ಸ್ವಯಂ ಔಷಧದ ಅಪಾಯಗಳು
Team Udayavani, Oct 3, 2021, 5:55 AM IST
ಸ್ವಯಂ ಔಷಧ ಎಂದು ಕರೆಯಲಾಗುವ “ಓವರ್ ದ ಕೌಂಟರ್’ (ಒಟಿಸಿ) ಔಷಧಗಳು ಎಂದರೆ ವೈದ್ಯರು ಶಿಫಾರಸು ಮಾಡದೆ ಜನರು ತಾವೇ ಔಷಧ ಅಂಗಡಿಗಳಿಂದ ಖರೀದಿಸುವ ಔಷಧಗಳು. ಕಳೆದ ಕೆಲವು ವರ್ಷಗಳಿಂದ ಸ್ವಯಂ ಔಷಧ ತೆಗೆದುಕೊಳ್ಳುವ ಪ್ರವೃತ್ತಿ ತುಂಬಾ ಹೆಚ್ಚಾಗಿದೆ. ಸುಲಭವಾಗಿ ಲಭ್ಯವಾಗುವುದು, ಖರೀದಿ ಸಾಮರ್ಥ್ಯ ಮತ್ತು ರೋಗಿಗಳಲ್ಲಿ ಹೆಚ್ಚಿರುವ ತಿಳಿವಳಿಕೆ ಇದಕ್ಕೆ ಸಂಭಾವ್ಯ ಕಾರಣಗಳು. ಸ್ವಯಂ ಔಷಧದಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಗಿಡಮೂಲಿಕೆ ಔಷಧಗಳು, ಸಪ್ಲಿಮೆಂಟ್‌ಗಳು ಹಾಗೂ ಲೇಬಲ್‌ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಅನುಸರಿಸಿದಾಗ ಅಥವಾ ತಮ್ಮ ಆರೋಗ್ಯ ಸೇವಾ ಸಿಬಂದಿ ನೀಡಿರುವ ಸೂಚನೆಯಂತೆ ತೆಗೆದುಕೊಂಡಾಗ ಸುರಕ್ಷಿತ ಮತ್ತು ಪರಿಣಾಮಕಾರಿ ಯಾಗಿರುವ ಔಷಧಗಳು ಸ್ವಯಂ ಔಷಧದಡಿ ಹೆಚ್ಚು ಖರೀದಿಯಾಗುತ್ತವೆ.
ಶೀತ, ಕೆಮ್ಮು ಅಥವಾ ಬೇಧಿಯಾಗಿದೆ ಎಂದು ಸುಳ್ಳು ಮಾಹಿತಿ ನೀಡಿ, ಔಷಧ ಅಂಗಡಿಗಳಿಂದ ಔಷಧ ಕೇಳುವ ಮೂಲಕ ಸ್ವಯಂ ಔಷಧದ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಇಂತಹ ಶೇ. 76ರಷ್ಟು ಪ್ರಕರಣಗಳಲ್ಲಿ ಆ್ಯಂಟಿಬಯಾಟಿಕ್‌ಗಳನ್ನು ನೀಡಲಾಗಿದೆ. ಭಾರತದಲ್ಲಿ ಆ್ಯಂಟಿಮೈಕ್ರೋಬಿಯಲ್ ಔಷಧಗಳನ್ನು ವೈದ್ಯರ ಶಿಫಾರಸು ಇಲ್ಲದೆ ನೀಡಬಾರದು ಎಂಬ ನಿಯಮ ಇದ್ದರೂ ವೈದ್ಯರ ಶಿಫಾರಸು ಇಲ್ಲದೆ ಅವುಗಳನ್ನು ನೀಡಲಾಗುತ್ತಿದೆ. ಇದರಿಂದ ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧ ಉಂಟಾಗುವ ಆತಂಕ ಹೆಚ್ಚಾಗಿದೆ.
ಔಷಧ ಮತ್ತು ಸೌಂದರ್ಯವರ್ಧಕ ಕಾನೂನು ಮತ್ತು ನಿಯಮಗಳಡಿ ಶೆಡ್ನೂಲ್ ಕೆ ಯಲ್ಲಿ ವರ್ಗೀಕರಿಸಲಾದ ಔಷಧಗಳು ಮನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ಪ್ಯಾರಾಸಿಟಮಾಲ್, ಲಿಕ್ವಿಡ್ ಪ್ಯಾರಾಫಿನ್, ಯೂಕಲಿಪ್ಟಸ್ ಎಣ್ಣೆ, ಟಿಂಕ್ಚರ್ ಅಯೋಡಿನ್ ಹಾಗೂ ಕೆಮ್ಮು ಮತ್ತು ಶೀತಕ್ಕೆ ಉಪಯೋಗಿಸಲಾಗುವ ವಿವಿಧ ಔಷಧ ಮಿಶ್ರಣಗಳಾಗಿದ್ದು, ಸ್ವಯಂ ಔಷಧಗಳಾಗಿ ಖರೀದಿಯಾಗುತ್ತವೆ.
ಪ್ರಸ್ತುತ ಔಷಧೇತರ ಪರವಾನಿಗೆ ಹೊಂದಿರುವ ಮಳಿಗೆ ಗಳು (ಉದಾ.: ನಾನ್ ಫಾರ್ಮಸಿಸ್ಟ್‌ಗಳು) ಕೆಲವು ಷರತ್ತುಗಳ ಅನ್ವಯ 1,000 ಜನಸಂಖ್ಯೆಗಿಂತ ಕಡಿಮೆ ಇರುವ ಹಳ್ಳಿಗಳಲ್ಲಿ ಶೆಡ್ನೂಲ್ ಕೆಯಡಿ “ಮನೆಮದ್ದುಗಳು’ ಎಂದು ವರ್ಗೀಕರಿ
ಸಲಾಗಿರುವ ಔಷಧಗಳನ್ನು ಮಾರಾಟ ಮಾಡಬಹುದಾಗಿದೆ.
ಔಷಧಗಳು ಮತ್ತು ಪವಾಡ ಔಷಧಗಳು (ಆಕ್ಷೇಪಾರ್ಹ ಜಾಹೀರಾತುಗಳು) ಕಾನೂನು 1954 ಮತ್ತು ನಿಯಮಗಳು, 1955ರ ಪ್ರಕಾರ ಕೆಲವು ಔಷಧಗಳ ಬಗ್ಗೆ ತಪ್ಪಾಗಿ ಪ್ರಚಾರ ಮಾಡಿ ಜನರು ಸ್ವಯಂ ಔಷಧವಾಗಿ ಬಳಕೆ ಮಾಡುವುದರ ಮೇಲೆ ನಿಯಂತ್ರಣ ಹೇರಲಾಗಿದೆ.
