ಉಪ ಕದನಕ್ಕೆ ಸಮ್ಮಿಶ್ರ ಸರ್ಕಾರ ಕಾರಣ
Team Udayavani, Nov 26, 2019, 3:10 AM IST
15 ಕ್ಷೇತ್ರಗಳ ಉಪಚುನಾವಣೆಯ ಕಣ ರಂಗೇರುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಶಾಸಕರು ಮತ್ತೆ ಉಮೇದುವಾರಿಕೆ ಸಲ್ಲಿಸಿದ್ದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯಿಂದ ಮೈಸೂರು ಜಿಲ್ಲೆ ಹುಣಸೂರಿನಿಂದ ಎಚ್. ವಿಶ್ವನಾಥ್ ಹಾಗೂ ಬಳ್ಳಾರಿ ಜಿಲ್ಲೆ ವಿಜಯನಗರದಿಂದ ಆನಂದ ಸಿಂಗ್ ಕಣದಲ್ಲಿದ್ದಾರೆ. “ಉದಯವಾಣಿ’ ಕೇಳಿದ ಪಂಚ ಪ್ರಶ್ನೆಗೆ ಅವರು ನೀಡಿದ ಉತ್ತರ ಇಲ್ಲಿದೆ.
1. ಚುನಾವಣೆ ಸ್ಪರ್ಧೆಯನ್ನು ಯಾವ ವಿಷಯ ಆಧರಿಸಿ ಎದುರಿಸುತ್ತೀರಿ?
2. ಮತದಾರರು ನಿಮ್ಮನ್ನು ಮರು ಆಯ್ಕೆ ಯಾಕೆ ಮಾಡಬೇಕು?
3. ಅನರ್ಹರು ಎಂದು ಕರೆಯಿಸಿಕೊಳ್ಳಲು ಮುಜುಗರ ಆಗುವುದಿಲ್ಲವೇ?
4. ಗೆದ್ದರೆ ಇಷ್ಟು ದಿನ ನೀವು ವಿರೋಧಿಸಿದ್ದ ಸಿದ್ಧಾಂತ ಈಗ ಅಪ್ಪಿಕೊಂಡಿರುವ ಬಿಜೆಪಿ ಸಿದ್ಧಾಂತ ಹೊಂದಾಣಿಕೆ ಆಗುತ್ತದೆಯೇ? ಸೋತರೆ ರಾಜಕೀಯ ವನವಾಸವೇ?
5. ಸರ್ಕಾರ ಉರುಳಿಸಲು ಮತ್ತು ಸೃಷ್ಟಿಸಲು ನಿಮ್ಮ ಹಿಂದೆ ಇದ್ದ ಶಕ್ತಿ ಯಾವುದು?
ಎಚ್.ವಿಶ್ವನಾಥ, ಹುಣಸೂರು
1. ಹುಣಸೂರು ಉಪ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಅಲ್ಲ. ಗೆದ್ದು ಮಂತ್ರಿಯಾಗಿ ಹುಣಸೂರನ್ನು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಹೆಸರಲ್ಲಿ ಹೊಸ ಜಿಲ್ಲೆ ಮಾಡುತ್ತೇನೆಂದು ಹಿಂದೆಯೇ ಶಪಥ ಮಾಡಿದ್ದೇನೆ. ನಾನು ಕೂಡ ಫಲಿತಾಂಶ ಪ್ರಕಟವಾದ ಮರುದಿನದಿಂದಲೇ ಹೊಸ ಜಿಲ್ಲೆ ಮಾಡಿಸುವ ಕೆಲಸ ಆರಂಭಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಚುನಾವಣೆ ವಿಷಯ.
2. ಕ್ಷೇತ್ರದ ಅಭಿವೃದ್ಧಿಗಾಗಿ, ನನ್ನ ಅನುಭವದಿಂದ ಕಳೆದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಂದು ಚಾಲನೆ ಕೊಟ್ಟಿದ್ದೇನೆ. ಅವೆಲ್ಲವೂ ಮುಂದುವರಿಯಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದು ಅಭಿವೃದ್ಧಿ ಕಾರ್ಯಕ್ಕೆ ಪೂರಕವಾಗಲಿದೆ. ಜತೆಗೆ ಹುಣಸೂರು ಹೊಸ ಜಿಲ್ಲೆಯಾದರೆ ಕ್ಷೇತ್ರದ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ. ನಮ್ಮನ್ನು ನಂಬಿರುವ ಜನರು, ನನ್ನ ಅಭಿವೃದ್ಧಿ ಕಾರ್ಯ ಗಮನಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ.
