ಸಮಾನತೆಯ ಸಮಾಜದಲ್ಲಿ ಅಡಗಿದೆ ಭವಿಷ್ಯ
Team Udayavani, Aug 21, 2021, 6:45 AM IST
ಮಹಿಳೆಯರು, ಮಕ್ಕಳು ಮತ್ತು ದಮನಿತರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕಳೆದ 74 ವರ್ಷಗಳಲ್ಲಿ ಈ ವಿಚಾರದಲ್ಲಿ ದೇಶ ಸಾಕಷ್ಟು ಸುಧಾರಣೆಗಳನ್ನು ಕಂಡಿದೆ. ಇನ್ನು ಇವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ತಾರತಮ್ಯದ ವಿಚಾರದಲ್ಲಿ ನಾವೊಂದಿಷ್ಟು ಎಡವಿರುವುದು ಸ್ಪಷ್ಟ. ಸಮಾನತೆ, ಮಹಿಳಾ ಸುರಕ್ಷೆ, ಮಕ್ಕಳ ರಕ್ಷಣೆ ವಿಚಾರದಲ್ಲಿ ನುಡಿದಂತೆ ನಡೆಯುವ ಪ್ರಾಮಾಣಿಕ ಮತ್ತು ಮೌಲ್ಯಾಧಾರಿತ ಸಮಾಜ ನಮ್ಮದಾದಾಗ ದೇಶ ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲಲು ಸಾಧ್ಯ.
ಯಾವುದೇ ದೇಶ, ಸಮುದಾಯದ ಅಭಿವೃದ್ಧಿಯಲ್ಲಿ ಅಲ್ಲಿನ ಪ್ರಜ್ಞಾವಂತ ನಾಗರಿಕರೆಲ್ಲರ ಪಾತ್ರ ಅತ್ಯಂತ ಮುಖ್ಯವಾದುದು. ದಮನಿತರು, ಮಹಿಳೆ ಯರು ಹಾಗೂ ಮಕ್ಕಳು ಘನ ತೆಯ ಬದುಕು ಬಾಳಬೇಕು ಎನ್ನುವುದು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಎಲ್ಲರ ಕನಸಾಗಿತ್ತು. ಸ್ವಾತಂತ್ರ್ಯದ ಅನಂತ ರದ ದಿನಗಳಲ್ಲಿ ಇದು ನಿಧಾನಕ್ಕೆ ತೆರೆಮರೆಗೆ ಸರಿದಿದ್ದು ಈಗ ಇತಿಹಾಸ. ಶೋಷಿತರ ಧ್ವನಿ ಯಾಗಿ ಮೂಡಿ ಬರಬೇಕಿ ದ್ದ ದೇಶ ಅವರಿಗೆ ಆಹಾರ, ಶಿಕ್ಷಣ, ಸಾಮಾಜಿಕ ನ್ಯಾಯ ನೀಡ ಬೇಕು ಎನ್ನುವುದನ್ನು ಮೌಲ್ಯ ವಾಗಿಸಿಕೊಳ್ಳುವಲ್ಲಿ ಸೋತಿತು. ಮಾನವ ಕಳ್ಳ ಸಾಗಣೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ನಿರಂತರವಾಗಿ ನಡೆಯು ತ್ತಲೇ ಇತ್ತು. ಹಾಗೆಂದು ಏನೂ ಬದಲಾಗಿಲ್ಲ ಎಂದಲ್ಲ.
ಕ್ರಿ.ಶ. 1951ರಲ್ಲಿ ಶೇ.9 ಇದ್ದ ಹೆಣ್ಣು ಮಕ್ಕಳ ಶಿಕ್ಷಣ ಪ್ರಗತಿ ಕ್ರಿ.ಶ. 2011ರಲ್ಲಿ ಶೇ. 65ಕ್ಕೆ ತಲುಪಿತ್ತು. ಆದರೆ ಅವರ ಮೇಲಾಗುತ್ತಿರುವ ದೌರ್ಜನ್ಯ ಕಡಿಮೆಯಾಗಿದೆಯೇ ಎಂದರೆ ಇಲ್ಲ ಎನ್ನುವುದು ವಾಸ್ತವ.