ಇದನ್ನೂ ಓದಿ:ಅಜ್ಞಾನ,ದೌರ್ಜನ್ಯದಿಂದ ಪಾರು ಮಾಡಿ, ಕಷ್ಟಕ್ಕೆ ಅನುಕೂಲವಾಗುವುದೇ ಶಿಕ್ಷಣ
ಭಾರತದಲ್ಲಿ ಶೆಡ್ಯೂಲ್ ಎಚ್, ಎಚ್ 1 ಮತ್ತು ಎಕ್ಸ್ ವಿಭಾಗಗಳಲ್ಲಿ ಇಲ್ಲದ ಔಷಧಗಳನ್ನು ಔಷಧ ಮಾರಾಟಗಾರರು ಮತ್ತು ಮಳಿಗೆಗಳು ವೈದ್ಯರ ಶಿಫಾರಸು ಇಲ್ಲದೆಯೇ ಮಾರಾಟ ಮಾಡಲು ಅವಕಾಶ ಇದೆ. ಅಲ್ಲದೆ, ವೈದ್ಯರ ಶಿಫಾರಸು ಇದ್ದೇ ಮಾರಾಟ ಮಾಡಬೇಕಾದ ಔಷಧಗಳನ್ನು ಕೂಡ ಭಾರತದಲ್ಲಿ ಸ್ವಯಂ ಔಷಧಗಳಂತೆ ವೈದ್ಯರ ಶಿಫಾರಸು ಇಲ್ಲದೆಯೇ ಮಾರಾಟ ಮಾಡುವ ಪ್ರವೃತ್ತಿ ಇದೆ. ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಗಳನ್ನು ರಾಜ್ಯ ಪರವಾನಿಗೆ ಪ್ರಾಧಿಕಾರಗಳು ನೀಡುವ ಪರವಾನಿಗೆಗಳಡಿ ಉತ್ಪಾದಿಸಬೇಕಾಗಿದೆ. ಈ ಔಷಧಗಳನ್ನು ಫಾರ್ಮಸಿಯೇತರ ಮಳಿಗೆಗಳಲ್ಲಿಯೂ ಮುಕ್ತವಾಗಿ ಮಾರಾಟ ಮಾಡಲಾಗುತ್ತದೆ.
ಸ್ವಯಂ ಔಷಧಗಳನ್ನು ವಿವಿಧ ದೇಶಗಳಲ್ಲಿ ಪ್ರತ್ಯೇಕ ವಿಭಾಗದಲ್ಲಿ ಗುರುತಿಸಲಾಗಿರುತ್ತದೆ ಮತ್ತು ಅವುಗಳ ಬಳಕೆಗೆ ಕಠಿನ ಮಾರ್ಗದರ್ಶಿ ಸೂತ್ರಗಳಿವೆ. ಆದರೆ ಭಾರತದಲ್ಲಿ ಸ್ವಯಂ ಔಷಧ (ಒಟಿಸಿ)ಗಳನ್ನು ಕಾನೂನಾತ್ಮಕವಾಗಿ ಗುರುತಿಸಲಾಗಿಲ್ಲ. ಇಲ್ಲಿ ಸ್ವಯಂ ಔಷಧ (ಒಟಿಸಿ) ಎಂಬ ಪದವನ್ನು ಔಷಧಗಳನ್ನು ಹೇಗೆ ಬಳಸಲಾಗುತ್ತದೆ ಅಥವಾ ಮಾರಾಟ ಮಾಡಲಾಗುತ್ತದೆ (ವೈದ್ಯರ ಶಿಫಾರಸು ಇಲ್ಲದೆಯೇ ಔಷಧಗಳ ಬಳಕೆ ಅಥವಾ ನೋಂದಾಯಿತ ವೈದ್ಯರ ಶಿಫಾರಸು ಇಲ್ಲದೆಯೇ ಔಷಧ ಮಳಿಗೆಗಳಿಂದ ಔಷಧಗಳ ಮಾರಾಟ) ಎಂಬ ಅರ್ಥದಲ್ಲಿ ಉಪಯೋಗಿಸಲಾಗುತ್ತದೆಯೇ ವಿನಾ ವಿದೇಶಗಳಲ್ಲಿ ಇರುವಂತೆ ಒಂದು ಪ್ರತ್ಯೇಕ ವಿಭಾಗವಾಗಿ ಗುರುತಿಸಲಾಗಿಲ್ಲ. ಭಾರತದಲ್ಲಿ ಇದುವರೆಗೆ ಒಟಿಸಿ ಔಷಧಗಳ ಪರವಾನಿಗೆಗೆ ಇದುವರೆಗೂ ಯಾವುದೇ ಮಾರ್ಗದರ್ಶಿ ಸೂತ್ರಗಳು ಅಥವಾ ಕಾನೂನು ನಿಯಂತ್ರಣ ಇಲ್ಲ.
ವೈದ್ಯರ ಶಿಫಾರಸಿನ ಅಡಿ ಮಾರಾಟ ಮಾಡಬೇಕಾದ ಔಷಧಗಳ ಯಾದಿಯಲ್ಲಿ ಬಾರದ, ಸ್ವಯಂ ಔಷಧಗಳಾಗಿ ಔಷಧ ಮತ್ತಿತರ ಅಂಗಡಿಗಳಲ್ಲಿ ಮಾರಾಟವಾಗುವ ಒಟಿಸಿ ಔಷಧಗಳಿಗೆ ಪ್ರತ್ಯೇಕ ವಿಭಾಗವನ್ನು ಭಾರತದಲ್ಲಿ ರಚಿಸಬೇಕಾಗಿದೆ.
2020ರಲ್ಲಿ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಬರುವ ಉಪ ಔಷಧ ನಿಯಂತ್ರಕರು ಒಟಿಸಿ ಔಷಧಗಳಿಗಾಗಿ ನಿಯಂತ್ರಣ ಸೂತ್ರಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದರು.
