War: ಜಾಗತಿಕ ಸಂಬಂಧದ‌ ಮೇಲೆ ಯುದ್ಧದ ಕರಿನೆರಳು


Team Udayavani, Oct 29, 2023, 11:35 PM IST

isreal tanks

ಕಳೆದ ವರ್ಷದ ಆರಂಭದಲ್ಲಿ ಶುರುವಾದ ರಷ್ಯಾ ಮತ್ತು ಉಕ್ರೇನ್‌ ಯುದ್ಧ ಇಡೀ ಜಗತ್ತನ್ನೇ ಇಬ್ಭಾಗ ಮಾಡಿತ್ತು. ಆಗ ರಷ್ಯಾ ಪರ ಮತ್ತು ಉಕ್ರೇನ್‌ ಪರ ಎಂಬ ಎರಡು ಗುಂಪುಗಳು ಸೃಷ್ಟಿಯಾಗಿ, ಜಗತ್ತಿನ ದ್ವಿಪಕ್ಷೀಯ ಸಂಬಂಧಗಳು, ಆರ್ಥಿಕತೆ ಎಲ್ಲವೂ ಬುಡಮೇಲಾಗುವಂಥ ಪರಿಸ್ಥಿತಿ ತಲೆದೋರಿತ್ತು. ಇಂಥ ಹೊತ್ತಿನಲ್ಲಿ ಯುದ್ಧದಿಂದ ಯಾರೂ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಹೇಳಿದ್ದ ಭಾರತ, ಎರಡೂ ದೇಶಗಳ ಪರವಾಗಿ ಅಥವಾ ವಿರುದ್ಧವಾಗಿ ನಿಲ್ಲುವುದಿಲ್ಲ. ಮೊದಲಿನಿಂದಲೂ ನಾವು ಅಲಿಪ್ತ ನೀತಿ ಅನುಸರಿಸಿಕೊಂಡು ಬಂದಿದ್ದು, ಅದನ್ನೇ ಈಗಲೂ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿತ್ತು. ಈ ಮೂಲಕ ಎರಡೂ ದೇಶಗಳ ಜತೆಗೂ ಮೊದಲಿನಷ್ಟೇ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನ ಮಾಡಿತ್ತು.

ಈಗ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಜಾಗತಿಕವಾಗಿ ಮತ್ತೆ ಅಂಥದ್ದೇ ಒಂದು ಸಂದಿಗ್ಧ ಸ್ಥಿತಿಗೆ ಕಾರಣವಾಗಿದೆ. ಈಗ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧ ಎಂಬುದಕ್ಕಿಂತ, ಇದನ್ನು ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಎಂದೇ ಬಿಂಬಿಸಲಾಗುತ್ತಿದೆ.

ಅ. 7ರಂದು ಇಸ್ರೇಲ್‌ಗೆ ನುಗ್ಗಿ ಹಮಾಸ್‌ ಉಗ್ರರು ನರಮೇಧ ಮಾಡಿದ ಬಳಿಕ, ಜಗತ್ತಿನ ಬಹುತೇಕ ದೇಶಗಳು ಈ ಕೃತ್ಯವನ್ನು ಖಂಡಿಸಿ, ಇಸ್ರೇಲ್‌ ಜತೆಗೆ ನಿಂತವು.

ಈ ಘಟನೆ ಬಳಿಕ, ತೀವ್ರ ಆಕ್ರೋಶಗೊಂಡಿದ್ದ ಇಸ್ರೇಲ್‌, ಹಮಾಸ್‌ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಅವಿರತವಾಗಿ ದಾಳಿ ನಡೆಸುತ್ತಿದೆ. ಈ ದಾಳಿ ಗಾಜಾ ಪಟ್ಟಿಯ ಜನರ ಜೀವನವನ್ನು  ಅಕ್ಷರಶಃ ಅಲ್ಲೋಲ ಕಲ್ಲೋಲ ಮಾಡಿದ್ದು, ಬಹುದೊಡ್ಡ ಮಾನವತೆಯ ಸಮಸ್ಯೆ ಉಂಟಾಗಿದೆ. ಇಸ್ರೇಲ್‌ನ ದಾಳಿಯಿಂದಾಗಿ ಮಹಿಳೆಯರು, ಮಕ್ಕಳೇ ಹೆಚ್ಚು ಸಾವನ್ನಪ್ಪುತ್ತಿದ್ದು, ಇದು ಅರಬ್‌ ದೇಶಗಳ ಸಿಟ್ಟಿಗೂ ಕಾರಣವಾಗಿದೆ.