ಸಂಪ್ರದಾಯ, ಸಂಸ್ಕೃತಿಯ ಹೆಸರಿನಲ್ಲಿ ನಮ್ಮ ಮಹಿಳೆಯರು ಸಿಕ್ಕಿಬಿದ್ದು ಅನೇಕರು ಇನ್ನೂ ಪರತಂತ್ರರಾಗಿಯೇ ಇದ್ದಾರೆ. ಇವರನ್ನು ಯಾವ ಕಾನೂನುಗಳೂ ಬದಲಾಯಿಸಲಾರವು. ಹಾಗಿರು ವಾಗ ನಮ್ಮ ಮಹಿಳೆಯರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಶಕ್ತರಾಗಿದ್ದಾರೆಯೇ? ಈ ದೇಶ ದಲ್ಲಿ ಯಾವುದೇ ಒಬ್ಬ ಸ್ತ್ರೀ ಪರತಂತ್ರದಿಂದ ನರಳುವವರೆಗೂ ಮಹಿಳೆಯರಿಗೆ ಸ್ವಾತಂತ್ರ್ಯ ಎಂಬುದು ಮರೀಚಿಕೆಯೇ ಸರಿ.
ಮಹಿಳೆಯರಿಗೆ ರಾಜಕೀಯ ಸಶಕ್ತೀಕರಣ ಮತ್ತು ಲಿಂಗ ಸಮಾನತೆ ಸಾಧಿಸಲು ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಒದಗಿಸಿದ ಮೀಸಲಾತಿ ಯಿಂದಾಗಿ ಪ್ರಜಾಪ್ರಭುತ್ವದಡಿ ಅವರ ಭಾಗವಹಿ ಸುವಿಕೆ ಹೆಚ್ಚಿಸಲು ಅವಕಾಶವಾಗಿದೆ. ಪಂಚಾಯತ್ ರಾಜ್ ಅಧಿನಿಯಮದಂತೆ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ಅವಕಾಶ ಕಲ್ಪಿಸಿ ಲಿಂಗಾಧಾರಿತ ಅಸಮಾನತೆಯನ್ನು ಅಳಿಸುವ, ಸಮಾನತೆ ಸಾಧಿಸುವ ಪ್ರಯತ್ನಗಳು ನಡೆಯುತ್ತಿವೆ. ಪಂಚಾಯತ್‌ಗಳ ಬಲವರ್ಧನೆ ಯಾಗಿ ಉತ್ತಮ ಆಡಳಿತ, ಅಭಿವೃದ್ಧಿ, ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಮಹಿಳೆಯರು ಪಾರದರ್ಶಕವಾಗಿದ್ದುಕೊಂಡು ಪ್ರಯತ್ನಿಸಬೇಕಾ ಗಿದೆ. ಇದು ಪರಿಪೂರ್ಣ ವಾದಲ್ಲಿ ಶೋಷಿತ, ನೊಂದ ಹಾಗೂ ಸಾಮಾನ್ಯ ಮಹಿಳೆ ಯರಿಗೂ ತಮ್ಮ ಬದುಕನ್ನು ಸಶಕ್ತವಾಗಿ ಕಟ್ಟಿಕೊಳ್ಳಲು ಸಾಧ್ಯವಾದಿತು.
ಎಲ್ಲಿ ಜಾತಿ, ವರ್ಗ, ಲಿಂಗ, ತಾರತಮ್ಯಗಳು ನಿರಂತರ ನಡೆಯುತ್ತಿರು ತ್ತವೆಯೋ ಅಲ್ಲಿ ದೌರ್ಜನ್ಯ ರೂಪ ಬದಲಾಯಿಸಿ ಕೊಂಡು ಸಕ್ರಿಯವಾಗಿರು ತ್ತದೆ. ಸ್ವತಂತ್ರ ಭಾರತದಲ್ಲಿ ಮಹಿಳೆಯರ ಹಾಗೂ ಮಕ್ಕಳ ಸುರಕ್ಷೆಗಾಗಿ ಉತ್ತಮ ಕಾಯ್ದೆ ಗಳು ಬಂದಿರುವುದು ನಿಜ. ಚುನಾಯಿತ ಸರಕಾರಗಳ ಅವಿರತ ಶ್ರಮ, ವಿವಿಧ ಯೋಜನೆಗಳ ಫಲಶ್ರುತಿಯೋ ಎನ್ನುವಂತೆ ಅಭಿವೃದ್ಧಿಯ ವಿವಿಧ ರಂಗಗಳಲ್ಲಿ ನಿರೀಕ್ಷಿತ ಬದಲಾವಣೆಗಳಾಗಿವೆ. ಅನುಷ್ಠಾನದಲ್ಲಿ ಲೋಪ ದೋಷಗಳು ಇದ್ದರೂ ಬಾಲ ಕಾರ್ಮಿಕರು
ಮತ್ತು ಬಾಲ್ಯ ವಿವಾಹಗಳ ಸಂಖ್ಯೆಯಲ್ಲಿ ಇಳಿಮುಖವಾಗಿವೆ.
