Chandrayaan-3: ಕೊನೆಯ 30 ಕಿ.ಮೀ. ನಿರ್ಣಾಯಕ; ಆದರೂ ಯಶಸ್ಸು ಖಚಿತ
ಐಐಎ ನಿರ್ದೇಶಕರು ಹಾಗೂ ಖಗೋಳ ವಿಜ್ಞಾನ ಪ್ರೊಫೆಸರ್ ಅನ್ನಪೂರ್ಣಿ ಸುಬ್ರಮಣಿಯನ್ ಸಂದರ್ಶನದ ಸಂಕ್ಷಿಪ್ತ ವಿವರ
Team Udayavani, Aug 23, 2023, 6:57 AM IST
ಭಾರತದ ಬಾಹ್ಯಾಕಾಶ ಪಯಣದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿರುವ ಚಂದ್ರಯಾನ-3ರ ಕುರಿತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್(ಐಐಎ) ನಿರ್ದೇಶಕರು ಹಾಗೂ ಖಗೋಳ ವಿಜ್ಞಾನ ಪ್ರೊಫೆಸರ್ ಅನ್ನಪೂರ್ಣಿ ಸುಬ್ರಮಣಿಯನ್ ಅವರು ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ನ್ಯೂಸ್18ಗೆ ಅವರು ನೀಡಿರುವ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.
ಚಂದ್ರಯಾನ-3 ಗಗನಯಾತ್ರಿಗಳಿಗೆ ಏಕೆ ಮಹತ್ವದ್ದು?
ಚಂದಿರನ ಮೇಲ್ಮೈಯಲ್ಲಿ ನೀರಿನ ಕಣಗಳು ಮಾತ್ರವಲ್ಲ ಖನಿಜಗಳೂ ಇವೆ ಎಂಬುದನ್ನು ಇತ್ತೀಚೆಗೆ ಕಂಡುಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಅಂಶಗಳನ್ನು ನಾವು ಕಲೆಹಾಕುವ ಅಗತ್ಯವಿದೆ. ಈವರೆಗೆ ನಾವು ಸೌರ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕೆಂದರೆ ಇತರರ ದತ್ತಾಂಶಗಳನ್ನು ಅವಲಂಬಿಸಬೇಕಾಗಿತ್ತು. ಈಗ ನಮ್ಮದೇ ಲ್ಯಾಂಡರ್ ಮತ್ತು ರೋವರ್ ಚಂದಿರನಲ್ಲಿಗೆ ಹೋಗಿರುವುದರಿಂದ, ನಮಗೆ ಅಲ್ಲಿರುವ ನೈಜ ಖನಿಜಾಂಶಗಳ ಬಗ್ಗೆ ನಿಖರವಾಗಿ ಅಧ್ಯಯನ ನಡೆಸಲು ಸಾಧ್ಯವಾಗಲಿದೆ.
50 ವರ್ಷಗಳಲ್ಲಿ ಕೇವಲ 3 ದೇಶಗಳಷ್ಟೇ ಯಶಸ್ವಿಯಾಗಿ ಚಂದ್ರಯಾನ ಕೈಗೊಂಡಿವೆ. ಶಶಾಂಕನ ಸ್ಪರ್ಶ ಅಷ್ಟೊಂದು ಕಷ್ಟವೇಕೆ?
ಭೂಮಿಯಲ್ಲಿರುವಾಗ ನಾವು ಅನೇಕ ಸಂಗತಿಗಳನ್ನು ಹಗುರವಾಗಿ ಪರಿಗಣಿಸುತ್ತೇವೆ. ಆದರೆ ಒಮ್ಮೆ ಬಾಹ್ಯಾಕಾಶ ಪ್ರವೇಶಿಸಿದರೆ ಅಲ್ಲಿನ ವಾತಾವರಣ ಮತ್ತು ಗುರುತ್ವ ಎರಡೂ ಬದಲಾಗುತ್ತವೆ. ಚಂದಿರನ ಮೇಲೆ ಲ್ಯಾಂಡರ್ ಇಳಿದಾಗ, ಅದು ಸಮತಟ್ಟಾದ ಜಾಗದಲ್ಲೇ ಹೋಗಿ ನಿಲ್ಲುತ್ತದೆ ಎಂದು ಹೇಳಲಾಗದು. ಸಮತಟ್ಟಲ್ಲದ ಅಡ್ಡಾದಿಡ್ಡಿ ಮೇಲ್ಮೈ ಮೇಲೆ ನಿಲ್ಲಲೂಬಹುದು. ಇದ್ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ. ಈ ಸಮಯದಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೂ ಲ್ಯಾಂಡರ್ ವಾಲದೇ ತನ್ನ ಕೆಲಸ ಮುಂದುವರಿಸುತ್ತದೆಯೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ.
