ಕಪ್ಪು ಮೂಗಿನ ಚಿನ್ನದ ಬುದ್ಧ ಮೂರ್ತಿ
Team Udayavani, Mar 15, 2021, 5:00 AM IST
ಬೌದ್ಧ ಗುರುವೊಬ್ಬರ ಬಳಿಕ ಚಿನ್ನದಿಂದ ಮಾಡಲಾದ ಒಂದು ಬುದ್ಧ ಮೂರ್ತಿಯಿತ್ತು. ಆ ಮೂರ್ತಿಯ ಬಗ್ಗೆ ಗುರುವಿಗೆ ಬಹಳ ಅಭಿಮಾನ, ವ್ಯಾಮೋಹ. ಪ್ರತೀ ದಿನವೂ ಅದರ ಪದತಲದಲ್ಲಿ ಉತ್ತಮೋತ್ತಮ ಹೂವು ಗಳನ್ನು ಇರಿಸಿ ಅರ್ಚಿಸುತ್ತಿದ್ದರು.
ಸಾಮಾನ್ಯವಾಗಿ ಬೌದ್ಧ ಗುರುಗಳು, ಬಿಕ್ಕುಗಳು ಒಂದೇ ಕಡೆ ವಾಸ್ತವ್ಯ ಹೂಡುವುದಿಲ್ಲ. ಮಠದಿಂದ ಮಠಕ್ಕೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾತ್ರೆ ಹೋಗುತ್ತಿರುತ್ತಾರೆ. ಅಲ್ಲಿ ಕೆಲವು ದಿನ ಇದ್ದು ಮತ್ತೂಂದೆಡೆಗೆ. ಮಳೆ ಗಾಲದ ನಾಲ್ಕು ತಿಂಗಳು ಮಾತ್ರ ಒಂದೆಡೆ ಇರುತ್ತಾರೆ ಅಷ್ಟೆ.
ಬಂಗಾರದ ಮೂರ್ತಿ ಯನ್ನು ಹೊಂದಿದ್ದ ಗುರು ಒಂದು ಬಾರಿ ಚೀನದ ಒಂದು ಬೌದ್ಧ ದೇವಾಲಯಕ್ಕೆ ಹೋಗಿ ತಂಗಿದರು. ಅದೊಂದು ಅಪರೂಪದ ದೇವಾಲಯ. ಅಲ್ಲಿ ಸಾವಿರಕ್ಕೂ ಹೆಚ್ಚು ಬುದ್ಧನ ಮೂರ್ತಿಗಳಿದ್ದವು. ಇಡೀ ಬೆಟ್ಟವನ್ನು ದೇಗುಲವಾಗಿ ಕೊರೆಯಲಾಗಿತ್ತು – ಬಹಳ ವರ್ಷಗಳು ತಗಲಿರಬೇಕು ಈ ಕಾಯಕಕ್ಕೆ. ನಾಲ್ಕು ಹೆಜ್ಜೆ ನಡೆದರೆ ಅಲ್ಲೊಂದು ಗುಡಿ – ಬುದ್ಧಮೂರ್ತಿ; ಕಣ್ಣು ಹಾಯಿಸಿದಲ್ಲೆಲ್ಲ ಗುಡಿಗಳೇ.
ಚಿನ್ನದ ಬುದ್ಧ ಮೂರ್ತಿ ಹೊಂದಿದ್ದ ಗುರುಗಳು ತಂಗಿದ್ದು ಇಂತಹುದೇ ದೇವಾಲಯದಲ್ಲಿ.
ಅಲ್ಲಿ ಅವರಿಗೆ ಒಂದು ಸಮಸ್ಯೆ ಎದುರಾಯಿತು. ಬೆಟ್ಟದ ಮೇಲಿರುವ ದೇವಾಲಯವಾದ್ದರಿಂದ ಗಾಳಿ ಬೀಸು ತ್ತಿತ್ತು; ಚಿನ್ನದ ಬುದ್ಧನಿಗಾಗಿ ಅವರು ಅಗರಬತ್ತಿ ಉರಿಸಿದರೆ ಅದರ ಸುಗಂಧಮಯ ಧೂಮ ಎಲ್ಲೆಂದರಲ್ಲಿ ಸುಳಿಯುತ್ತಿತ್ತೇ ವಿನಾ ಚಿನ್ನದ ಬುದ್ಧ ಮೂರ್ತಿಯ ಮೂಗಿನ ಬಳಿಗೆ ಹೋಗುತ್ತಲೇ ಇರಲಿಲ್ಲ. ತನ್ನ ಚಿನ್ನದ ಬುದ್ಧನಿಗೆ ಮೀಸಲಾಗಿರಬೇಕಿದ್ದ ಧೂಮ ಇತರ ಬುದ್ಧ ಮೂರ್ತಿಗಳನ್ನು ತಲುಪುತ್ತಿದ್ದುದನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ.