ಸರಕಾರದ ಸಮೀಕ್ಷೆಯೊಂದರ ಪ್ರಕಾರ ಕ್ರಿ.ಶ. 2015 ರಿಂದ ಕ್ರಿ.ಶ. 2019ರ ವರೆಗಿನ ಅವಧಿಯಲ್ಲಿ ದೇಶದಲ್ಲಿ 1.76 ಲಕ್ಷ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಒಂದು ಅಂಕಿಅಂಶದ ಪ್ರಕಾರ ನಮ್ಮ ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿ ದ್ದಾರೆ. ದೇಶದಲ್ಲಿ ಪ್ರತೀದಿನ ಒಂದು ವರ್ಷ ದೊಳಗಿನ 2,350 ಶಿಶುಗಳು ಸಾವಿಗೀಡಾ ಗುತ್ತಿವೆ. ಸರಕಾರಗಳು ಸ್ತ್ರೀಯರ, ಮಕ್ಕಳ ಹಿತಕ್ಕಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿವೆ. ಆದರೂ ನಿರೀಕ್ಷಿತ ಫಲ ದೊರಕಿಲ್ಲ ಅಂದರೆ ನಾವೆಲ್ಲಿ ಸೋತಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.
ಕುಟುಂಬವೆಂದರೆ ಸ್ನೇಹ, ಪ್ರೀತಿ, ಸಮಬಾಳು- ಸಮಪಾಲು ಎನ್ನುವ ನೆಲೆಯಲ್ಲಿ ಮಹಿಳೆ ಹಾಗೂ ಪುರುಷರ ಸಮಾನ ಭಾಗಿದಾರಿಕೆ. ಇಲ್ಲಿ ವೃದ್ಧರ, ಮಕ್ಕಳ ಪಾಲನೆ ಪೋಷಣೆಯಿಂದ ತೊಡಗಿ ಮನೆಯಲ್ಲಿ ಆಹಾರ ತಯಾರಿಕೆ, ಸ್ವತ್ಛತೆ ಇತ್ಯಾದಿಗಳು ಸ್ತ್ರೀ-ಪುರುಷರಿಬ್ಬರು ಅಂತರಂಗ ಬಹಿರಂಗದಲ್ಲಿ ಜತೆಯಾಗಿ, ಸಾಮರಸ್ಯದಲ್ಲಿ ಕುಟುಂಬ ಮುನ್ನಡೆಸುವುದು ಮುಖ್ಯವಾಗುತ್ತದೆ. ಇದು ಇಂದಿನ ತುರ್ತು ಕೂಡ. ಆರೋಗ್ಯ, ಶಿಕ್ಷಣ, ಉದ್ಯೋಗ, ಆಹಾರ ಇವೆಲ್ಲವೂ ಅಭಿವೃದ್ಧಿಯ ಭಾಗವಾಗಿ ಮಹಿಳೆಯರಿಗೆ, ಮಕ್ಕಳಿಗೆ ಮುಕ್ತವಾಗಿ ಲಭಿಸಿದಾಗ ಬದಲಾವಣೆ ಸಾಧ್ಯವಾಗುತ್ತದೆ. ಇವುಗಳನ್ನು ಪಡೆಯುವುದು ತಮ್ಮ ಸಹಜೀವಿ ಗಳಾದ ಮಹಿಳೆಯರ ಮತ್ತು ಮಕ್ಕಳ ಹಕ್ಕು ಎಂಬ ಪ್ರಜ್ಞೆ, ಆತ್ಮಸಾಕ್ಷಿ ಪುರುಷರಲ್ಲಿ ಇದ್ದಾಗ ಆ ಮನೆ ನಂದನವನವಾಗುತ್ತದೆ. ಎಲ್ಲಿ ಸಮಾನತೆ ಇದೆಯೋ ಅಲ್ಲಿ ಪ್ರೀತಿಯಿದೆ. ಎಲ್ಲ ಅತ್ಯುತ್ತಮ ತಂದೆಯರು ತಾಯಿ ಕರುಳು ಹೊಂದಿದವರಾದಾಗ, ತಾಯಿ ಯಂದಿರು ಸಮಾಜದಲ್ಲಿ ನಿರ್ಧಾರ ತೆಗೆದು ಕೊಳ್ಳುವ ಸ್ಥಾನ ತುಂಬಿದಾಗ ವ್ಯವಸ್ಥೆಯೊಳಗೆ ಭಾವನಾತ್ಮಕ ಸ್ಪರ್ಶ ಮೇಳೈಸಿ ಮೃದುತ್ವ ತುಂಬಿ ಬದುಕು ಸಹ್ಯವಾಗುತ್ತದೆ.
