ಕೇಂದ್ರದ ಪ್ರಯೋಗ ರಾಜ್ಯ ಬಿಜೆಪಿಗೆ ಸವಾಲು
Team Udayavani, Jul 30, 2019, 3:08 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸಂಪುಟದಲ್ಲಿ ಜಾತಿ ಮೀರಿ ದಕ್ಷತೆ, ಕಾರ್ಯತತ್ಪರತೆ ಆಧರಿಸಿ ಸಮರ್ಥರಿಗೆ ಸಂಪುಟ ರಚನೆಗೆ ಒತ್ತು ನೀಡಿದ್ದರೂ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಆ ರೀತಿಯ ಪ್ರಯೋಗಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ! ಬಿಜೆಪಿಯ ಪ್ರಮುಖ ಮತ ಬ್ಯಾಂಕ್ ಎನಿಸಿರುವ ಲಿಂಗಾಯತ ಸಮುದಾಯ, ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ನೆರವಾಗಲು ಒಗ್ಗಲಿಗ ಸಮುದಾಯ ಹಾಗೂ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲೇ ಬೆಂಬಲ ನೀಡಿರುವ ಪರಿಶಿಷ್ಟ ಜಾತಿ, ಪಂಗಡದ ಶಾಸಕರಿಗೆ ಸಂಪುಟದಲ್ಲಿ ಹೆಚ್ಚು ಆದ್ಯತೆ ಸಿಗುವ ಸಾಧ್ಯತೆಯಿದೆ.
ಜಾತಿ ಮತ್ತು ಪ್ರಾದೇಶಿಕತೆಯನ್ನು ಪ್ರಧಾನವಾಗಿ ಗಣನೆಗೆ ತೆಗೆದುಕೊಂಡರೂ ಅದರಲ್ಲೇ ಉತ್ತಮ ವರ್ಚಸ್ಸು, ದಕ್ಷತೆ, ಪ್ರಾಮಾಣಿಕ ಕಾರ್ಯ ನಿರ್ವಹಣೆ ಮೂಲಕ ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಹೊಂದಿರುವವರಿಗೆ ಆದ್ಯತೆ ನೀಡಲು ಚಿಂತನೆ ನಡೆಸಿದೆ. ಜತೆಗೆ ಆಡಳಿತ ಯಂತ್ರಕ್ಕೂ ಚುರುಕು ಮುಟ್ಟಿಸುವತ್ತಲೂ ಗಮನ ಹರಿಸಿದೆ.
ದಕ್ಷಿಣ ಭಾರತದ ಪ್ರಮುಖ ರಾಜ್ಯವೆನಿಸಿದ ಕರ್ನಾಟಕದಲ್ಲಿ ಎರಡನೇ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿದೆ. ಈಗ ಬಿಜೆಪಿ ಸರ್ಕಾರದ ಆಡಳಿತ ವೈಖರಿಯ ಮೇಲೆ ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ಪಕ್ಷ ಸಂಘಟನೆ ಬಲವರ್ಧನೆ ಅವಲಂಬಿತವಾಗಿದೆ. ಹಾಗಾಗಿ ರಾಜ್ಯದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತ ಮಟ್ಟದಲ್ಲೂ ಬಿಜೆಪಿ ಸರ್ಕಾರವು ಇತರೆ ಸರ್ಕಾರಕ್ಕಿಂತ ಭಿನ್ನ ಹಾಗೂ ಜನಪರ ಎಂಬುದನ್ನು ಸಾಧಿಸಿ ತೋರಿಸಬೇಕಾದ ಅನಿವಾರ್ಯತೆ ರಾಜ್ಯ ಬಿಜೆಪಿ ಮೇಲಿದೆ ಎಂದು ಹಿರಿಯ ನಾಯಕರೊಬ್ಬರು ತಮ್ಮ ಅಭಿಪ್ರಾಯವನ್ನು “ಉದಯವಾಣಿ’ ಬಳಿ ಹಂಚಿಕೊಂಡರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಡಳಿತ ನಿರ್ವಹಣೆಯ ಸ್ವರೂಪದಲ್ಲಿ ಹಂತ ಹಂತವಾಗಿ ಬದಲಾವಣೆಗೆ ಒತ್ತು ನೀಡಿದೆ. ಸಂಪುಟ ರಚನೆ, ಜನಪರ ಕಾರ್ಯಕ್ರಮ, ಜಿಡಿಪಿ ಬೆಳವಣಿಗೆ ದರ, ಸಮತೋಲಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಹಿಂದಿನಿಂದ ನಡೆದುಬಂದ ಜಾತಿ, ಸಮುದಾಯ, ಪ್ರಾದೇಶಿಕತೆ, ಭಾಷೆ, ಪ್ರಾಂತವಾರು ಸಂಪುಟಕ್ಕಿಂತ ತುಸು ಭಿನ್ನವಾಗಿ ವಿದ್ಯಾರ್ಹತೆ, ಅನುಭವ, ವಿಷಯ ತಜ್ಞತೆ, ಪ್ರಾಮಾಣಿಕತೆ, ದಕ್ಷತೆ, ಬದ್ಧತೆ, ವರ್ಚಸ್ಸಿನ ಆಧಾರದ ಮೇಲೆ ಸಂಪುಟದಲ್ಲಿ ಸ್ಥಾನ ನೀಡುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದವರು ಹೇಳಿದರು.