ಇದಕ್ಕಾಗಿ ಆ ಗುರು ಒಂದು ಉಪಾಯ ಮಾಡಿದರು. ಒಂದು ಉದ್ದನೆಯ ಬಿದಿರಿನ ಕೊಳವೆ ತಂದು, ಅದರೊಳಗೆ ಅಗರಬತ್ತಿ ಉರಿಸಿದರು. ಕೊಳವೆಯ ತುದಿ ಚಿನ್ನದ ಬುದ್ಧ ಮೂರ್ತಿಯ ಮೂಗಿನ ಬುಡ ದಲ್ಲಿರುವಂತೆ ಇರಿಸಿದರು.
ಈ ಉಪಾಯ ದಿಂದಾಗಿ ಅಗರ ಬತ್ತಿಯ ಧೂಮ ಚಿನ್ನದ ಮೂರ್ತಿಗೇ ತಲು ಪಿತೇನೋ ನಿಜ, ಆದರೆ ಮೂರ್ತಿಯ ಮೂಗು ಬತ್ತಿಯ ಹೊಗೆಯಿಂದ ಕಪ್ಪಾಯಿತು!
ಇದು ಆ ಗುರುಗಳನ್ನು ಇನ್ನಷ್ಟು ಚಿಂತೆಗೀಡು ಮಾಡಿತು. ಅವರು ದೇವಾಲಯದ ಮುಖ್ಯ ಪುರೋಹಿತ ರನ್ನು ಕರೆದು ಸಮಸ್ಯೆಯನ್ನು ಹೇಳಿ ಕೊಂಡು ಪರಿಹಾರ ಕೇಳಿದರು.
“ನಿನ್ನ ಬುದ್ಧ, ನನ್ನ ಬುದ್ಧ, ಈ ದೇವಾಲಯದಲ್ಲಿರುವ ಸಹಸ್ರಾರು ಬುದ್ಧರು – ಎಲ್ಲವೂ ಒಂದೇ. ಮೂರ್ತಿಯೇ ಇಲ್ಲದೆ; ಮನಸ್ಸಿನಲ್ಲಿ ಬುದ್ಧನನ್ನು ಧ್ಯಾನಿಸಿ ಅಗರಬತ್ತಿ ಉರಿಸಿದರೂ ಅದರ ಸುವಾಸನೆಯನ್ನು ಆಘ್ರಾಣಿಸುವುದು ಅದೇ ಬುದ್ಧ. ಅದು ಬಿಟ್ಟು ನನ್ನ ಚಿನ್ನದ ಬುದ್ದ ಎಂಬ ವ್ಯಾಮೋಹ, ಸ್ವಾರ್ಥ ಬೆಳೆಸಿ ಕೊಂಡಿರುವುದೇ ನಿಮ್ಮ ಸಮಸ್ಯೆ. ಆ ಸ್ವಾರ್ಥದಿಂದಾಗಿ ನಮ್ಮೆಲ್ಲರ ಮುಖ ವನ್ನೂ ಕಪ್ಪು ಮಾಡಿಬಿಟ್ಟಿರಿ ನೀವು’ ಎಂದು ನಕ್ಕುಬಿಟ್ಟರು ಪುರೋಹಿತರು.
ಇದು ನಮ್ಮ ನಿಮ್ಮ ಸಮಸ್ಯೆಯೂ ಹೌದು. ನಾನು, ನನ್ನದು ಎನ್ನುವ ವ್ಯಾಮೋಹ ಅನುದಿನವೂ ನಮ್ಮ ಮುಖವನ್ನು ಕಪ್ಪಗಾಗಿಸುತ್ತಿರುತ್ತದೆ. ನಮ್ಮ ಮನೆ, ನಮ್ಮ ಕುಟುಂಬ, ಹೆಂಡತಿ – ಮಕ್ಕಳು ಎಂದಷ್ಟೇ ಚಿಂತೆ ಮಾಡುತ್ತಿರುತ್ತೇವೆ. ಪರೋಪಕಾರ, ನಿಸ್ವಾರ್ಥ ಚಿಂತನೆ, ಸಕಾರಾತ್ಮಕ ಮನೋ ಭಾವಗಳಂತಹ ಸದ್ಗುಣಗಳಿಂದ ಎಲ್ಲೆಡೆ ಕಂಪು ಹರಡಲು ಬಿಡದೆ ಹೊಗೆ ನಮ್ಮ ನಮ್ಮ ಮುಖಕ್ಕೆ ಮಸಿ ಹಿಡಿಯುವಂತೆ ವರ್ತಿಸುತ್ತಿರುತ್ತೇವೆ.
ಅದನ್ನು ತ್ಯಜಿಸೋಣ.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.