ಆರಂಭದಲ್ಲಿ ಇಸ್ರೇಲ್‌ ಪರವಿದ್ದ ಅನುಕಂಪ, ಕಾಲಕ್ರಮೇಣ ಗಾಜಾ ಪಟ್ಟಿಯಲ್ಲಿನ ಸಾಮಾನ್ಯ ಜನರ ಮೇಲೆ ತಿರುಗಿದೆ. ಯುದ್ಧದ ಸರ್ವನಾಶದ ನಿಯಮ ಎಲ್ಲರನ್ನೂ ದಂಗುಬಡಿಸಿದೆ. ಆದರೆ ಈ ಸಮಯದಲ್ಲಿ ಯುದ್ಧ ನಿಲ್ಲಿಸುವ ಯಾವುದೇ ತಂತ್ರಗಾರಿಕೆಗಳಾಗಲಿ, ಸಂಧಾನಗಳಾಗಲಿ ನಡೆಯುವಂತೆ ತೋರುತ್ತಲೇ ಇಲ್ಲ. ಅಲ್ಲದೆ ಸಂಧಾನ ನಡೆಸುವವರು ಯಾರು ಎಂಬ ದೊಡ್ಡ ಪ್ರಶ್ನೆಯೂ ಎದ್ದಿದೆ. ಇದಕ್ಕಿಂತ ಮಿಗಿಲಾಗಿ, ಈಗ ಜಗತ್ತು ಇಬ್ಭಾಗವಾಗುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಈ ಪ್ರಕರಣದಲ್ಲಿ ಇಡೀ ಯೂರೋಪ್‌ ದೇಶಗಳು ಮತ್ತು ಅಮೆರಿಕ, ಇಂಗ್ಲೆಂಡ್‌ನಂಥ ದೇಶಗಳು ಇಸ್ರೇಲ್‌ ಬೆನ್ನಿಗೆ ನಿಂತಿವೆ. ಭಾರತ ಹಮಾಸ್‌ನ ಭಯೋತ್ಪಾದನೆಯನ್ನು ಟೀಕಿಸಿದ್ದು, ಯುದ್ಧದ ವಿಚಾರದಲ್ಲಿ ಯಾವುದೇ ಅಭಿಪ್ರಾಯ ಹೇಳಿಲ್ಲ. ಇದರ ಜತೆಗೆ ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಗೆ ನೆರವಿನ ಹಸ್ತ ಚಾಚಿದ್ದು, ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಪ್ರಮುಖವಾಗಿ ಮೊದಲಿನಿಂದಲೂ ಹೇಳುವ ಹಾಗೆ, ನಾವು ದ್ವಿರಾಷ್ಟ್ರ ನಿಯಮದ ಬೆನ್ನಿಗೆ ಇದ್ದೇವೆ. ಈಗಲೂ ಪ್ಯಾಲೆಸ್ತೀನ್‌ ಜನರೊಂದಿಗೆ ನಾವಿದ್ದೇವೆ ಎಂದು ಹೇಳುವ ಮೂಲಕ ಯುದ್ಧದ ವಿಚಾರದಲ್ಲಿ ಯಾರಧ್ದೋ ಒಂದು ಪರ ನಿಲ್ಲಲ್ಲ ಎಂಬುದನ್ನು ಸೂಕ್ಷ್ಮವಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಹೇಳಿದೆ.

ಇಲ್ಲಿ ಪ್ರಮುಖವಾದುದನ್ನು ಗಮನಿಸಬೇಕು. ಇಸ್ರೇಲ್‌ನಂತೆಯೇ ಭಾರತವೂ ಉಗ್ರರ ಉಪಟಳಕ್ಕೆ ನೊಂದಿರುವ ದೇಶ. ಈ ಹಿಂದೆ ಕಾಶ್ಮೀರದಲ್ಲಿ ಉಗ್ರ ಕೃತ್ಯಗಳು ಸರ್ವೇಸಾಮಾನ್ಯದಂತಿದ್ದರೆ, ದೇಶದೊಳಗೂ ಪಾಕ್‌ ಪ್ರಾಯೋಜಿತ ಉಗ್ರ ಕೃತ್ಯಗಳು ನಡೆಯುತ್ತಲೇ ಇದ್ದವು. ದೇಶದೊಳಗೆ ಈ ಸ್ಫೋಟಗಳು ನಿಂತಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಆಗಾಗ್ಗೆ ಉಗ್ರರ ದುಷ್ಕೃತ್ಯಗಳು ನಡೆಯುತ್ತಲೇ ಇವೆ. ಇದರ ನಿಗ್ರಹಕ್ಕಾಗಿ ಭಾರತೀಯ ಸೇನೆ ಮತ್ತು ಕೇಂದ್ರ ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾ ಬಂದಿದೆ.