3. ನಾನು ಅನರ್ಹ ಅಲ್ಲ, ಅರ್ಹ. ನನ್ನ ವಿರುದ್ಧ ಮಾತನಾಡಲು ಏನು ಇಲ್ಲದೆ ವಿರೋಧಿಗಳು ನನ್ನನ್ನು ಅನರ್ಹ ಎಂದು ಟೀಕಿಸುತ್ತಿದ್ದಾರೆ. ಈ ವಿಶ್ವನಾಥ್ ಭ್ರಷ್ಟಾಚಾರಿಯಲ್ಲ, ಅಸಮರ್ಥನೂ ಅಲ್ಲ. ಎಲ್ಲ ರೀತಿಯಿಂದಲೂ ನಾನು ಅರ್ಹ. ನಾನು ಪಕ್ಷಾಂತರಿಯಲ್ಲ. ಇದು ರಾಜಕೀಯ ಧ್ರುವೀಕರಣ. ಜನರು ನಮ್ಮನ್ನು ಸ್ವೀಕಾರ ಮಾಡುತ್ತಾರೆ.
4. ಗಣತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ನಿಂತ ನೀರಲ್ಲ. ಅಭಿವೃದ್ಧಿ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಯವರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು, ಅವರಲ್ಲಿ ಒಬ್ಬರಂತೆ ಕಂಡಿದ್ದಾರೆ. ಮುಂದೆಯೂ ಬಿಜೆಪಿಯ ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತೇನೆ.
5. ಸರ್ಕಾರ ಉರುಳಲು ನಾವು ಕಾರಣರಲ್ಲ. ರಾಜ್ಯದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣವೇ ಕಾರಣ. ದೋಸ್ತಿಗಳ ನಡುವಿನ ಕಚ್ಚಾಟ. ಸರ್ಕಾರ ಕೆಲವೇ ಜಿಲ್ಲೆಗೆ ಸೀಮಿತವಾಗಿ ಎಲ್ಲ ಶಾಸಕರು, ಅದರಲ್ಲೂ ಆಡಳಿತ ಪಕ್ಷದ ಶಾಸಕರುಗಳನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲವಾಗಿದ್ದು, ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸದಿದ್ದುದೇ ಕಾರಣ.
ಆನಂದ ಸಿಂಗ್, ವಿಜಯನಗರ
1. ಉಪಚುನಾವಣೆಗೆ ವಿಷಯವೇ ಇಲ್ಲ. ಸಮ್ಮಿಶ್ರ ಸರ್ಕಾರ ನಡೆದುಕೊಂಡ ರೀತಿಯಿಂದ ಈ ಉಪಚುನಾವಣೆ ಬಂದಿದೆ. ನನ್ನಿಂದ ಬಂದಿದೆ ಎಂದರೆ ಅದು ತಪ್ಪು ಮಾಹಿತಿ. 17 ಶಾಸಕರು ರಾಜೀನಾಮೆ ಸಲ್ಲಿಸಲು ಕಾರಣವೇನು? ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಗಳಿಗೆ ಸರಿಯಾದ ಅನುದಾನ ಸಿಕ್ಕಿಲ್ಲ. ರಾಜೀನಾಮೆ ಸಲ್ಲಿಸಲು ಇನ್ನೂ ಸಾಕಷ್ಟು ಜನ ಇದ್ದರು. ಅವರಲ್ಲಿ ಕೆಲವರು ರಾಜೀನಾಮೆ ಸಲ್ಲಿಸುವ ನಿರ್ಣಯ ಕೈಗೊಂಡಿದ್ದರಿಂದ ರಾಜ್ಯದಲ್ಲಿ ಉಪಚುನಾವಣೆ ಬಂದಿದೆ.