ಭಾರತದಲ್ಲಿ ಜಾರಿಯಲ್ಲಿರುವ ಔಷಧಗಳು ಮತ್ತು ಸೌಂದರ್ಯವರ್ಧಕ ಸಾಧನಗಳ ಕಾನೂನು ಮತ್ತು ನಿಯಮಗಳ ಅನ್ವಯ ಔಷಧಗಳನ್ನು ವಿವಿಧ ಶೆಡ್ನೂಲ್‌ಗಳಡಿ ವರ್ಗೀಕರಿಸಲಾಗಿದೆ. ಶೆಡ್ನೂಲ್ ಎಚ್, ಎಚ್1 ಮತ್ತು ಎಕ್ಸ್ ಗಳಡಿ ವರ್ಗೀಕರಿಸಲಾಗಿರುವ ಔಷಧಗಳ ಮೇಲೆ ನೋಂದಾಯಿತ ವೈದ್ಯರ ಶಿಫಾರಸು ಇದ್ದರೆ ಮಾತ್ರ ಮಾರಾಟ ಮಾಡಬೇಕು ಎಂಬ ಲೇಬಲ್ ಇರಬೇಕಾದದ್ದು ಕಡ್ಡಾಯ. ಶೆಡ್ನೂಲ್ ಜಿಯಡಿ ವರ್ಗೀಕರಿಸಲಾದ ಔಷಧಗಳು (ಬಹುತೇಕ ಆ್ಯಂಟಿ ಹಿಸ್ಟಾಮಿನ್‌ಗಳು) ಕಡ್ಡಾಯವಾಗಿ “ಎಚ್ಚರಿಕೆ: ವೈದ್ಯಕೀಯ ಮೇಲ್ವಿಚಾರಣೆ ಇಲ್ಲದೆ ಈ ಔಷಧವನ್ನು ತೆಗೆದುಕೊಳ್ಳುವುದು ಅಪಾಯಕಾರಿ’ ಎಂಬ ಲೇಬಲ್ ಇರಬೇಕಾದುದು ಕಡ್ಡಾಯವಾಗಿದೆ.
ನೀವು ತಿಳಿದಿರಬೇಕಾದ ಔಷಧ ಸತ್ಯಗಳು
ಭಾರತದಲ್ಲಿ ಒಟಿಸಿ ಔಷಧಗಳ ನಿಯಂತ್ರಣ ಮತ್ತು ವೈದ್ಯಕೀಯ ಸನ್ನಿವೇಶ ಮತ್ತು ವಿವಿಧ ದೇಶಗಳಲ್ಲಿ ಇರುವ ಸನ್ನಿವೇಶದ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಒಟಿಸಿ ಔಷಧಗಳ ಬಗೆಗಿನ ಕೆಲವು ತಪ್ಪು ನಂಬಿಕೆಗಳನ್ನು ಪರಿಹರಿಸುವ ಪ್ರಯತ್ನವನ್ನೂ ಇಲ್ಲಿ ಮಾಡಲಾಗಿದೆ.
ಮಿಥ್ಯ 1: ಒಟಿಸಿ ಔಷಧಗಳು ಸಂಪೂರ್ಣ ಸುರಕ್ಷಿತ
ಸತ್ಯ: ಖಂಡಿತವಾಗಿ ಅಲ್ಲ. ಉದಾಹರಣೆಗೆ, ತಲೆನೋವು, ಹಲ್ಲುನೋವು ಇತ್ಯಾದಿ ವಿವಿಧ ನೋವುಗಳಿಂದ ಉಪಶಮನ ಪಡೆಯಲು ಆ್ಯಸ್ಪಿರಿನ್ ಔಷಧವನ್ನು 20ನೇ ಶತಮಾನದ ಪೂರ್ವಾರ್ಧದಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತಿತ್ತು. ಪ್ರಸ್ತುತ ಅದನ್ನು ಹೃದಯಾಘಾತ ಮತ್ತು ಲಕ್ವಾದ ಪ್ರತಿಬಂಧಕ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತಿದೆ. ಆದರೆ ಅದನ್ನು ನೋವು ನಿವಾರಕವಾಗಿ ಉಪಯೋಗಿಸಿದಾಗ ಡೋಸೇಜ್ ಹೆಚ್ಚು ಕಡಿಮೆಯಾದರೆ ಗ್ಯಾಸ್ಟ್ರೈಟಿಸ್‌ನಂತಹ ಗಂಭೀರ ಅಡ್ಡ ಪರಿಣಾಮಗಳನ್ನು ಅದು ಉಂಟುಮಾಡಬಹುದು.
ಮಿಥ್ಯ 2: ಔಷಧಗಳು ಎಲ್ಲರಲ್ಲಿಯೂ ಒಂದೇ ಬಗೆಯ ಪರಿಣಾಮವನ್ನು ಉಂಟು ಮಾಡುತ್ತವೆ.
ಸತ್ಯ: ವಂಶವಾಹಿ ಸಂರಚನೆಯಲ್ಲಿ ಭಿನ್ನತೆಯಿಂದಾಗಿ ಔಷಧಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ ಪರಿಣಾಮಗಳನ್ನು ಉಂಟುಮಾಡುತ್ತವೆ. ಕೆಲವರಲ್ಲಿ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು, ಇನ್ನು ಕೆಲವರಲ್ಲಿ ಅಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಔಷಧದ ಪರಿಣಾಮಗಳು ವ್ಯಕ್ತಿಯ ದೈಹಿಕ ಸ್ಥಿತಿಗತಿಯನ್ನೂ ಆಧರಿಸಿರುತ್ತವೆ.
ಮಿಥ್ಯ 3: ಒಟಿಸಿ ಔಷಧಗಳ ಬಳಕೆ ಚಟವಾಗಿ ರೂಪುಗೊಳ್ಳುವುದಿಲ್ಲ.
ಸತ್ಯ: ಶೀತ ಮತ್ತು ಕೆಮ್ಮಿನ ಔಷಧಗಳಲ್ಲಿ ಕೆಲವು ಸಾಮಗ್ರಿಗಳಿದ್ದು (ಅಲ್ಕೊಹಾಲ್ ಅಥವಾ ಡೆಕ್ಸ್ ಟ್ರೊಮಿಥೊರ್ಫಾನ್), ಇವುಗಳಿಂದಾಗಿ ಈ ಔಷಧಗಳ ಸೇವನೆ ಚಟವಾಗಿ ಬದಲಾಗಬಹುದು. ಈ ಔಷಧಗಳ ಸೇವನೆ ಚಟವಾಗಿ ರೂಪುಗೊಂಡರೆ ಸೆಳವು, ಸೈಕೋಸಿಸ್, ಹೊಟ್ಟೆ ಹಿಡಿದುಕೊಳ್ಳುವುದು ಮತ್ತು ಮೂಛೆì ತಪ್ಪುವುದು ಉಂಟಾಗಬಹುದು.
ಮಿಥ್ಯ 4: ಶಿಫಾರಸಿನ ಅನ್ವಯ ತೆಗೆದುಕೊಳ್ಳಬೇಕಾದ ಔಷಧಗಳು ಮತ್ತು ಒಟಿಸಿ ಔಷಧಗಳನ್ನು ಜತೆಜತೆಯಾಗಿ ಯಾವುದೇ ಸಮಸ್ಯೆ ಇಲ್ಲದೆ ಉಪಯೋಗಿಸಬಹುದು.