ಉಗ್ರ ಕೃತ್ಯಗಳನ್ನು ಕಣ್ಣಾರೆ ಕಂಡಿರುವ ಭಾರತ, ಆರಂಭದಲ್ಲಿ ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದೂ ಅಲ್ಲದೆ ಹಮಾಸ್‌ ಉಗ್ರರ ನರಮೇಧವನ್ನು ಖಂಡಿಸಿತ್ತು. ಈಗಲೂ ಹಮಾಸ್‌ ಉಗ್ರರ ಕುರಿತಾಗಿ ಮೃದು ಧೋರಣೆ ಇರುವಂಥ ಯಾವುದೇ ನಿರ್ಧಾರಗಳನ್ನು ಭಾರತ ಒಪ್ಪಿಕೊಳ್ಳುತ್ತಿಲ್ಲ. ಮುಂದೆಯೂ ಒಪ್ಪಿಕೊಳ್ಳುವುದಿಲ್ಲ ಎಂದು ಸಾರಾಸಗಟಾಗಿ ಹೇಳಿದೆ.

ಇದಕ್ಕೆ ಸಾಕ್ಷಿ ಎಂಬಂತೆ, ವಿಶ್ವಸಂಸ್ಥೆಯಲ್ಲಿ ಅರಬ್‌ ದೇಶಗಳ ಪರವಾಗಿ ಜೋರ್ಡಾನ್‌ ಮಂಡಿಸಿದ್ದ ನಿರ್ಣಯಕ್ಕೆ ಮತ ಹಾಕುವ ವಿಚಾರದಲ್ಲಿ ಭಾರತ ದೂರವೇ ಉಳಿಯಿತು. ಇದರಲ್ಲಿ ಹಮಾಸ್‌ ಉಗ್ರ ಸಂಘಟನೆ ಎಂಬುದನ್ನು ನಮೂದಿಸಿಲ್ಲ ಎಂಬುದು ಭಾರತದ ಪ್ರಮುಖ ಆಕ್ಷೇಪ. ಈ ವಿಚಾರದಲ್ಲಿ ಭಾರತದ ನಿಲುವು ಸರಿಯಾಗಿಯೇ ಇದೆ.

ಇನ್ನು ಕದನ ವಿರಾಮ ವಿಚಾರದಲ್ಲಿ ರಷ್ಯಾ ಮತ್ತು ಚೀನ ಮಂಡಿಸಿದ್ದ ನಿರ್ಣಯಕ್ಕೆ ಭದ್ರತಾ ಮಂಡಳಿಯಲ್ಲಿ ಅಮೆರಿಕ ವಿಟೋ ಅಧಿಕಾರ ಬಳಸಿ ತಡೆ ಹಿಡಿದಿದೆ. ಅಂದರೆ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ಯುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನೂ ಇಬ್ಭಾಗ ಮಾಡಿದೆ. ಇದೆಲ್ಲದಕ್ಕಿಂತ ಪ್ರಮುಖವಾಗಿ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಮುಂದುವರಿದಂತೆ ಜಾಗತಿಕವಾಗಿ ಯಾವ ಪರಿಣಾಮಗಳು ಉಂಟಾಗಬಹುದು ಎಂಬುದನ್ನು ಊಹೆ ಮಾಡುವುದು ಕಷ್ಟವಾಗುತ್ತಿದೆ. ರಷ್ಯಾ-ಉಕ್ರೇನ್‌ ಯುದ್ಧದ ಬಳಿಕ, ಜಾಗತಿಕವಾಗಿ ಹಣದುಬ್ಬರ ಹೆಚ್ಚಳವೂ ಸೇರಿದಂತೆ ಹಲವಾರು ಆರ್ಥಿಕ ಸಮಸ್ಯೆಗಳು ಉದ್ಭವವಾದವು. ಭಾರತವೂ ಸೇರಿದಂತೆ ಬಹುತೇಕ ದೇಶಗಳು ಆಮದು ಮತ್ತು ರಫ್ತು ವಿಚಾರದಲ್ಲಿ ದೊಡ್ಡ ಮಟ್ಟದ ಹೊಡೆತವನ್ನೇ ತಿಂದಿವೆ.