2. ವಿಜಯನಗರ ವಿಧಾನಸಭೆ ಕ್ಷೇತ್ರಕ್ಕೆ ತಾಂತ್ರಿಕವಾಗಿ ನಾಲ್ಕನೇ ಬಾರಿಗೆ ಚುನಾವಣೆ ನಡೆದರೂ ನನ್ನ ಪ್ರಕಾರ ಮೂರನೇ ಬಾರಿಗೆ ಚುನಾವಣೆಯಾಗಿದ್ದು, ಮರು ಚುನಾವಣೆಯಾಗಿದೆ ಅಷ್ಟೆ. ಬಿಜೆಪಿ ಸರ್ಕಾರ 250 ಕೋಟಿ ರೂ. ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದೆ. ಇದರಲ್ಲಿ 77 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಸಹ ಕರೆಯಲಾಗಿದೆ. ಯಡಿಯೂರಪ್ಪರಿಗೆ ಸ್ಥಿರ ಸರ್ಕಾರ ನೀಡಬೇಕೆಂಬ ಉದ್ದೇಶದಿಂದ ಜನರು ಸ್ಪಂದಿಸಿ ಬಿಜೆಪಿಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ.
3. ಕೋರ್ಟ್ ತೀರ್ಪು ಕೊಟ್ಟ ಮೇಲೆ ನಾವು ಅನರ್ಹರು ಎಂದು ಹೇಳಿಕೊಳ್ಳಬೇಕು. ಅನರ್ಹರು ಎಂಬ ಹಣೆಪಟ್ಟಿ ಹೋಗಬೇಕಾದರೆ ಉಪಚುನಾವಣೆಯಲ್ಲಿ ಗೆದ್ದು ತೋರಿಸಬೇಕು. ಅಲ್ಲಿಯವರೆಗೆ ಕಾದು ನೋಡಬೇಕು.
4. ನಾನು ರಾಜಕೀಯ ಜೀವನ ಆರಂಭಿಸಿದ್ದೇ ಬಿಜೆಪಿಯಿಂದ ಮತ್ತೆ ಹೊಂದಾಣಿಕೆ ಏಕೆ ಆಗಲ್ಲ? ಆಗಲಿಲ್ಲ ಎಂದಾದರೆ ನಾನು ಏಕೆ ವಾಪಸ್ ಬಿಜೆಪಿಗೆ ಬರುತ್ತಿದ್ದೆ. ಮನುಷ್ಯ ಎಂದಾಕ್ಷಣ ತಪ್ಪು ಮಾಡುವುದು ಸಹಜ. ತಪ್ಪುಗಳನ್ನು ವಾದಿಸಬಾರದು. ಪ್ರತಿಷ್ಠೆಯಾಗಿ ಸ್ವೀಕರಿಸಬಾರದು. ತಪ್ಪುಗಳನ್ನು ಒಪ್ಪಿಕೊಂಡು ಸರಿಪಡಿಸಿಕೊಂಡು ಹೋಗುವುದೇ ರಾಜಕೀಯ. ಉಪಚುನಾವಣೆಯಲ್ಲಿ ಗೆಲ್ಲುವ, ಈ ಬಾರಿಯೂ ಮತದಾರರು ನನ್ನನ್ನು ಕೈಹಿಡಿಯುವ ವಿಶ್ವಾಸವಿದೆ.
5. ಸಮ್ಮಿಶ್ರ ಸರ್ಕಾರವನ್ನು ನಾವೊಬ್ಬರೇ ಉರುಳಿಸಿಲ್ಲ. ನನ್ನೊಬ್ಬನಿಂದ ಸರ್ಕಾರ ಉರುಳಿಸಲು ಸಾಧ್ಯವಾಗುತ್ತಾ? ನಾನು ನನ್ನ ಬೇಡಿಕೆಗಳನ್ನು ಮುಂದಿಟ್ಟು ಪಕ್ಷದಿಂದ ಹೊರ ಬಂದಿದ್ದೇನೆ. ನಂತರ ರಾಜ್ಯದಲ್ಲಿ ನಡೆದ ಬೆಳವಣಿಗೆಯಲ್ಲಿ 16 ಶಾಸಕರು ರಾಜೀನಾಮೆ ನೀಡಿದ್ದರಿಂದ ಸಮ್ಮಿಶ್ರ ಸರ್ಕಾರ ಉರುಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.