ನುಡಿದಂತೆ ನಡೆಯುವ ಮೌಲ್ಯಾಧಾರಿತ ಸಮಾಜ ನಮ್ಮದಾಗಬೇಕು. ಅಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಘನತೆಯಿಂದ ಕೂಡಿದ ಬದುಕು ನಡೆಸುವ ಅವಕಾಶ ಇರಬೇಕು ಎಂಬ ಆಶಯ ನಮ್ಮದಾಗ ಬೇಕು. ಈ ನೆಲೆಯಲ್ಲಿ ನಾವು ಪ್ರತಿಯೊಬ್ಬರೂ ಅವರವರ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಸಮಾನತೆಯೆಂದರೆ ಮಾನವೀಯತೆ. ಈ ಕಡೆಗೆ ಪಯಣವೆಂದರೆ ದಮನಿತ ಹೆಣ್ಣು ಮಕ್ಕಳ ಕೈಹಿಡಿದು ಜತೆಗೆ ನಡೆಯುವುದು. ಈ ನಡೆ ವ್ಯಕ್ತಿಯಿಂದ ತೊಡಗಿ ಕುಟುಂಬ, ಸಮುದಾಯ, ಸಮಾಜ, ಸಂಸ್ಥೆ, ವ್ಯವಸ್ಥೆಯೊಳಗೆ ವಿಸ್ತರಿಸಿಕೊಳ್ಳಬೇಕು. ಜತೆಯ ಜೀವಿಗಳನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಇದು ಪ್ರಾಥಮಿಕ ಜ್ಞಾನವೆನ್ನುವಂತೆ ಆಳಿಗೂ, ಅರಸರಿಗೂ ಮಹಿಳೆಯರಿಗೂ ಇರಲಿ, ಮಕ್ಕಳಿಗೂ ಇರಲಿ, ಪ್ರತಿಯೊಬ್ಬ ನಾಗರಿಕರಲ್ಲೂ ಇರಬೇಕಾಗಿ ರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಇಂದಿನ ಅಗತ್ಯ. ಮನುಷ್ಯತ್ವವನ್ನು ಅರಳಿಸುವ ಎಲ್ಲ ಕಾಲದ ಆದ್ಯತೆಯಾಗಿ ಇದನ್ನು ಪರಿಗಣಿಸುವುದು ಮುಂದಿನ 25 ವರ್ಷಗಳಲ್ಲಿ ಸಾಧ್ಯವಾದೀತಾದರೆ ಅಭಿವೃದ್ಧಿಯ ಎಲ್ಲ ರಂಗಗಳಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲುತ್ತದೆ.
- ಪ್ರೊ| ಹಿಲ್ಡಾ ರಾಯಪ್ಪನ್
ಹಿರಿಯ ಆಪ್ತ ಸಮಾಲೋಚಕರು, ಸಾಮಾಜಿಕ ಚಿಂತಕರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.