ಕೇಂದ್ರದ ಪ್ರಯೋಗ ಇಲ್ಲಿ ಕಷ್ಟ: ಬಿಜೆಪಿ ವರಿಷ್ಠರ ಈ ಪ್ರಯೋಗವನ್ನು ಈಗಷ್ಟೇ ರಚನೆಯಾಗಿರುವ ರಾಜ್ಯ ಬಿಜೆಪಿ ಸರ್ಕಾರ ಅಳವಡಿಸಿಕೊಂಡು ಆಡಳಿತವನ್ನು ಯಶಸ್ವಿಯಾಗಿ ಮುಂದುವರಿಸುವುದು ಕಷ್ಟಸಾಧ್ಯದ ಮಾತು ಎಂದು ಬಿಜೆಪಿಯ ಕೆಲ ನಾಯಕರೇ ಹೇಳುತ್ತಾರೆ. ಇದಕ್ಕೆ ಕೆಲ ಸಾಂದರ್ಭಿಕ ಕಾರಣಗಳೂ ಇರಬಹುದು. ಸರಳ ಬಹುಮತವಿಲ್ಲದಿರುವುದು, ಬದಲಾದ ಸನ್ನಿವೇಶದಲ್ಲಿ 14 ತಿಂಗಳ ಬಳಿಕ ಅಧಿಕಾರ ಸಿಕ್ಕಿರುವುದು, ರಾಜ್ಯದ ಆರ್ಥಿಕ ಸ್ಥಿತಿ, ಅತೃಪ್ತಿ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ತೊರೆದು ಸರ್ಕಾರ ರಚನೆಗೆ ನೆರವಾದವರನ್ನು “ತೃಪ್ತಿ’ಪಡಿಸುವ ಹೊಣೆಗಾರಿಕೆಯೂ ಬಿಜೆಪಿ ಮೇಲಿದೆ. ಇದನ್ನೆಲ್ಲಾ ಸರಿದೂಗಿಸಿಕೊಂಡು ಹೋಗಬೇಕಾದರೆ ವರಿಷ್ಠರು ಅನುಸರಿಸಿದ ಹಾದಿ ಹಿಡಿಯುವು ಕಷ್ಟ ಎಂಬ ಮಾತುಗಳಿವೆ.
ಸಮುದಾಯ, ಪ್ರಾದೇಶಿಕತೆ ಆದ್ಯತೆ ಮುಖ್ಯ: ಲಿಂಗಾಯತ ಸಮುದಾಯ ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಅದರಲ್ಲೂ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದೆ. ಚುನಾವಣೆಗಳು, ರಾಜಕೀಯ ಪ್ರಹಸನ ಸಂದರ್ಭದಲ್ಲೂ ಇದೇ ಸಮುದಾಯ ಗಟ್ಟಿಯಾಗಿ ಬಿಜೆಪಿ ಪರ ಅದರಲ್ಲೂ ಯಡಿಯೂರಪ್ಪ ಅವರ ಬೆನ್ನಿಗಿದೆ. ಹಾಗಾಗಿ ಸಂಪುಟದಲ್ಲಿ ಲಿಂಗಾಯತ ಪ್ರಾಧಾನ್ಯತೆ ಹೆಚ್ಚಿರಲಿದ್ದು, 7-8 ಸಚಿವ ಸ್ಥಾನ ನೀಡಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಬಿಜೆಪಿಗೆ ಭದ್ರ ನೆಲೆಯಿದ್ದರೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಇನ್ನೂ ಉತ್ತಮ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿಯೇ ಸರ್ಕಾರ ರಚನೆಗೆ ನಿರ್ಣಾಯಕವಾದ 10-15 ಶಾಸಕರ ಕೊರತೆಯಿಂದ ಬಿಜೆಪಿ ಈವರೆಗೆ ಸ್ವಂತಬಲದಲ್ಲಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಅಲ್ಲದೇ ರಾಜೀನಾಮೆ ನೀಡಿ ಅನರ್ಹಗೊಂಡವರಲ್ಲೂ ನಾಲ್ಕು ಮಂದಿ ಒಕ್ಕಲಿಗ ಶಾಸಕರಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರ ಸಂಪುಟದಲ್ಲೂ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ಸಿಗುವ ನಿರೀಕ್ಷೆ ಇದೆ.
