ಮಹಾರಾಷ್ಟ್ರದಿಂದ ಆಗಮಿಸುವವರಲ್ಲಿ ಜಿಲ್ಲೆಯವರೇ ಹೆಚ್ಚು
ಬೆಳಗಾವಿ ಗಡಿಯಲ್ಲಿ ಉಡುಪಿ ಜಿಲ್ಲಾಡಳಿತ ತಂಡದ ಕೆಲಸ
Team Udayavani, May 14, 2020, 5:19 AM IST
ಉಡುಪಿ: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬರುವ ಸಾರ್ವಜನಿಕರಿಗೆ ರಾಜ್ಯಕ್ಕೆ ಪ್ರವೇಶಿಸಲು ಅಗತ್ಯ ನೆರವು ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆಯಂತೆ ಉಡುಪಿಯಿಂದ ತೆರಳಿರುವ ಅಧಿಕಾರಿಗಳ ತಂಡ ಬೆಳಗಾವಿಯ ಗಡಿಭಾಗವಾದ ನಿಪ್ಪಾಣಿ ಸಮೀಪದ ಕುಗ್ಗನಹಳ್ಳಿ ಚೆಕ್‌ಪೋಸ್ಟ್ ನಲ್ಲಿ ತೆರೆದಿರುವ ಸಹಾಯಕೇಂದ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮಹಾರಾಷ್ಟ್ರದಿಂದ ಬರುವ ಜಿಲ್ಲೆಯ ನಾಗರಿಕರ ಉಡುಪಿ ಜಿಲ್ಲೆಯಲ್ಲಿನ ವಿಳಾಸದ ಕುರಿತು ಪರಿಶೀಲನೆ ನಡೆಸಿ ಅದನ್ನು ದೃಢೀಕರಿಸಿ ಅವರು ರಾಜ್ಯ ಪ್ರವೇಶಿಸಲು ತಂಡ ಸಹಾಯ ಮಾಡುತ್ತಿದೆ. ಉಡುಪಿ ಜಿಲ್ಲೆಗೆ ಆಗಮಿಸಿದ ಅನಂತರದ ಇಲ್ಲಿನ ಕ್ವಾರಂಟೈನ್ ಕ್ರಮಗಳು, ಜಿಲ್ಲಾಡಳಿತದಿಂದ ಒದಗಿಸುವ ಸೌಲಭ್ಯಗಳು ಮತ್ತಿತರ ಅಗತ್ಯ ಮಾಹಿತಿಯನ್ನು ನೀಡಿ ಅವರ ಅನಗತ್ಯ ಆತಂಕವನ್ನು ದೂರ ಮಾಡುತ್ತಿದೆ. ಮುಖ್ಯವಾಗಿ ಅವರು ನಿರಾಳವಾಗಿ ಜಿಲ್ಲೆಗೆ ತಲುಪಲು ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಆಗಮಿಸುತ್ತಿರುವ ಸಾರ್ವಜನಿಕರ ಸಂಪೂರ್ಣ ವಿವರಗಳನ್ನು ಅವರು ಜಿಲ್ಲೆಗೆ ತಲುಪುವ ಮೊದಲೇ ಜಿಲ್ಲಾಡಳಿತಕ್ಕೆ ತಲುಪಿಸಲಾಗುತ್ತಿದೆ.
ಮೊದಲು ಬೆಳಗಾವಿ ಜಿಲ್ಲಾಡಳಿತದ ತಂಡಕ್ಕೆ ಬರುವವರನ್ನು ನಿಭಾಯಿಸುವುದು ಕಷ್ಟಕರವಾಗಿತ್ತು. ಹೀಗಾಗಿ ಅಲ್ಲಿನ ಜಿಲ್ಲಾಡಳಿತ ಉಡುಪಿ ಜಿಲ್ಲಾಡಳಿತಕ್ಕೆ ಪತ್ರ ಬರೆದು ಸಹಕರಿಸಲು ಕೋರಿತ್ತು. ಅದರಂತೆ ಮೇ 11ರಿಂದ ಈ ತಂಡವನ್ನು ಕಳುಹಿಸಲಾಯಿತು. ಪ್ರಾಯಃ ಮೇ 16ರ ವರೆಗೆ ಇಲ್ಲಿ ಕಾರ್ಯ ನಿರ್ವಹಿಸಬೇಕಾಗುವ ಸಾಧ್ಯತೆ ಇದೆ.