ಭೂಮಿಯಲ್ಲಿ ನಾವು ಲ್ಯಾಂಡರ್ ಅನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿರುತ್ತೇವೆ. ಆದರೆ ಒಮ್ಮೆ ಚಂದ್ರನ ಮೇಲೆ ಇಳಿದ ಬಳಿಕ ಅದು ಸ್ವಯಂಚಾಲಿತವಾಗಿ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಸಾಫ್ಟ್ವೇರ್‌ಗೆ ತುಂಬಿಸಿರಬೇಕಾಗುತ್ತದೆ. ಆಗ ಲ್ಯಾಂಡರ್ ಮಾಡ್ನೂಲ್ ಸೂಕ್ತ ನಿರ್ಧಾರ ಕೈಗೊಂಡು, ಸುರಕ್ಷಿತವಾಗಿ ಇಳಿಯಲು ಸಾಧ್ಯ. ಈ ಎಲ್ಲ ಕಾರಣಗಳಿಂದಾಗಿ ಶಶಾಂಕನ ಸ್ಪರ್ಶ ಸಂಕೀರ್ಣ ಹಾಗೂ ಸವಾಲಿನದ್ದು. ಆದರೆ ಚಂದ್ರಯಾನ-3ರಲ್ಲಿ ಅತ್ಯುತ್ಕೃಷ್ಟ ಸಾಫ್ಟ್ವೇರ್ ಇರುವ ಕಾರಣ ಯಾವ ಸಮಸ್ಯೆಯೂ ಆಗದು ಎಂಬುವುದು ನಮ್ಮ ನಂಬಿಕೆ.
ಈ ಬಾರಿ ಯೋಜನೆಯ ಯಶಸ್ಸಿನ ಬಗ್ಗೆ ನೀವು ಎಷ್ಟು ವಿಶ್ವಾಸ ಹೊಂದಿದ್ದೀರಿ?
ಉಡಾವಣೆ ಆದಾಗಿನಿಂದ ಚಂದಿರನ ಕಕ್ಷೆ ಪ್ರವೇಶಿಸುವವರೆಗೆ ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯವನ್ನು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಚಂದಿರನ ಗುರುತ್ವದೊಳಕ್ಕೆ ಸೆಳೆಯಲ್ಪಡುವುದು ಕೂಡ ಸಂಕೀರ್ಣ ಕಾರ್ಯವೇ ಆಗಿತ್ತು. ಅದನ್ನೂ ಇಸ್ರೋ ಸಾಧಿಸಿದೆ. ಈ ರೀತಿಯ ಹಲವು ನಿರ್ಣಾಯಕ ಹಂತಗಳನ್ನು ದಾಟಿ ಬರಲಾಗಿದೆ. ಈಗ ಲ್ಯಾಂಡರ್ ಕೆಳಕಕ್ಷೆಗೆ ಇಳಿಯುವಂತೆ ಡೀಬೂಸ್ಟ್ ಮಾಡಬೇಕಾಗುತ್ತದೆ. ಇದು ಸಣ್ಣದಾದರೂ ಅತ್ಯಂತ ಮಹತ್ವದ ಕಾರ್ಯ. ಇದರಲ್ಲೂ ನಾವು ಯಶಸ್ವಿಯಾಗುತ್ತೇವೆಂಬ ನಂಬಿಕೆಯಿದೆ. ಆದರೆ ಕೊನೆಯ 30 ಕಿ.ಮೀ. ಅತ್ಯಂತ ನಿರ್ಣಾಯಕ ಹಾಗೂ ಭೀತಿ ಹುಟ್ಟಿಸುವಂಥದ್ದು. ಈ ಬಾರಿ ಹಿಂದಿನಂತೆ ಆಗಬಾರದು ಎಂಬ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ಸಾಕಷ್ಟು ಶ್ರಮ ವಹಿಸಿ, ಸಿದ್ಧತೆ ನಡೆಸಿದ್ದಾರೆ. ಹಾಗಾಗಿ ಚಂದ್ರಯಾನ-3 ಯಶಸ್ವಿಯಾಗುವ ಗರಿಷ್ಠ ವಿಶ್ವಾಸವಿದೆ.