ಈಗ ಸಮಸ್ಯೆ ಬೃಹದಾಕಾರವಾಗಿ ನಿಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಇತ್ತೀಚೆಗಷ್ಟೇ ಇರಾನ್‌ ದೇಶವು, ಒಪೆಕ್‌ ದೇಶಗಳಿಗೆ ಜಾಗತಿಕವಾಗಿ ತೈಲ ಸರಬರಾಜು ಮಾಡದೇ, ಸ್ಥಗಿತಗೊಳಿಸಬೇಕು ಎಂಬ ಸಲಹೆ ನೀಡಿದೆ. ಸದ್ಯ ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಂಥ ದೇಶಗಳು ಒಪ್ಪಿಕೊಳ್ಳದೇ ಇದ್ದರೂ ಮುಂದಿನ ದಿನಗಳಲ್ಲಿ ಯುದ್ಧ ಸ್ಥಗಿತಮಾಡುವ ವಿಚಾರದಲ್ಲಿಯಾದರೂ ಇಂಥ ಕ್ರಮಕ್ಕೆ ಮುಂದಾಗಬಹುದು. ಆಗ ಪ್ರತೀ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 150 ಡಾಲರ್‌ ಮೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ಪ್ಯಾಲೆಸ್ತೀನ್‌ ಪರವಾಗಿ ಸಂಪೂರ್ಣವಾಗಿ ಅರಬ್‌ ದೇಶಗಳು ನಿಂತಿವೆ. ಪ್ಯಾಲೆಸ್ತೀನ್‌ ಜನರ ನೋವನ್ನೂ ಇಡೀ ಜಗತ್ತು ಕೇಳಬೇಕು ಎಂಬುದು ಅವರ ವಾದ. ಟರ್ಕಿ ದೇಶ ಒಂದು ಹೆಜ್ಜೆ ಮುಂದೆ ಹೋಗಿ, ಹಮಾಸ್‌ ಉಗ್ರ ಸಂಘಟನೆಯೇ ಅಲ್ಲ, ಇದೊಂದು ಸ್ವಾತಂತ್ರ್ಯವೀರರ ಪಡೆ ಎಂದು ಹೇಳಿಬಿಟ್ಟಿದೆ. ಅಲ್ಲದೆ ಹಮಾಸ್‌ ಜತೆಗೆ ನಿಂತುಕೊಳ್ಳುವ ಎಲ್ಲ ಸುಳಿವನ್ನೂ ಟರ್ಕಿ ನೀಡಿದೆ.

ಇರಾನ್‌ ಮತ್ತು ಲೆಬೆನಾನ್‌ ದೇಶಗಳು ಹಮಾಸ್‌ ಉಗ್ರರಿಗೆ ಸರ್ವ ರೀತಿಯಲ್ಲೂ ಸಹಾಯ ಮಾಡುತ್ತಿವೆ. ಶಸ್ತ್ರಾಸ್ತ್ರ ನೀಡುವುದರಿಂದ ಹಿಡಿದು, ನೆಲೆ ನೀಡುವವರೆಗೆ ಸಹಾಯ ನೀಡಿವೆ. ಈಜಿಪ್ಟ್, ಜೋರ್ಡಾನ್‌ ದೇಶಗಳು ಪ್ಯಾಲೆಸ್ತೀನ್‌ಗೆ ಸಹಾಯ ಹಸ್ತ ಘೋಷಣೆ ಮಾಡಿದ್ದು, ಕದನ ವಿರಾಮಕ್ಕೆ ಆಗ್ರಹಿಸುತ್ತಿವೆ. ಆದರೆ ಈಜಿಪ್ಟ್ ದೇಶ ಹಮಾಸ್‌ ಉಗ್ರರಿಗೆ ಸಹಾಯ ಮಾಡುವ ಲೆಕ್ಕಾಚಾರದಲ್ಲಿ ಇಲ್ಲ. ಹಮಾಸ್‌ ಮತ್ತು ಮುಸ್ಲಿಂ ಬ್ರದರ್‌ಹುಡ್‌ ಸಂಘಟನೆಗಳು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿದ್ದು, ಹೀಗಾಗಿ ಈಜಿಪ್ಟ್ ಹಿಂದೆ ಮುಂದೆ ನೋಡುತ್ತಿದೆ.