10 ಜಿಲ್ಲೆಗಳ ತಂಡಗಳು
ಮೈಸೂರು, ಕೊಡಗು, ದ.ಕ., ಉಡುಪಿ, ಮಂಡ್ಯ ಹೀಗೆ ವಿವಿಧ ಜಿಲ್ಲೆಗಳಿಗೆ ಮಹಾರಾಷ್ಟ್ರದಿಂದ ಬರುತ್ತಿದ್ದಾರೆ. ಮುಖ್ಯವಾಗಿ ಬರುವವರು ಮುಂಬೈ ನಿವಾಸಿಗಳು. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಗೆ ಅತಿ ಹೆಚ್ಚು ಜನರು ಬರುತ್ತಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಗೆ ಪ್ರತಿನಿತ್ಯ ಬರುವವರ ಸಂಖ್ಯೆ ಸುಮಾರು 600. ದ.ಕ. ಜಿಲ್ಲೆಗೆ ಬರುವವರ ಸಂಖ್ಯೆ 30ರಿಂದ 40 ಅಷ್ಟೆ, ಮೈಸೂರಿಗೆ ಮೂರ್‍ನಾಲ್ಕು ಜನರು ಬರುತ್ತಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಕೋರಿದಂತೆ 19 ಜಿಲ್ಲೆಗಳ ಪೈಕಿ ಹತ್ತು ಜಿಲ್ಲಾಡಳಿತದಿಂದ ಮಾತ್ರ ತಂಡವನ್ನು ಕಳುಹಿಸಲಾಗಿದೆ.
ಕಾಯಬೇಕಾದ ಸಮಯ ಇಳಿಕೆ
ಬೆಳಗಾವಿಯ ಸರಕಾರಿ ನೌಕರರಿಗೆ ಸಾರ್ವಜನಿಕರು ಹೇಳುವ ಉಡುಪಿ ಜಿಲ್ಲೆಯ ತಾಲೂಕು, ಗ್ರಾಮಗಳ ಹೆಸರುಗಳನ್ನು ಸರಿಯಾಗಿ ಗುರುತಿಸಲು ಆಗುತ್ತಿರಲಿಲ್ಲ. ಈಗ ಉಡುಪಿಯಿಂದ ಹೋದ ತಂಡವೇ ಕಂಪ್ಯೂಟರ್‌ನಲ್ಲಿ ಸುಲಭವಾಗಿ ನಿರ್ವಹಿಸುತ್ತಿದೆ. ಹೀಗಾಗಿ ಹಿಂದೆ ಐದಾರು ಗಂಟೆ ಕಾಲ ಕಾಯ ಬೇಕಾಗಿದ್ದ ಸಾರ್ವಜನಿಕರು ಈಗ ಅರ್ಧ, ಒಂದು ಗಂಟೆಯೊಳಗೆ ಗಡಿಯೊಳಗೆ ಬರಬಹುದಾಗಿದೆ. ಇಲ್ಲಿ ದೇಹದ ಉಷ್ಣಾಂಶ ಪರೀಕ್ಷೆಯೂ ನಡೆಯುತ್ತಿದ್ದು ಜ್ವರವೇನಾದರೂ ಇದ್ದಲ್ಲಿ ವಾಪಸು ಕಳುಹಿಸಲಾಗುತ್ತದೆ. ಸೀಲ್ ಹಾಕುವ ಕೆಲಸವೂ ನಡೆಯುತ್ತಿದೆ. ತಂಡವು ಬೆಳಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಕೆಲಸ ಮಾಡುತ್ತಿದೆ. ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಚೆಕ್‌ಪೋಸ್ಟ್‌ನಿಂದ 80 ಕಿ.ಮೀ. ದೂರದಲ್ಲಿರುವ ಚಿಕ್ಕೋಡಿಯಲ್ಲಿ ಮಾಡಲಾಗಿದೆ.
ತಂಡದ ಸದಸ್ಯರು
ತಂಡದಲ್ಲಿ ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತು ಸಹಾಯಕರಾಗಿ ಜಿಲ್ಲಾ ನಗರಾಭಿವೃಧಿª ಕೋಶದ ಕಾಶೀನಾಥ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೆಚ್ಚಬಹುದು
ಈಗ ಸದ್ಯ ಸ್ವಂತ ವಾಹನ ಅಥವಾ ಬಾಡಿಗೆ ವಾಹನಗಳಲ್ಲಿ ಜನರು ಬರುತ್ತಿದ್ದಾರೆ. ಮುಂದೆ ಬಸ್, ರೈಲಿನಲ್ಲಿ ಬರಲು ಅನುಮತಿ ಕೊಟ್ಟರೆ ಆಗಮಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು.
-ಡಾ|ರೋಶನ್ ಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.