ಸತ್ಯ: ಶಿಫಾರಸಿನ ಅನ್ವಯ ತೆಗೆದುಕೊಳ್ಳಬೇಕಾದ ಮತ್ತು ಶಿಫಾರಸು ಅಗತ್ಯವಿಲ್ಲದ, ಗಿಡಮೂಲಿಕೆಗಳು, ವಿಟಾಮಿನ್‌ಗಳು ಮತ್ತು ಖನಿಜಾಂಶಗಳಂತಹ ಔಷಧಗಳು ಪರಸ್ಪರ ಪ್ರತಿಕ್ರಿಯಿಸಬಹುದಾಗಿದೆ. ನೀವು ಉಪಯೋಗಿಸುವ ಒಟಿಸಿ ಔಷಧಗಳ ಬಗ್ಗೆ ನಿಮ್ಮ ವೈದ್ಯರಿಗೆ ಮಾಹಿತಿ ನೀಡಲೇಬೇಕು.
ಮಿಥ್ಯ 5: ಜೆನರಿಕ್ ಔಷಧಗಳು ಬ್ರ್ಯಾಂಡೆಡ್ ಔಷಧಗಳಷ್ಟು ಉತ್ತಮವಲ್ಲ.
ಸತ್ಯ: ಜೆನರಿಕ್ ಔಷಧಗಳು ಪೇಟೆಂಟ್ ಇಲ್ಲದ ಬ್ರ್ಯಾಂಡೆಡ್ ಔಷಧಗಳ ತದ್ರೂಪಿಗಳಾಗಿವೆ. ಇವುಗಳು ಕೂಡ ಎಫ್ಡಿಎ ನಿಯಮಗಳ ಪ್ರಕಾರವೇ ಬ್ರ್ಯಾಂಡೆಡ್ ಔಷಧಗಳಂತೆ ಡೋಸೇಜ್, ಸುರಕ್ಷೆ, ಸಾಮರ್ಥ್ಯ, ಗುಣಮಟ್ಟ ಮತ್ತು ಪರಿಣಾಮಕಾರಿತ್ವ ಹೊಂದಿರುತ್ತವೆ. ಆದರೆ ಜೆನರಿಕ್ ಔಷಧಗಳ ಉತ್ಪಾದಕರು ಸ್ಟಾರ್ಟ್‌ಅಪ್ ಅಥವಾ ಅಧ್ಯಯನ ವೆಚ್ಚ ಹೊಂದಿಲ್ಲದೆ ಇರುವುದರಿಂದ ಅವು ಎಲ್ಲವೂ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.
ಆ್ಯಕ್ಟಿವ್ ಇನ್‌ಗ್ರೀಡಿಯೆಂಟ್‌ಗಳು ಬ್ರ್ಯಾಂಡೆಡ್ ಔಷಧಗಳ ಆ್ಯಕ್ಟಿವ್ ಇನ್‌ಗ್ರೀಡಿಯೆಂಟ್‌ಗಳಿಗೆ ಸರಿಸಮಾನವಾಗಿದ್ದರೆ ಒಟಿಸಿ ಔಷಧಗಳ ಜನರಿಕ್ ಔಷಧಗಳು ಕೂಡ ಉತ್ತಮವೇ. ಆದರೆ ಮೂರ್ಛೆ ರೋಗದಂತಹ ಕೆಲವು ಕಾಯಿಲೆಗಳಿಗೆ ಉಪಯೋಗಿಸುವ ಔಷಧಗಳ ಆ್ಯಕ್ಟಿವ್ ಇನ್‌ಗ್ರೀ ಡಿಯೆಂಟ್‌ಗಳಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸ ಇದ್ದರೂ ಪರಿಣಾಮಕಾರಿತ್ವದಲ್ಲಿ ವ್ಯತ್ಯಯ ಉಂಟಾಗುವುದರಿಂದ ಇವುಗಳ ಜನರಿಕ್ ಪ್ರತಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ಇರಬೇಕಾಗುತ್ತದೆ.
ಮಿಥ್ಯ 6: ಗಿಡಮೂಲಿಕೆ ಔಷಧಗಳು ಸುರಕ್ಷಿತ.
ಸತ್ಯ: ಔಷಧ ಮಹಾನಿಯಂತ್ರಕರು ಪೂರಕ ಮತ್ತು ಪರ್ಯಾಯ ಔಷಧ ಕ್ರಮಗಳ ಬಗ್ಗೆ ನಿಯಂತ್ರಣಗಳನ್ನು ಹೊಂದಿಲ್ಲ ಹಾಗೂ ಅವುಗಳ ಗುಣಮಟ್ಟಗಳ ಬಗ್ಗೆಯೂ ಖಾತರಿ ಇಲ್ಲ. ಆದರೆ ಗಿಡಮೂಲಿಕೆ ಔಷಧಗಳ ಅನೇಕ ಅಡಕ ವಸ್ತುಗಳು ಅಲೋಪತಿಕ್ ಔಷಧಗಳ ಜತೆಗೆ ಪ್ರತಿಕ್ರಿಯೆ ಉಂಟು ಮಾಡಬಹುದಾಗಿರುತ್ತದೆ. ನೀವು ಉಪಯೋಗಿಸುವ ಗಿಡಮೂಲಿಕೆ ಉತ್ಪನ್ನಗಳ ಬಗ್ಗೆ ನಿಮ್ಮ ವೈದ್ಯರಿಗೆ ಮಾಹಿತಿ ನೀಡಿ.
ಸುಳ್ಳು 7: ಒಟಿಸಿ ಅಥವಾ ಶಿಫಾರಸಿನ ಅನ್ವಯ ತೆಗೆದುಕೊಳ್ಳಬೇಕಾದ ಔಷಧಗಳನ್ನು ನಮ್ಮ ದೇಹ ಹೇಗೆ ಸಂಸ್ಕರಿಸುತ್ತದೆ ಎಂಬುದನ್ನು ಸೇವಿಸುವ ಆಹಾರ ಬದಲಾಯಿಸಬಹುದು.