ಇನ್ನು ಚೀನ ಮತ್ತು ರಷ್ಯಾ ದೇಶಗಳು ಇಸ್ರೇಲ್‌ಗಿಂತ ಹೆಚ್ಚಾಗಿ ಪ್ಯಾಲೆಸ್ತೀನ್‌ ಪರವಾಗಿ ನಿಂತಿವೆ. ಆದರೆ ಯುದ್ಧದ ವೇಳೆ ಹಮಾಸ್‌ ಉಗ್ರರ ಜತೆ ಕೈಜೋಡಿಸುವ ಸಾಧ್ಯತೆಗಳು ಕಡಿಮೆ. ಹೀಗಾಗಿಯೇ ವಿಶ್ವಸಂಸ್ಥೆಯಲ್ಲಿ ಗಾಜಾಕ್ಕೆ ಮಾನವೀಯತೆಯ ನೆರವು ಮತ್ತು ಕದನ ವಿರಾಮ ಸಂಬಂಧ ನಿರ್ಣಯದ ಮಾರು ಹೋಗಿವೆ.

ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ, ಬಹುತೇಕ ಮುಸ್ಲಿಂ ದೇಶಗಳು ಪ್ಯಾಲೆಸ್ತೀನ್‌ ಪರವಾಗಿದ್ದರೆ, ಮುಸ್ಲಿಮೇತರ ದೇಶಗಳು ಇಸ್ರೇಲ್‌ ಬೆನ್ನಿಗೆ ನಿಂತಿವೆ. ಭಾರತದಂಥ ಕೆಲವು ದೇಶಗಳು ಮಾತ್ರ ಸಮತೋಲನವಾದ ನಿರ್ಧಾರ ತಳೆದಿವೆ.

ಇತ್ತೀಚಿನ ದಿನಗಳಲ್ಲಿ ದೇಶದೊಳಗೇ ಇಸ್ರೇಲ್‌ ಮತ್ತು ಹಮಾಸ್‌ ಸಂಘರ್ಷ ಚುನಾವಣ ವಿಚಾರವಾಗುವ ಸಾಧ್ಯತೆಗಳೂ ಕಾಣುತ್ತಿವೆ. ಕಾಂಗ್ರೆಸ್‌ ನಾಯಕರು ಪ್ಯಾಲೆಸ್ತೀನ್‌ ಮೇಲಿನ ಇಸ್ರೇಲ್‌ ದಾಳಿಯನ್ನು ಖಂಡಿಸಬೇಕಿತ್ತು ಎಂದು ವಾದ ಮಂಡಿಸಿದ್ದಾರೆ. ಎಡಪಕ್ಷಗಳು ಪ್ಯಾಲೆಸ್ತೀನ್‌ ಪರವಾಗಿ ಪ್ರತಿಭಟನೆಯನ್ನೇ ನಡೆಸಿವೆ. ಅಲ್ಲದೆ ಕೇರಳದ ಮಲಪ್ಪುರಂನಲ್ಲಿ ಸಂಘಟನೆಯೊಂದು ನಡೆಸಿದ ಪ್ರತಿಭಟನ ಸಮಾವೇಶದಲ್ಲಿ ಹಮಾಸ್‌ ನಾಯಕನೊಬ್ಬ ಭಾಷಣವನ್ನೂ ಮಾಡಿದ್ದಾನೆ. ಆದರೆ ಕೇಂದ್ರ ಸರಕಾರವು ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಟೀಕೆಗೆ ಉತ್ತರ ಕೊಟ್ಟಿಲ್ಲ. ಬದಲಾಗಿ ಪ್ಯಾಲೆಸ್ತೀನ್‌ ಜನರ ಪರವಾಗಿ ನಾವಿದ್ದೇವೆ ಎಂದಷ್ಟೇ ಹೇಳುತ್ತಿದೆ.

 ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.