ಮುಂದಿನ ನಿಲ್ದಾಣ ಸೂರ್ಯ ಎಂದು ಇಸ್ರೋ ಹೇಳಿಕೊಂಡಿದೆ. ಆದಿತ್ಯನತ್ತ ಭಾರತ ಚಿತ್ತ ಹರಿಸಿದ್ದೇಕೆ?
ಆಸ್ಟ್ರೋಸ್ಯಾಟ್ ಮೂಲಕ ಬಾಹ್ಯಾಕಾಶದಲ್ಲಿ ನಾವು ಸಂಕೀರ್ಣ ಸಾಧನಗಳನ್ನು ಆಪರೇಟ್ ಮಾಡಬಹುದು ಎಂಬುದನ್ನು ಇಸ್ರೋ ತೋರಿಸಿಕೊಟ್ಟಿದೆ. ಆದಿತ್ಯ ಎಲ್1 ಇದಕ್ಕಿಂತಲೂ ಹೆಚ್ಚು ಸಂಕೀರ್ಣವಾದದ್ದು. ಇದು ಭೂಮಿಯಿಂದ ಸುಮಾರು 1.5 ದಶಲಕ್ಷ ಕಿ.ಮೀ. ದೂರಕ್ಕೆ ಸಂಚರಿಸಿ, ಸೂರ್ಯ ಮತ್ತು ಭೂಮಿಯನ್ನು ಸಂಪರ್ಕಿಸುವ ರೇಖೆಗೆ ಲಂಬವಾಗಿರುವ ಕಕ್ಷೆಯನ್ನು ಸೇರುತ್ತದೆ. ಸೂರ್ಯನಿಗೆ ಅಷ್ಟೊಂದು ಸಮೀಪಕ್ಕೆ ನಾವು ಇದೇ ಮೊದಲ ಬಾರಿಗೆ ಹೋಗುತ್ತಿದ್ದೇವೆ. ಕಾಂತೀಯ ಕ್ಷೇತ್ರದಲ್ಲೇ ಸೂರ್ಯ ಅತ್ಯಂತ ಸಕ್ರಿಯ ನಕ್ಷತ್ರ. ಸೂರ್ಯನು ಆಗಾಗ್ಗೆ ಪ್ಲಾಸ್ಮಾವನ್ನು ಹೊರಸೂಸುತ್ತಿರುತ್ತಾನೆ. ಬಾಹ್ಯಾಕಾಶದಲ್ಲಿ ನಾವು ಸಾಕಷ್ಟು ಎಲೆಕ್ಟ್ರಾನಿಕ್ ಸಾಧನಗಳನ್ನು ಹೊಂದಿದ್ದೇವೆ. ಸೂರ್ಯನಿಂದ ಹೊರಸೂಸಲ್ಪಡುವ ಕಣಗಳಿಂದ ಅವುಗಳನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ. ಸೂರ್ಯನ ಬಗ್ಗೆ ಸೂಕ್ಷ್ಮವಾಗಿ ಅರಿತುಕೊಂಡರೆ ಮಾತ್ರ ಇದು ಸಾಧ್ಯ. ಸೂರ್ಯನಲ್ಲಿ ಏನಿದೆ, ಅದು ಶಕ್ತಿಯನ್ನು ಹೇಗೆ ಹೊರಸೂಸುತ್ತದೆ, ಸೂರ್ಯನ ಹೊರಪದರವು ಒಳಪದರದಷ್ಟೇ ಬಿಸಿಯಾಗಿರಲು ಕಾರಣವೇನು? ಪ್ಲಾಸ್ಮಾ ಹೇಗೆ ಹೊರಬರುತ್ತದೆ. ಅದನ್ನು
ಕಾಂತೀಯ ಕ್ಷೇತ್ರ ಹೇಗೆ ನಿಯಂತ್ರಿಸುತ್ತದೆ ಎಂಬೆಲ್ಲ ಪ್ರಶ್ನೆಗಳಿಗೂ ಉತ್ತರ ಬೇಕೆಂದರೆ ಆದಿತ್ಯನ ಅಧ್ಯಯನ ಮುಖ್ಯವಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.