ನಿಜ: ಆಹಾರವು ಎಲ್ಲ ಒಟಿಸಿ ಔಷಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಾವು ಏನನ್ನು ತಿನ್ನುತ್ತೇವೆ ಮತ್ತು ಯಾವಾಗ ತಿನ್ನುತ್ತೇವೆ ಎಂಬುದು ಕೆಲವು ಔಷಧಗಳಿಗೆ ಮಾತ್ರ ಅನ್ವಯವಾಗುತ್ತದೆ. ಕೆಲವು ಔಷಧಗಳನ್ನು ಖಾಲಿ ಹೊಟ್ಟೆಯಲ್ಲೇ ತೆಗೆದುಕೊಳ್ಳಬೇಕಾಗಿರುತ್ತದೆ, ಅಂದರೆ ಊಟ ಉಪಾಹಾರಕ್ಕಿಂತ 1 ತಾಸು ಮುನ್ನ ಅಥವಾ 2 ತಾಸು ಬಳಿಕ ತೆಗೆದುಕೊಳ್ಳಬೇಕಿರುತ್ತದೆ. ಕೆಲವು ಔಷಧಗಳನ್ನು ಆಹಾರ ಸೇವನೆಯ ಬಳಿಕ ತೆಗೆದುಕೊಂಡರಷ್ಟೇ ದೇಹ ಸರಿಯಾಗಿ ಹೀರಿಕೆಯಾಗುತ್ತದೆ. ಆದ್ದರಿಂದ ಆಹಾರ ಸೇವನೆಗೆ ಸಂಬಂಧಿಸಿ ಔಷಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ನಿಮ್ಮ ವೈದ್ಯರ ಜತೆಗೆ ಸರಿಯಾಗಿ ಸಮಾಲೋಚಿಸಿ.
ಅಂಗೀಕೃತ ಒಟಿಸಿ ಔಷಧಗಳನ್ನು ಉಪಯೋಗಿಸುವುದರಿಂದ ಪ್ರಯೋಜನಗಳು
– ಲಘು ಸ್ವರೂಪದ ಅಥವಾ ತಾನಾಗಿ ನಿಯಂತ್ರಣಕ್ಕೆ ಬರುವ ಅನಾರೋಗ್ಯಗಳಿಗೆ ಚಿಕಿತ್ಸೆಯನ್ನು ಲಭ್ಯವಾಗಿಸುತ್ತದೆ.
– ಗ್ರಾಹಕರಿಗೆ ಸಮಯ ಉಳಿತಾಯ ಮಾಡಿಕೊಡುತ್ತದೆ.
– ವೈದ್ಯರು ಲಘು ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಸಮಯ ವ್ಯರ್ಥವಾಗಿಸುವುದರ ಬದಲು ಹೆಚ್ಚು ಗಂಭೀರವಾಗಿರುವ ಅನಾರೋಗ್ಯಗಳತ್ತ ಗಮನ ಹರಿಸಲು ಸಾಧ್ಯವಾಗಿಸುತ್ತದೆ. ವೈದ್ಯರ ಸಂಖ್ಯೆ ಕಡಿಮೆ ಇರುವ ಭಾರತದಂತಹ ದೇಶದಲ್ಲಿ ಇದು ವಿಶೇಷ ಸಹಾಯ ಮಾಡುತ್ತದೆ.
– ಔಷಧ ಅಂಗಡಿಯವರು ರೋಗಿ ಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಸಾಧ್ಯವಾಗುತ್ತದೆ.
ಒಟಿಸಿ ಔಷಧಗಳ ವಿಚಾರದಲ್ಲಿ ಕೆಲವು ಸಾಮಾನ್ಯ ಎಚ್ಚರಿಕೆಯ ಅಂಶಗಳು: ಅಸಮರ್ಪಕ ಬಳಕೆ ಮತ್ತು ಅಡ್ಡ ಪರಿಣಾಮಗಳು
ಒಟಿಸಿ ಔಷಧಗಳ ಅಪಾಯಗಳ ಬಗ್ಗೆ ನಾವು ತಿಳಿದುಕೊಳ್ಳುವುದರಿಂದ ಅವುಗಳ ಬಳಕೆಯನ್ನು ತಡೆಯುವುದು ಸಾಧ್ಯ.
– ಅಡ್ಡ ಪರಿಣಾಮಗಳು ಸಾಮಾನ್ಯ ಮತ್ತು ಲಘು ಸ್ವರೂಪದಲ್ಲಿರುತ್ತವೆ. ಆದರೆ ಕೆಲವು ತೊಂದರೆದಾಯಕ. ಅವುಗಳಲ್ಲಿ ಕೆಲವೆಂದರೆ, ಹೊಟ್ಟೆ ತೊಳೆಸುವುದು, ಜಡತ್ವ ಮತ್ತು ಗ್ಯಾಸ್ಟ್ರೈಟಿಸ್. ಬಹುತೇಕ ಬಾರಿ ಇವು ಗಮನಕ್ಕೆ ಬಾರದೆಯೇ ಇರಬಹುದು ಮತ್ತು ವಿಶೇಷ ಚಿಕಿತ್ಸೆಯೇನೂ ಬೇಕಾಗಿರುವುದಿಲ್ಲ.
– ಅಲರ್ಜಿ ಅಡ್ಡ ಪರಿಣಾಮಗಳ ಲಕ್ಷಣಗಳಲ್ಲಿ ತುರಿಕೆ, ಚರ್ಮದಲ್ಲಿ ದದ್ದುಗಳು ಮತ್ತು ಉಸಿರಾಟ ಸಮಸ್ಯೆ ಸೇರಿರುತ್ತವೆ. ಈ ಲಕ್ಷಣಗಳು ಕಂಡುಬಂದರೆ ನೀವು ನಿಮ್ಮ ವೈದ್ಯರ ಸಹಾಯ ಪಡೆಯಬೇಕು.
– ಎರಡೆರಡು ಔಷಧ ತೆಗೆದುಕೊಳ್ಳುವ ಅಪಾಯವಿದೆ. ನೀವು ಒಂದೇ ಬಗೆಯ ಎರಡು ಔಷಧಗಳನ್ನು ತೆಗೆದುಕೊಂಡರೆ ಮೂತ್ರಪಿಂಡಗಳು ಮತ್ತು ಪಿತ್ತಜನಕಾಂಗಕ್ಕೆ ಹಾನಿಯನ್ನು ಉಂಟುಮಾಡುವ ಅಪಾಯಕಾರಿ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಉದಾಹರಣೆಗೆ, ಸಂಧಿನೋವಿಗೆ ನಿಮಗೆ ವೈದ್ಯರು ಡಿಕ್ಲೊಫೆನಾಕ್ ಔಷಧವನ್ನು ಶಿಫಾರಸು ಮಾಡಿದ್ದು, ನೀವು ಔಷಧ ಮಳಿಗೆಯಿಂದ ಇಬುಪ್ರೊಫೇನ್ ಕೊಂಡು ಉಪಯೋಗಿಸುವುದು.
