೆ ರೈತರು ಭರದಿಂದ ಶುಂಠಿ ಕೀಳಲಾರಂಭಿಸಿದ್ದಾರೆ. ನೈಋತ್ಯ ಮಾನ್ಸೂನ್ ಮಳೆ ಆರಂಭವಾದಲ್ಲಿ ಕೀಳುವುದಕ್ಕೆ ಆಗುವುದಿಲ್ಲ. ಅನಂತರ ಮಳೆಗಾಲ ಮುಗಿಯುವವರೆಗೆ ಕಾಯಬೇಕಾಗುತ್ತದೆ. ಅದಕ್ಕಾಗಿ ಹೊರ ಊರುಗಳಿಂದ ಕೂಲಿ ಕಾರ್ಮಿಕರನ್ನು ಕರೆತರುತ್ತಿದ್ದಾರೆ. ಮತ್ತೂಂದು ಕಡೆ ಬೆಲೆ ಕುಸಿದು ಈ ಹಿಂದೆ ಕೈ ಸುಟ್ಟುಕೊಂಡವರು ಈಗಿನ ಧಾರಣೆಯಿಂದ ಮತ್ತೂಮ್ಮೆ ಬಿತ್ತನೆ ಮಾಡುತ್ತಿದ್ದಾರೆ.
ಮಳೆ ಆತಂಕ: ಮುಂಗಾರು ಪೂರ್ವ ಮಳೆ ಕೈ ಕೊಟ್ಟಿರುವುದು ರೈತರಿಗೆ ವರದಾನವಾಗಿದೆ. ವಿಪರೀತ ಮಳೆಯಾದರೆ ಶುಂಠಿ ಕೀಳಲು ಆಗುವುದಿಲ್ಲ. ಕಿತ್ತರೂ ವಿಲೇವಾರಿ ಮಾಡಲು ಆಗುವುದಿಲ್ಲ. ದಿನದಿಂದ ದಿನಕ್ಕೆ ಬೆಲೆ ಏರುತ್ತಿದ್ದು ದಾಸ್ತಾನು ಮಾಡಿಟ್ಟ ರೈತರು ಬಂಪರ್ ಲಾಭ ತೆಗೆಯುತ್ತಿದ್ದಾರೆ.
* ಶರತ್ ಭದ್ರಾವತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.