ಪರಿಶಿಷ್ಟ ಶಾಸಕರಿಗೂ ಒತ್ತು: ಇನ್ನು ರಾಜ್ಯ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ 53 ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿ 17 ಹಾಗೂ ಪರಿಶಿಷ್ಟ ಪಂಗಡದ 6 ಶಾಸಕರು ಆಯ್ಕೆಯಾಗಿದ್ದು, ಒಟ್ಟು 23 ಮಂದಿ ಬಿಜೆಪಿ ಶಾಸಕರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಐದು ಪರಿಶಿಷ್ಟ ಜಾತಿ ಹಾಗೂ ಎರಡು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲೂ ಬಿಜೆಪಿ ಜಯ ಗಳಿಸಿದ್ದು, ಎಲ್ಲ ಮೀಸಲು ಕ್ಷೇತ್ರದಲ್ಲೂ ಕಮಲ ಪಕ್ಷ ಗೆದ್ದಿದೆ. ಈ ಹಿಂದೆ ಕಾಂಗ್ರೆಸ್‌ನ ಪ್ರಮುಖ ಮತ ಬ್ಯಾಂಕ್ ಎನಿಸಿದ್ದ ಪರಿಶಿಷ್ಟ ಜಾತಿ, ಪಂಗಡದವರ ಕ್ರಮೇಣ ಬಿಜೆಪಿಯತ್ತ ಮುಖ ಮಾಡಿದಂತೆ ಸದ್ಯ ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾಗಿ ಈ ಸಮುದಾಯಗಳ ಶಾಸಕರಿಗೂ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕಿದೆ ಎಂದು ಮೂಲಗಳು ಹೇಳಿವೆ.
ಜನಪರ ಆಡಳಿತ ಮೊದಲ ಆದ್ಯತೆ: ಜನಪರ ಆಡಳಿತ ಬಿಜೆಪಿಯ ಮೊದಲ ಆದ್ಯತೆ. 3 ತಿಂಗಳೊಳಗೆ ಹೊಸ ಬಜೆಟ್ ಮಂಡಿಸಿ ಜನರ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲಾಗುವುದು. ಸಮತೋಲಿತ ಸಂಪುಟವೂ ರಚನೆಯಾಗಲಿದೆ. ಜಾತಿ, ಪ್ರಾದೇಶಿಕತೆ, ಸಂಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ರಚಿಸಲಾಗುವುದು. ಕೇಂದ್ರ ಸರ್ಕಾರದ ಯಶಸ್ವಿ ಪ್ರಯೋಗಗಳನ್ನು ಸಾಧ್ಯವಾದಷ್ಟು ಅನುಷ್ಠಾನಗೊಳಿಸಲು ಒತ್ತು ನೀಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.
ಆಡಳಿತ ಯಂತ್ರಕ್ಕೆ ಚುರುಕು: ಮೈತ್ರಿ ಸರ್ಕಾರದ ನಾಯಕರಲ್ಲಿ ಆಂತರಿಕ ಕಲಹ, ಶಾಸಕರಲ್ಲಿ ಅತೃಪ್ತಿಯಿಂದಾಗಿ ಆಡಳಿತ ಯಂತ್ರ ಸ್ಥಗಿತವಾಗಿದೆ ಎಂದು ಬಿಜೆಪಿ ನಿರಂತರವಾಗಿ ಆರೋಪಿಸುತ್ತಾ ಬಂದಿತ್ತು. ಇದೀಗ ಬಿಜೆಪಿಯೇ ಅಧಿಕಾರದಲ್ಲಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ. ಅಧಿವೇಶನ ಮುಗಿಯುತ್ತಿದ್ದಂತೆ ಸಂಭಾವ್ಯ ಸಚಿವರ ಪಟ್ಟಿಗೆ ವರಿಷ್ಠರ ಅನುಮತಿ ಪಡೆದು ಶೀಘ್ರವಾಗಿ ಸಂಪುಟ ರಚನೆಗೆ ಒತ್ತು ನೀಡಲಾಗುತ್ತದೆ. ದೈನಂದಿನ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುವ ಜತೆಗೆ ಬರಪೀಡಿತ ಪ್ರದೇಶಗಳ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ ಎಂದು ತಿಳಿಸಿವೆ.
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.