– ದೇಹದಲ್ಲಿ ತದ್ವಿರುದ್ಧ ಪರಿಣಾಮಗಳನ್ನು ಉಂಟುಮಾಡುವಂಥ ಆ್ಯಕ್ಟಿವ್ ಇನ್‌ಗಿÅàಡಿಯೆಂಟ್‌ಗಳನ್ನು ಹೊಂದಿರುವ ಔಷಧಗಳನ್ನು ಉಪಯೋಗಿಸುವುದು ಅಪಾಯಕಾರಿ. ಉದಾಹರಣೆಗೆ, ಸ್ವಯಂ ಔಷಧವಾಗಿ ಡಿಕಂಜಸ್ಟಂಟ್‌ಗಳನ್ನು ಉಪಯೋಗಿಸುವುದರಿಂದ ರಕ್ತದೊತ್ತಡ ಏರಿಕೆಯಾಗುತ್ತದೆ. ಇದು ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳಿಗೆ ತದ್ವಿರುದ್ಧ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ.
– ಜತೆಗೆ, ಒಂದು ಔಷಧವು ಇನ್ನೊಂದು ಔಷಧವನ್ನು ನಿಮ್ಮ ದೇಹವು ಹೀರುವ, ಹರಡುವ ಅಥವಾ ಸಂಸ್ಕರಿಸುವ ವಿಧಾನದಲ್ಲಿ ಬದಲಾವಣೆಯನ್ನು ಉಂಟುಮಾಡಬಹುದು. ಉದಾಹರಣೆಗೆ, ಸ್ವಯಂ ಔಷಧವಾಗಿ ಬಳಸುವ ಕೆಲವು ಆ್ಯಂಟಿಬಯಾಟಿಕ್‌ಗಳು ಆ್ಯಂಟಿಪೈಲೆಪ್ಟಿಕ್ ಔಷಧಗಳ ಕಾರ್ಯವಿಧಾನದ ಮಧ್ಯ ಪ್ರವೇಶಿಸಬಹುದು.
– ಸ್ವಯಂ ಔಷಧವು ಚಟವಾಗಿ ಬಿಡುವ ಅಪಾಯವನ್ನೂ ಹೊಂದಿದೆ. ತಪ್ಪು ಬಳಕೆ ಮತ್ತು ಅತಿಯಾದ ಬಳಕೆ ಎರಡರಿಂದಲೂ ಔಷಧ ಅವಲಂಬನೆ ಉಂಟಾಗಬಹುದು. ಸಾಮಾನ್ಯವಾಗಿ ಚಟವಾಗಿಬಿಡುವ ಔಷಧಗಳು ಕೆಮ್ಮು ಮತ್ತು ಶೀತಕ್ಕೆ ಉಪಯೋಗಿಸುವ ಔಷಧಗಳು, ನಿದ್ರಾ ಪ್ರಚೋದಕಗಳು, ಅನಾಲೆjಸಿಕ್‌ಗಳು, ಆ್ಯಂಟಾಸಿಡ್‌ಗಳು ಮತ್ತು ಲ್ಯಾಕ್ಸೇಟಿವ್‌ಗಳು.
– ಸ್ಕಿನ್ ಕ್ರೀಮ್‌ಗಳು ಮತ್ತು ಮುಲಾಮುಗಳನ್ನು ಸ್ವಯಂ ಔಷಧವಾಗಿ ಬಳಸಲಾಗುತ್ತದೆ. ಅವುಗಳಲ್ಲಿ ಸ್ಟಿರಾಯ್ಡಗಳು, ಹೈಡ್ರೊಕ್ವಿನೋನ್, ಆ್ಯಂಟಿಬಯಾಟಿಕ್‌ಗಳು ಇತ್ಯಾದಿ ಸಾಮಗ್ರಿಗಳಿರುತ್ತವೆ. ಇವುಗಳನ್ನು ವೈದ್ಯರ ಸಲಹೆ ಇಲ್ಲದೆ ಸತತವಾಗಿ ಉಪಯೋಗಿಸುವುದರಿಂದ ಸನ್‌ಬರ್ನ್, ಚರ್ಮ ಕಪ್ಪಾಗುವುದು, ಚರ್ಮ ತೆಳುವಾಗುವಂಥ ಸಮಸ್ಯೆಗಳು ಉಂಟಾಗಬಹುದು.
– ಕಂಜಕ್ಟಿವಿಟೀಸ್ ಅಥವಾ ಕಣ್ಣು ಒಣಗುವುದಕ್ಕೆ ಐ ಡ್ರಾಪ್ ಗಳನ್ನು ಸ್ವಯಂ ಔಷಧವಾಗಿ ಉಪಯೋಗಿಸಲಾಗುತ್ತದೆ. ಈ ಹಿಂದೆ ವೈದ್ಯರು ಶಿಫಾರಸು ಮಾಡಿರುವುದು ಅಥವಾ ಕುಟುಂಬ ಸದಸ್ಯರು ಯಾ ನೆರೆಹೊರೆಯವರಿಗೆ ವೈದ್ಯರು ಶಿಫಾರಸು ಮಾಡಿದ್ದನ್ನು ಆಧರಿಸಿ ಹೀಗೆ ಮಾಡಲಾಗುತ್ತದೆ. ಇವುಗಳನ್ನು ವೈದ್ಯರ ಸಲಹೆಯಿಲ್ಲದೆ ದೀರ್ಘಕಾಲ ಉಪಯೋಗಿಸುವುದು ಸುರಕ್ಷಿತವಲ್ಲ.
– ಆ್ಯಂಟಿಬಯಾಟಿಕ್‌ಗಳ ಅಸಮರ್ಪಕ ಬಳಕೆಯಿಂದ ಔಷಧ ಪ್ರತಿರೋಧ ಗುಣ ಉಂಟಾಗಬಹುದು. ವೈದ್ಯರ ಶಿಫಾರಸಿನೊಂದಿಗೆ ಮಾತ್ರ ಬಳಸಬೇಕಾದ ಆ್ಯಂಟಿಮೈಕ್ರೋಬಿಯಲ್ ಔಷಧಗಳನ್ನು ಭಾರತದಲ್ಲಿ ಸ್ವಯಂ ಔಷಧವಾಗಿ ಬಳಸುತ್ತಿರುವುದು ಕಳವಳಕಾರಿಯಾಗಿದೆ. ಒಮ್ಮೆ ಹೀಗೆ ಉಪಯೋಗಿಸಿದರೆ ಮುಂದಿನ ಬಾರಿ ನಿಜವಾಗಿಯೂ ಅದರ ಅಗತ್ಯವಿದ್ದಾಗ ಅದು ಕೆಲಸ ಮಾಡುವುದಿಲ್ಲ.
– ಒಟಿಸಿ ಔಷಧಗಳ ಬಳಕೆಯ ವಿಧಾನಗಳು ಬಹಳ ಮುಖ್ಯವಾಗಿದ್ದರೂ ಲೇಬಲ್‌ಗಳಲ್ಲಿ ನೀಡುತ್ತಿರುವ ಮಾಹಿತಿ ಗಳು ಸಾಕಾಗುತ್ತಿಲ್ಲ. ಜತೆಗೆ ಅತೀ ಸಣ್ಣ ಅಕ್ಷರಗಳಲ್ಲಿ, ಅತೀ ಸಣ್ಣ ಸ್ಥಳದಲ್ಲಿ ಅವುಗಳನ್ನು ಮುದ್ರಿಸಲಾಗಿರುತ್ತದೆ. ಇದ
ರಿಂದಾಗಿ ರೋಗಿಗಳಿಗೆ ಅದು ತಿಳಿಯುತ್ತಿಲ್ಲ. ಪರಿಣಾಮವಾಗಿ ರೋಗಿಗಳು ಸೂಚನೆಗಳನ್ನು ಪಾಲಿಸಲಾಗುತ್ತಿಲ್ಲ.
ಭಾರತದಲ್ಲಿ ಸ್ವಯಂ
ಔಷಧಗಳ ಅಸಮರ್ಪಕ
ಬಳಕೆಗೆ ಕಾರಣಗಳೇನು?
-ಒಟಿಸಿ ಔಷಧಗಳು ಮತ್ತು ಆ್ಯಂಟಿಬಯಾಟಿಕ್‌ಗಳಂತಹ ಔಷಧಗಳು ಸುಲಭವಾಗಿ ಲಭ್ಯವಾಗುತ್ತಿರುವುದು.
– ಸ್ವಯಂ ಔಷಧಗಳ ಪರಿಣಾಮ ತೀರಾ ಲಘುವಾಗಿದ್ದು, ಹಾನಿಯಾಗದು ಎಂಬ ಭಾವನೆ ಜನರಲ್ಲಿ ಇರುವುದು.
– ವೈದ್ಯರ ಶಿಫಾರಸು ಅಗತ್ಯವಿಲ್ಲವಾದ್ದರಿಂದ ಸಮಯ ಉಳಿತಾಯವಾಗುತ್ತದೆ ಎಂಬ ಭಾವನೆ.
– ಆ್ಯಕ್ಟಿವ್ ಇನ್‌ಗಿಡಿಯೆಂಟ್‌ಗಳು, ಅಡ್ಡ ಪರಿಣಾಮಗಳು ಮತ್ತು ತದ್ವಿರುದ್ಧ ಪರಿಣಾಮಗಳ ಬಗ್ಗೆ ಮಾಹಿತಿಯ ಕೊರತೆ.
– ಹಿರಿಯರು, ಅನಕ್ಷರಸ್ಥರು ಔಷಧಗಳ ಲೇಬಲ್‌ಗಳಲ್ಲಿ ಮುದ್ರಿತವಾಗಿರುವ ಸುರಕ್ಷಾ ಮಾಹಿತಿಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಅಸಮರ್ಥರಾಗಿರುವುದು.
– ಭಾರತದಲ್ಲಿ ಒಟಿಸಿ ಔಷಧಗಳಿಗೆ ನಿಯಂತ್ರಕ ಕಾನೂನು ಇಲ್ಲದೆ ಇರುವುದು.
– ಸಮಯದ ಕೊರತೆ ಮತ್ತು ಇಂತಹುದೇ ರೋಗ ಲಕ್ಷಣಗಳು ಈ ಹಿಂದೆ ಕಾಣಿಸಿಕೊಂಡಿದ್ದಾಗ ಅದೇ ಔಷಧ ಉಪಯೋಗಿಸಿದ್ದರಿಂದ ರೋಗಿಗಳಲ್ಲಿ ಆತ್ಮವಿಶ್ವಾಸ ಉಂಟಾಗಿರುವುದು.
– ಇಂಟರ್‌ನೆಟ್, ಸೋಶಿಯಲ್ ಮೀಡಿಯಾ ಮತ್ತು ಜಾಹೀರಾತುಗಳ ಅವಲಂಬನೆ.
– ಆರೋಗ್ಯ ಸೇವೆಯ ವೆಚ್ಚ ಹೆಚ್ಚಾಗಿರುವುದು, ಆರೋಗ್ಯ ಸೇವೆ ದುರ್ಲಭವಾಗಿರುವುದು, ವೈದ್ಯರ ಶುಲ್ಕ ಉಳಿಸುವುದು ಇತ್ಯಾದಿ ಕಾರಣಗಳಿಂದ ಸಮಾಜದ ಮಧ್ಯಮ ಮತ್ತು ಕಡಿಮೆ ಆದಾಯ ವರ್ಗದವರಲ್ಲಿ ಸ್ವಯಂ ಔಷಧ ಪ್ರವೃತ್ತಿ ಹೆಚ್ಚುತ್ತಿದೆ.
– ಈ ಹಿಂದಿನ ವೈದ್ಯರ ಶಿಫಾರಸು ಇರುವುದು, ಗೆಳೆಯರು/ ಬಂಧುಗಳ ಶಿಫಾರಸು, ಔಷಧ ಮಳಿಗೆಯವರ ಸಲಹೆಗಳ ಅನುಸಾರ ಸಮಾಜದ ಶಿಕ್ಷಿತ ಸಮುದಾಯದಲ್ಲೂ ಸ್ವಯಂ ಔಷಧ ಬಳಕೆಯ ಪ್ರವೃತ್ತಿ ಹೆಚ್ಚಾಗಿದೆ.
ಸ್ವಯಂ ಔಷಧ ಬಳಕೆಯಿಂದ
ತೊಂದರೆಗೆ ಸಿಲುಕುವ
ಅಪಾಯ ಹೆಚ್ಚು ಇರುವವರು
ಸ್ವಯಂ ಔಷಧಗಳನ್ನು ಯಾವಾ ಗಲಾದರೊಮ್ಮೆ ಉಪಯೋಗಿಸುವ ಆರೋಗ್ಯವಂತ ವಯಸ್ಕರು ಅಡ್ಡ ಪರಿಣಾಮಗಳಿಗೆ ಒಳಗಾಗುವ ಅಪಾಯ ಕಡಿಮೆ. ಆದರೆ ಕೆಲವರಿಗೆ ಅಪಾಯ ಹೆಚ್ಚಿರುತ್ತದೆ. ಇಂಥವರಲ್ಲಿ ಸಣ್ಣ ವಯಸ್ಸಿನ ಮಕ್ಕಳು, ವಯೋವೃದ್ಧರು, ಒಂದಕ್ಕಿಂತ ಹೆಚ್ಚು ಔಷಧಗಳನ್ನು ಸೇವಿಸುತ್ತಿರುವವರು ಸೇರಿದ್ದಾರೆ. ಕೆಳಕಂಡ ಅನಾರೋಗ್ಯಗಳನ್ನು ಹೊಂದಿರುವವರಿಗೂ ಅಪಾಯ ಹೆಚ್ಚಿರುತ್ತದೆ:
– ಅಸ್ತಮಾದಂತಹ ಉಸಿರಾಟ ಸಂಬಂಧಿ ಸಮಸ್ಯೆಗಳಿರುವವರು.
– ಹೃದ್ರೋಗಿಗಳು
– ಅಧಿಕ ರಕ್ತದೊತ್ತಡ ಉಳ್ಳವರು
– ಮಧುಮೇಹಿಗಳು
– ಅಪಸ್ಮಾರ ರೋಗಿಗಳು
– ಪಾರ್ಕಿನ್ಸನ್ ಕಾಯಿಲೆ ಹೊಂದಿರುವವರು
– ಮನೋರೋಗಿಗಳು
– ಪ್ರಾಸ್ಟೇಟ್ ಗ್ರಂಥಿಯ ಊತದ ಸಮಸ್ಯೆ ಹೊಂದಿರುವವರು
– ರೋಗ ನಿರೋಧಕ ವ್ಯವಸ್ಥೆಯಲ್ಲಿ ತೊಂದರೆ ಹೊಂದಿರುವವರು
– ಥೈರಾಯ್ಡ ಸಮಸ್ಯೆ ಇರುವವರು
– ರಕ್ತಸ್ರಾವ ಅಥವಾ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುವವರು
– ಮೂತ್ರಪಿಂಡ ಅಥವಾ ಪಿತ್ತಕೋಶ ಸಮಸ್ಯೆ ಇರುವವರು
ಗ್ಲುಕೊಮಾ ಗೌಟ್ ಸಮಸ್ಯೆ ಇರುವವರು
ಸ್ವಯಂ ಔಷಧ ನಿಯಂತ್ರಕ
ನಿಯಮಗಳ ಅಗತ್ಯ
– ಚಿಕಿತ್ಸೆಯ ವೆಚ್ಚ ಕಡಿಮೆ ಮಾಡಲು
– ನೋಂದಣಿಯಾಗದ ನಕಲಿ ವೈದ್ಯರ ಹಾವಳಿಯನ್ನು ಕಡಿಮೆ ಮಾಡಲು
– ಗ್ರಾಮ ಮಟ್ಟದಲ್ಲಿಯೇ ಎಲ್ಲರಿಗೂ ಮನೆಬಾಗಿಲಿನಲ್ಲಿಯೇ ಪ್ರಾಥಮಿಕ ಆರೋಗ್ಯ ಸೇವೆ ಒದಗುವಂತಾಗಲು
– ನೋಂದಾಯಿತ ಔಷಧ ಮಾರಾಟಗಾರರ ಸಶಕ್ತೀಕರಣಕ್ಕಾಗಿ ಮತ್ತು ಅವರು ಕಾರ್ಯನಿರ್ವಹಿಸಲು ಕಾನೂನುಬದ್ಧ ವೇದಿಕೆ ಒದಗಿಸಲು
– ಬೇಜವಾಬ್ದಾರಿಯುತ ಸ್ವಯಂ ಔಷಧ ಪ್ರವೃತ್ತಿಯನ್ನು ಹೋಗಲಾಡಿಸಲು
ಭಾರತದಲ್ಲಿ ಸ್ವಯಂ
ಔಷಧ ಬಳಕೆಯನ್ನು
ಸಮರ್ಪಕಗೊಳಿಸುವುದು
– ಒಟಿಸಿ ಔಷಧಗಳಿಂದ ಸ್ವಯಂ ಔಷಧ ಬಳಕೆಯನ್ನು ಸುಸೂತ್ರಗೊಳಿಸಲು ವಿದೇಶಗಳಲ್ಲಿ ಈ ಕೆಳಗಿನ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ. ಭಾರತದಲ್ಲಿ ಸ್ವಯಂ ಔಷಧಗಳ ಬಳಕೆಯನ್ನು ವಿಧ್ಯುಕ್ತಗೊಳಿಸಲು ಸರಕಾರವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ.
– ಔಷಧ ಶಿಫಾರಸುಗಳ ಮೇಲೆ ನಿಗಾ
– ಔಷಧ ಮಾರಾಟಗಾರರ ಅರಿವು ಹೆಚ್ಚಿಸುವುದು
– ಸ್ವಯ ಔಷಧ ಬಳಕೆಯ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು
– ವಿದ್ಯುನ್ಮಾನ ಮಾಧ್ಯಮಗಳ ಬಳಕೆ
– ಔಷಧಗಳ ಮೇಲೆ ಸೂಚನೆಗಳು, ಎಚ್ಚರಿಕೆಗಳು ಮತ್ತು ಬಳಕೆಯ ವಿಧಾನಗಳ ಬಗ್ಗೆ ಸಮರ್ಪಕವಾದ ಮಾಹಿತಿ ಮುದ್ರಣ
– ಒಟಿಸಿ ಔಷಧಗಳ ಮಾಹಿತಿ ಗಳನ್ನು ಸ್ಥಳೀಯ ಭಾಷೆಗಳಲ್ಲಿ ಮುದ್ರಿಸುವುದು
– ಡೋಸೇಜ್ ಮಾಹಿತಿ ಮುದ್ರಣ, ವಿಶೇಷವಾಗಿ ಮಕ್ಕಳಿಗೆ
– ಹಳ್ಳಿಗಳು ಮತ್ತು ದುರ್ಗಮ ಪ್ರದೇಶಗಳಿಗೆ ಒಟಿಸಿ ಔಷಧಗಳ ಸರಬರಾಜು ಮತ್ತು ವಿತರಣೆ
– ಒಟಿಸಿ ಔಷಧಗಳನ್ನು ವರ್ಗೀ ಕರಿಸಲು ಉಪ ಸಮಿತಿಗಳ ರಚನೆ.
-ಡಾ| ಸಾಧನಾ ಹೊಳ್ಳ
ಅಸಿಸ್ಟೆಂಟ್ ಪ್ರೊಫೆಸರ್,
ಡಾ| ವೀಣಾ ನಾಯಕ್
ಅಸೋಸಿಯೇಟ್ ಪ್ರೊಫೆಸರ್, ಫಾರ್ಮಕಾಲಜಿ ವಿಭಾಗ
ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.